ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪುರುಷ ಕ್ಯಾಮರೂನ್‌

ವ್ಯಕ್ತಿ
Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಇಪ್ಪತ್ತನೇ ಶತಮಾನದ ನಂತರದ ಯುನೈಟೆಡ್ ಕಿಂಗ್‌ಡಂನ ರಾಜಕಾರಣಿಗಳಲ್ಲಿ ಯಾರನ್ನಾದರೂ ‘ಇತಿಹಾಸ ಪುರುಷ’ ಎಂಬ ವಿಶೇಷಣದಿಂದ ಗುರುತಿಸಬಹುದಾಗಿದ್ದರೆ ಆ ಹೆಗ್ಗಳಿಕೆ ಮೊದಲಿಗೆ ಸಲ್ಲುವುದು ಡೇವಿಡ್ ಕ್ಯಾಮರೂನ್‌ ಅವರಿಗೆ.

ಪ್ರಧಾನಿಯಾದ ಕ್ಷಣದಿಂದ ರಾಜೀನಾಮೆ ನೀಡುವ ತನಕವೂ ಅವರು ಐತಿಹಾಸಿಕ ಎಂದು ಕರೆಯಬಹುದಾದ ಹಲವು ಘಟನೆಗಳಿಗೆ ಕಾರಣರಾಗುತ್ತಾ ಹೋದರು. ಕೆಲವದರ ಹಿಂದೆ ಅವರ ಪ್ರಯತ್ನವಿತ್ತು. ಕೆಲವದಕ್ಕೆ ಅವರು ಅಧಿಕಾರಕ್ಕೇರಿದ ಕಾಲವೇ ಕಾರಣವಾಗಿತ್ತು.

2010ರಲ್ಲಿ ಅವರು ಪ್ರಧಾನಿಯಾದಾಗಲೇ ಅವರ ಹೆಸರಿಗೆ ಎರಡು ಐತಿಹಾಸಿಕ ದಾಖಲೆಗಳು ಸೇರ್ಪಡೆಯಾದವು. 1812ರಲ್ಲಿ ಪ್ರಧಾನಿಯಾದ ರಾಬರ್ಟ್ ಬ್ಯಾಂಕ್ಸ್ ಜೆನ್ಕಿನ್‌ಸನ್ ಹೆಸರಿನಲ್ಲಿದ್ದ ಅತಿ ಸಣ್ಣ ವಯಸ್ಸಿನ ಪ್ರಧಾನಿ ಎಂಬ ದಾಖಲೆ ಡೇವಿಡ್ ಕ್ಯಾಮರೂನ್ ಹೆಸರಿಗೆ ಬಂತು. 43ನೇ ವರ್ಷಕ್ಕೇ ಪ್ರಧಾನಿ ಪಟ್ಟಕ್ಕೇರಿದ ಹೆಗ್ಗಳಿಕೆ 1997ರಲ್ಲಿ ಪ್ರಧಾನಿ ಹುದ್ದೆಗೇರಿದ್ದ ಟೋನಿ ಬ್ಲೇರ್‌ಗೂ ಇತ್ತು. ಆದರೆ ಕ್ಯಾಮರೂನ್ ಅವರಿಗಿಂತ ಆರು ತಿಂಗಳು ಚಿಕ್ಕವರು.

ಬ್ರಿಟನ್‌ನ ಮತದಾರರು ಮೈತ್ರಿಕೂಟ ಸರ್ಕಾರಗಳ ಪರಿಕಲ್ಪನೆಯನ್ನೇ ಮರೆತಿದ್ದ ಕಾಲದಲ್ಲಿ ಮೈತ್ರಿಕೂಟ ಸರ್ಕಾರವೊಂದಕ್ಕೆ ನೇತೃತ್ವ ನೀಡಿದ ದಾಖಲೆಯೂ ಕ್ಯಾಮರೂನ್ ಹೆಸರಿನಲ್ಲೇ ಇದೆ. 2010ರ ಕನ್ಸರ್ವೇಟಿವ್ ಮತ್ತು ಲಿಬರಲ್ ಡೆಮಾಕ್ರಟಿಕ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುವುದಕ್ಕೆ ಎಪ್ಪತ್ತು ವರ್ಷಗಳ ಹಿಂದಷ್ಟೇ ಒಂದು ಮೈತ್ರಿಕೂಟ ಸರ್ಕಾರ ಆಡಳಿತ ನಡೆಸಿತ್ತು.

ಡೇವಿಡ್ ಕ್ಯಾಮರೂನ್ ಮಟ್ಟಿಗೆ ಸ್ವಂತ ಬದುಕು ಮತ್ತು ರಾಜಕಾರಣಗಳೆರಡೂ ಭಿನ್ನವಾಗಿರಲಿಲ್ಲ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಯೋಜನೆ (ಎನ್ಎಚ್‌ಎಸ್) ಇಪ್ಪತ್ತನೇ ಶತಮಾನದ ಬಹುದೊಡ್ಡ ಸಾಧನೆಗಳಲ್ಲಿ ಒಂದು. ಬೇರಾವುದೇ ಕನ್ಸರ್ವೇಟಿವ್ ರಾಜಕಾರಣಿ ಸಮರ್ಥಿಸಿದ್ದಕ್ಕಿಂತ ಹೆಚ್ಚಾಗಿ ಇದನ್ನವರು ಸಮರ್ಥಿಸಿದ್ದರು. ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿದ್ದ ಮಗನಿಗೆ ಚಿಕಿತ್ಸೆ ಕೊಡಿಸುವಾಗ ಅವರಿಗಾದ ಅನುಭವಗಳು ಕೇವಲ ತಂದೆಯೊಬ್ಬನ ನೋವಿನ ಕಥೆಯಾಗಿ ಉಳಿಯಲು ಅವರು ಬಿಡಲಿಲ್ಲ.

ಅಧಿಕಾರ ಸಿಕ್ಕಿ ಎನ್‌ಎಚ್‌ಎಸ್ ಸುಧಾರಣೆಗೆ ಶ್ರಮಿಸುವಾಗ ಇದೆಲ್ಲವೂ ಬಳಕೆಯಾಯಿತು. 2005ರಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಆಯ್ಕೆಯಾದಾಗ ಅವರೆದುರು ಬಹುದೊಡ್ಡ ಸವಾಲಿತ್ತು. ಟೋನಿ ಬ್ಲೇರ್‌ ಅವರನ್ನು ಎದುರಿಸುವುದಕ್ಕೆ ಕ್ಯಾಮರೂನ್ ಸಮರ್ಥ ಎಂದು ಪಕ್ಷ ಭಾವಿಸಿತ್ತು.

2010ರ ಚುನಾವಣೆಯಲ್ಲಿ ಈ ಸವಾಲನ್ನು ಸಮರ್ಥವಾಗಿ ಎದುರಿಸಿದರೂ ಪಕ್ಷವನ್ನು ಅಧಿಕಾರಕ್ಕೇರಿಸುವುದಕ್ಕೆ ಲಿಬರಲ್ ಡೆಮಾಕ್ರಾಟ್‌ಗಳ ಬೆಂಬಲ ಪಡೆಯಲೇಬೇಕಾಯಿತು. ಈ ಕಾಲಘಟ್ಟದಲ್ಲಿ ಕ್ಯಾಮರೂನ್ ಹುಟ್ಟುಹಾಕಿದ ಪರಿಕಲ್ಪನೆ ‘ಲಿಬರಲ್ ಕನ್ಸರ್ವೇಟಿಸಂ’ ಅರ್ಥಾತ್ ‘ಉದಾರವಾದಿ ಸಾಂಪ್ರದಾಯಿಕತೆ’. ಪಕ್ಷದೊಳಗಿನ ಬಲಪಂಥೀಯವಾದಿಗಳಿಗೆ ಇದು ಅಷ್ಟೇನೂ ಇಷ್ಟವಿರಲಿಲ್ಲ.

ಎರಡನೇ ಅವಧಿಗೆ ಅಧಿಕಾರಕ್ಕೇರುವ ಹೊತ್ತಿಗೆ ಟೀಕಾಕಾರರ ಧ್ವನಿ ತಣ್ಣಗಾಗಿತ್ತು. ಆಗ ಕೇಳಿಬಂದದ್ದು ಪಕ್ಷದ ಸದಸ್ಯರನ್ನು ಪ್ರಧಾನಿ ಕಡೆಗಣಿಸುತ್ತಾರೆ ಎಂಬಂತಹ  ಟೀಕೆಗಳು. ಇದರಲ್ಲಿ ಬಹಳ ಮುಖ್ಯವಾದುದು ಪ್ರಧಾನಿಯವರ ಇಂಗಿತವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲೇ ಸಾಧ್ಯವಾಗುತ್ತಿಲ್ಲ ಎಂಬುದು.

ಕನ್ಸರ್ವೇಟಿವ್ ಪಕ್ಷದ ಸಿದ್ಧಾಂತವನ್ನು ಬಹಳ ವಿಶಾಲಾರ್ಥದಲ್ಲಷ್ಟೇ ತೆಗೆದುಕೊಂಡಿದ್ದ ಕ್ಯಾಮರೂನ್‌ ಈ ಬಗೆಯ ಟೀಕೆಗಳನ್ನು ಎದುರಿಸಿದ್ದು ಸಹಜವಾಗಿಯೇ ಇತ್ತು.ಆರ್ಥಿಕತೆಯ ವಿಚಾರದಲ್ಲಿ ಬಲಪಂಥೀಯ ಎನ್ನಬಹುದಾದ ನಿಲುವುಗಳನ್ನು ತಳೆಯುವ ಕ್ಯಾಮರೂನ್ ಸಾಮಾಜಿಕ ವಿಚಾರಗಳಿಗೆ ಬಂದಾಗ ಕನ್ಸರ್ವೇಟಿವ್ ಪಕ್ಷದ  ರಾಜಕಾರಣಿಯಂತೆ ಇರುತ್ತಿರಲಿಲ್ಲ. ಮಾದಕ ವಸ್ತುಗಳು ಮತ್ತು ಸಲಿಂಗ ಕಾಮಕ್ಕೆ ಸಂಬಂಧಿಸಿದ ನಿಲುವುಗಳೇ ಇದಕ್ಕೆ ಸಾಕ್ಷಿ.

ಶಾಲೆ ಕಾಲೇಜುಗಳಲ್ಲಿ ಸಲಿಂಗ ಕಾಮಕ್ಕೆ ಸಂಬಂಧಿಸಿದ ಚರ್ಚೆಗಳನ್ನು ನಿರ್ಬಂಧಿಸುವ ‘ಸೆಕ್ಷನ್ 28’ ಕಾನೂನಿಗಾಗಿ ಅವರು ಕ್ಷಮೆ ಕೋರಿದರು. ಈ ಕ್ಷಮೆಗಳ ಪಟ್ಟಿ ಅಲ್ಲಿಗೇ ಕೊನೆಗೊಳ್ಳುವುದಿಲ್ಲ. ಕನ್ಸರ್ವೇಟಿವ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ‘ಸಮಾಜ ಎಂಬುದೊಂದಿಲ್ಲ’ ಎಂದದಕ್ಕೆ, ನೆಲ್ಸನ್ ಮಂಡೇಲಾರ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಕರೆದದ್ದಕ್ಕೆಲ್ಲಾ ಕ್ಯಾಮರೂನ್ ಜಗತ್ತಿನ ಮತ್ತು ಬ್ರಿಟನ್ ಜನತೆಯ ಕ್ಷಮೆ ಕೋರಿದರು.

ಯುನೈಟೆಡ್ ಕಿಂಗ್‌ಡಂ ಯುರೋಪಿಯನ್ ಒಕ್ಕೂಟದ ಭಾಗವಾಗಿ ಇರಬೇಕೇ ಬೇಡವೇ ಎಂಬುದಕ್ಕೆ ಸಂಬಂಧಿಸಿದಂತೆಯೂ ಕ್ಯಾಮರೂನ್ ನಿಲುವು ವಿಶಿಷ್ಟವೆ. ಯೂರೋ ಕರೆನ್ಸಿಯನ್ನು ಒಪ್ಪದೆಯೇ ಯುರೋಪಿಯನ್ ಒಕ್ಕೂಟದ ಭಾಗವಾಗಿ ಮುಂದುವರಿಯುವ ಅಪೇಕ್ಷೆ ಅವರದ್ದಾಗಿತ್ತು. ಈ ವಿಚಾರದಲ್ಲಿ ದೇಶ ಏನು ಮಾಡಬೇಕು ಎಂಬುದಕ್ಕೊಂದು ಜನಮತಗಣನೆ ನಡೆಸುತ್ತೇನೆ ಎಂದು ಅದರ ದಿನಾಂಕದ ಜೊತೆಗೇ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿಕೊಂಡಿದ್ದರು.

ದೇಶ ಯೂರೋಪಿಯನ್ ಒಕ್ಕೂಟದ ಭಾಗವಾಗಿರಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಸಲು ನಿರಂತರವಾಗಿ ಪ್ರಯತ್ನಿಸುತ್ತಲೇ ಜನಮತಗಣನೆಯನ್ನು ಎದುರಿಸಿದರು. ಫಲಿತಾಂಶ ತನ್ನ ನಿಲುವಿಗೆ ವ್ಯತಿರಿಕ್ತವಾಗಿ ಬಂದಾಕ್ಷಣ ರಾಜೀನಾಮೆಯನ್ನು ಪ್ರಕಟಿಸಿ ಮುತ್ಸದ್ದಿತನವನ್ನೂ ಮೆರೆದರು.

ಆಕ್ಸ್‌ಫರ್ಡ್‌ನ ಬಾರ್ಸೆನೋಸ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ವರ್ಷವಾದ 1988ರಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಶೋಧನಾಂಗದಲ್ಲಿ ಕೆಲಸಕ್ಕೆ ಸೇರಿದ ಕ್ಯಾಮರೂನ್ ಅಲ್ಲಿಂದ ಮುಂದಕ್ಕೆ ಏರಿದ ಎತ್ತರವೂ ಒಂದರ್ಥದಲ್ಲಿ ಐತಿಹಾಸಿಕವೇ. ಲಂಡನ್‌ನ ಮೇಲ್ಮಧ್ಯಮ ವರ್ಗದ ಕುಟುಂಬದಿಂದ ಬಂದ ಈ ಯುವಕನ ಮಟ್ಟಿಗೆ ಈ ಬೆಳವಣಿಗೆ ಅಸಾಧಾರಣವಾದುದೇನೂ ಅಲ್ಲ.

ಆದರೆ ಪಕ್ಷದೊಳಗಿನ ರಾಜಕಾರಣದಲ್ಲಿ ತನ್ನದೊಂದು ಸ್ಥಾನ ಕಂಡುಕೊಳ್ಳುವುದಕ್ಕೆ ಬೇಕಾದ ಅವಕಾಶಗಳು ಸೃಷ್ಟಿಯಾದುದು ಒಂದು ಬಗೆಯಲ್ಲಿ ಕ್ಯಾಮರೂನ್ ಅದೃಷ್ಟವೂ ಹೌದು. ಯಾವುದೇ ವಿಷಯವನ್ನು ಬಹಳ ಸ್ಪಷ್ಟವಾಗಿ ಪ್ರಸ್ತುತಪಡಿಸುವ ಚಾತುರ್ಯ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬಹಳ ಲೆಕ್ಕಾಚಾರದ ಮತ್ತು ಎಚ್ಚರದ ರಾಜಕಾರಣದಲ್ಲಿ ಕ್ಯಾಮರೂನ್ ಪಳಗಿದ್ದರೂ ವಿವಾದಗಳೇನೂ ಅವರನ್ನು ಬಿಟ್ಟಿರಲಿಲ್ಲ. ಬಹಳ ಮುಖ್ಯವಾದುದು ‘ನ್ಯೂಸ್ ಆಫ್ ದ ವರ್ಲ್‌್ಡ್’ ಎಂಬ ಕುಖ್ಯಾತ ಟ್ಯಾಬ್ಲಾಯ್ಡ್ ಪತ್ರಿಕೆಯೊಂದಿಗಿನ ಅವರ ಸಂಬಂಧ. ಪ್ರಧಾನಿಯಾಗುವುದಕ್ಕೆ ಮೂರು ವರ್ಷ ಮೊದಲು ಇದೇ ಪತ್ರಿಕೆಯ ಮಾಜಿ ಸಂಪಾದಕ ಆಂಡಿ ಕೌಲ್ಸನ್ ಅವರನ್ನು ತಮ್ಮ ಸಂವಹನ ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದರು.

ಈ ಪತ್ರಿಕೆಯ ಫೋನ್ ಕದ್ದಾಲಿಕೆ ಹಗರಣ ಹೊರಬಿದ್ದಾಗ ಅದರ ಮೊದಲ ಬಲಿಯೇ ಈ ಕೌಲ್ಸನ್. ಆ ಪತ್ರಿಕೆಯನ್ನೇ ಮುಚ್ಚಿಸುವಷ್ಟು ಮಟ್ಟಕ್ಕೆ ವಿಸ್ತರಿಸಿದ ಹಗರಣದ ಮತ್ತೊಬ್ಬ ಪಾತ್ರಧಾರಿ ರೆಬೆಕ್ಕಾ ಬ್ರೂಕ್ಸ್ ಅವರಿಗೆ ಕ್ಯಾಮರೂನ್ ಕಳುಹಿಸಿದ ಫೋನ್ ಸಂದೇಶಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಕ್ಯಾಮರೂನ್ ವ್ಯಕ್ತಿತ್ವದ ಕೊರತೆಗಳನ್ನು ತೋರಿಸಿಕೊಟ್ಟಿತು. ಅಷ್ಟೇ ಅಲ್ಲ ಟ್ಯಾಬ್ಲಾಯ್ಡ್‌ಗಳು ಮತ್ತು ರಾಜಕಾರಣಿಗಳ ನಡುವಣ ಸಂಬಂಧದ ಕುರಿತ ಚರ್ಚೆಯೊಂದನ್ನೂ ಇದು ಹುಟ್ಟು ಹಾಕಿತು.

ಯೂರೋ ಕರೆನ್ಸಿಗೆ ಸಂಬಂಧಿಸಿದ 2012ರ ಒಪ್ಪಂದದ ವಿರುದ್ಧ ವಿಟೋ ಚಲಾಯಿಸುವುದರೊಂದಿಗೆ ಕಳೆದುಕೊಂಡಿದ್ದ ಜನಪ್ರಿಯತೆಯನ್ನು ಕ್ಯಾಮರೂನ್ ಪಡೆದುಕೊಂಡರು.ಇಂಥ ಕ್ರಮಗಳ ಮೂಲಕವೇ ಅವರು 2015ರಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೇರಿಸಿದರು. ಎರಡನೇ ಅವಧಿಯ ಆಯ್ಕೆಯೂ ಹಲವು ರೀತಿಯಲ್ಲಿ ಐತಿಹಾಸಿಕ.

ಎರಡು ದಶಕಗಳ ನಂತರ ಕನ್ಸರ್ವೇಟಿವ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೇರಿದ್ದು ಒಂದು ಸಾಧನೆ. ಒಂದು ಶತಮಾನದ ನಂತರ ಪೂರ್ಣ ಅವಧಿ ಪೂರೈಸಿದ ಪ್ರಧಾನಿ ಎರಡನೇ ಬಾರಿಗೆ ಪ್ರಧಾನಿಯಾದ ದಾಖಲೆಯೂ ಕ್ಯಾಮರೂನ್ ಅವರದ್ದಾಯಿತು. ಪ್ರಧಾನಿ ಹುದ್ದೆಯಿಂದ ನಿರ್ಗಮಿಸುತ್ತಿರುವುದೂ ಒಂದು ಐತಿಹಾಸಿಕ ಸಂದರ್ಭದಲ್ಲಿ.ಯುನೈಟೆಡ್ ಕಿಂಗ್‌ಡಂ ಯುರೋಪಿಯನ್ ಒಕ್ಕೂಟದಲ್ಲಿ ಉಳಿಯುತ್ತದೆ ಎಂಬ ಎಲ್ಲಾ ನಿರೀಕ್ಷೆಗಳನ್ನೂ ಜನಮತಗಣನೆ ಸುಳ್ಳು ಮಾಡಿದ್ದು ಕ್ಯಾಮರೂನ್ ರಾಜೀನಾಮೆಗೆ ಕಾರಣವಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT