ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ಪೊಲೀಸರ ವಜಾ: ಮೂವರ ಬಂಧನ

ಉತ್ತರಪ್ರದೇಶ: ದಲಿತ ಬಾಲಕಿಯರ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ
Last Updated 30 ಮೇ 2014, 20:06 IST
ಅಕ್ಷರ ಗಾತ್ರ

ಬದಾಯೂಂ/ ಅಜಂಗಡ (ಉತ್ತರಪ್ರದೇಶ) (ಪಿಟಿಐ): ಬದಾಯೂಂ ಜಿಲ್ಲೆಯಲ್ಲಿ ಇಬ್ಬರು  ಸೋದರ ಸಂಬಂಧಿ ದಲಿತ ಬಾಲಕಿಯರ ಮೇಲೆ ಎಸ­ಗಿದ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕೊಲೆ ಪ್ರಕರಣ ಸಂಬಂಧ ಇಬ್ಬರು ಪೊಲೀಸ್‌ ಕಾನ್‌ಸ್ಟೆಬಲ್‌­ಗಳನ್ನು ಉತ್ತರ ಪ್ರದೇಶ ಸರ್ಕಾರ ಸೇವೆಯಿಂದ ವಜಾ ಮಾಡಿದೆ.  ಪ್ರಕರಣದ ವಿಚಾರ­ಣೆಗೆ ಸರ್ಕಾರವು ತ್ವರಿತಗತಿ ನ್ಯಾಯಾಲಯ ಸ್ಥಾಪಿ­ಸುವ ಭರವಸೆ ನೀಡಿದೆ.ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಮಧ್ಯೆ, ಅಜಂಗಡ ಜಿಲ್ಲೆಯಲ್ಲಿ ಹದಿಹರೆಯದ ಬಾಲಕಿ ಮೇಲೆ ನಾಲ್ವರು ದುರುಳರು ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ನೇಣು ಹಾಕಿದ ಸ್ಥಿತಿಯಲ್ಲಿ ಶವ: ಅತ್ಯಾಚಾರಕ್ಕೆ ಗುರಿಯಾದ ದಲಿತ ಬಾಲಕಿಯರ  ಶವಗಳು ಮರಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ದೊರೆತಿವೆ.

ಕಾನ್‌ಸ್ಟೆಬಲ್‌ಗಳಾದ ಛತ್ರಪಾಲ್‌ ಯಾದವ್‌ ಮತ್ತು ಸರ್ವೇಶ್‌ ಯಾದವ್‌ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಸರ್ವೇಶ್‌ ಯಾದವ್‌ನ ಮೂವರು ಸೋದರರು ಈ ಪ್ರಕರಣದ ಆರೋಪಿಗಳಾಗಿದ್ದು, ಇವರಲ್ಲಿ ಸರ್ವೇಶ್‌, ಪಪ್ಪು ಯಾದವ್‌ ಮತ್ತು ಅವಧೇಶ್‌ ಯಾದವ್‌ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಸೋದರ ಉರ್ವೇಶ್‌ ಯಾದವ್‌ ಮತ್ತು ಸೇವೆಯಿಂದ ವಜಾ ಮಾಡಲಾ­ಗಿರುವ ಕಾನ್‌ಸ್ಟೆಬಲ್‌ ಛತ್ರಪಾಲ್‌ ಯಾದವ್‌ ಹಾಗೂ ಇತರ ಇಬ್ಬರು ಆರೋಪಿಗಳು ನಾಪತ್ತೆ­ಯಾ­-ಗಿ­ದ್ದಾರೆ ಎಂದು  ಬದಾಯೂಂ ಎಸ್ಪಿ ಅತುಲ್‌ ಕುಮಾರ್‌ ಸಕ್ಸೇನಾ ಹೇಳಿದ್ದಾರೆ.

ಸರ್ವೇಶ್‌ ಮತ್ತು ಛತ್ರಪಾಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 120ಬಿ (ಕ್ರಿಮಿನಲ್‌ ಸಂಚು), ಸರ್ವೇಶ್‌ನ ಮೂವರು ಸೋದರರು ಹಾಗೂ ಇತರ ಇಬ್ಬರ ವಿರುದ್ಧ 302 (ಕೊಲೆ) ಮತ್ತು 376 (ಅತ್ಯಾಚಾರ) ಕಲಂ ಅನ್ವಯ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಿನ್ನೆಲೆ: ಸೋದರ ಸಂಬಂಧಿಗಳಾದ 14 ಮತ್ತು 15 ವರ್ಷ ವಯಸ್ಸಿನ  ಸೋದರಿ­ಯರು ಮೇ 27ರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಇವರ ಶವಗಳು ಉಷಾಯಿತ್‌ ಗ್ರಾಮದಲ್ಲಿನ ಮಾವಿನ ಮರದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಮರುದಿನ ಬೆಳಿಗ್ಗೆ ಪತ್ತೆಯಾದವು. ಇದಕ್ಕೆ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ ಪೊಲೀಸ್‌ ಸಿಬ್ಬಂದಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊ­ಳ್ಳಲಾಯಿತು.

ಮಹಿಳಾ ಆಯೋಗ ಭೇಟಿ: ದಲಿತ  ಸಹೋದರಿಯರ ಮೇಲೆ  ಸಾಮೂಹಿಕ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ನಡೆದ ಬದಾಯೂ ಗ್ರಾಮಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ತಂಡ ಶುಕ್ರವಾರ ಭೇಟಿ ನೀಡಿತು.

ಅಖಿಲೇಶ್‌ ಆದೇಶ: ದಲಿತ ಸಹೋದರಿಯರ ಮೇಲಿನ ಅತ್ಯಾಚಾರ ಪ್ರಕರಣವನ್ನು ಅತ್ಯಂತ ದುರದೃಷ್ಟಕರ ಎಂದಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌, ತಕ್ಷಣ ಅತ್ಯಾಚಾರಿಗಳನ್ನು ಬಂಧಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಇದೇ ವೇಳೆ ಅವರು ಸಂತ್ರಸ್ತ ಕುಟುಂಬದ ಸದಸ್ಯರಿಗೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಮತ್ತೊಂದು ಪ್ರಕರಣ
ಅಜಂಗಡ (ಪಿಟಿಐ):
ಉತ್ತರ ಪ್ರದೇಶದ ಅಜಂಗಡ ಜಿಲ್ಲೆಯ ಸರೈಮೀರ್‌ ಎಂಬಲ್ಲಿ 17 ವರ್ಷದ ದಲಿತ ಬಾಲಕಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.

‘ಘಟನೆ ಸಂಬಂಧ ದೂರು ದಾಖಲಿಸಿಕೊಳ್ಳ­ಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ’ ಎಂದು  ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಸಂಕಷ್ಟ  ಘಟಕ ಸ್ಥಾಪನೆ– ಮೇನಕಾ
ದಲಿತ ಸೋದರಿಯರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಇಂತಹ ದುಷ್ಕೃತ್ಯಗಳಿಗೆ ಸಂಬಂಧಿಸಿದಂತೆ ಶೀಘ್ರ ಕ್ರಮಕ್ಕಾಗಿ ‘ಅತ್ಯಾಚಾರ ಸಂಕಷ್ಟ ಘಟಕ’ ಸ್ಥಾಪಿಸುವುದಾಗಿ ಹೇಳಿದ್ದಾರೆ. ಈ ಸೋದರಿಯರ ಕುಟುಂಬ ಸದಸ್ಯರ ಪ್ರಕರಣದ ಸಿಬಿಐ ತನಿಖೆಗೆ ಕೋರಿದರೆ ಅದಕ್ಕಾಗಿ ಶಿಫಾರಸು ಮಾಡುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT