ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನಿಬ್ಬರು ಯೋಧರ ಮನೆಯಲ್ಲಿ ಕಣ್ಣೀರು

Last Updated 9 ಫೆಬ್ರುವರಿ 2016, 19:38 IST
ಅಕ್ಷರ ಗಾತ್ರ

ಬೆಂಗಳೂರು: ಸೋಮವಾರ ಬೆಳಿಗ್ಗೆ ಹನುಮಂತಪ್ಪ ಕೊಪ್ಪದ ಮನೆ ಹಾಗೂ ಅವರ ಹುಟ್ಟೂರು ಕುಂದಗೋಳದಲ್ಲಿ ಸಂಭ್ರಮದ ಅಲೆ ಹರಡಿದ್ದರೆ  ಸಿಯಾಚಿನ್‌ ದುರಂತದಲ್ಲಿ ಮೃತಪಟ್ಟ ಎಚ್‌.ಡಿ. ಕೋಟೆ ತಾಲ್ಲೂಕಿನ ಯೋಧ ಪಿ. ಎನ್‌. ಮಹೇಶ್‌ ಮತ್ತು ಹಾಸನ ತಾಲ್ಲೂಕಿನ ತೇಜೂರು ಗ್ರಾಮದ ಯೋಧ ಟಿ.ಟಿ. ನಾಗೇಶ್‌ ಮನೆಯಲ್ಲಿ ನೀರವ ಮೌನ ನೆಲೆಸಿತ್ತು.

ಎರಡು ದಿನದಲ್ಲಿ ಪಾರ್ಥಿವ ಶರೀರ ಸ್ವಗ್ರಾಮಕ್ಕೆ (ಎಚ್.ಡಿ. ಕೋಟೆ ವರದಿ): ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ ತಾಲ್ಲೂಕಿನ ಯೋಧ ಪಿ.ಎನ್. ಮಹೇಶ್ ಅವರ ಮನೆಗೆ ಜಿಲ್ಲಾಧಿಕಾರಿ ಸಿ. ಶಿಖಾ ಅವರು ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

‘ಇನ್ನು ಎರಡು ದಿನಗಳಲ್ಲಿ ಪಾರ್ಥಿವ ಶರೀರ ಇಲ್ಲಿಗೆ ತಲುಪಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಿಯಾಚಿನ್ ಪ್ರದೇಶದಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ’ ಎಂದು ಶಿಖಾ ಹೇಳಿದರು.

ಪಾರ್ಥಿವ ಶರೀರ ತಲುಪಿದ ನಂತರ ಪಟ್ಟಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಕುಟುಂಬದವರು ಸೂಚಿಸುವ ಕಡೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ನಾಗೇಶ್‌ ಶವ ಪತ್ತೆ (ಹಾಸನ ವರದಿ): ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟ ಹಾಸನ ತಾಲ್ಲೂಕಿನ ತೇಜೂರು ಗ್ರಾಮದ ಯೋಧ ಟಿ.ಟಿ. ನಾಗೇಶ್‌ ಶವ ಸಿಕ್ಕಿದೆ ಎಂದು ಮಂಗಳವಾರ  ಸೇನಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕುಟುಂಬದವರು ತಿಳಿಸಿದರು.

ಮೃತದೇಹ ತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸಿಯಾಚಿನ್ ಪ್ರದೇಶದಲ್ಲಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದ ತಹಶೀಲ್ದಾರ್‌ ವಿ. ಮಂಜುನಾಥ್‌, ಯೋಧನ ಶವ  ಬುಧವಾರ ಹಾಸನಕ್ಕೆ  ಬರುವ ಸಾಧ್ಯತೆ ಇದೆ ಎಂದು  ತಿಳಿಸಿದರು.

ತಹಶೀಲ್ದಾರ್‌ ವಿ. ಮಂಜುನಾಥ್‌ ಹಾಗೂ ಇತರ ಅಧಿಕಾರಿಗಳು ಮಂಗಳವಾರ ಮೃತರ ನಿವಾಸಕ್ಕೆ  ಭೇಟಿ ನೀಡಿ ಸಾಂತ್ವನ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT