ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಹೃದಯದ ವಿಷಯ

Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ  ಪ್ರತಿಯೊಬ್ಬರೂ ಪ್ರತಿ ದಿನ ಕನಿಷ್ಠ 30 ನಿಮಿಷ ದಷ್ಟಾದರೂ ವ್ಯಾಯಾಮ ಮಾಡಲೇಬೆಕೆಂದಿದೆ. ಆದರೆ ವಿಶ್ವದಲ್ಲಿ ಶೇ. 60 ಮಂದಿ ಇದನ್ನು ಅನುಸರಿಸುತ್ತಿಲ್ಲ ಎಂಬುದು ವಿಷಾದದ ಸಂಗತಿ.

ವಿಶ್ವದಲ್ಲಿ ಅತಿ ಹೆಚ್ಚು ಜನರು ಹೃದ್ರೋಗದಿಂದ ಬಲಿಯಾಗುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ 30-50 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಇದಕ್ಕೆ ಕಾರಣ ಔದ್ಯೊಗೀಕರಣ, ಐಷಾರಾಮಿ ಜೀವನಶೈಲಿ, ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನದಂತಹ ದುರಭ್ಯಾಸಗಳು.
                                                           
ದಾಖಲೆಗಳ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಬೊಜ್ಜು ಇರುವಂತಹವರಿಗೆ 65 ವಯಸ್ಸಿನೊಳಗೆ ಮಧುಮೇಹ ಮತ್ತು ಹೃದಯಾಘಾತವಾಗುವ ಸಾಧ್ಯತೆಗಳು ಅತಿ ಹೆಚ್ಚು. ಇವೆಲ್ಲವುಗಳನ್ನು ಗಮನದಲ್ಲಿಟ್ಟು ಕೊಂಡು ಚಿಕ್ಕ ವಯಸ್ಸಿನಲ್ಲಿಯೇ ನಿತ್ಯ ವ್ಯಾಯಾಮ, ಹಾಗೂ ಆರೋಗ್ಯಕರ ಹವ್ಯಾಸ ಗಳಿಗೆ ಆದ್ಯತೆ ನೀಡುವುದರಿಂದ  ಹೆಚ್ಚುವರಿ ಕೊಬ್ಬು ಶೇಖರಿಸುವುದನ್ನು ಸಾಧ್ಯವಾದಷ್ಟರ ಮಟ್ಟಿಗೆ ತಡೆಗಟ್ಟಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ  ಪ್ರತಿಯೊಬ್ಬರೂ ಪ್ರತಿ ದಿನ ಕನಿಷ್ಠ 30 ನಿಮಿಷ ದಷ್ಟಾದರೂ ವ್ಯಾಯಾಮ ಮಾಡಲೇಬೆಕೆಂದಿದೆ. ಆದರೆ ವಿಶ್ವದಲ್ಲಿ ಶೇ. 60 ಮಂದಿ ಇದನ್ನು ಅನುಸರಿಸುತ್ತಿಲ್ಲ ಎಂಬುದು ವಿಷಾದದ ಸಂಗತಿ.

ಬಹಳಷ್ಟು ಮಂದಿ ಹೃದಯಾಘಾತ ಕೇವಲ ಪುರುಷರಿಗೆ ಮಾತ್ರ ಆಗುವಂಥದ್ದು ಎಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಇಡೀ ಜಗತ್ತಿನ ಹೃದ್ರೋಗಿಗಳ ಸಂಖ್ಯೆಯಲ್ಲಿ ಶೇ.15ರಷ್ಟು ಭಾರತೀಯ ಮಹಿಳೆಯರಿದ್ದಾರೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ದುಡಿಯುವ ಮಹಿಳೆಯರು ಹೆಚ್ಚಿನ ಉದ್ವಿಗ್ನತೆ, ಅಧಿಕ ರಕ್ತದೊತ್ತಡ, ಮಧುಮೇಹ, ಹಾಗು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವುದು. ಸದ್ದಿಲ್ಲದೇ ಹೃದ್ರೋಗವು ಮಹಿಳೆಯರನ್ನು ಬಲಿ ತಗೆದುಕೊಳ್ಳುತ್ತಿದೆ. ಇವರಲ್ಲಿ ಪುರುಷರಂತೆ ತೀವ್ರ ನೋವು ಇರುವುದಿಲ್ಲ. ಆದರೆ ಅತಿಯಾದ ಬಳಲಿಕೆ ಇರುತ್ತದೆ. ಆದ್ದರಿಂದ ಈ ಕೆಳಗಿನ ಲಕ್ಷಣಗಳು ಅರಿವಿಗೆ ಬಂದ ತಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ.

ಯಾವುದೇ ರೀತಿಯ ಎದೆ ನೋವು ಅಂದರೆ ಎದೆಯಲ್ಲಿ ಉರಿದ ಹಾಗೆ, ಎದೆಯ ಮೇಲೆ ಭಾರವಿಟ್ಟಂತೆ ಅನಿಸುತ್ತದೆ. ಇದು ಸಾಮಾನ್ಯವಾಗಿ ಮಾಂಸ ಖಂಡಗಳಿಗೆ ಸಂಬಂಧಿಸಿದ ಅಥವಾ ಜೀರ್ಣಕ್ರಿಯೆಗೆ (ಆಸಿಡಿಟಿ) ಗೆ ಸಂಬಂಧಿಸಿದ ನೋವಿನಂತಿರುತ್ತದೆ. ಹೃದಯದ ನೋವು ಒಂದು ಬಾರಿ ಬಂದರೆ  ಬಿಡದಂತೆ ಬಾಧಿಸುತ್ತದೆ ಆದರೆ ಜೀರ್ಣಾಂಗದ ನೋವು ಬರುತ್ತ- ಹೋಗುತ್ತ ಇರುತ್ತದೆ. ಇನ್ನಿತರ ಲಕ್ಷಣಗಳೆಂದರೆ- ಉಸಿರಾಟ  ಕಷ್ಟಕರವಾಗುತ್ತದೆ, ಬೆನ್ನು, ಕತ್ತು, ಭುಜ, ಹಲ್ಲುಗಳಲ್ಲೂ ನೋವು ಕಾಣಿಸಬಹುದು, ಅತಿಯಾದ ಬೆವರು ವಾಂತಿಯೂ ಆಗಬಹುದು.

ಹೃದಯದ ಮಾಂಸಖಂಡಗಳಿಗೆ ರಕ್ತ ಸಂಚಾರ ಇದ್ದಕ್ಕಿದ್ದಂತೆ ನಿಂತುಹೋದರೆ ಹೃದಯಾಘಾತವಾಗುತ್ತದೆ. ಇದಕ್ಕೆ ಕಾರಣ ಗಳನ್ನು ನೋಡುವುದಾದರೆ- ರಕ್ತನಾಳಗಳಲ್ಲಿ ಕೊಬ್ಬಿನಾಂಶ ಶೇಖರಣೆಗೊಂಡಿರಬಹುದು ಅಥವಾ ರಕ್ತ ಗಡ್ಡೆ ಕಟ್ಟಿಕೊಂಡಿರಲೂಬಹುದು, ಹೃದಯದ ಮಾಂಸಪೇಶಿಗಳ ಕಾಯಿಲೆ, ದೀರ್ಘಕಾಲಿಕ ಅನಿಯಂತ್ರಿತ ರಕ್ತದೊತ್ತಡ, ಹೃದಯ ಕವಾಟ ಕಿರಿದಾಗುವಿಕೆ ಮುಂತಾದವು. ಇನ್ನು ಚಿಕಿತ್ಸೆಯನ್ನು ನೋಡುವುದಾದರೆ- ಅಧಿಕ ರಕ್ತದೊತ್ತಡ-ಮಧುಮೇಹಗಳ ನಿಯಂತ್ರಣ, ರಕ್ತನಾಳಗಳು ಕಿರಿದಾಗಿದ್ದರೆ ಆಂಜಿಯೋಪ್ಲಾಸ್ಟಿ, ಅಡೆತಡೆಗಳಿದ್ದರೆ ಶಸ್ತ್ರಚಿಕಿತ್ಸೆ ಅತ್ಯಗತ್ಯ.

ಸಮಸ್ಯೆ ಕಡಿಮೆ ಆಗಬೇಕೆಂದರೆ
* ರಕ್ತದೊತ್ತಡ - 120/80  ರ ಆಸುಪಾಸಿರಲಿ.
* ಕೆಟ್ಟ ಕೊಲೆಸ್ಟ್ರಾಲ್ (ಎಲ್.ಡಿ.ಎಲ್) -100 ಮಿ.ಗ್ರಾಂ./ಡಿ.ಎಲ್ ಗಿಂತ ಕಡಿಮೆ ಇರಬೇಕು.
* ಉತ್ತಮ ಕೊಲೆಸ್ಟ್ರಾಲ್ (ಎಚ್.ಡಿ.ಎಲ್) -ಪುರುಷರಲ್ಲಿ 45 ಮಿ.ಗ್ರಾಂ./ಡಿ.ಎಲ್ ಗಿಂತ ಹೆಚ್ಚಿರಬೇಕು ಹಾಗು ಮಹಿಳೆಯರಲ್ಲಿ 55 ಮಿ.ಗ್ರಾಂ./ಡಿ.ಎಲ್ ಗಿಂತ ಹೆಚ್ಚಿರಬೇಕು.

ಹೃದಯದ ಆರೋಗ್ಯಕ್ಕೆ ಸಲಹೆಗಳು
ಹೃದ್ರೋಗಕ್ಕೆ ಪ್ರಮುಖ ಕಾರಣವಾದ ಬೊಜ್ಜು, ಅಧಿಕ ರಕ್ತದೊತ್ತಡ ಹಾಗು ಮಧುಮೇಹ ಗಳನ್ನು ಸೂಕ್ತ ಸಮತೋಲಿತ ಆಹಾರ, ವ್ಯಾಯಾಮಗಳಿಂದ ಹಾಗು ಮಾನಸಿಕ ಒತ್ತಡಗಳನ್ನು ಯೋಗ-ಪ್ರಾಣಾಯಾಮಗಳಿಂದ ನಿಯಂತ್ರಿಸಿ ಹತೋಟಿಗೆ ತರಲು ಸಾಧ್ಯ.

ಪಥ್ಯ ಆಹಾರ: ಹಣ್ಣು, ತರಕಾರಿ, ಬೇಳೆಕಾಳು, ಮೀನು, ಕೆನೆರಹಿತ ಹಾಲು-ಮಜ್ಜಿಗೆ ಉತ್ತಮ. ಸೋಯಾಬೀನ್ ಶರೀರದಲ್ಲಿನ ಕೊಲೆಸ್ಟ್ರಾಲ್ ಮತ್ತು ಅನಿಯಮಿತ ಎದೆಬಡಿತವನ್ನು ನಿಯಂತ್ರಿಸುತ್ತದೆ. ನಾರಿನಾಂಶ ಹೆಚ್ಚಾಗಿರುವ-ಬಾರ್ಲಿ, ಬೀನ್ಸ್, ಬಾಳೆಹಣ್ಣು, ಸೇಬು, ಕಿತ್ತಳೆ, ಗಜ್ಜರಿ, ದಾಳಿಂಬೆ, ಹಸಿರು ತರಕಾರಿ, ಬೆಳ್ಳುಳ್ಳಿ, ಉತ್ತಮ. ಬೆಣ್ಣೆ-ತುಪ್ಪದ ಬದಲು ಸೋಯಾಬಿನ್, ಬಾದಾಮಿ ಎಣ್ಣೆ ಉತ್ತಮ.

ಅಪಥ್ಯ ಆಹಾರ: ಬೆಣ್ಣೆ, ಪನೀರ್, ಕೇಕ್, ಕ್ರೀಂ ಬಿಸ್ಕ್‌ತ್, ಚೀಸ್, ಮುಂತಾದವು. ಉಪ್ಪು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸಿ ಇದರಿಂದ ದೇಹದಲ್ಲಿ ಕೊಬ್ಬಿನಾಂಶ ಕಡಿಮೆಯಾಗುತ್ತದೆ.

ವ್ಯಾಯಾಮ: ಕಾಲುಗಳಿರುವುದು ನಡಿಗೆಗಾಗಿ ಆದ್ದರಿಂದ ಸಾಧ್ಯವಾದಷ್ಟು ನಡೆಯಲು ಪ್ರಯತ್ನಿಸಿ ಅಥವಾ ತೋಟದ ಕೆಲಸ, ಮಕ್ಕಳೊಂದಿಗೆ ಆಟವಾಡಿ, ಬೆವರು ಸುರಿಸುವಷ್ಟು ವ್ಯಾಯಾಮ ಮಾಡುವುದರಿಂದ ಬೊಜ್ಜು ಕಡಿಮೆಯಾಗಿ, ಕೊಲೆಸ್ಟ್ರಾಲ್ ಕಡಿಮೆ ಯಾಗುತ್ತದೆ. ಇನ್ನು ಯೋಗ- ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ನಿಯಂತ್ರಿಸಬಹುದು ಇದರೊಂದಿಗೆ ವಿಶ್ರಾಂತಿ, ಪುಸ್ತಕ ಓದುವುದು, ಸಂಗೀತದ ಮೊರೆ ಹೋಗುವುದು ಒಳಿತು. ಹೃದಯಾಘಾತಕ್ಕೆ ಮುಖ್ಯ ಕಾರಣಗಳಲ್ಲೊಂದಾದ ದುಶ್ಚಟಗಳಿಂದ ಅಂದರೆ ಧೂಮಪಾನ, ಮದ್ಯಪಾನ, ತಂಬಾಕು ಸೇವನೆಯನ್ನು ತ್ಯಜಿಸಬೇಕು.

ಇದಲ್ಲದೇ ದೇಹದಲ್ಲಿ ವರ್ಷಾನುಗಟ್ಟಲೇ ವಿಟಮಿನ್-ಡಿ ಅಂಶ ಕಡಿಮೆಯಾಗಿ ಹೃದಯಕ್ಕೆ ತೊಂದರೆಯಾಗಬಹುದು. ಚಳಿಗಾಲದಲ್ಲಿ ದೇಹದ ಉಷ್ಣಾಂಶ ಉಳಿಸಿಕೊಳ್ಳಲು ರಕ್ತನಾಳಗಳು ಕುಗ್ಗುತ್ತವೆ. ಈ ಸಂದರ್ಭದಲ್ಲಿ ಹೃದಯದಿಂದ ರಕ್ತಸರಬರಾಜು ಕಡಿಮೆಯಾಗಿ ಹೃದಯಾಘಾತದ ಸಂಭವ ಅತಿ ಹೆಚ್ಚು. ವಿಟಮಿನ್ -ಡಿ ಉತ್ಪತ್ತಿಯಾಗುವುದು ಸೂರ್ಯ ಕಿರಣಗಳಿಂದಲೇ ಹಾಗಾಗಿ ಚಳಿಗಾಲ ಆರಂಭವಾದಂತೆ ಹೃದಯ ಸಂಬಂಧಿ  ಸಮಸ್ಯೆಗಳು   ಶೇ.20 ರಷ್ಟು ಹೆಚ್ಚುತ್ತವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಪ್ರತಿದಿನ ಕನಿಷ್ಟ 20 ನಿಮಿಷ ಬಿಸಿಲಿಗೆ ಮೈಯೊಡ್ಡಿದರೆ ವಿಟಮಿನ್-ಡಿ ಅಂಶದ ಕೊರತೆ ನಿವಾರಿಸಬಹುದು.

ಹೃದಯ ಕಸಿ: ಹೃದಯ ವೈಫಲ್ಯದಿಂದ ಬಳಲುತ್ತಿರುವವರಿಗೆ  ಹೃದಯ ಕಸಿ  ಅತ್ಯಂತ ಯಶಸ್ವಿ ಚಿಕಿತ್ಸೆ. ಆದರೆ ಈ ಸೌಲಭ್ಯ ಕೆಲವೇ ಮಂದಿಗೆ ಲಭ್ಯವಾಗುತ್ತಿದೆ. ಇದಕ್ಕೆ ಕಾರಣ ದಾನಿಗಳ ಕೊರತೆ, ಆರ್ಥಿಕ ಸಮಸ್ಯೆ ಮುಂತಾದವು. ದುರಾದೃಷ್ಟದಿಂದ ಮೆದುಳು ನಿಷ್ಕ್ರಿಯಗೊಂಡವರು, ಅಫಘಾತ ಕ್ಕೊಳಗಾದವರು, ವೆಂಟಿಲೇಟರ್ ಸಹಾಯ ದಿಂದ ಬದುಕುತ್ತಿರುವವರು ಬದಲಿ ಹೃದಯದ ಅಗತ್ಯ ಇದ್ದವರಿಗೆ ದಾನ ಮಾಡಬಹುದು.

ಕೊನೆಯದಾಗಿ ಹೃದಯದ ನೋವಿಗೆ ಗುರಿಯಾದ ಪ್ರತಿ ಹತ್ತು ಜನರಲ್ಲಿ ಮೂವರು ಆಸ್ಪತ್ರೆಗೆ ಹೋಗುವ ಮುನ್ನವೇ ಮರಣ ಹೊಂದುತ್ತಾರೆಂಬುದು ತಿಳಿದಿರಲಿ. ಕಾರಣ ಅಂತಹ ಸೂಚನೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದರಿಂದ ಸಮಸ್ಯೆಗೆ ಕಡಿವಾಣ ಹಾಕಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT