ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡಿಯಾಗಿದ್ದರೆ ಚೆನ್ನ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕವಿ ವ್ಯಾಪಕ ಭಾವನೆಯ ಹಿನ್ನೆಲೆ­ಯೊಳಗೆ ಇಡೀ ರಾಜ್ಯ­ವನ್ನು ಪ್ರತಿನಿಧಿಸುವಂತೆ ಬರೆ­ದಿರು­ತ್ತಾರೆ. ಒಬ್ಬ ಸೃಜನಶೀಲ ಕವಿಯ

ಭಾವನೆಗಳನ್ನು ಯಾವುದೋ ಆಧಾರದ ಮೇಲೆ ತೆಗೆದುಹಾಕಿ ಎಂದು ಹೇಳುವ ಅಧಿಕಾರ ನಮಗೆ ಹೇಗೆ ಬರುತ್ತದೆ? ನಾಡಗೀತೆ ಇಡಿಯಾಗಿ ಇದ್ದರೇನೆ ಚೆನ್ನ. ಆಗ ಮಾತ್ರ ಕವಿ ಕಾವ್ಯಕ್ಕೆ ಪೂರ್ಣ ಮನ್ನಣೆ ನೀಡಿದಂತೆ ಆಗುತ್ತದೆ.

ದೀರ್ಘಕಾಲ ನಿಲ್ಲಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕವಿಯ ಆಶಯಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಆದರೆ ಕವಿಯ ಮೂಲ ಆಶ­ಯಕ್ಕೆ ಚ್ಯುತಿ ಉಂಟಾಗದಂತೆ ಪುನರಾ­ವರ್ತಿತ ಪದ­ಗಳನ್ನು ತೆಗೆಯುವುದರಿಂದ ಕೇಡಾಗದು ಎನಿಸುತ್ತದೆ. ವಾದ್ಯ, ರಾಗಗಳು ಕೇಳಲು ರಂಜನೆ ಮಾತ್ರ. ಅವು­ಗ­ಳನ್ನು ಕಡಿಮೆ ಮಾಡ­ಬಹುದು. ರಾಷ್ಟ್ರಗೀತೆಯನ್ನು ರಾಗಾಲಾಪವಿಲ್ಲದೆ ನೇರವಾಗಿ ಹಾಡುವಂತೆಯೇ ನಾಡಗೀತೆಯನ್ನೂ ಹಾಡಬೇಕು.

ನಾಡಗೀತೆಯಲ್ಲಿ ಮಹಿಳೆಯರ ಉಲ್ಲೇಖವೇ ಇಲ್ಲ ಎಂಬ ದೂರಿದೆ. ನಿಜ, ನಮ್ಮ ಸಾಹಿತ್ಯ, ರಾಜ­ಪರಂ­ಪರೆಯಲ್ಲಿ ಉಲ್ಲೇಖಿಸಬಹುದಾದ ಅನೇಕ ಮಹಿಳಾ ಸಾಹಿತಿ­ಗಳು, ವೀರ ಮಹಿಳೆಯರ ಹೆಸರುಗಳಿದ್ದವು. ಯಾವ ಕಾಲಕ್ಕೂ ಹೆಣ್ಣು ಮಕ್ಕಳ ಬಗ್ಗೆ ಇಂತಹ ಧೋರಣೆ ಎಂಥ ದೊಡ್ಡ ಕವಿಯಲ್ಲಿಯೂ ಇರುತ್ತದೆ ಎಂಬುದಕ್ಕೆ ನಾಡಗೀತೆಯೂ ಒಂದು ಉದಾಹರಣೆ.
ಜಯಶ್ರೀ ದಂಡೆ, ಲೇಖಕಿ

ಮೂಲ ಸ್ವರೂಪವೇ ಇರಲಿ
ನಾಡಗೀತೆಯನ್ನು ಮೂಲ­ ಸ್ವರೂಪದಲ್ಲೇ ಹಾಡ­ಬೇಕು.  ಆ ಶಬ್ದ ತೆಗಿ, ಈ ಸಾಲು ತೆಗಿ, ಇಷ್ಟು ಸೆಕೆಂಡಿಗೆ ಇಳಿಸು ಎನ್ನುವುದೆಲ್ಲ ಅಗತ್ಯವಿಲ್ಲ. ಹಾಗೆ ಮಾಡಿ­ದರೆ ಅದರ ನೈಜ ಸ್ಫೂರ್ತಿ ಹೋಗುತ್ತದೆ. ಸಮಯ ಕೊಲ್ಲುತ್ತದೆ ಎಂಬ ಕಾರಣಕ್ಕೆ ಅದರ ಸಾಲುಗಳಿಗೆ ಕತ್ತರಿ ಹಾಕಿದರೆ ಅದರ ಚಿಂತನಾ ಸ್ವರೂಪಕ್ಕೆ ಧಕ್ಕೆಯಾಗುತ್ತದೆ. ಅದರ ಬದಲು ಪುನರಾ­ವರ್ತನೆಯನ್ನು ಕಡಿಮೆ ಮಾಡಿದರೆ ಸಾಕು.

ಕುವೆಂಪು, ಬೇಂದ್ರೆ, ಕಂಬಾರರ ಕವಿತೆಗಳಲ್ಲಿ ಒಂದೆರಡು ಶಬ್ದ ತೆಗೆದರೂ ಕಾವ್ಯದ ಮನೋಧರ್ಮವೇ ಕೆಡಬಹುದು. ಕವಿಯ ಆಶಯಕ್ಕೆ ಧಕ್ಕೆ ಬರದಂತೆ ಕೆಲ ಪದಗಳನ್ನು ತೆಗೆಯುತ್ತೇವೆ ಎನ್ನುವುದೂ ಸರಿಯಲ್ಲ. ಕವಿ ಆಳವಾಗಿ ಚಿಂತಿಸಿಯೇ ಪದಗಳನ್ನು ಜೋಡಿಸಿರುತ್ತಾನೆ.  ಈಗಿನ ಕರ್ನಾ­ಟಕಕ್ಕೆ ತಕ್ಕಂತೆ ಬದಲಿ­ಸಿದ್ದೇವೆ ಎನ್ನುವುದಾದರೆ ಈಗಿನ ಕರ್ನಾಟಕ­ವನ್ನು ನಿರ್ಧ­ರಿಸು­­ವವರು ಯಾರು? ಕಣವಿಯವರು ಒಂದು ಕರ್ನಾಟಕ­ವನ್ನು ಗ್ರಹಿಸು­­ತ್ತಾರೆ ಎಂದರೆ, ನಾನೊಂದು ಕರ್ನಾಟಕವನ್ನು ಗ್ರಹಿಸುತ್ತೇನೆ, ಚಾಮರಾಜ ನಗರದವರು ಒಂದು ಗ್ರಹಿಸು­ತ್ತಾರೆ. ಹಾಗಾದರೆ ನಾಡಗೀತೆ ಯಾರ ಕರ್ನಾಟಕವನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತದೆ? 
ವಿಕ್ರಂ ವಿಸಾಜಿ, ಕವಿ

ಸಂಕ್ಷಿಪ್ತ ಸರಿಯಲ್ಲ
ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಿ­ರು­ವುದು ಚೆನ್ನಾ­ಗಿಲ್ಲ. ಇದು ಅರ್ಥ­ವಾಗು­ವಂತೆ ಇಲ್ಲ. ಅಲ್ಲದೆ ಕೊನೆಯ ಸಾಲು­ಗಳು ಬಂದೇ ಇಲ್ಲ. ಆ ರೀತಿ ಆಗುವು­ದ­­ಕ್ಕಿಂತ ಮೊದಲು ಇದ್ದದ್ದೇ ಇರುವುದು ವಾಸಿ. ಹಾಗೆ ಬದ­ಲಾಯಿ­ಸ­ಬೇಕೆಂದರೆ ಇಡೀ ನಾಡಗೀತೆಯನ್ನೇ ಬದಲಾವಣೆ ಮಾಡಬೇಕು.

ತೈಲಪ, ಹೊಯ್ಸಳರಾಳಿದ ನಾಡೇ ಎಂಬ ಸಾಲಿದೆ. ಅವರು ಸಣ್ಣ ಪುಟ್ಟ ರಾಜರು. ರಾಷ್ಟ್ರ­ಕೂಟರು, ಚಾಲು­ಕ್ಯರು, ವಿಜಯನಗರ, ಕದಂ­ಬರು ಪ್ರಮುಖ ಅರಸರು. ಆದರೆ ಅವರ ಹೆಸರೇ ಇಲ್ಲ. ಮಹಿಳೆಯರ ಹೆಸರೂ ಇಲ್ಲ. ಏಕೆ ಮಹಿಳೆಯರು ನಮ್ಮ ನಾಡ­ಗೀತೆಗೆ ಬೇಡವೇನು? ಮಹಾತ್ಮ ಗಾಂಧಿ ಅವರ ಹೆಸರಿಲ್ಲದ್ದನ್ನು ನಾಡ­ಗೀತೆ ಎಂದು ಒಪ್ಪಿ­­ಕೊಳ್ಳು­ವು­ದಕ್ಕೇ ನಾನು ತಯಾ­ರಿಲ್ಲ. ಒತ್ತಾಯ ಮಾಡಿದರೆಂದು ಮಧ್ವರ ಹೆಸರನ್ನು ಸೇರಿಸುತ್ತಾರೆ. ಆದರೆ ಗಾಂಧಿ ಬಗ್ಗೆ ಒತ್ತಾಯ ಮಾಡುವವರೇ ಇರಲಿಲ್ಲ. ಹಾಡಲು ದೀರ್ಘ ಅವಧಿ ಬೇಕಾಗುತ್ತದೆ  ಎಂದು ತೆಗೆಯುವುದು ಕವಿಯ ಮೂಲ ಆಶಯವನ್ನೇ ಹಾಳುಮಾಡಿ ಬಿಡು­ತ್ತದೆ.
ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ


ಅಂತರಂಗದಲ್ಲೇ ಪರಿಹಾರ
ನಾಡಗೀತೆಗೆ ಸಂಬಂ­ಧಿ­ಸಿದ ವಿವಾದ ಪ್ರೇಕ್ಷಕರ ಎದುರು ಕುಳಿತು ಚರ್ಚೆ ಮಾಡು­­ವಂಥದ್ದಲ್ಲ. ನಮ್ಮ ಪಾಡಿಗೆ ನಾವು ಕುಳಿತು ಯೋಚಿಸಿದರೆ ಅಂತರಂಗದಲ್ಲೇ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಜನಾಂಗದ ಪ್ರಮುಖರ ಹೆಸರು ನಾಡಗೀತೆಯಲ್ಲಿ ಸೇರಬೇಕೆಂದು ಬಯಸಿದರೆ ಅದು ಹಿಂದುಳಿದ ವರ್ಗಗಳ ಆಯೋಗದ ವರದಿಯಾಗುತ್ತದೆಯೇ ಹೊರತು ನಾಡಗೀತೆ ಆಗಲಾರದು.
ದಿವಂಗತ ಸಾಹಿತಿ ಪೂರ್ಣಚಂದ್ರ ತೇಜಸ್ವಿ
(2004ರಲ್ಲಿ ನಾಡಗೀತೆಯನ್ನು ಅಂಗೀಕರಿಸಿ­ದಾಗ, ಮಧ್ವಾಚಾರ್ಯರ ಹೆಸರು ಸೇರ್ಪಡೆ ವಿಚಾರದಲ್ಲಿ ವಿವಾದ ಉಂಟಾಗಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ)

ಏಕರೂಪತೆ ಇರಲಿ
ಹಾಡುವ ಅವಧಿ­ಯನ್ನು ಕಡಿಮೆ ಮಾಡುವುದೆಂದರೆ ನಾಡ­ಗೀತೆಯ ಸಾಹಿತ್ಯಕ್ಕೆ ಕತ್ತರಿ ಹಾಕುವುದೆಂದಲ್ಲ. ಕುವೆಂಪು ಅವರು ಈ ಗೀತೆಯನ್ನು ರಚಿಸಿದಾಗ ಇದು ನಾಡ­ಗೀತೆ­ಯಾ­ಗುತ್ತದೆ ಎಂದು ಭಾವಿಸಿರಲಿಲ್ಲ. ಇಡೀ ನಾಡಿನ ವೈಭ­ವವನ್ನು, ಇತಿಹಾಸವನ್ನು ಹೊಂದಿ­ರುವ ಈ ಕವನದಲ್ಲಿ ಯಾವ ಸಾಲನ್ನಾದರೂ ತೆಗೆ­ದರೆ ಅದು ಕವನಕ್ಕೆ ಮಾಡಿದ ಅಪಚಾರ­ವಾಗು­ತ್ತದೆ. ಅದರಲ್ಲೂ ವಿಶೇಷ­ವಾಗಿ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಸಾಲು ಕರ್ನಾಟಕಕ್ಕೆ, ಕನ್ನಡಿಗರಿಗೆ ವಿಶೇಷವಾದ ಗೌರವವನ್ನು ತಂದು­ಕೊಡು­ವಂತಹುದು. ಆದ್ದರಿಂದ  ನಾಡಗೀತೆಯ ಯಾವ ಸಾಲನ್ನೂ ತೆಗೆಯದೆ ಅದನ್ನು ನಾಡಿನ ಉದ್ದಗಲಕ್ಕೂ ರಾಷ್ಟ್ರಗೀತೆಯಂತೆ ಏಕರೂಪವಾಗಿ ಹಾಡುವ ವ್ಯವಸ್ಥೆ ಮಾಡಬೇಕು.
ಪುಂಡಲೀಕ ಹಾಲಂಬಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು

ಜನಾಭಿಪ್ರಾಯ ಮುಖ್ಯ


ಎರಡೂವರೆ ನಿಮಿಷದಲ್ಲಿ ನಾಡಗೀತೆಯ ಪೂರ್ಣ­ಪಾಠವನ್ನು ಪುನರಾವರ್ತನೆ ಇಲ್ಲದಂತೆ ಹಾಡ­ಬಹುದು. ವಿವಾದ ಮುಂದುವರಿಯದಂತೆ ಸರ್ಕಾರ ಆದಷ್ಟು ಬೇಗ ಅಂತಿಮ ನಿರ್ಧಾರ ಕೈಗೊಳ್ಳಬೇಕು.
ಸಮಿತಿಯ ತೀರ್ಮಾನವೇ ಅಂತಿಮವಲ್ಲ. ಸಾರ್ವಜ­ನಿಕರು, ಸಾಹಿತಿಗಳ ಅಭಿಪ್ರಾಯ ಬಹಳ ಮುಖ್ಯ. ಸಮಿತಿ ಸಿದ್ಧಪಡಿಸಿರುವ ಎರಡೂ ಮಾದರಿಗಳನ್ನು ಟಿ.ವಿ, ಯೂ ಟ್ಯೂಬ್‌ ಮೂಲಕ ಜನರಿಗೆ ಕೇಳಿಸಬೇಕು. ಬಳಿಕ ಎಲ್ಲ ಅಭಿಪ್ರಾಯ­ಗಳನ್ನೂ ಕ್ರೋಡೀಕರಿಸಿ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟು  ತೀರ್ಮಾನ ಕೈಗೊಳ್ಳಬೇಕು.
ವೈ.ಕೆ. ಮುದ್ದುಕೃಷ್ಣ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರು ಮತ್ತು ನಾಡಗೀತೆ ಪರಿಷ್ಕರಣ ಸಮಿತಿಯ ಸದಸ್ಯರು

ನಾಡಗೀತೆ
ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ|
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ|

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ,
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ|

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ|

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ|
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ|

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ|
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ|

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ,
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ|
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ|

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ|
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ.


– ಕುವೆಂಪು
(ಈಗ ಹಾಡಲಾಗುತ್ತಿರುವ ನಾಡಗೀತೆಯ ಪಠ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT