ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಬದಲಿಸುವ ಶಕ್ತಿ ನನಗಿಲ್ಲ: ಪಾಟೀಲ್‌ ಪುಟ್ಟಪ್ಪ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಇತಿಹಾಸ, ನಡೆದ ಘಟನೆ­ಯನ್ನು ಬದಲಿಸುವ ಶಕ್ತಿ ನನಗಿಲ್ಲ. ನಿನ್ನೆ, ಇಂದು ಹಾಗೂ ಯಾವಾಗಲೂ ನಾನು ಸತ್ಯದ ಆರಾಧಕ. ಎಷ್ಟೇ ತೊಂದರೆ­ಯಾ­ದರೂ ಸತ್ಯದ ಪ್ರತಿಪಾದನೆಯನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.

ತಮ್ಮ ಆತ್ಮಚರಿತ್ರೆ ‘ನಾನು ಪಾಟೀಲ ಪುಟ್ಟಪ್ಪ’ ಕೃತಿಯಲ್ಲಿ ಶಿವರಾಮ ಕಾರಂತರ ಮದುವೆ ವಿಷಯ ಪ್ರಸ್ತಾಪಕ್ಕೆ  ತಮ್ಮ ವಿರುದ್ಧದ ಟೀಕೆಗಳಿಗೆ ಪ್ರತಿಕ್ರಿಯಿ­ಸಿದ ಅವರು, ‘ಕಾರಂತರ ಕುರಿತು ನಾನು ಸತ್ಯ ಸಂಗತಿಯನ್ನು ಬರೆದರೆ ಕೆಲವರು ಆಕಾಶವೇ ಕಳಚಿ ಬಿದ್ದಂತೆ ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ನೋವಿನಿಂದ ನುಡಿದರು.

‘ಯಾರಿಗೋ ನೋವು ಆಗುತ್ತದೆ ಎಂದು ಸತ್ಯವನ್ನು ಅವಮಾನಿಸುವುದು ಸರಿ­ಯಲ್ಲ ಎಂದು ರವೀಂದ್ರನಾಥ್‌ ಟ್ಯಾಗೋರ್‌ ಹೇಳಿದ್ದಾರೆ. ಸತ್ಯವೇ ಹಾಗೆ. ಅದು ಯಾವಾಗಲೂ ಕಹಿ’ ಎಂದರು. ‘ಕಾರಂತ ಕುರಿತು ನಾನು ಬರೆದಿದ್ದನ್ನು ಪ್ರಶ್ನಿ­ಸುವ ಈ ತಾಯಿ ಯಾವಾಗ ಇದ್ದರು. ಅವರು ಕಾರಂತರ ಜೀವನದಲ್ಲಿ ಯಾವಾಗ ಬಂದರು’ ಎಂದು ಮಾಲಿನಿ ಮಲ್ಯ ಅವರ ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿ­ದರು.

‘ಕಾರಂತರ ಕುರಿತು ನನಗೆ ಮಾಹಿತಿ ನೀಡಿದ­ವರು ನಂಬುವಂತಹ ಜನರೇ ಇದ್ದರು. ಪುತ್ತೂರು ಮೂಲದ ಯಕ್ಷ­ಗಾನ ಕಲಾವಿದ ನಾರಾಯಣ ಕಿಲ್ಲೆ ಹಾಗೂ ಕೆ.ಕೆ.ಶೆಟ್ಟಿ ಎಂಬುವವರು ನನ್ನ ಹೇಳಿಕೆ­ಗಳಿಗೆ ಆಧಾರ ಒದಗಿಸಿದವರು’ ಎಂದು ಹೇಳಿದರು. ‘ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ನಾರಾಯಣ ಕಿಲ್ಲೆ 1946ರಲ್ಲಿ ಹುಬ್ಬ­ಳ್ಳಿಗೂ ಬಂದಿದ್ದರು. ಅವರು ಕಾರಂತರ ಕುರಿತು ಮಾತ್ರವಲ್ಲ; ಕಮಲಾದೇವಿ ಚಟ್ಟೋ­­ಪಾಧ್ಯಾಯ ಕುರಿತೂ ಹೇಳುತ್ತಿ­ದ್ದರು’ ಎಂದು ವಿವರಿಸಿದರು.

‘ಶೆಟ್ಟಿಯವರು ವಿಧಾನ ಪರಿಷತ್‌ ಸಭಾ­ಪತಿ­ಯಾಗಿ ಕಾರ್ಯ ನಿರ್ವಹಿಸಿ­ದರು. ದಕ್ಷಿಣ ಕನ್ನಡ ಜಿಲ್ಲೆಯ ರಸವ­ತ್ತಾದ ಕಥೆಗಳನ್ನು ಹೇಳುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಬಗ್ಗೆ ಶೆಟ್ಟಿ ಅವರಷ್ಟು ತಿಳಿದು­ಕೊಂಡಿದ್ದವರು ಯಾರೂ ಇರಲಿಲ್ಲ’ ಎಂದರು. ‘ನನಗೆ  ಗೊತ್ತಿರುವ  ಮಾಹಿತಿಯನ್ನೆಲ್ಲ ನಾನು ಬರೆಯಲು ಹೋಗಿಲ್ಲ. ಒಂದು ಸಂಗತಿಯನ್ನು ಮಾತ್ರ ಪ್ರಸ್ತಾಪಿಸಿ­ದ್ದೇನೆ. ಒಂದು ದೃಷ್ಟಿಯಿಂದ ನಾವೆಲ್ಲ ತುಂಬಾ ಮಡಿವಂತರಾಗಿದ್ದೇವೆ. ಇಂಗ್ಲಿಷ್‌ ಬರಹ­ಗಾರರ ಬಗ್ಗೆ ನಾನು ಹೇಳುವಂತಹ, ಹೇಳದೇ ಇರುವಂತಹ ಅನೇಕ ಸಂಗತಿ­ಗಳು ನನಗೆ ತಿಳಿದಿವೆ. ಬಹುತೇಕ ಎಲ್ಲ ಬರಹ­ಗಾರರು ಅವರ ಚಾರಿತ್ರ್ಯ ಹೇಗೆ ಇದ್ದರೂ ನಮಗೆಲ್ಲ ಅವರು ಪವಿತ್ರ ವ್ಯಕ್ತಿಗಳೇ ಆಗಿದ್ದಾರೆ’ ಎಂದು ಹೇಳಿದರು.

‘ನಾನು 1944ರಿಂದ ಕಾರಂತರನ್ನು ಬಲ್ಲೆ. ನಾನು ಕಾಲೇಜಿನಲ್ಲಿ ಓದುತ್ತಿ­ದ್ದಾಗ ಅವರು ನನ್ನ ರೂಮಿನಲ್ಲಿಯೇ ಉಳಿದುಕೊಂಡಿದ್ದರು. ಕಾರಂತರು ನಮ್ಮ ಲೇಖಕರಲ್ಲಿಯೇ ಭಿನ್ನ ಎಂದು ತಿಳಿದು ಗೌರವಿಸುತ್ತಿದ್ದೆ. ಈಗಲೂ ಆ ಗೌರವ ಕಡಿಮೆ­­ಯಾಗಿಲ್ಲ. ಆದರೆ, ನಾನು ಕಾರಂ­ತರ ವೈರಿ ಅನ್ನೋ ರೀತಿಯಲ್ಲಿ ಅವರು (ಮಾಲಿನಿ ಮಲ್ಯ) ಹೇಳಿದ್ದಾರೆ’ ಎಂದೂ ಹೇಳಿದರು.

‘ಮಂಗಳೂರು ವಿಶ್ವವಿದ್ಯಾಲಯ ಕಾರಂತರ ಕುರಿತು ಪುಸ್ತಕ ಹೊರ­ತಂದಿತ್ತು. ವಿವಿ ಕಳಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನೋಡಿ ಕಾರಂತರು ಕೆಂಡಾಮಂಡಲ­ವಾದರು. ಆಮಂತ್ರಣ ಪತ್ರಿಕೆಯಲ್ಲಿ ಮಾಲಿನಿ ಮಲ್ಯ ಅವರ ಹೆಸರು ಇಲ್ಲದಿರುವುದೇ ಅವರ ಕೋಪಕ್ಕೆ ಕಾರಣ­ವಾಗಿತ್ತಲ್ಲದೇ, ಇವುಗಳನ್ನು ಹಂಚಲು ಬಿಡುವುದಿಲ್ಲ ಎಂಬುದಾಗಿ ಕಾರಂತರು ಗುಡುಗಿದ್ದರು’ ಎಂದು ಪಾಟೀಲ ಪುಟ್ಟಪ್ಪ ನೆನಪಿಸಿಕೊಂಡರು.

‘ಮಾಲಿನಿ ಅವರ ಬಗ್ಗೆ ಕಾರಂತರಿಗೆ ಅಷ್ಟೊಂದು ಮೋಹ ತುಂಬಿ­ಕೊಂಡಿತ್ತು. ತಮ್ಮ ಪುಸ್ತಕಗಳ ಹಕ್ಕು­ಗಳನ್ನು ತಮ್ಮ ಮಕ್ಕಳಿಗೆ ನೀಡದೇ ಮಾಲಿನಿ ಅವರಿಗೇ ನೀಡಿದ್ದರು. ಯಾರಾ­ದರೂ ಕಾರಂತರ ಲೇಖನಗಳ ಅವತರ­ಣಿಕೆ ಪ್ರಕಟಿಸಬೇಕು ಎಂದರೆ ಮಾಲಿನಿ ಮಲ್ಯ  ಅವರ ಅನುಮತಿ ಬೇಕು’ ಎಂದೂ ವ್ಯಂಗ್ಯ­ಭರಿತ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT