ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮಾಮರು, ಮೌಲ್ವಿಗಳಿಂದ ‘ಇಂದ್ರಧನುಷ್‌’ ಜಾಗೃತಿ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಲಸಿಕೆ ಕಾರ್ಯಕ್ರಮ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬದಾಯೂ/ಬರೇಲಿ (ಐಎಎನ್‌ಎಸ್‌): ‘ಇಂದ್ರಧನುಷ್‌’ ಯೋಜನೆಯಡಿ ಸ್ಥಾಪಿಸಲಾದ  ವಿಶೇಷ ಲಸಿಕೆ ಶಿಬಿರಕ್ಕೆ ಹತ್ತು ತಿಂಗಳ ಮುದ್ದು ಮಗಳು ಝೊಯಾಳನ್ನು ಕರೆದೊಯ್ಯಲು ಶಬನಾ ಬೇಗಂಳಿಗೆ ಸಾಧ್ಯವೇ ಇರಲಿಲ್ಲ.

ಮಕ್ಕಳಿಗೆ ಲಸಿಕೆ ಹಾಕಿಸುವುದೇ ಮಾರಕ ಎಂಬ ತಪ್ಪು ತಿಳಿವಳಿಕೆಗೆ ಅವಳ ಕುಟುಂಬ ಸಹ ಹೊರತಾಗಿರಲಿಲ್ಲ. ‘ಮಕ್ಕಳಿಗೆ ಲಸಿಕೆ ಹಾಕಿಸಿದಲ್ಲಿ ಜ್ವರ ಬರುತ್ತದೆ. ಇಂಜೆಕ್ಷನ್‌ ಚುಚ್ಚಿದ ಜಾಗದಲ್ಲಿ ಊತ ಬರುತ್ತದೆ ಎಂಬ ಭಯದಿಂದ ನನ್ನ ಅತ್ತೆ– ಮಾವ ಮಗಳಿಗೆ ಲಸಿಕೆ ಹಾಕಲು ಬಿಡುತ್ತಿರಲಿಲ್ಲ’ ಎನ್ನುತ್ತಾಳೆ ಶಬನಾ. 

ಬದಾಯೂ ಹಾಗೂ ಅಲ್ಲಿಂದ 45 ಕಿ.ಮೀ. ದೂರದಲ್ಲಿರುವ ಬರೇಲಿಯಲ್ಲಿ ಸಾಕಷ್ಟು ಮುಸ್ಲಿಂ ಮಹಿಳೆಯರು ಶಬನಾಳ ಸಮಸ್ಯೆಯನ್ನೇ ಎದುರಿಸುತ್ತಿದ್ದರು. ಪುಟ್ಟ ಮಕ್ಕಳಿಗೆ ಲಸಿಕೆ ಹಾಕಿಸಲು ಮನೆಯ ಹಿರಿಯರು ಹಿಂದೇಟು ಹಾಕುವ ಕಾರಣ ಈ ಅಮ್ಮಂದಿರೆಲ್ಲ ಕೈಕಟ್ಟಿ ಕೂರುವಂತಾಗಿತ್ತು. ಈ ಎರಡೂ ಜಿಲ್ಲೆಗಳಲ್ಲಿ ಮುಸ್ಲಿಮರು ಸಾಕಷ್ಟು  ಸಂಖ್ಯೆಯಲ್ಲಿದ್ದಾರೆ.

ಆದರೆ, ಈ ಬಾರಿ ‘ಇಂದ್ರಧನುಷ್‌’  ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಪಣ ತೊಟ್ಟಿದ್ದ   ಉತ್ತರ ಪ್ರದೇಶದ ಆರೋಗ್ಯ ಇಲಾಖೆ, ಯುನಿಸೆಫ್‌ ಸಹಯೋಗದಲ್ಲಿ ಬೇರೆಯದೇ ಆದ ಕಾರ್ಯತಂತ್ರ ಹೂಡಿತು.

ಮುಸ್ಲಿಂ ಸಮುದಾಯ ದವರಲ್ಲಿ ಲಸಿಕೆ ಕಾರ್ಯಕ್ರಮದ ಬಗ್ಗೆ ಅರಿವುಮೂಡಿಸಲು ಧಾರ್ಮಿಕ ನಾಯಕರಾದ ಇಮಾಮರು, ಮೌಲ್ವಿಗಳು ಹಾಗೂ ಮದರಸಾದ ಶಿಕ್ಷಕರನ್ನೇ  ನಿಯೋಜಿಸಿತು.

ಜ್ವರ ಬರುತ್ತದೆ ಎಂಬ ತಪ್ಪು ತಿಳಿವಳಿಕೆ ಹಾಗೂ ಲಸಿಕೆ ಹಾಕಿಸಿದಲ್ಲಿ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತದೆ ಎಂಬ ಮೂಢ ನಂಬಿಕೆಯಿಂದ ಜನ ಮಕ್ಕಳನ್ನು ಶಿಬಿರಕ್ಕೆ ಕರೆ ತರಲು ಹಿಂಜರಿಯುತ್ತಿದ್ದರು. ಈಗ ಮಸೀದಿಗಳಲ್ಲಿ ಮೌಲ್ವಿಗಳು ‘ಇಂದ್ರಧನುಷ್‌’ ಕಾರ್ಯಕ್ರಮದ ಬಗ್ಗೆ ಹೇಳುತ್ತಿದ್ದಾರೆ ಎನ್ನುತ್ತಾರೆ ಬದಾಯೂ ಜಿಲ್ಲೆಯ ಮುಖ್ಯ ವೈದ್ಯಕೀಯ ಅಧಿಕಾರಿ ದೀಪಕ್‌ ಸಕ್ಸೇನಾ.

ಉತ್ತರ ಪ್ರದೇಶದ 44 ಜಿಲ್ಲೆಗಳಲ್ಲಿ ಬಹುತೇಕ ಮಕ್ಕಳಿಗೆ ಲಸಿಕೆ ಹಾಕದೇ ಇರುವುದರಿಂದ ಈ ಜಿಲ್ಲೆಗಳಲ್ಲಿ  ‘ಇಂದ್ರಧನುಷ್‌’ ಯೋಜನೆ ಆರಂಭಿಸಲಾಗುತ್ತಿದೆ. ಬದಾಯೂ ಹಾಗೂ ಬರೇಲಿ ನಗರಗಳನ್ನು ಮೊದಲ ಹಂತದಲ್ಲಿ ಆಯ್ದುಕೊಳ್ಳಲಾಗಿದೆ.

ಮಕ್ಕಳಿಗೆ ಲಸಿಕೆ ಹಾಕಿಸಲು ಒಪ್ಪದ ಕುಟುಂಬಗಳನ್ನು ‘ಎಕ್ಸ್‌ಆರ್‌’ ಕುಟುಂಬಗಳು ಎಂದು ಕರೆಯಲಾಗುತ್ತದೆ.  ಇಂತಹ ಕುಟುಂಬಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಆದರೆ, ಅವರ ಮನವೊಲಿಸಲು ಹರಸಾಹಸ ಮಾಡಬೇಕಾಗುತ್ತದೆ ಎನ್ನುತ್ತಾರೆ ಬರೇಲಿಯ ಸಮುದಾಯ ಕಾರ್ಯಕರ್ತೆ ಸಯ್ಯದಾ ರೂಹಿ.

ಅನಕ್ಷರಸ್ಥ ಮುಸ್ಲಿಂ ಕುಟುಂಬಗಳು ಮಕ್ಕಳಿಗೆ ಲಸಿಕೆ ಹಾಕಿಸಲು ಹಿಂದೆಮುಂದೆ ನೋಡುತ್ತವೆ. ಧಾರ್ಮಿಕ ನಾಯಕರ ಮೂಲಕ ಇಂತಹ ತಪ್ಪು ತಿಳಿವಳಿಕೆ ಹೋಗಲಾಡಿಸಲು ಯತ್ನಿಸುತ್ತಿದ್ದೇವೆ ಎಂದು ಹೇಳುತ್ತಾರೆ ಬರೇಲಿ ಜಿಲ್ಲಾ ಸಮನ್ವಯಕಾರರಾಗಿರುವ ವಕೀಲ್‌ ಅಹ್ಮದ್‌ ಅನ್ಸಾರಿ.

ಆರೋಗ್ಯ ಇಲಾಖೆ ಹಾಗೂ ಕಾರ್ಯಕರ್ತರ ಸತತ ಪ್ರಯತ್ನದಿಂದಾಗಿ ಈಗ ಬರೇಲಿ, ಬದಾಯೂಗಳಲ್ಲಿ ಶಬನಾ ತರಹದ ಮಹಿಳೆಯರು ತಮ್ಮ ಮಕ್ಕಳನ್ನು ಲಸಿಕೆ ಶಿಬಿರಗಳಿಗೆ ಕರೆ ತರುತ್ತಿದ್ದಾರೆ.

ಅಂಥವರಲ್ಲಿ ಜರೀನಾ ಖಾನಂ ಒಬ್ಬರು. ಎರಡು ವರ್ಷಗಳ ಹಿಂದೆ ಪಕ್ಕದ ಮನೆಯ ಮಗು ದಡಾರದಿಂದ ಸತ್ತಿದ್ದನ್ನು ಕಣ್ಣಾರೆ ಕಂಡ ಜರೀನಾ, ಈಗ ತಮ್ಮ ಎರಡು ತಿಂಗಳ ಮೊಮ್ಮಗಳು ಅಲೀಸಾಳನ್ನು ‘ಇಂದ್ರಧನುಷ್‌’ ಶಿಬಿರಕ್ಕೆ ಕರೆತಂದು ‘ಬಿಸಿಜಿ’, ‘ಡಿಪಿಟಿ’ ಹಾಗೂ ‘ಹೆಪಟೈಟಿಸ್‌ ಬಿ‘ ಲಸಿಕೆ ಹಾಕಿಸಿದ್ದಾರೆ.

ಈ ಸಮಸ್ಯೆಯ ಹೊರತಾಗಿ ಬದಾಯೂ ಹಾಗೂ ಬರೇಲಿಗಳಲ್ಲಿ ನುರಿತ ವೈದ್ಯ ಸಿಬ್ಬಂದಿ, ಕಾರ್ಯಕರ್ತರ ಕೊರತೆಯೂ ಇದೆ.

ಇಂದ್ರಧನುಷ್‌ ಯೋಜನೆ
2020ರ ಒಳಗೆ ಎರಡು ವರ್ಷದೊಳಗಿನ  ಎಲ್ಲ ಮಕ್ಕಳಿಗೂ ರೋಗ ನಿರೋಧಕ ಲಸಿಕೆ  ಹಾಕಿಸುವುದು ‘ಇಂದ್ರಧನುಷ್‌’ ಯೋಜನೆಯ ಗುರಿ. ಡಿಫ್ತಿರಿಯಾ, ನಾಯಿ ಕೆಮ್ಮು, ಧನುರ್ವಾಯು, ಪೋಲಿಯೊ, ಕ್ಷಯ, ದಡಾರ ಮತ್ತು ‘ಹೆಪಟೈಟಿಸ್‌ ಬಿ’ ಇತ್ಯಾದಿ ಏಳು ರೋಗಗಳಿಗೆ ಲಸಿಕೆ ಹಾಕಲಾಗುತ್ತದೆ.

ಆರೋಗ್ಯ ಇಲಾಖೆ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಶೇ 65ರಷ್ಟು ಮಕ್ಕಳಿಗೆ  ಮಾತ್ರ ಹುಟ್ಟಿದ ಒಂದು ವರ್ಷದೊಳಗೆ ಲಸಿಕೆ ಹಾಕಿಸಲಾಗುತ್ತದೆ. ಪ್ರತಿ ಮೂರು ಮಕ್ಕಳಲ್ಲಿ ಒಬ್ಬರಿಗೆ  ಲಸಿಕೆ ಹಾಕಿಸಲಾಗುವುದಿಲ್ಲ್ಲ ಅಥವಾ ಭಾಗಶಃ ಲಸಿಕೆ ಹಾಕಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT