ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೋ... ‘ಬಾಹುಬಲಿ’ ಗಣೇಶ

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

‘ಗಣಪತಿ ಬಪ್ಪ ಮೋರಿಯಾ’ ಎಂಬ ಧ್ವನಿ ಇನ್ನು ಎಲ್ಲೆಲ್ಲೂ ಅನುರಣಿಸುತ್ತದೆ. ಕೇರಿ ಕೇರಿಗಳಲ್ಲಿ, ಬೀದಿ ಬೀದಿಗಳಲ್ಲಿ ಗಣೇಶನನ್ನು ಆರಾಧಿಸುವ ಚತುರ್ಥಿಗೆ ದಿನಗಣನೆ ಶುರುವಾಗಿದೆ. ಪ್ರತಿ ಸಲದಂತೆ ಈ ಬಾರಿಯೂ ರಾಜಧಾನಿಯ ಜನ ಗಣೇಶನ ಪೂಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಗಣೇಶ ಹಬ್ಬದ ಸೀಸನ್ ಬಂತೆಂದರೆ ಸಾಕು, ಗಣೇಶನ ವಿಗ್ರಹ ತಯಾರಿಸುವವರಿಗೆ ಎಲ್ಲಿಲ್ಲದ ಬೇಡಿಕೆ. ಕೆಲವು ಸ್ಥಳಗಳಲ್ಲಂತೂ ಬಣ್ಣ ಬಣ್ಣದ, ಚಿಕ್ಕ ಗಾತ್ರದಿಂದ ಹಿಡಿದು ಬೃಹದಾಕಾರದವರೆಗಿನ ತರಹೇವಾರಿ ಗಣೇಶನ ಮೂರ್ತಿಗಳು ಕಣ್ಣಿಗೆ ಬೀಳುತ್ತವೆ.

ಹಳ್ಳಿಗಳಿಗಿಂತ ನಗರಗಳಲ್ಲಿ ಗಣೇಶನ ಮೂರ್ತಿಗಳನ್ನು ಕೂರಿಸುವುದು ಒಂದು ಪ್ಯಾಷನ್‌ನಂತೆ ಆಗಿದೆ. ಪ್ರತಿ ಕೇರಿಗೊಂದರಂತೆ ಇರುವ ಸಂಘ ಸಂಸ್ಥೆಗಳಲ್ಲದೇ, ಮನೆ ಮನೆಗಳಲ್ಲೂ ಗಣೇಶನನ್ನೂ ಕೂರಿಸಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಾರೆ.

ಗಣೇಶನ ಮೂರ್ತಿ ತಯಾರಿಕೆಯಲ್ಲೂ ಪ್ರತಿವರ್ಷವೂ ಭಿನ್ನತೆ ಎದ್ದು ಕಾಣುತ್ತಿದೆ.   ವಿಭಿನ್ನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಮೂರ್ತಿಯ ಮುಖ  ಗಣೇಶನದ್ದಾದರೂ ಅದಕ್ಕೆ ಸಮಕಾಲೀನ ಸ್ಪರ್ಶ ನೀಡುವ ಪರಿಪಾಠ ವರ್ಷಗಳಿಂದ ಇದೆ.

ವರ್ಷ ವರ್ಷವೂ ವಿವಿಧ ವಿನ್ಯಾಸದ ಗಣೇಶ ವಿಗ್ರಹಗಳ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುತ್ತಿರುವ ಆರ್.ಆರ್. ನಗರದ ವಿನಾಯಕ ಎಂಟರ್‌ಪ್ರೈಸರ್ಸ್‌ನವರು ಈ ಬಾರಿ ರಚಿಸಿರುವುದು ಸೂಪರ್‌ ಹಿಟ್‌ ತೆಲುಗು ಚಿತ್ರ ‘ಬಾಹುಬಲಿ’ಯಲ್ಲಿ ನಟ ಪ್ರಭಾಸ್‌ ಲಿಂಗ ಎತ್ತಿಹಿಡಿದಿರುವ ದೃಶ್ಯವನ್ನು ಹೋಲುವ  ಗಣೇಶನ ಮೂರ್ತಿಯನ್ನು. ಅದಕ್ಕೆ ಬಾಹುಬಲಿ ಗಣೇಶ ಎಂದು ಅವರು ಹೆಸರಿಟ್ಟಿದ್ದಾರೆ.

ಸುಮಾರು 20 ‘ಬಾಹುಬಲಿ ಗಣೇಶ’ನ ಮೂರ್ತಿಗಳನ್ನು  ಇವರು ತಯಾರಿಸಿದ್ದಾರೆ. ವಿನಾಯಕ ಎಂಟರ್‌ಪ್ರೈಸಸ್‌ನ ಮಾಲೀಕರಾದ ಎಂ. ತೀರ್ಥಗಿರಿ ಅವರ ತಂದೆಯ ಕಾಲದಿಂದಲೂ ಗಣೇಶ ಮೂರ್ತಿ ರಚನೆಯೇ ಅವರ ಬದುಕಿಗೆ ಜೀವಾಳವಾಗಿತ್ತು. ಕಳೆದ 80 ವರ್ಷಗಳಿಂದ ಇವರ ಕುಟುಂಬದವರು ಮೂರ್ತಿ ತಯಾರಿಕೆಯನ್ನೇ ಕಸುಬಾಗಿಸಿಕೊಂಡಿದ್ದಾರೆ.

‘ಒಂದು ಬಾಹುಬಲಿ ಗಣೇಶ ಮೂರ್ತಿ ತಯಾರಿಸಲು 25 ದಿನಗಳು ಬೇಕಾದವು.  ನಂತರ ಪೇಂಟಿಂಗ್ ಮಾಡಿ, ಸಂಪೂರ್ಣ ಸಿದ್ಧ ರೂಪ ನೀಡಲು ಒಂದೂವರೆ ತಿಂಗಳುಗಳ ಕಾಲಾವಕಾಶ ತೆಗೆದುಕೊಂಡಿದ್ದೇವೆ. ಬಾಹುಬಲಿ ಗಣೇಶ ಈಗಷ್ಟೆ ಸಿದ್ಧಗೊಂಡಿದ್ದು, ಅದನ್ನು ಇನ್ನೂ ಮಾರುಕಟ್ಟೆಗೆ ತಂದಿಲ್ಲ. ದರವನ್ನು ಕೂಡ ನಿಗದಿ ಮಾಡಿಲ್ಲ’ ಎನ್ನುತ್ತಾರೆ ತೀರ್ಥಗಿರಿ.

ಈಗ ವಿನಾಯಕ ಎಂಟರ್‌ಪ್ರೈಸಸ್‌ನಲ್ಲಿ  200 ರೂಪಾಯಿಂದ ಹಿಡಿದು ಸುಮಾರು 15,000 ರೂಪಾಯಿವರೆಗಿನ ಗೌರಿ, ಗಣೇಶನ ವಿಗ್ರಹಗಳು ಲಭ್ಯ.  ಕೆಂಗೇರಿ ಬಳಿಯ ಕಾರ್ಖಾನೆಯಲ್ಲಿ ಗಣೇಶನ ವಿಗ್ರಹ ತಯಾರಿಸುವ ಇವರ ಬಳಿ ಕರ್ನಾಟಕ, ಮಹರಾಷ್ಟ್ರ ಸೇರಿದಂತೆ 10ಕ್ಕೂ ಅಧಿಕ ಮಂದಿ ಮೂರ್ತಿ ತಯಾರಕರಿದ್ದಾರಂತೆ. ಅಷ್ಟೇ ಅಲ್ಲದೆ ತೀರ್ಥಗಿರಿ ಅವರ ಮಕ್ಕಳು ಕೂಡ ವೃತ್ತಿಯಲ್ಲಿ ತೊಡಗಿಕೊಂಡು, ಗೌರಿ–ಗಣೇಶನ ಮೂರ್ತಿ ತಯಾರಿಸಿ, ಹಬ್ಬಕ್ಕೆ ಮೆರುಗು ತರುತ್ತಿದ್ದಾರೆ.

ಮಹಾನಗರ ಪಾಲಿಕೆ ಚುನಾವಣೆ ಅಬ್ಬರದ ನಡುವೆ ಗಣೇಶನ ಮೂರ್ತಿಗಳಿಿಗೆ ಈ ತನಕ ಬೇಡಿಕೆ ಕಡಿಮೆ ಇದ್ದು, ಇನ್ನು ಮುಂದೆ ಹೆಚ್ಚಾಗುವ  ಸಂಭವವಿದೆ ಎನ್ನುತ್ತಾರೆ ತೀರ್ಥಗಿರಿ. ‘‘ಈ ಬಾರಿ ಸಾರ್ವಜನಿಕರು ಬಾಹುಬಲಿ ಅಲ್ಲದೇ  ‘ಉಪ್ಪಿ2’ ಮೂರ್ತಿಗೂ ಬೇಡಿಕೆ ಇರಿಸಿದ್ದರು. ಆದರೆ ತಲೆ ಕೆಳಗಾಗಿ ಪ್ರತಿಮೆ ನಿಲ್ಲಿಸಿ, ದೇವರಿಗೆ ಅಪಮಾನ ಮಾಡುವುದು ನನಗೆ ಇಷ್ಟವಿರಲಿಲ್ಲ . ಆದ್ದರಿಂದ ‘ಉಪ್ಪಿ 2’ ಗಣೇಶ ಮೂರ್ತಿಯನ್ನು ಮಾಡಲಿಲ್ಲ’’  ಎನ್ನುತ್ತಾರೆ ತೀರ್ಥಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT