ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿ ಪ್ರದರ್ಶಿಸಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಶಾಲೆ ತೆರೆಯುವುದು ಈಗ ಅತ್ಯಂತ ಲಾಭದಾಯಕ ದಂಧೆಯಾಗಿ   ಪರಿಣಮಿಸಿದೆ. ಕಾಂಚಾಣ ಕುಣಿತದ ಎದುರು ಮಾನ್ಯತೆ, ನೀತಿ–ನಿಯಮ, ಶೈಕ್ಷಣಿಕ ಗುಣಮಟ್ಟ, ಮಕ್ಕಳ ರಕ್ಷಣೆ, ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ಪ್ರಶ್ನೆಗಳೆಲ್ಲವೂ  ಗೌಣವಾಗಿವೆ. ಈ ಕಾರಣದಿಂದಲೇ ಅನಧಿಕೃತ ಶಾಲೆಗಳ ಹಾವಳಿ ದಿನೇ ದಿನೇ  ಹೆಚ್ಚುತ್ತಿರುವುದು. ರಾಜ್ಯದಲ್ಲಿ ಈ ಪಿಡುಗು ಸರ್ಕಾರದ ನಿಯಂತ್ರಣ ಮೀರಿ ಬೆಳೆದಿದೆ.

ಇದನ್ನು ಮಟ್ಟಹಾಕಲು  ಸಾಧ್ಯವೇ ಇಲ್ಲವೇನೊ ಎನ್ನುವ ಮಟ್ಟಿಗೆ ಸರ್ಕಾರದ ಇಚ್ಛಾಶಕ್ತಿಯ ಕೊರತೆ ಪ್ರತೀ ವರ್ಷ ಪ್ರಕಟಗೊಳ್ಳುತ್ತಲೇ ಇದೆ. ಬೆಂಗಳೂರು ದಕ್ಷಿಣ, ಉತ್ತರ ಹಾಗೂ ಗ್ರಾಮಾಂತರ ಶೈಕ್ಷಣಿಕ ಜಿಲ್ಲೆಗಳಲ್ಲಿ ಮಾನ್ಯತೆ ಹೊಂದಿರುವ ಶಾಲೆಗಳ ಪಟ್ಟಿ­ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಈಗ ಪ್ರಕಟಿ­ಸಿದೆ. ಕೆಲವು ಪ್ರತಿಷ್ಠಿತ ಶಾಲೆಗಳ ಹೆಸರೇ ಈ ಪಟ್ಟಿಯಲ್ಲಿ ಇಲ್ಲ. ಇದರಿಂದ ಪೋಷಕರು  ಆತಂಕಕ್ಕೆ ಒಳಗಾಗಿದ್ದರೆ ಅದು ಸಹಜವೇ.  ಆದರೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಯಾವುದೇ ಆತಂಕ ಇದ್ದಂತೆ ಕಾಣುವುದಿಲ್ಲ. ಪಟ್ಟಿ ಪ್ರಕಟಿಸುವುದು ವಾರ್ಷಿಕ ವಿಧಿ. ಅದರ ಹೊರತಾಗಿ ಮತ್ತೆ ಯಾವುದೇ ಕ್ರಮ ಇರುವುದಿಲ್ಲ. ಇದ್ದಿದ್ದೇ ಆಗಿದ್ದರೆ ಅನಧಿಕೃತ ಶಾಲೆಗಳು ಈ ಪರಿ ಕೆಟ್ಟ ಧೈರ್ಯ­ವನ್ನು ಪ್ರದರ್ಶಿಸುತ್ತಿರಲಿಲ್ಲ.

ಕನ್ನಡ ಮಾಧ್ಯಮ ಹೆಸರಿನಲ್ಲಿ  ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಾಲೆ ನಡೆಸುತ್ತಿರುವ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸೃಷ್ಟಿಸಿದ ಒತ್ತಡಕ್ಕೆ ಮಣಿದು ಈಗ ದಿಢೀರನೆ ಒಂದು ಪಟ್ಟಿ ಪ್ರಕಟಿಸಲಾಗಿದೆ ಅಷ್ಟೆ. ಮಾನ್ಯತೆ  ಹೊಂದಿರದ  ನೂರಾರು ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂಬುದು ಎಲ್ಲರೂ ಬಲ್ಲ ಸತ್ಯ. ಇದನ್ನು ಅರಿಯಲು ವಿಶೇಷ ಪರಿಣತಿ ಏನೂ ಬೇಕಿಲ್ಲ. ಉಲ್ಲಂಘನೆ ಬಹುರೂಪಿಯಾದುದು.

1ರಿಂದ 5ನೇ ತರಗತಿವರೆಗೆ ಮಾತ್ರ ಅನುಮತಿ ಪಡೆದು 10ನೇ ತರಗತಿವರೆಗೂ ಶಾಲೆ ನಡೆಸುವುದು, ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮವನ್ನು ಬೋಧಿಸುವುದು, ಮಾನ್ಯತೆ ನವೀಕರಿಸದಿರುವುದು, ಕಡ್ಡಾಯ ಶಿಕ್ಷಣ ಕಾಯ್ದೆಯ ಪಾಲನೆ ಮಾಡದಿರುವುದು, ಒಂದೇ ಶಾಲೆಗೆ ಅನುಮತಿ ಪಡೆದು ಅದರ ನೆರಳಿನಡಿ ಹತ್ತಾರು ಕಡೆ ಶಾಲೆ ನಡೆಸುವುದು ಇಂತಹ ಅನೇಕ ನಿಯಮ ಭಂಗಗಳು ಶಿಕ್ಷಣ  ಇಲಾಖೆಯ ಮೂಗಿನ ಅಡಿಯಲ್ಲೇ ನಡೆಯುತ್ತಿವೆ. ಇಲಾಖೆ ಅಧಿ­ಕಾರಿ­­ಗಳು ಷಾಮೀಲಾಗದೆ ಅನಧಿಕೃತ ಶಾಲೆಗಳನ್ನು ಈ ರೀತಿ ರಾಜಾ­ರೋಷ­ವಾಗಿ ನಡೆಸಲು ಸಾಧ್ಯವೇ ಇಲ್ಲ.

ನೋಡಿಯೂ ನೋಡದಂತೆ ವರ್ತಿಸು­ವುದು, ನೋಟಿಸ್ ನೀಡಿ ಸುಮ್ಮನಾಗುವಂಥ ಜಾಣ ನಡೆಗಳಿಂದ ಈ ಶಾಲೆ­ಗಳ ಮುಂದುವರಿಕೆಗೆ ಅವರು ಪರೋಕ್ಷವಾಗಿ ನೆರವಾಗುತ್ತಿದ್ದಾರೆ. ಖಾಸಗಿ ಶಾಲೆಗಳು ನಡೆಸುವ ಪ್ರವೇಶ ಪಾರದರ್ಶಕವಾಗಿರಬೇಕು. ಲಭ್ಯ ಸೀಟುಗಳ ಸಂಖ್ಯೆ, ಹಂಚಿಕೆ ವಿಧಾನ, ಸ್ಥಳೀಯರಿಗೆ ಎಷ್ಟು ಸೀಟುಗಳನ್ನು ನೀಡಲಾಗಿದೆ ಎಂಬ ಮಾಹಿತಿಗಳನ್ನು ಆಡಳಿತ ಮಂಡಳಿಗಳು ಬಹಿರಂಗಪಡಿಸಬೇಕು ಎಂಬ ನಿಯಮಗಳು ಇದ್ದರೂ ಅವನ್ನು ಯಾವ ಶಾಲೆಯೂ ಪಾಲಿಸಿದಂತಿಲ್ಲ.

ವಂತಿಗೆ ಪಡೆಯುವುದನ್ನು ನಿಷೇಧಿಸಲಾಗಿದೆ. ಆದರೂ ಪರೋಕ್ಷವಾಗಿ ದೇಣಿಗೆ ಪಡೆಯುವುದು ನಿಂತಿಲ್ಲ. ಇದಕ್ಕೆ ಕಾರಣ, ಖಾಸಗಿ ಶಾಲೆಗಳು ಹೊಂದಿರುವ ರಾಜಕೀಯ ಪ್ರಭಾವ. ಇಂಥ ಶಾಲೆಗಳ ವಿರುದ್ಧ ಸರ್ಕಾರ ಈಗಲಾದರೂ ದಂಡ ಪ್ರಯೋಗಿಸುವ ಧೈರ್ಯ ತೋರುವುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT