ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸೂರಿ ‘ಸಂಪಿಗೆ’

ಹೆಚ್ಚು ಘಾಟು, ಕೊಂಚ ಸ್ವೀಟು
Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

‘ಕಡ್ಡಿಪುಡಿ’ ಚಿತ್ರ ದೊಡ್ಡ ಯಶಸ್ಸು ಕಾಣದಿದ್ದಾಗ ನಿರ್ದೇಶಕ ಸೂರಿ ಒಂದಷ್ಟು ದಿನ ಸೈಲೆಂಟ್ ಆಗಿದ್ದರು. ಯಾವ ರೀತಿಯ ಚಿತ್ರ ಕೊಡಬೇಕು ಎಂಬ ಚಿಂತೆ ಅವರನ್ನು ಆವರಿಸಿತ್ತು. ಈಗ ಆ ಚಿಂತೆಯಿಂದ ಹೊರಬಂದಿರುವ ಅವರು ಮತ್ತೊಂದು ಸಿನಿಮಾ ರೂಪಿಸಿದ್ದಾರೆ. ಅವರ ಹೊಸ ಚಿತ್ರದ ಹೆಸರು ‘ಕೆಂಡಸಂಪಿಗೆ’. ‘ಪಾರ್ಟ್‌ 2 ಗಿಣಿಮರಿ ಕೇಸ್’ ಎನ್ನುವುದು ಶೀರ್ಷಿಕೆಯ ಅಡಿ ಟಿಪ್ಪಣಿ.

ಚಿತ್ರದ ಕಥೆ ಕಥೆಗಾರ ಎಸ್. ಸುರೇಂದ್ರನಾಥ್ ಅವರದು. ಸಾಹಿತ್ಯ ವಲಯದಲ್ಲಿ ಅವರೂ ಸೂರಿ ಎಂದೇ ಗುರುತಿಸಿಕೊಂಡವರು. ಹದಿನೆಂಟು ವರ್ಷಗಳ ಹಿಂದೆ ಸುರೇಂದ್ರನಾಥ್ ಅವರು ಬರೆದ ಕಥೆಯನ್ನು ಸೂರಿ ಇಷ್ಟಪಟ್ಟು ಹುಡುಕಿಸಿದ್ದಾರೆ. ಕಥೆಯನ್ನು ಇಂದಿಗೆ ಒಗ್ಗುವಂತೆ ಚೂರುಪಾರು ಬದಲಾವಣೆಯೊಂದಿಗೆ ಚಿತ್ರಕಥೆ ಮಾಡಿಕೊಂಡಿದ್ದಾರೆ ಸೂರಿ ಮತ್ತು ನಟರಂಗ ರಾಜೇಶ್.

ಸೂರಿ ಇದೇ ಮೊದಲ ಬಾರಿ ಬೇರೆಯವರ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು. ಏಳು ದಿನಗಳಲ್ಲಿ ನಡೆಯುವ ಕಥೆಯನ್ನು ಹದಿನಾಲ್ಕು ಜಿಲ್ಲೆಗಳಲ್ಲಿ ಚಿತ್ರೀಕರಿಸಲಾಗಿದೆಯಂತೆ. ಬೆಳಗಾವಿಯಲ್ಲಿ ಚಿತ್ರ ಮುಕ್ತಾಯವಾಗುತ್ತದೆ. ಚಿತ್ರದ ಎಲ್ಲ ದೃಶ್ಯಗಳೂ ನೈಜವಾಗಿರಲಿದ್ದು, ಎಲ್ಲಿಯೂ ಸೆಟ್‌ಗಳನ್ನು ಬಳಸಿಲ್ಲವಂತೆ. ಚಿತ್ರೀಕರಣ ಪೂರ್ಣವಾಗಿದ್ದು ಸದ್ಯ ರೀ ರೆಕಾರ್ಡಿಂಗ್ ನಡೆಯುತ್ತಿದೆ.

ಸೂರಿ ಅವರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವಿಕ್ಕಿ ಚಿತ್ರದ ನಾಯಕ. ಮಂಗಳೂರಿನಲ್ಲಿ ರೇಡಿಯೊ ನಿರೂಪಕಿ ಆಗಿದ್ದ ಮಾನ್ವಿತ ಹರೀಶ್‌ ನಾಯಕಿ. ಸಿನಿಮಾ ನಿರ್ಮಾಣದ ಕುರಿತು ವಿಶ್ವವಿದ್ಯಾಲಯದಲ್ಲಿ ಕಲಿತು ಪದವಿ ಗಳಿಸಿದಷ್ಟು ಅನುಭವ ಈ ಒಂದೇ ಚಿತ್ರದಿಂದ ಅವರಿಗೆ ಸಿಕ್ಕಿದೆಯಂತೆ. ಇವರ ಹೊರತಾಗಿ ಇನ್ನೂ ಅನೇಕ ಹೊಸಮುಖಗಳನ್ನು ಪರಿಚಯಿಸಲಾಗುತ್ತಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಶಶಿಧರ ಅಡಪ ಅವರ ಕಲಾ ನಿರ್ದೇಶನ ‘ಕೆಂಡಸಂಪಿಗೆ’ಗೆ ಇದೆ. ವಿ. ಹರಿಕೃಷ್ಣ ಸಂಗೀತಕ್ಕೆ ಜಯಂತ ಕಾಯ್ಕಿಣಿ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯವಿದೆ. ಚಿತ್ರಕ್ಕೆ ಪರಿಮಳ ಫಿಲ್ಮ್ ಫ್ಯಾಕ್ಟರಿ ಬಂಡವಾಳ ಹೂಡಿದೆ.

ಜಯಂತ ಕಾಯ್ಕಿಣಿ, ಯೋಗರಾಜ್ ಭಟ್, ಎಸ್. ಸುರೇಂದ್ರನಾಥ್, ನಟರಂಗ ರಾಜೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮೂರು ಟ್ರೇಲರ್‌ಗಳನ್ನೂ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT