ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್‌ ಮುನ್ನಡೆಗಾಗಿ ಹೋರಾಟ

ರಣಜಿ ಕ್ರಿಕೆಟ್‌: ಗೌತಮ್‌ ಅರ್ಧಶತಕ, ವಿನಯ್‌ ಕುಮಾರ್‌ ಪಡೆ 247 ರನ್‌
Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಮಂದಬೆಳಕು ಮತ್ತು ಥರಗುಟ್ಟುವ ಚಳಿ ಪಂದ್ಯಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿರುವ ಕಾರಣ ಫಲಿತಾಂಶ ಬರುವ ಸಾಧ್ಯತೆ ಕಡಿಮೆಯಾಗಿದೆ. ಆದ್ದರಿಂದ ರೈಲ್ವೇಸ್ ಎದುರಿನ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಲು ಹೋರಾಟ ನಡೆಸುತ್ತಿದೆ.

ಕರ್ನೈಲ್ ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ರಣಜಿ ಪಂದ್ಯದ ಮೊದಲ ಎರಡು ದಿನಗಳ ಬಹುತೇಕ ಆಟ ಮಂದಬೆಳಕಿನ ಕಾಟಕ್ಕೆ ಆಹುತಿಯಾಗಿದೆ. ಸೋಮವಾರ 40 ಓವರ್‌ಗಳ ಆಟ ನಡೆಯಲೇ ಇಲ್ಲ. ಮೊದಲ ದಿನ 22 ಓವರ್‌ಗಳು ರದ್ದಾಗಿದ್ದವು.

ಮೊದಲ ಇನಿಂಗ್ಸ್‌ನ ಬ್ಯಾಟಿಂಗ್ ಮುಂದುವರಿಸಿದ ಕರ್ನಾಟಕ ಸೋಮವಾರ 82.3 ಓವರ್‌ಗಳಲ್ಲಿ 247 ರನ್‌ ಕಲೆ ಹಾಕಿತು. ಎರಡನೇ ದಿನದಾಟದ ಅಂತ್ಯಕ್ಕೆ ರೈಲ್ವೇಸ್‌ 36.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 105 ರನ್ ಗಳಿಸಿತು. ಈ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ಗಳಿಸಬೇಕಾದರೆ 142 ರನ್‌ ಅಗತ್ಯವಿದೆ.

ನಿಗದಿತ ಸಮಯದ ಪ್ರಕಾರ ಬೆಳಿಗ್ಗೆ 9.30ಕ್ಕೆ ದಿನದಾಟ  ಆರಂಭವಾಗಬೇಕಿತ್ತು. ಆದರೆ, ಕ್ರೀಡಾಂಗಣ ತೊಯ್ದು ಹೋಗಿದ್ದರಿಂದ 11 ಗಂಟೆಯ ಬಳಿಕ ಪಂದ್ಯ ನಡೆಸಲು ನಿರ್ಧರಿಸಲಾಯಿತು. ಈ ವೇಳೆ ಎರಡು ಬಾರಿ ಪಿಚ್‌ ಪರಿಶೀಲಿಸಿದ ರೆಫರಿ ಶಕ್ತಿ ಸಿಂಗ್‌ ಭೋಜನ ವಿರಾಮದ ಬಳಿಕ ದಿನದಾಟ ಆರಂಭಿಸಲಾಗುವುದು ಎಂದು ಹೇಳಿದರು. ಬಳಿಕ ಸೂಪರ್‌ ಸಾಪರ್‌ ಯಂತ್ರದ ಮೂಲಕ ತೇವವನ್ನು ಕಡಿಮೆ ಮಾಡಲಾಯಿತು. ಆದ್ದರಿಂದ ಭೋಜನ ಅವಧಿಯ ಆಟ ನಡೆಯಲಿಲ್ಲ. ಸಂಜೆ 5.30ರ ವರೆಗೆ ದಿನದಾಟ ನಡೆಯಬೇಕಿತ್ತು. ಆದರೆ, 45 ನಿಮಿಷಗಳ ಮುಂಚಿತವೇ ಆಟಕ್ಕೆ ತೆರೆ ಬಿತ್ತು.

ಬೇಗನೆ ಮುಗಿದ ಹೋರಾಟ
40 ರನ್‌ ಕಲೆ ಹಾಕುವ ಅಂತರದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಕರ್ನಾಟಕದ ಹೋರಾಟ ಎರಡನೇ ದಿನ ಬೇಗನೆ ಮುಗಿದು ಹೋಯಿತು.

ಭಾನುವಾರದ ಅಂತ್ಯಕ್ಕೆ 31 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಸಿ.ಎಂ. ಗೌತಮ್‌ ಕೆಲ ಹೊತ್ತು ರೈಲ್ವೇಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಒಟ್ಟು 109 ಎಸೆತಗಳನ್ನು ಆಡಿದ ಬಲಗೈ ಬ್ಯಾಟ್ಸ್‌ಮನ್‌ 12 ಬೌಂಡರಿ ಸೇರಿದಂತೆ 64 ರನ್‌ ಗಳಿಸಿದರು. ಇನ್ನೊಂದು ಬದಿ ಕ್ರೀಸ್‌ನಲ್ಲಿದ್ದ ಶ್ರೇಯಸ್ ಗೋಪಾಲ್ (18) ದಿನದಾಟದ ಒಂಬತ್ತನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

ಚೆಂಡು ಪದೇ ಪದೇ ಜಾರುತ್ತಿದ್ದ ಕಾರಣ ರೈಲ್ವೇಸ್‌ ಆಟಗಾರರು ಚೆಂಡನ್ನು ಬದಲಿಸುವಂತೆ ಫೀಲ್ಡ್ ಅಂಪೈರ್‌ ರಾಜೇಶ್‌ ದೇಶಪಾಂಡೆ ಅವರಲ್ಲಿ ಮನವಿ ಮಾಡಿಕೊಂಡರು. ಈ ಮನವಿಯನ್ನು ಪುರಸ್ಕರಿಸಿದ ಅಂಪೈರ್‌ 80ನೇ ಓವರ್‌ನಲ್ಲಿ ಹೊಸ ಚೆಂಡು ನೀಡಿದರು.

ನಂತರದ 15 ಎಸೆತಗಳಲ್ಲಿ ಚಾಂಪಿಯನ್‌ ತಂಡದ ಮೊದಲ ಇನಿಂಗ್ಸ್‌ನ ಹೋರಾಟಕ್ಕೆ ತೆರೆ ಬಿತ್ತು. ಗೌತಮ್‌ 82.2ನೇ ಎಸೆತದಲ್ಲಿ
ವಿಕೆಟ್‌ ಒಪ್ಪಿಸಿದರೆ, ಎಸ್‌. ಅರವಿಂದ್ ಎದುರಿಸಿದ ಮೊದಲ ಎಸೆತದಲ್ಲಿಯೇ ಬೌಲ್ಡ್‌ ಆದರು.

ಮತ್ತೆ ಮಿಂಚಿದ ಕೃಷ್ಣಕಾಂತ್‌
ಈ ಸಲದ ರಣಜಿ ಋತುವಿನಲ್ಲಿ ಅಪೂರ್ವ ಪ್ರದರ್ಶನ ತೋರುತ್ತಿರುವ ವೇಗಿ ಕೃಷ್ಣಕಾಂತ್‌ ಉಪಾಧ್ಯಾಯ ರಣಜಿ ಚಾಂಪಿಯನ್‌ ತಂಡದ ಎದುರೂ ಪ್ರಾಬಲ್ಯ ಮೆರೆದರು. ಮೊದಲ ದಿನ ನಾಲ್ಕು ವಿಕೆಟ್‌ ಕಬಳಿಸಿದ್ದ ಅವರು ಸೋಮವಾರ ಮೂರು ವಿಕೆಟ್‌ ಉರುಳಿಸಿದರು.

ಮಧ್ಯಪ್ರದೇಶ ಮತ್ತು ಮುಂಬೈ ಎದುರಿನ ಪಂದ್ಯಗಳಲ್ಲಿ ಕೃಷ್ಣಕಾಂತ್‌ ಗಮನ ಸೆಳೆದಿದ್ದರು. ಕರ್ನಾಟಕದ ಎದುರಿನ ಮೊದಲ ಇನಿಂಗ್ಸ್‌ ಅಂತ್ಯದ ವೇಳೆಗೆ ಅವರು ಒಟ್ಟು 16 ವಿಕೆಟ್‌ ಉರುಳಿಸಿದ್ದಾರೆ. ಈ ಸಲದ ರಣಜಿಯಲ್ಲಿ ಒಟ್ಟು ಗರಿಷ್ಠ ವಿಕೆಟ್‌ ಪಡೆದ ಎರಡನೇ ಬೌಲರ್ ಎನ್ನುವ ಕೀರ್ತಿ ಹೊಂದಿದ್ದಾರೆ. ಕೃಷ್ಣಕಾಂತ್‌ (31.3-8-98-7) ಗಮನ ಸೆಳೆದರು. ಒಟ್ಟು 18 ವಿಕೆಟ್‌ ಪಡೆದಿರುವ ಗುಜರಾತಿನ ಆರ್‌. ಆರ್‌. ಕಲಾರಿಯ ಹೆಚ್ಚು ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

ಕೌಶಿಕ್ ಆಸರೆ
ಎರಡನೇ  ಓವರ್‌ನಲ್ಲಿಯೇ  ವಿಕೆಟ್‌ ಕಳೆದುಕೊಂಡು ಪರದಾಡಿದ ರೈಲ್ವೇಸ್‌ ತಂಡಕ್ಕೆ ಅನಿರುದ್ಧ್‌ ಕೌಶಿಕ್‌ ಅರ್ಧಶತಕ ಗಳಿಸಿ ಆಸರೆಯಾದರು.

ದೆಹಲಿಯ ಕೌಶಿಕ್ 90 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸೇರಿದಂತೆ 59 ರನ್‌ ಕಲೆ ಹಾಕಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಬೆಂಬಲ ಲಭಿಸಲಿಲ್ಲ. ಅನುಸ್ತಮ್‌ ಮುಜುಮ್ದಾರ್‌ (ಬ್ಯಾಟಿಂಗ್‌ 25) ಅವರನ್ನು ಹೊರತುಪಡಿಸಿದರೆ, ನಿತಿನ್ ಭಿಲ್ಲೆ (10), ಅರಿಂಧಮ್‌ ಘೋಷ್‌ (1) ಬೇಗನೆ ಔಟಾದರು.

ಬದಲಾವಣೆಯ ತಂತ್ರ
ಪೆವಿಲಿಯನ್‌ ಎದುರಿನ ತುದಿಯಿಂದ ಬೌಲ್‌ ಮಾಡಿ ಆರಂಭದಲ್ಲಿಯೇ ವಿಕೆಟ್‌ ಪಡೆದ ‘ಪೀಣ್ಯ ಎಕ್ಸ್‌ಪ್ರೆಸ್‌’ ಮಿಥುನ್ (35ಕ್ಕೆ1)
ಹೆಚ್ಚು ರನ್‌ ನೀಡದಂತೆ ಎಚ್ಚರಿಕೆ ವಹಿಸಿದರು. ಆದರೆ, ಮತ್ತೆ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾಯಕ ವಿನಯ್‌ ಬೌಲಿಂಗ್‌ನ ದಿಕ್ಕು ಬದಲಿಸುವ ತಂತ್ರಕ್ಕೆ ಮುಂದಾದರು.

ಕೆಲ ಅತ್ಯುತ್ತಮ ಎಸೆತಗಳನ್ನು ಹಾಕಿದ ಬಲಗೈ ವೇಗಿ ವಿನಯ್‌ಗೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ತಮ್ಮ ಬದಲು ಎಸ್‌. ಅರವಿಂದ್ ಕೈಗೆ ಚೆಂಡು ನೀಡಿದರು. ಇನ್ನೊಂದು ತುದಿಯಲ್ಲಿ ಮಿಥುನ್ ಬದಲು ಸ್ಟುವರ್ಟ್‌ ಬಿನ್ನಿ ಅವರಿಂದ ಬೌಲ್‌ ಮಾಡಿಸಿದರು. ಆಗ ಬಿನ್ನಿ (8-1-18-2) ಎದುರಾಳಿ ತಂಡದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ವಿನಯ್‌ ಅವರ ದಿಕ್ಕು ಬದಲಾವಣೆಯ ‘ತಂತ್ರ‘ ಫಲಿಸಿತು. ಆದರೆ, ರೈಲ್ವೇಸ್‌ ತಂಡದ ರನ್‌ ವೇಗ ಹೆಚ್ಚಿಸುತ್ತಿದ್ದ ಕೌಶಿಕ್ ಅವರನ್ನು ಕಟ್ಟಿ ಹಾಕಲು ಪರದಾಡಬೇಕಾಯಿತು. 29 ವರ್ಷದ ಕೌಶಿಕ್‌ ಒಂದೇ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದರು.

ಈ ವೇಳೆ ಸಾಂದರ್ಭಿಕ ಬೌಲರ್‌ ಮನೀಷ್‌ ಪಾಂಡೆ ಕೈಗೆ ವಿನಯ್‌ ಚೆಂಡು ನೀಡಿದರು. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಬಲಗೈ ಮಧ್ಯಮ ವೇಗಿ ಪಾಂಡೆ 32ನೇ ಓವರ್‌ನಲ್ಲಿ ಕೌಶಿಕ್‌ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಪಾಂಡೆ ಮಾಡಿದ ಎರಡೂ ಓವರ್‌ಗಳು ಮೇಡನ್‌ ಆಗಿದ್ದು ವಿಶೇಷ.

ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್‌ 82.3 ಓವರ್‌ಗಳಲ್ಲಿ 247

(ಭಾನುವಾರದ ಅಂತ್ಯಕ್ಕೆ 68 ಓವರ್‌ಗಳಲ್ಲಿ 207ಕ್ಕೆ7)
ಸಿ.ಎಂ. ಗೌತಮ್‌ ಸಿ. ಅರ್ನಬ್ ನಂದಿ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  64
ಶ್ರೇಯಸ್‌ ಗೋಪಾಲ್‌ ಸಿ. ಮಹೇಶ್ ರಾವತ್‌ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  18
ಅಭಿಮನ್ಯು ಮಿಥುನ್‌ ಔಟಾಗದೆ  03
ಎಸ್‌. ಅರವಿಂದ್‌ ಬಿ. ಕೃಷ್ಣಕಾಂತ್‌ ಉಪಾಧ್ಯಾಯ  00
ಇತರೆ: (ಲೆಗ್‌ ಬೈ-1)  01
ವಿಕೆಟ್‌ ಪತನ: 8-226 (ಶ್ರೇಯಸ್‌; 76.6), 9-247 (ಗೌತಮ್‌; 82.2),
10-247 (ಅರವಿಂದ್; 82.3).
ಬೌಲಿಂಗ್‌: ಅನುರೀತ್‌ ಸಿಂಗ್‌ 32-7-85-0, ಕೃಷ್ಣಕಾಂತ್‌ ಉಪಾಧ್ಯಾಯ 31.3-8-98-7, ರಂಜಿತ್‌ ಮಾಲಿ 14-3-43-2, ಅವಿನಾಶ್‌ ಯಾದವ್‌ 5-0-20-1.
ರೈಲ್ವೇಸ್‌ ಮೊದಲ ಇ.ವರ್‌ಗಳಲ್ಲಿ 4 ವಿಕೆಟ್‌ಗೆ 105
ರೋಹನ್‌ ಭೋಸಲೆ ಸಿ. ಸಿ.ಎಂ. ಗೌತಮ್‌ ಬಿ. ಅಭಿಮನ್ಯು ಮಿಥುನ್‌  04
ಅಭಿಷೇಕ್‌ ಕೌಶಿಕ್ ಎಲ್‌ಬಿಡಬ್ಲ್ಯು ಬಿ. ಮನೀಷ್‌ ಪಾಂಡೆ  59
ನಿತಿನ್‌ ಭಿಲ್ಲೆ ಸಿ. ಮನೀಷ್‌ ಪಾಂಡೆ ಬಿ. ಸ್ಟುವರ್ಟ್‌ ಬಿನ್ನಿ  10
ಅರಿಂಧಮ್‌ ಘೋಷ್‌ ಎಲ್‌ಬಿಡಬ್ಲ್ಯು ಬಿ. ಸ್ಟುವರ್ಟ್‌ ಬಿನ್ನಿ  01
ಅನುಸ್ತಪ್‌ ಮುಜುಮ್ದಾರ್‌ ಬ್ಯಾಟಿಂಗ್‌  25
ಅವಿನಾಶ್ ಯಾದವ್‌ ಬ್ಯಾಟಿಂಗ್‌  01
ಇತರೆ: (ಬೈ-4, ಲೆಗ್‌ ಬೈ-1)  05
ವಿಕೆಟ್‌ ಪತನ: 1-5 (ಭೋಸಲೆ; 1.4), 2-63 (ಭಿಲ್ಲೆ; 17.1), 3-67
(ಘೋಷ್‌; 21.5), 4-92 (ಕೌಶಿಕ್; 31.6)
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 9-4-26-0, ಅಭಿಮನ್ಯು ಮಿಥುನ್‌
9.5-1-35-1, ಅರವಿಂದ್‌ ಶ್ರೀನಾಥ್‌ 8-2-21-0, ಸ್ಟುವರ್ಟ್‌ ಬಿನ್ನಿ
8-1-18-2, ಮನೀಷ್ ಪಾಂಡೆ 2-2-0-1.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT