ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ 8 ಕೆರೆ ಒತ್ತುವರಿ ತೆರವಿಗೆ ಸಿದ್ಧತೆ

ಸಾರಕ್ಕಿ ಕೆರೆ ಒತ್ತುವರಿ: 18 ಕಟ್ಟಡಗಳ ತೆರವಿಗೆ ತಡೆಯಾಜ್ಞೆ, ಕಾರ್ಯಾಚರಣೆಗೆ ತಾತ್ಕಾಲಿಕ ಹಿನ್ನಡೆ
Last Updated 20 ಏಪ್ರಿಲ್ 2015, 19:45 IST
ಅಕ್ಷರ ಗಾತ್ರ

ಬೆಂಗಳೂರು: ಸಾರಕ್ಕಿ ಕೆರೆ ಅಂಗಳದಲ್ಲಿದ್ದ ಸುಮಾರು 18 ಕಟ್ಟಡಗಳ ಒತ್ತುವರಿ ತೆರವಿಗೆ ನ್ಯಾಯಾಲಯ ಸೋಮವಾರ ತಡೆಯಾಜ್ಞೆ ನೀಡಿದ ಕಾರಣ ನಗರ ಜಿಲ್ಲಾಡಳಿತ ಸದ್ಯಕ್ಕೆ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಈ ನಡುವೆ, ನಗರ ಜಿಲ್ಲಾಡಳಿತ ಇನ್ನೂ ಎಂಟು ಕೆರೆಗಳ ಒತ್ತುವರಿ ತೆರವಿಗೆ ಸಕಲ ಸಿದ್ಧತೆ ನಡೆಸಿದೆ. ಸಾರಕ್ಕಿ ಕೆರೆಯಂಗಳದಲ್ಲಿ ಇದ್ದ 178 ಮನೆಗಳು, 18 ವಾಣಿಜ್ಯ ಕಟ್ಟಡಗಳು ಹಾಗೂ ಏಳು ಅಪಾರ್ಟ್‌ಮೆಂಟ್‌ಗಳು ಹಾಗೂ 12 ದೇವಸ್ಥಾನಗಳು ಸೇರಿದಂತೆ ಒಟ್ಟು ₨1500 ಕೋಟಿ ಮೌಲ್ಯದ ಆಸ್ತಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಇಲ್ಲಿನ ಯಶಸ್ಸು ಜಿಲ್ಲಾಡಳಿತಕ್ಕೆ ಮತ್ತಷ್ಟು ಸ್ಫೂರ್ತಿ ನೀಡಿದೆ. ಹೀಗಾಗಿ ಇನ್ನಷ್ಟು ಕೆರೆಗಳ್ಳರನ್ನು ಹಣಿಯಲು ನಿರ್ಧರಿಸಿದೆ.

‘ಈಗಾಗಲೇ ಎಂಟು ಕೆರೆಗಳನ್ನು ಗುರುತಿಸಲಾಗಿದೆ. ಅವುಗಳು ಬಹುತೇಕ ಒತ್ತುವರಿಯಾಗಿವೆ. ಇಲ್ಲಿನ ಒತ್ತುವರಿದಾರರನ್ನು ತೆರವು ಮಾಡಲು ಉದ್ದೇಶಿಸಲಾಗಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಗೌಪ್ಯತೆ ಕಾಪಾಡುವ ಉದ್ದೇಶದಿಂದ ಆ ಕೆರೆಗಳ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಲಿಲ್ಲ. ‘ಕೆರೆಗಳ ವಿವರ ನೀಡಿದರೆ ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸಾಧ್ಯತೆ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೆಲವೇ ದಿನಗಳಲ್ಲಿ ಈ ಕಾರ್ಯಾಚರಣೆ ನಡೆಯಲಿದೆ ಎಂದರು.

‘ಸಾರಕ್ಕಿ ಮಾದರಿಯಲ್ಲೇ ಈ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಅವರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಅದನ್ನು ಅವರು ಲಘುವಾಗಿ ಪರಿಗಣಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದರು. 

ಸಾರಕ್ಕಿ ಕಾರ್ಯಾಚರಣೆ ಸ್ಥಗಿತ: ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆ ಸೋಮವಾರ ನಿರ್ಣಾಯಕ ಹಂತಕ್ಕೆ ಬಂದಿತ್ತು. ವಾಸದ ಮನೆಗಳು ಸೇರಿದಂತೆ ಸಣ್ಣ ಕಟ್ಟಡಗಳನ್ನು ಜಿಲ್ಲಾಡಳಿತ ಆರಂಭಿಕ ಹಂತದಲ್ಲಿ ಧರೆಗೆ ಉರುಳಿಸಿತ್ತು. ಬಹುಮಹಡಿ ಕಟ್ಟಡ ಹಾಗೂ ದೊಡ್ಡ ಮನೆಗಳ ತೆರವು ಕಾರ್ಯಾಚರಣೆ ಅರೆಬರೆ ಆಗಿತ್ತು. ಇವುಗಳನ್ನು ನೆಲಸಮ ಮಾಡಲು ಜಿಲ್ಲಾಡಳಿತ ಸೋಮವಾರ ಮುಂದಾಯಿತು.

ಬೆಳಿಗ್ಗೆ ಮನೆಯೊಂದನ್ನು ಕೆಡವಿ ಹಾಕಲಾಯಿತು. ಮೂರು ಮಹಡಿಯ ಕಟ್ಟಡ ಸಹ ನೆಲಸಮವಾಯಿತು. ಉಳಿದ ಕಟ್ಟಡಗಳನ್ನು ಜೆಸಿಬಿ ಯಂತ್ರಗಳು ಕೆಡವಲು ಮುಂದಾದವು. ಅದೇ ಸಂದರ್ಭದಲ್ಲಿ ಒಂದೊಂದೇ ಕಟ್ಟಡಕ್ಕೆ ತಡೆಯಾಜ್ಞೆ ಸಿಗಲಾರಂಭಿಸಿತು. ಸುಮಾರು 18 ಕಟ್ಟಡಗಳಿಗೆ ತಡೆಯಾಜ್ಞೆ ಸಿಕ್ಕಿತು. ಹೀಗಾಗಿ  ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸೋಮವಾರವೇ ಪೂರ್ಣಗೊಳಿಸಲು ಯೋಜನೆ ರೂಪಿಸಿದ್ದೆವು. ಈಗ ಶೇ 75ರಷ್ಟು ಕಾರ್ಯಾಚರಣೆ ಪೂರ್ಣಗೊಂಡಿದೆ. ಬಡವರು ಹಾಗೂ ಮಧ್ಯಮವರ್ಗದ ಜನರ ಕಟ್ಟಡಗಳು ನೆಲಸಮಗೊಂಡಿವೆ. ಶ್ರೀಮಂತರು ತಡೆಯಾಜ್ಞೆ ತಂದು ಪಾರಾಗಿದ್ದಾರೆ. ಇದರಿಂದಾಗಿ ನಮಗೆ ನಾಚಿಕೆ ಹಾಗೂ ನೋವು ಆಗುತ್ತಿದೆ’ ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಹೈಕೋರ್ಟ್‌ ದ್ವಿಸದಸ್ಯ ಪೀಠದ ನಿರ್ದೇಶನದ ಪ್ರಕಾರವೇ ಕಾರ್ಯಾಚರಣೆ ನಡೆಸಿದ್ದೇವೆ. ಒತ್ತುವರಿದಾರರು ಪತ್ರಿಕೆಗಳಲ್ಲಿ ಪ್ರಕಟವಾದ ಕಟ್ಟಡಗಳ ಚಿತ್ರಗಳನ್ನು ನ್ಯಾಯಾಲಯಕ್ಕೆ ತೋರಿಸಿ ತಡೆಯಾಜ್ಞೆ ತಂದಿದ್ದಾರೆ. ನಾವು ಈಗ ಅಸಹಾಯಕರಾಗಿದ್ದೇವೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ’ ಎಂದು ಅವರು ನೋವಿನಿಂದ ನುಡಿದರು.

100 ಲಾರಿ ಕಟ್ಟಡ ತ್ಯಾಜ್ಯ:  ಕೆರೆಯಂಗಳದಲ್ಲಿ ಬೆಟ್ಟದಂತೆ ಬಿದ್ದಿದ್ದ ಕಟ್ಟಡದ ವಶೇಷಗಳನ್ನು ಅಂಜನಾಪುರದ ಕಲ್ಲಿನ ಕ್ವಾರಿಗೆ ಸೋಮವಾರ ಸಾಗಿಸಲಾಯಿತು.

‘ಸೋಮವಾರ 100 ಲಾರಿಗಳಲ್ಲಿ ತ್ಯಾಜ್ಯ ಸಾಗಿಸಲಾಗಿದೆ. ಎಲ್ಲ ತ್ಯಾಜ್ಯಗಳನ್ನು ಸಾಗಿಸಲು ಕನಿಷ್ಠ 10 ದಿನ ಬೇಕು. ಅಲ್ಲಿಯವರೆಗೆ ತ್ಯಾಜ್ಯ ಸಾಗಣೆ ಕಾರ್ಯಾಚರಣೆ ಮುಂದುವರಿಯಲಿದೆ’ ಎಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್ ತಿಳಿಸಿದರು.

‘ಮಂಗಳವಾರದ ಸ್ಥಿತಿಗತಿ ನೋಡಿಕೊಂಡು ಕಾರ್ಯಾಚರಣೆಯ ಸ್ವರೂಪ ನಿರ್ಧರಿಸಲಾಗುವುದು. ಕೆರೆಯ ಸುತ್ತ ಬೇಲಿ ಹಾಕುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಈ ಕೆಲಸ ಮಂಗಳವಾರ ಆರಂಭವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.
*
ಚರ್ಚ್ ಅಲ್ಲ, ಬಾಡಿಗೆ ಕಟ್ಟಡ
ಸಾರಕ್ಕಿ ಕೆರೆಯಂಗಳದಲ್ಲಿ ಚರ್ಚ್‌ ಮಾದರಿಯ ಕಟ್ಟಡವೊಂದಿದೆ. ಮೊದಲ ದಿನವೇ ಇದನ್ನು ಕೆಡವಲು ಜೆಸಿಬಿ ಮುಂದಾಗಿತ್ತು. ‘ಇದು ಚರ್ಚ್ ಕಟ್ಟಡ. ಇದನ್ನು ಕೆಡವಬೇಡಿ’ ಎಂಬ ಮನವಿಯ ಕಾರಣ ಜಿಲ್ಲಾಡಳಿತ ಇದನ್ನು ಕೆಡವಿರಲಿಲ್ಲ. ‘ಇದು ಚರ್ಚ್ ಅಲ್ಲ. ವ್ಯಕ್ತಿಯೊಬ್ಬರು ನೀಡಿರುವ ಬಾಡಿಗೆ ಕಟ್ಟಡ’ ಎಂಬುದು ಸೋಮವಾರ ತನಿಖೆಯಿಂದ ಬಹಿರಂಗಗೊಂಡಿತ್ತು. ಅದನ್ನು ತೆರವುಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿತ್ತು. ಮಧ್ಯಾಹ್ನದ ವೇಳೆ ಅದಕ್ಕೂ ತಡೆಯಾಜ್ಞೆ ಸಿಕ್ಕಿತು.

ಅಪಾಯದಿಂದ ತಹಶೀಲ್ದಾರ್‌ ಪಾರು: ತೆರವು ಕಾರ್ಯಾಚರಣೆಯ ವೇಳೆ ಮೂರು ಮಹಡಿಯ ಕಟ್ಟಡವೊಂದು ಹಿಟಾಚಿ ಯಂತ್ರದ  ಮೇಲೆಯೇ ಬಿತ್ತು.

ಅಲ್ಲೇ ಸಮೀಪದಲ್ಲಿದ್ದ ಬೆಂಗಳೂರು ದಕ್ಷಿಣ ತಹಶೀಲ್ದಾರ್‌ ಡಾ.ಬಿ.ಆರ್‌.ದಯಾನಂದ್‌  ಹಾಗೂ ಎಂಜಿನಿಯರ್‌ಗಳು ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು.
*
ಅಂಕಿ ಅಂಶ
3 ಕಟ್ಟಡ ನೆಲಸಮ
100 ಲಾರಿ ಕಟ್ಟಡ ತ್ಯಾಜ್ಯ ಸಾಗಣೆ
10 ದಿನ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT