ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಯಶಸ್ಸಿನ ಆರಂಭ...

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಈ ಋತುವಿನಲ್ಲಿ ರಣಜಿ, ಇರಾನಿ ಹಾಗೂ ವಿಜಯ ಹಜಾರೆ ಟೂರ್ನಿಯಲ್ಲಿ ರಾಜ್ಯ ಕ್ರಿಕೆಟ್‌ ತಂಡ ಪ್ರಶಸ್ತಿ ಗೆದ್ದಿದೆ. ಇಷ್ಟಕ್ಕೆ ನಾವು ಸಂಭ್ರಮಿಸುವುದಿಲ್ಲ. ಏಕೆಂದರೆ, ನಮ್ಮ ತಂಡದ ಮುಂದೆ ಈಗ ನಿಜವಾದ ಸವಾಲು ಎದುರಾಗಿದೆ. ರಾಜ್ಯದ ರಣಜಿ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಸತತ ಗೆಲುವಿನ ಸಾಧನೆಯನ್ನು ಮುಂದುವರಿಸಬೇಕಿದೆ...’

-ಕರ್ನಾಟಕ ತಂಡದ ಬೌಲಿಂಗ್‌ ಕೋಚ್‌ ಮನ್ಸೂರ್ ಅಲಿಖಾನ್‌ ರಾಜ್ಯ ತಂಡದ ಮುಂದಿರುವ ಸವಾಲನ್ನು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟಿದ್ದು ಹೀಗೆ.

ಕರ್ನಾಟಕ ಈ ಸಲದ ದೇಶಿಯ ಋತುವಿನಲ್ಲಿ ಅಮೋಘ ಪ್ರದರ್ಶನ ತೋರಿದೆ. ಮೂರು ಪ್ರಶಸ್ತಿಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿರುವುದೇ ಇದಕ್ಕೆ ಸಾಕ್ಷಿ. ಜೊತೆಗೆ, ಗೆಲುವಿನ ಇತಿಹಾಸವನ್ನು ಮುಂದುವರಿಸ ಬೇಕಾದ ಸವಾಲಿದೆ. ಇದಕ್ಕೂ ಮುನ್ನ ರಾಜ್ಯ ತಂಡದ ಹಿಂದಿನ ಸಾಧನೆಗಳ ಬಗ್ಗೆ ನೋಡೋಣ.

1995-96ರಲ್ಲಿ ನಾಲ್ಕನೇ ಸಲ ರಣಜಿ ಟ್ರೋಫಿ ಗೆದ್ದಿದ್ದ ರಾಜ್ಯ ತಂಡ 1997-98 ಮತ್ತು 1998-99ರಲ್ಲಿ ಮತ್ತೆ ಎರಡು ಸಲ ಟ್ರೋಫಿ ಜಯಿಸಿತ್ತು. ಐದು ವರ್ಷಗಳ ಅವಧಿಯಲ್ಲಿ ಮೂರು ಸಲ ದೇಶಿಯ ಕ್ರಿಕೆಟ್‌ನ ಚಾಂಪಿಯನ್‌ ಆಗಿತ್ತು. ಅದೇ ರೀತಿ ಈಗ ರಣಜಿ ಟ್ರೋಫಿ ಗೆದ್ದಿರುವ ಕರ್ನಾಟಕ ಮುಂದಿನ ಮೂರ್ನಾಲ್ಕು ಋತುಗಳಲ್ಲಿಯೂ ಪ್ರಾಬಲ್ಯ ಮೆರೆಯಬೇಕು. ‘ಇದು ರಾಜ್ಯ ತಂಡದ ಯಶಸ್ಸಲ್ಲ. ಯಶಸ್ಸಿನ ಆರಂಭ’ ಎನ್ನುತ್ತಾರೆ ಮಾಜಿ ಆಟಗಾರ ಕೆ. ಜಸ್ವಂತ್‌.

ಹಿಂದಿನ ವರ್ಷ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡು ಈ ಋತುವಿನ ರಣಜಿ ಹೋರಾಟ ಆರಂಭಿಸಿದ್ದ ಕರ್ನಾಟಕ ತಂಡದ ಮುಂದೆ ಸಾಕಷ್ಟು ಸವಾಲುಗಳಿದ್ದವು. ಲೀಗ್ ಹಂತದಲ್ಲಿ ತೋರಿದ ಅಜೇಯ ಸಾಧನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹಲವು ದಾಖಲೆಗಳ ಜೊತೆಗೆ ರಣಜಿ ಟ್ರೋಫಿಯನ್ನೂ ಗೆದ್ದುಕೊಂಡಿತು. ಅನುಭವಿ ಆಟಗಾರರ ಮುಂದೆ ಗರ್ಜಿಸಿದ ‘ಯುವಪಡೆ’ ಇರಾನಿ ಕಪ್‌ನಲ್ಲೂ ಪ್ರಾಬಲ್ಯ ಮೆರೆಯಿತು.

ಸುಬ್ಬಯ್ಯ ಪಿಳ್ಳೈ ಟ್ರೋಫಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿ ವಿಜಯ ಹಜಾರೆ ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಅಲ್ಲಿಯೂ ವಿಜಯದ ಯಾತ್ರೆ ಮುಂದುವರಿಯಿತು. ರಣಜಿ ಮತ್ತು ಏಕದಿನ ಪಂದ್ಯಗಳಲ್ಲಿ ಪ್ರಾಬಲ್ಯ ಮೆರೆದ ಕರ್ನಾಟಕ ತಂಡ ದೇಶಿಯ ಋತುವಿನ ಕೊನೆಯ ಟೂರ್ನಿ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟ್ವೆಂಟಿ-20 ಪಂದ್ಯಗಳಲ್ಲಿ ಮುಗ್ಗರಿಸಿತು.

ಹೈದರಾಬಾದ್‌ನಲ್ಲಿ ನಡೆದ ಟೂರ್ನಿಯಲ್ಲಿ ರಾಜ್ಯ ತಂಡಕ್ಕೆ ಎದುರಾಗಿದ್ದು ಸಾಲು ಸಾಲು ಸೋಲು. ಅಷ್ಟೇನು ಬಲಿಷ್ಠವಲ್ಲದ ದಕ್ಷಿಣ ವಲಯದ ತಂಡಗಳಾದ ಕೇರಳ ಮತ್ತು ಗೋವಾದ ಎದುರು ರಣಜಿ ಚಾಂಪಿಯನ್ನರು ನಿರಾಸೆ ಅನುಭವಿಸಿದರು. ಪ್ರತಿ ಪಂದ್ಯದಲ್ಲೂ ಕಾಡಿದ್ದು ಬ್ಯಾಟಿಂಗ್‌ ವೈಫಲ್ಯ. ರಾಜ್ಯದ ಆಟಗಾರರು ಟ್ವೆಂಟಿ-20 ಮಾದರಿಗೆ ಸರಿಯಾಗಿ ಹೊಂದಿಕೊಂಡಿಲ್ಲ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಆದರೆ, ಇದನ್ನು ಮನ್ಸೂರ್ ಅಲಿ ಖಾನ್‌ ಒಪ್ಪುವುದಿಲ್ಲ.

‘ಟ್ವೆಂಟಿ-20 ಮಾದರಿಯ ಪಂದ್ಯದಲ್ಲಿ ಏನು ಬೇಕಾದರೂ ಆಗಬಹುದು. ಉದಾಹರಣೆಗೆ ಬಾಂಗ್ಲಾದೇಶದಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ ಪಂದ್ಯವನ್ನೇ ಗಮನಿಸಿ. ಭಾರತ ಫೈನಲ್‌ನಲ್ಲಿ ಗೆಲುವು ಪಡೆಯುವ ನೆಚ್ಚಿನ ತಂಡ ಆಗಿತ್ತು. ಆದರೆ, ಕೊನೆಯ ಓವರ್‌ಗಳಲ್ಲಿ (ಡೆತ್‌ ಓವರ್‌) ಆಗಿದ್ದೇನು ಎಂಬುದು ಎಲ್ಲರಿಗೂ ಗೊತ್ತಿದೆ. ಬಲಿಷ್ಠ ತಂಡವೆನಿಸಿದ್ದ ಆಸ್ಟ್ರೇಲಿಯಾ ಲೀಗ್‌ ಹಂತದಲ್ಲಿಯೇ ಸೋತು ಹೊರಬಿದ್ದಿತು. ಆದ್ದರಿಂದ ಚುಟುಕು ಪಂದ್ಯಗಳಲ್ಲಿ ನಿರ್ದಿಷ್ಟ ಫಲಿತಾಂಶವನ್ನು ಅಂದಾಜಿಸಲೂ ಆಗುವುದಿಲ್ಲ’ ಎಂದು ಅವರು ಹೇಳುತ್ತಾರೆ. ಜೊತೆಗೆ ಅಷ್ಟೇನು ಬಲಿಷ್ಠವಲ್ಲದ ಗೋವಾದ ಶ್ರೇಷ್ಠ ಪ್ರದರ್ಶನಕ್ಕೆ ಕಾರಣವನ್ನೂ ಅವರು ಬಿಚ್ಚಿಡುತ್ತಾರೆ.

‘ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಆಡುವ ಮುನ್ನ ಗೋವಾ ತಂಡ ಗೋವಾ ಪ್ರೀಮಿಯರ್ ಲೀಗ್‌ ಟ್ವೆಂಟಿ-20 ಟೂರ್ನಿ ಆಡಿತ್ತು. ಒಂದು ತಿಂಗಳು ಕಾಲ ಆ ಟೂರ್ನಿ ನಡೆದಿತ್ತು. ಆದ್ದರಿಂದ ಗೋವಾಕ್ಕೆ ದಕ್ಷಿಣ ವಲಯದ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಮನ್ಸೂರ್ಅಲಿ.

‘ಸೋಲು ಗೆಲುವಿನ ಲೆಕ್ಕಾಚಾರ ಏನೇ ಇರಲಿ. ಈ ಸಲದ ದೇಶಿಯ ಋತು ರಾಜ್ಯ ತಂಡದ ಕ್ರಿಕೆಟ್‌ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡ ಬೇಕಾದ ವರ್ಷ. ಇಷ್ಟಕ್ಕೆ ನಾವು ಖುಷಿ ಪಡುವುದಿಲ್ಲ. ನಿರೀಕ್ಷೆಗೂ ಮೀರಿ ಕರ್ನಾಟಕ ಪ್ರದರ್ಶನ ತೋರಿದೆ. ಆದ್ದರಿಂದ ಎಲ್ಲಾ ತಂಡಗಳ ಕಣ್ಣು ನಮ್ಮ ಮೇಲಿದೆ. ಆದ್ದರಿಂದ ಮುಂದಿನ ಋತುಗಳಲ್ಲಿಯೂ ಈಗಿರುವ ಪ್ರಾಬಲ್ಯವನ್ನು ಮುಂದುವರಿಸಿಕೊಂಡು ಹೋಗಬೇಕಾದ ಸವಾಲಿದೆ’ ಎನ್ನುತ್ತಾರೆ ರಾಜ್ಯ ತಂಡದ ಆಟಗಾರ ಕರುಣ್‌ ನಾಯರ್. ಇದಕ್ಕೆ ಧ್ವನಿಗೂಡಿಸಿದ್ದು ಮನೀಷ್‌ ಪಾಂಡೆ.

ಕರ್ನಾಟಕದ ಆಟಗಾರರು ದೇಶಿಯ ಟೂರ್ನಿಯಲ್ಲಿ ತೋರಿದ ಪ್ರದರ್ಶನ ಐಪಿಎಲ್‌ ಫ್ರಾಂಚೈಸ್‌ಗಳ ಕಣ್ಣು ಕುಕ್ಕುವಂತೆ ಮಾಡಿದೆ. ಚೊಚ್ಚಲ ರಣಜಿ ಆಡಿದ ಕರುಣ್‌ ನಾಯರ್‌ಗೆ ರಾಯಲ್ಸ್‌ ತಂಡ ₨ 75 ಲಕ್ಷ ನೀಡಿ ಖರೀದಿಸಿರುವುದೇ ಇದಕ್ಕೆ ಸಾಕ್ಷಿ. ಜೊತೆಗೆ ಮನೀಷ್‌ ಪಾಂಡೆ, ರಾಬಿನ್‌ ಉತ್ತಪ್ಪ, ಕೆ.ಎಲ್‌. ರಾಹುಲ್‌, ವಿನಯ್‌ ಕುಮಾರ್‌, ಸಿ.ಎಂ. ಗೌತಮ್‌ ಮತ್ತು ಎಚ್‌.ಎಸ್‌. ಶರತ್‌ ಅವರಿಗೆ ಒಳ್ಳೆಯ ‘ಬೆಲೆ’ಯೇ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT