ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬಗೆಯ ಹಲಸು!

Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಹಲಸಿನ ಋತು ಆರಂಭವಾಗುವುದೇ ಜನವರಿಯ ಬಳಿಕ. ಅರ್ಧ ಮಳೆಗಾಲದ ತನಕ ಅದರಲ್ಲಿ ಫಲ ಸಿಗುತ್ತದೆ. ಆದರೆ ಇಲ್ಲೊಂದು ಹಲಸಿನ ಬದುಕು ಹಾಗಿಲ್ಲ. ಅದು ಜುಲೈ- ಆಗಸ್ಟ್ ತಿಂಗಳಲ್ಲಿ ಹೂ ಬಿಡುತ್ತದೆ. ಸೆಪ್ಟೆಂಬರ್‌ನಲ್ಲಿ ಮರದಲ್ಲಿ ಎಲ್ಲಿ ನೋಡಿದರೂ ಕಾಯಿಗಳೇ ಕಾಣಿಸುತ್ತವೆ. ಡಿಸೆಂಬರ್‌ ತನಕ ಮರದಲ್ಲಿ ಜೋತಾಡುವ ಈ ಕಾಯಿಗಳನ್ನು ತಂದು ಹಣ್ಣು ಮಾಡಿದರೆ ತಿನ್ನಲು ಏನೇನೂ ರುಚಿಯಿಲ್ಲ. ಹಣ್ಣಾಗುವ ಮೊದಲೇ ಕೊಳೆಯುತ್ತದೆ. ಬರೇ ಸಪ್ಪೆ.

ಆದರೆ ಎಳತಿರುವಾಗಲೇ ಪಲ್ಯ ಮಾಡಿದರೆ ಹಲಸಿನದ್ದು ಎಂದು ಗುರುತು ಹೇಳಲಾಗದಷ್ಟು ರುಚಿಕಟ್ಟು. ಸಾಂಬಾರು, ಉಪ್ಪಿನಕಾಯಿ ಇತ್ಯಾದಿಗಳಿಗೆ ತುಂಬ ಸೂಕ್ತವಾಗಿದೆ. ಡಿಸೆಂಬರ್‌ ಹೊತ್ತಿಗೆ ಮರದ ಒಂದು ಸಲದ ದಾಸ್ತಾನು ಮುಗಿಯುತ್ತದೆ. ಜನವರಿಯಲ್ಲಿ ಮರ ಮತ್ತೆ ಹೂ ಬಿಟ್ಟು ಏಪ್ರಿಲ್ ತಿಂಗಳ ವೇಳೆಗೆ ಸಾವಿರಕ್ಕಿಂತ ಹೆಚ್ಚು ದೊಡ್ಡ ಗಾತ್ರದ ಕಾಯಿಗಳನ್ನು ಹೊತ್ತು ನಿಲ್ಲುತ್ತದೆ. ಈಗ ಯಜಮಾನ ಅದರಿಂದ ಕಾಯಿಗಳನ್ನು ತೆಗೆಯುವುದಿಲ್ಲ.

ಯಾಕೆಂದರೆ ಈ ಸಲದ ಕಾಯಿಗಳು ಹಣ್ಣಾಗುವಾಗಲೇ ಊರಿಡೀ ಅದರ ಸುಗಂಧ ಹರಡುತ್ತದೆ. ತೊಳೆಗಳಲ್ಲಿ ಮಧುರವಾದ ಜೇನು ತೊಟ್ಟಿಕ್ಕುತ್ತದೆ. ತುಂಬ ರುಚಿ. ಹಾಗಿದ್ದರೆ ಒಂದೇ ಮರದಲ್ಲಿ ಎರಡು ಋತುಗಳಲ್ಲಿ ಹಣ್ಣಾಗಲು ಏನು ಕಾರಣ, ಒಂದೊಂದು ಋತುವಿಗೂ ವಿಭಿನ್ನವಾದ ರುಚಿ ಯಾಕೆ ಬರುತ್ತದೆ? ಈ ಪ್ರಶ್ನೆಗೆ ಮರದ ಮಾಲೀಕರಲ್ಲಿ ಉತ್ತರವಿಲ್ಲ. ಮರಕ್ಕೆ ನೂರಕ್ಕಿಂತ ಹೆಚ್ಚು ವಯಸ್ಸಾಗಿದೆ. ಹಿಂದಿನಿಂದಲೇ ಎರಡು ಬಗೆಯ ಹಣ್ಣು, ಕಾಯಿಗಳಾಗುತ್ತಿವೆಯೆಂಬುದಷ್ಟೇ ಅವರಿಗೆ ಗೊತ್ತು. ಕೃಷಿ ಪಂಡಿತರೂ ಇದರ ರುಚಿ ನೋಡಿದ್ದಾರೆ. ಮರದ ಪ್ರಕೃತಿಯ ಗುಟ್ಟು ಅವರಿಗೂ ಸಿಕ್ಕಿಲ್ಲ.

ಈ ವಿಶೇಷ ಹಲಸಿರುವುದು ಬೆಳಗಾವಿಯಿಂದ ಸವದತ್ತಿಗೆ ಹೋಗುವ ದಾರಿಯಲ್ಲಿರುವ ಮುನವಳ್ಳಿಯಲ್ಲಿ. ರೈತ ದಂಪತಿ ಮಾರುತಿ ಮತ್ತು ಸಂಗವ್ವ ಈ ಮರದ ಒಡೆಯರು. ಸ್ಥಳೀಯರಿಗೆ ಅವರ ಹಲಸಿನಲ್ಲಿ ಆಸಕ್ತಿಯಿಲ್ಲ. ಆದರೆ ಮಹಾರಾಷ್ಟ್ರ, ಬೆಳಗಾವಿಗಳಿಂದ ಬರುವ ಟ್ರಕ್ಕುಗಳ ಚಾಲಕರೇ ಅದಕ್ಕೆ ಗ್ರಾಹಕರು. ಹಲಸಿನ ಹಣ್ಣಿಗೆ ನೂರು ರೂಪಾಯಿ ಬೆಲೆ, ಎಳೆಯ ಹಲಸಿಗೆ ಇಪ್ಪತ್ತು, ಕಾಯಿಗೆ ಐವತ್ತು ಕೊಡುತ್ತಾರೆ. ಸುಮಾರು ನಾಲ್ಕು ಸಾವಿರ ರೂಪಾಯಿ ಒಂದು ಮರದಿಂದ ಇವರಿಗೆ ಬರುವ ಆದಾಯ.

ಆದರೆ ಇದೇ ಹಲಸನ್ನು ಚಾಲಕರು ಮುಂಬೈಯಲ್ಲಿ ಐದುನೂರು ರೂಪಾಯಿಗೆ ಮಾರಾಟ ಮಾಡುತ್ತಾರೆಂದು ಅವರಿಗೂ ಗೊತ್ತಿದೆ. ಇಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕರಾಗಿರುವ ಜಯಶಂಕರ ಶರ್ಮಾ, ‘ರುಚಿಕರವಾದ ಈ ಹಲಸು ತರಕಾರಿ ಮತ್ತು ಹಣ್ಣಿನ ದೃಷ್ಟಿಯಿಂದ ಎರಡು ಸಲ ಫಲ ಕೊಡುವುದೆಂದರೆ ತುಂಬ ಅಪರೂಪದ ವಿಷಯ. ಹಣ್ಣು ಮಾಡಲಾಗದಿದ್ದರೂ ಹಪ್ಪಳ, ಚಿಪ್ಸ್, ಬೆರಟಿ ಇತ್ಯಾದಿ ಮಾಡಿ ಲಾಭ ಹೊಂದಬಹುದು. ಆದರೆ ಈ ಭಾಗದ ಜನರಿಗೆ ಹಸಿಯಾಗಿ ತಿನ್ನುವುದು ಬಿಟ್ಟರೆ ಅನ್ಯ ಉಪಯೋಗ ಗೊತ್ತಿಲ್ಲ’ ಎನ್ನುತ್ತಾರೆ.

ಎರಡು ಸಲವೂ ಸಾವಿರಕ್ಕಿಂತ ಅಧಿಕ ಕಾಯಿಗಳು ಸಿಗಬೇಕಿದ್ದರೆ ಗೊಬ್ಬರ ಏನು ಹಾಕುತ್ತೀರಿ ಎಂದು ಕೇಳಿದರೆ ಮಾರುತಿ ನಗುತ್ತಾರೆ, ‘ಮರಕ್ಕೆ ಬರುವ ಕ್ರಿಮಿಕೀಟಗಳೆಲ್ಲ ತೊಲಗೋದಕ್ಕೆ ಅಂತ ವರ್ಷಕ್ಕೆರಡು ಸರ್ತಿ ಮರದ ಬುಡಕ್ಕೆ ಎರಡು ಸೇರು ಹರಳುಪ್ಪು ಹಾಕ್ತೀವಿ. ಅದನ್ನು ಬಿಟ್ರೆ ಇನ್ನೇನೂ ಇಲ್ರೀ’ ಎಂಬ ಮಾತು ಅವರದು.

ಈ ಹಲಸಿನ ಬೀಜದಿಂದ ತಯಾರಿಸಿದ ಗಿಡ ನೆಟ್ಟವರಿಗೆ ಫಸಲು ಬಂದಿದೆಯಾದರೂ ಹೀಗೆ ಎರಡು ಋತುಗಳಲ್ಲಿ ಹಲಸುಗಳಾಗಿಲ್ಲ. ಎರಡು ಗುಣಗಳಿರುವ ಕಾಯಿಗಳು ಸಿಕ್ಕಿಲ್ಲ. ಶರ್ಮ ಹೇಳುವ ಪ್ರಕಾರ ಇದೇ ಮರದ ಕೊಂಬೆಗಳನ್ನು ಬೇರೆ ಹಲಸಿನ ಮಾತೃಗಿಡಕ್ಕೆ ಕಸಿ ಕಟ್ಟಿದರೆ ಮಾತ್ರ ಇಂತಹ ಗುಣವನ್ನು ಪಡೆಯಲು ಸಾಧ್ಯ. ಏನೇ ಆದರೂ ಎರಡು ಸಲ ಫಸಲು ಕೊಡುವ ಅಪರೂಪದ ಹಲಸು ಕಸಿಯಾಗಿ ಬಹುಜನರ ಭೂಮಿಯಲ್ಲಿ ಬೆಳೆಯಬೇಕು ಎಂದು ಆಶಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT