ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ದಿನಾ 5 ನಿಮಿಷದಲ್ಲೇ ಕಚೇರಿಗೆ ತಲುಪುತ್ತೇನೆ...

ಮೆಟ್ರೊ ಸುರಂಗ ಸಂಚಾರದಲ್ಲಿ ಪ್ರಯಾಣಿಕನ ಹರ್ಷ
Last Updated 29 ಏಪ್ರಿಲ್ 2016, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನೂರು ರಾಮನಗರ. ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತೇನೆ. ಊರಿಂದ ರೈಲಿನಲ್ಲಿ ಮೆಜೆಸ್ಟಿಕ್‌ಗೆ ಬಂದರೆ, ಅಲ್ಲಿಂದ ಕಚೇರಿಗೆ ತಲುಪಲು ಕನಿಷ್ಠ 25 ನಿಮಿಷ ಬೇಕಿತ್ತು. ಈಗ ಮೆಟ್ರೊ ಸುರಂಗ ಸಂಚಾರ ಆರಂಭವಾಗಿದೆ. ಇನ್ನು ಮುಂದೆ ಟ್ರಾಫಿಕ್ ಕಿರಿ ಕಿರಿ ಇಲ್ಲದೆ ಕೇವಲ ಐದು ನಿಮಿಷದಲ್ಲಿ ಕಚೇರಿಗೆ ಹೋಗಬಹುದು...’

ಕಬ್ಬನ್ ಉದ್ಯಾನದಿಂದ ನಗರ ರೈಲು ನಿಲ್ದಾಣದವರೆಗೆ ಶುಕ್ರವಾರ ಉದ್ಘಾಟನೆಗೊಂಡ ಮೆಟ್ರೊ ಸುರಂಗ ಮಾರ್ಗ ಸಂಚಾರದಲ್ಲಿ  ಪ್ರಯಾಣಿಸಿದ ರಾಮಕೃಷ್ಣಯ್ಯ ಅವರ ಅನಿಸಿಕೆ ಇದು.

‘ಸಿಟಿ ರೈಲು ನಿಲ್ದಾಣಕ್ಕೆ ಆರಾಮವಾಗಿ ಬರುತ್ತೇನೆ. ಇಲ್ಲಿಂದ ವಿಧಾನಸೌಧಕ್ಕೆ ಹೋಗಲು ಬಸ್ ಹತ್ತಿಕೊಂಡರೆ, ಸರಿಯಾದ ಸಮಯಕ್ಕೆ ಕಚೇರಿ ತಲುಪುತ್ತೆನೋ ಇಲ್ಲವೊ ಎಂಬ ಆತಂಕ ಇರುತ್ತಿತ್ತು. ಏಕೆಂದರೆ, ವಾರದಲ್ಲಿ ನಾಲ್ಕೈದು ದಿನ  ಒಂದಲ್ಲ ಒಂದು ಪ್ರತಿಭಟನಾ ರ್‍ಯಾಲಿ ಇದ್ದೇ ಇರುತ್ತದೆ.

‘ತಪ್ಪಿದಲ್ಲಿ ಸ್ವಾತಂತ್ರ್ಯ ಉದ್ಯಾನದ ಬಳಿ ರಸ್ತೆ ತಡೆಯಾಗಿರುತ್ತದೆ. ಹೀಗಾಗಿ ಸಂಚಾರದಟ್ಟಣೆ ಕಿರಿಕಿರಿ ತಪ್ಪುತ್ತಿರಲಿಲ್ಲ. ಯಾವಾಗ ಈ ಮೆಟ್ರೊ ಸುರಂಗ ಮಾರ್ಗ ಸಂಚಾರ ಆರಂಭವಾಗುತ್ತದೊ ಎಂದು ಕಾಯುತ್ತಿದ್ದೆ. ಕಡೆಗೂ ಉದ್ಘಾಟನೆಯಾಯ್ತು’ ಎಂದು ಅವರು ಹೇಳಿದರು.

ಸ್ಮಾರ್ಟ್‌ ಕಾರ್ಡ್‌ ಖರೀದಿಸುವೆ: ‘ಸುರಂಗ ಮಾರ್ಗ ಸಂಚಾರದಿಂದಾಗಿ ಕಾಲೇಜಿನ ಓಡಾಟ ಬಹಳ ಸುಲಭವಾಯ್ತು. ಬೆಳಿಗ್ಗೆ ಟೋಲ್‌ಗೇಟ್‌ನಿಂದ ಬಸ್‌ ಹತ್ತಿಕೊಂಡು ನೂಕುನುಗ್ಗಲು, ತೀವ್ರ ಸಂಚಾರ ದಟ್ಟಣೆಯಲ್ಲಿ ಮೆಜೆಸ್ಟಿಕ್‌ ಬಂದು ಅಲ್ಲಿಂದ ಮತ್ತೊಂದು ಬಸ್‌ ಹತ್ತಿಕೊಂಡು ಕಾಲೇಜಿಗೆ ಹೋಗಬೇಕಿತ್ತು’ ಎಂದು ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ರಾಕೇಶ್ ಹೇಳಿದರು.

‘ಬಿಎಂಟಿಸಿ ಟಿಕೆಟ್‌ ಹಾಗೂ ಮೆಟ್ರೊ ಟಿಕೆಟ್‌ ದರಕ್ಕೆ ಹೋಲಿಸಿದರೆ ಮೆಟ್ರೊ ದರವೇ ಕಡಿಮೆ. ಪ್ರಯಾಸ, ಕಿರಿಕಿರಿ ಇಲ್ಲದೆ ಆದಷ್ಟು ಬೇಗ ಕಾಲೇಜು ತಲುಪಬಹುದು. ಇನ್ನು ಮುಂದೆ ಬಸ್‌ ಪಾಸ್ ಬದಲು ಸ್ಮಾರ್ಟ್‌ ಕಾರ್ಡ್‌ ಖರೀದಿಸಿ ಮೆಟ್ರೊದಲ್ಲಿ ಓಡಾಡುತ್ತೇನೆ’ ಎಂದು ಅವರು ತಿಳಿಸಿದರು.

ಹೌಸ್‌ಫುಲ್: ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ರಾಜ್ಯ ಸಚಿವರು, ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ನೂರಾರು ಮಂದಿ ನಿಲ್ದಾಣಕ್ಕೆ ಬಂದು ರೈಲು ಹತ್ತಿಕೊಂಡರು. ಹಾಗಾಗಿ, ಮೊದಲ ಪ್ರಯಾಣವೇ ಹೌಸ್‌ಫುಲ್‌ ಆಯಿತು.

ಉದ್ಘಾಟನೆ ವೇಳೆ ಸಾರ್ವಜನಿಕರಿಗೆ ಸುರಂಗ ಮಾರ್ಗದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಬದಲಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಪಾಸ್‌ಗಳನ್ನು ವಿತರಿಸಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT