ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮಾ! ಇಲ್ಲಿ ಪುರುಷರಿಗೆ ಕೆಲಸವಿಲ್ಲ...

Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

ಮಾರುಕಟ್ಟೆ ಹೆಣ್ಣುಮಕ್ಕಳನ್ನು ಗ್ರಾಹಕರ ದೃಷ್ಟಿಯಲ್ಲಿ ನೋಡುವುದು ಹೆಚ್ಚು. ಆದರೆ, ಕೇವಲ ಮಹಿಳೆಯರೇ ನಡೆಸುವ ಬೃಹತ್  ಮಾರುಕಟ್ಟೆಯೊಂದು ಇಂಫಾಲದಲ್ಲಿದೆ. ‘ಖೈರಾಮ್ ಬಂದ್ ಬಜಾರ್’ ಅಥವಾ ‘ಇಮಾ ಮಾರುಕಟ್ಟೆ’ ಅದರ ಹೆಸರು. ‘ಇಮಾ’ ಅಂದರೆ ಮಣಿಪುರಿ ಭಾಷೆಯಲ್ಲಿ ತಾಯಿ ಎಂದರ್ಥ.

ಇದು ತಾಯಂದಿರ ಮಾರುಕಟ್ಟೆ. ಇಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರು ತಂತಮ್ಮ ಅಂಗಡಿ ಮುಂಗಟ್ಟುಗಳನ್ನು ನಡೆಸುತ್ತಿದ್ದಾರೆ. ಇದು ಸಂಪೂರ್ಣ ಸ್ತ್ರೀ ಜಗತ್ತು.
ನಾನು ಮಣಿಪುರಕ್ಕೆ ಹೋಗುವಾಗ ಆ ಮಾರುಕಟ್ಟೆಯನ್ನೊಮ್ಮೆ ನೋಡಬೇಕು, ಅಲ್ಲಿಯ ಮಹಿಳೆಯರನ್ನು ಮಾತಾಡಿಸಬೇಕೆಂಬುದು ಆಸೆಪಟ್ಟಿದ್ದೆ. ನಾವು ಇಂಫಾಲ ತಲುಪಿದಾಗ ರಾತ್ರಿ ಆರು ಗಂಟೆಯಾಗಿತ್ತು. ಈಶಾನ್ಯ ರಾಜ್ಯಗಳಲ್ಲಿ ಬಹುಬೇಗನೇ ಅಂಗಡಿಗಳನ್ನು ಮುಚ್ಚುತ್ತಾರೆ. ರಾತ್ರಿ ಏಳು ಗಂಟೆ ಸುಮಾರಿಗೆ ಇಮಾ ಮಾರುಕಟ್ಟೆ ತಲುಪುವ ವೇಳೆಗಾಗಲೇ, ಅಲ್ಲಿ ಒಂದೆರಡು ಅಂಗಡಿಗಳು ಮುಚ್ಚುವ ಸಿದ್ಧತೆಯಲ್ಲಿದ್ದುದನ್ನು ಬಿಟ್ಟರೆ ಇಡೀ ಮಾರುಕಟ್ಟೆ ಮುಚ್ಚಿತ್ತು.

ಆದರೆ, ಮಾರುಕಟ್ಟೆಯ ಪಕ್ಕದ ಮುಖ್ಯರಸ್ತೆಯಲ್ಲಿ ಲಾಟೀನು ಮತ್ತು ಮೇಣದಬತ್ತಿಯ ಬೆಳಕಿನಲ್ಲಿ ನೂರಾರು ಹೆಂಗಸರು ಸೊಪ್ಪು–ತರಕಾರಿ ಮತ್ತು ತಾಜಾ ಮೀನುಗಳನ್ನು ಮಾರಾಟ ಮಾಡುತ್ತಿದ್ದರು. ಹತ್ತಾರು ಮಹಿಳೆಯರನ್ನು ಮಾತಾಡಿಸಿದೆ. ಅವರಿಗೋ– ಮಣಿಪುರಿ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಹಿಂದಿ ಅರ್ಥವಾಗುತ್ತದೆ. ಮಾತನಾಡಲು ಬಾರದು. ಕೊನೆಗೆ ಕೈ ಬಾಯಿ ಅಲ್ಲಾಡಿಸುತ್ತಾ ನಗುತ್ತಾ ಮಾತನಾಡಿದೆ. ಅವರೂ ಅದನ್ನೇ ಮಾಡಿದರು. ಕೊನೆಗೊಮ್ಮೆ ಒಬ್ಬಳು ತಾಯಿ ಎಷ್ಟು ಚೆನ್ನಾಗಿ ನಕ್ಕು ನನ್ನನ್ನು ಅಪ್ಪಿಕೊಂಡಳೆಂದರೆ, ಅವರ ಎಲ್ಲಾ ಭಾವನೆಗಳು ನನ್ನೊಳಗೆ ಹರಿದು ನಾವಿಬ್ಬರೂ ಒಂದೇ ಅನ್ನಿಸಿಬಿಟ್ಟಿತು.

ರಾಣಿ ಬರೆದ ಮುನ್ನುಡಿ
ಮರುದಿನ ಮುಂಜಾನೆಯೇ ಇಮಾ ಮಾರುಕಟ್ಟೆಗೆ ಸೈಕಲ್ ರಿಕ್ಷಾದಲ್ಲಿ ಒಬ್ಬಳೇ ಹೋದೆ (ಅಲ್ಲಿ ಬೆಳಗ್ಗೆ ಐದಕ್ಕೆಲ್ಲ ಸೂರ್ಯೋದಯವಾಗಿರುತ್ತದೆ). ಹೆಣ್ಣುಮಕ್ಕಳ ಅದ್ಭುತ ಜಗತ್ತು ನನ್ನೊಳಗೆ ಹಲವು ನೆನಪುಗಳನ್ನು ಮಿಡಿಸತೊಡಗಿತು.

ಮಣಿಪುರದ ಸ್ಥಳೀಯ ಮಹಿಳೆಯರಿಗಾಗಿ ಅಲ್ಲಿನ ರಾಣಿಯೊಬ್ಬಳು ಆರಂಭಿಸಿದ ಮಾರುಕಟ್ಟೆ ಅದು. ಅಂದು ರಾಣಿಯೊಬ್ಬಳು ಹಾಕಿಕೊಟ್ಟ ಸ್ವಾವಲಂಬನೆಯ ಹಾದಿ, ಇಂದು ನಾಲ್ಕು ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಬದುಕಿನ ಹಾದಿಯನ್ನು ತೆರೆದಿದೆ. ಈ ಮಾರುಕಟ್ಟೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಪ್ರಖ್ಯಾತಿ ಗಳಿಸಿದೆ. ಯಾಕೆಂದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳಾ ವ್ಯಾಪಾರಿಗಳಿರುವ ಇನ್ನೊಂದು ಮಾರುಕಟ್ಟೆ ಜಗತ್ತಿನಲ್ಲಿಲ್ಲ. ಇಲ್ಲಿ ನಮಗೆ ದೈನಂದಿನ ಬದುಕಿಗೆ ಏನು ಬೇಕೋ ಅದೆಲ್ಲವೂ ದೊರಕುತ್ತದೆ.

ಈ ಮಾರುಕಟ್ಟೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಪದಾಧಿಕಾರಿಗಳಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆದು, ಅಧ್ಯಕ್ಷರು ಮತ್ತು ಕಾರ್ಯದರ್ಶಿಯ ಆಯ್ಕೆ ನಡೆಯುತ್ತದೆ. ಇಲ್ಲಿನ ಮಹಿಳೆಯರು ಎದೆ ತಟ್ಟಿಕೊಂಡು ಹೇಳುತ್ತಾರೆ– ‘ಇಲ್ಲಿ ನಾವು ನಾವೇ ಆಗಿದ್ದೇವೆ’. ‘ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ’ ಎಂದು ಹೇಳಿದರೂ, ಅಲ್ಲಿ ಐದಾರು ಜನ ಜನ ಪುರುಷ ಪೋರ್ಟರ್‌ಗಳಿದ್ದಾರೆ. ತಾಯಂದಿರೇ, ಅಂದರೆ ನಲವತ್ತು ಮೀರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣದಿಂದಾಗಿ ಅವರ ಸರಕು ಸರಂಜಾಮುಗಳನ್ನು ಹತ್ತಿಳಿಸಲು ಈ ಪೋರ್ಟರ್‌ಗಳು ನೆರವಾಗುತ್ತಾರೆ. ‘ಯಾಕೆ ಪುರುಷರಿಗೆ ಪ್ರವೇಶ ಬೇಡ’ ಅಂತ ಪ್ರಶ್ನಿಸಿದರೆ, ಅವರು ತಮ್ಮ ಅಂಗಡಿಯ ಚಿಕ್ಕ ಜಾಗವನ್ನು ತೋರಿಸುತ್ತಾರೆ. ‘ಇಲ್ಲಿ ಪಕ್ಕದಲ್ಲಿ ಮಹಿಳೆಯರೇ ಕೂತು ಅಂಗಡಿ ನಡೆಸಿದರೆ ನಮಗೇನೂ ಅನ್ನಿಸುವುದಿಲ್ಲ. ಆ ಜಾಗಕ್ಕೆ ಪುರುಷ ಬಂದಾಗ ಮುಜುಗರವಾಗುತ್ತದೆ’ ಎನ್ನುತ್ತಾರೆ. ನಾವು ಇದಕ್ಕೆ ‘ಕಂಫರ್ಟಬಲ್’ ಅನ್ನುವ ಪದ ಬಳಸುತ್ತೇವೆ ಅಲ್ಲವೇ?

ಬೆಂಗಳೂರಿನ ಬಗ್ಗೆ ಪ್ರೀತಿ
ಮಣಿಪುರ ನಮ್ಮ ಬೆಂಗಳೂರಿನಿಂದ 3416 ಕಿ.ಮೀ. ದೂರದಲ್ಲಿದೆ. ಸುತ್ತ ನೀಲಿ ಬಣ್ಣದ ಪರ್ವತ ಶ್ರೇಣಿಗಳಿಂದ ಸುತ್ತುವರಿದ ರಮಣೀಯ ಪ್ರದೇಶವಿದು. ಈ ರಾಜ್ಯದ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇದನ್ನು ‘ಭಾರತದ ಆಭರಣ’ ಎಂದು ನೆಹರೂ ಕರೆದಿದ್ದರು. ಸರಿ ಸುಮಾರು ಇಷ್ಟೇ ದೂರದಲ್ಲಿರುವ ಇನ್ನುಳಿದ ಏಳು ಈಶಾನ್ಯ ರಾಜ್ಯಗಳನ್ನು ಸುತ್ತಿಬಂದಿದ್ದೇನೆ. ವಿದ್ಯಾಭ್ಯಾಸಕ್ಕಾಗಿ. ಹೊಟ್ಟೆಪಾಡಿಗಾಗಿ ಅಥವಾ ಅಲ್ಲಿನ ಜಂಜಾಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿಯೋ ಅಲ್ಲಿನ ಜನರು ಗಣನೀಯ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಕೆಲವರು ‘ಚಿಂಕಿ’ಗಳೆಂದು ಕರೆದು ಜನಾಂಗೀಯ (ರೇಸಿಸ್ಟ್) ಅವಹೇಳನ ಮಾಡುವುದನ್ನು ಕಂಡಿದ್ದೇನೆ. ಇಲ್ಲಿದ್ದು ತಾಯ್ನಾಡಿಗೆ ಹಿಂದಿರುಗಿದ್ದ ಹಲವರನ್ನು ನಾನಲ್ಲಿ ಭೇಟಿಯಾಗಿದ್ದೇನೆ. ಅವರು ಬೆಂಗಳೂರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ನಾವಿಳಿದುಕೊಂಡಿದ್ದ ಹೋಟೇಲ್‌ನ ಮಾಲೀಕರು ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದರಂತೆ. ಅವರ ಮಗ ಇಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿದವನು. ಇಬ್ಬರೂ ನಮ್ಮನ್ನು ಆದರದಿಂದ ಸ್ವಾಗತಿಸಿ, ಕನ್ನಡದಲ್ಲಿಯೇ ವ್ಯವಹರಿಸಿದ್ದರು. ಇಂಫಾಲದಲ್ಲಿ ಸಿಕ್ಕಿದ ಒಬ್ಬರು, 2008ರ ‘ಬಿಎಂಟಿಸಿ ಬಸ್ ಪಾಸ್’ ಅನ್ನು ಇನ್ನೂ ಜತನವಾಗಿ ಇಟ್ಟುಕೊಂಡಿದ್ದನ್ನು ತೋರಿಸಿದರು. ಕನ್ನಡದಲ್ಲಿಯೇ ಬೆಂಗಳೂರಿನ ಬಗ್ಗೆ ಅಭಿಮಾನದಿಂದ ಮಾತಾಡಿದರು.

ಒಂದು ರಾಜ್ಯವೆಂದರೆ ಅಲ್ಲಿ ಹಲವಾರು ಸಮಸ್ಯೆಗಳು, ತಿಕ್ಕಾಟಗಳು ಇರುತ್ತವೆ. ಚಲನಶೀಲವಾದ ಸಮಾಜವೊಂದು ಅಂತರಿಕವಾಗಿ ಒಳಗೊಳಗೆ ಬೇಯುತ್ತಲೂ ಅರಳುತ್ತಲೂ ಇರುತ್ತದೆ. ಕೇವಲ ಇಪ್ಪತ್ತೇಳು ಲಕ್ಷ ಜನಸಂಖ್ಯೆಯಿರುವ, ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಮಣಿಪುರ ತನ್ನೊಳಗೆ ಸಾಕಷ್ಟು ಬೇಗುದಿ ಇಟ್ಟುಕೊಂಡಿದೆ!.

ಮಣಿಪುರ ಮಾತ್ರವಲ್ಲ, ಈಶಾನ್ಯ ರಾಜ್ಯಗಳಲ್ಲಿ ಎಲ್ಲಿ ತಿರುಗಾಡಿದರೂ ಅಲ್ಲೆಲ್ಲ ಅತ್ಯಂತ ಕ್ರಿಯಾಶೀಲರಾದ, ಲವಲವಿಕೆಯ ಮಹಿಳೆಯರು ಕಾಣಸಿಗುತ್ತಾರೆ. ಅವರ ಬೆನ್ನಮೇಲೆ ಹೊರೆಯಿದೆ, ಅದು ತಪ್ಪಿದರೆ ಕೂಸಿದೆ. ಸಂಸಾರದ ಭಾರಕ್ಕೆ ಅವರ ನಗು ಮಂಕಾಗಿಲ್ಲ. ಸ್ತ್ರೀತನಕ್ಕೆ ಧಕ್ಕೆ ಬಂದಾಗ ಇದೇ ಮಹಿಳೆ ಬೀದಿಗಿಳಿದು ಹೋರಾಡುತ್ತಾಳೆ. ‘ನಿಮ್ಮ ಮನೆಯ ಗಂಡಸರು ಎಲ್ಲಿ’ ಎಂದು ಪ್ರಶ್ನಿಸಿದರೆ– ‘ಅವರು ಸೈನ್ಯದಲ್ಲಿರುತ್ತಾರೆ ಅಥವಾ ದೂರದ ನಾಡಿನಲ್ಲೆಲ್ಲೋ ಸೆಕ್ಯೂರಿಟಿ ಗಾರ್ಡ್ ಆಗಿರುತ್ತಾರೆ. ಇಲ್ಲವಾದರೆ ದೂರದೂರುಗಳಲ್ಲಿ ಟ್ಯಾಕ್ಸಿ ಓಡಿಸುತ್ತಿರುತ್ತಾರೆ. ಮೂರೂ ಅಲ್ಲವಾದವರು ಸೋಮಾರಿಗಳಾಗಿರುತ್ತಾರೆ; ಕುಡುಕರಾಗಿರುತ್ತಾರೆ’ ಎಂದು ಅಲ್ಲಿನ ಮಹಿಳೆಯರು ಮುಗ್ಧವಾಗಿ ನಗುತ್ತಾರೆ.

ಬಂಡಾಯ ಮತ್ತು ದೌರ್ಜನ್ಯ
ಈ ರಾಜ್ಯಗಳಲ್ಲಿ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರೇ ಹೆಚ್ಚು. ಬಹುತೇಕರು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ದೈಹಿಕವಾಗಿ ಇತರ ಭಾರತೀಯರಿಗಿಂತ ಭಿನ್ನವಾಗಿ ಕಾಣುತ್ತಾರೆ. ಭಾರತದ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡಾಗ ಇವರು ನಮ್ಮ ದೇಶಕ್ಕೆ ಸೇರಿದವರೇ ಅಥವಾ ವಿದೇಶಿಯರೇ ಎಂಬ ಸಂಶಯ ಮೂಡುತ್ತದೆ. ಈ ಭಾವನೆ ಈಶಾನ್ಯೇತರ ರಾಜ್ಯಗಳಲ್ಲಿರುವುದು ಅವರಿಗೂ ಗೊತ್ತಿದೆ. ಹಾಗಾಗಿಯೇ ಸ್ವಾತಂತ್ರ್ಯಾನಂತರ ಅವರು ಪ್ರತ್ಯೇಕತೆಯ ಕೂಗು ಹಾಕಿದರು.

ಸಂಘಟನೆಗಳನ್ನು ಕಟ್ಟಿಕೊಂಡರು. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ಒಳಗೊಂಡಂತೆ ‘ಗ್ರೇಟರ್ ನಾಗಾಲ್ಯಾಂಡ್’ ಎಂಬ ಪ್ರತ್ಯೇಕ ರಾಷ್ಟ್ರದ ಕನಸ್ಸನ್ನು ಕಟ್ಟಿಕೊಂಡು ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಳನ್ನು ಹೂಡುತ್ತಿದ್ದಾರೆ. ನೆರೆಯ ದೇಶಗಳು ಬಂಡುಕೋರ ಸಂಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ, ಶಸ್ತಾಸ್ತ್ರಗಳನ್ನು ಪೂರೈಸುತ್ತಿವೆ. ಇದನ್ನೆಲ್ಲ ಮನಗಂಡ ಭಾರತ ಸರ್ಕಾರವು 1958ರಲ್ಲಿ– ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಿಗಳ ಕಾಯ್ದೆ’ ಜಾರಿಗೆ ತಂದಿತು. ಇದರ ಬಲದಿಂದ ಸೇನೆ ಈ ರಾಜ್ಯಗಳಲ್ಲಿ ಬಂಡುಕೋರರ ದಮನಕ್ಕೆ ಕಂಕಣಬದ್ಧವಾಗಿದೆ. ಆದರೆ ಸೇನೆ ಕೆಲವೊಮ್ಮೆ ತನಗಿಷ್ಟ ಬಂದಂತೆ ವರ್ತಿಸುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿದೆ.
 

ಮಣಿಪುರದ ಅಪ್ರತಿಮ ಮಹಿಳೆ

ಮಣಿಪುರದ ಮಹಿಳೆ ಸಮತೂಕದ ಮಹಿಳೆ. ವ್ಯಕ್ತಿಯಾಗಿ ಲಂಡನ್ ಒಲಂಪಿಕ್ಸ್‌ನಲ್ಲಿ ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟ ಮೇರಿ ಕೋಮ್ ಇದ್ದಾಳೆ. ಶಕ್ತಿಯಾಗಿ ಹದಿನಾರು ವರ್ಷಗಳಿಂದ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಇದ್ದಾಳೆ. ಇವರಿಬ್ಬರೂ ನಮ್ಮ ನಾಡಿನ ಹೆಮ್ಮೆಯ ಪುತ್ರಿಯರು.


ಯಕ್ಷಗಾನದಲ್ಲಿ ‘ಸಲಾಂ ತಕ್ಕೋ ಮಣಿಪುರ ದೊರೆಯೇ...’ ಹಾಡು ಜನಪ್ರಿಯ. ಹೀಗೆ ಹಾಸ್ಯಗಾರನಿಂದ ಬಾಗಿ ನಮಿಸಿಕೊಳ್ಳುವಾತ ಮಣಿಪುರದರಸು ಬಬ್ರುವಾಹನ. ವೀರಾಧಿವೀರ ಬಬ್ರುವಾಹನನ್ನು ರೂಪಿಸಿದ ಮಣಿಪುರದ ಅರಸಿ ಚಿತ್ರಾಂಗದೆಯ ಸ್ಥಾನ ಯಾವುದು? ಪುರಾಣದ ಪಾತ್ರವನ್ನು ಈ ಆಧುನಿಕ ಕಾಲಘಟ್ಟದಲ್ಲಿ ನಿಂತು ನೋಡುವುದರ ಔಚಿತ್ಯವೇನು ಎಂದು ಪ್ರಶ್ನಿಸುವುದಾದರೆ... ಅದಕ್ಕೆ ಉತ್ತರ ಹುಡುಕುತ್ತ ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಬಹುದು.

ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಪರಮಾಧಿಕಾರವಿದೆ. ದೇಶದ್ರೋಹಿಗಳು, ಸಮಾಜ ಘಾತುಕರು, ಉಗ್ರಗಾಮಿಗಳೆಂದು ಶಂಕೆ ಉಂಟಾದಲ್ಲಿ– ಎಲ್ಲಿಗೆ ಬೇಕಾದರೂ ನುಗ್ಗಿ, ವಾರಂಟ್ ಇಲ್ಲದೆ ಅವರನ್ನು ವಿಚಾರಣೆಯ ನೆಪದಲ್ಲಿ ಸೇನೆ ವಶಕ್ಕೆ ಪಡೆದುಕೊಳ್ಳಬಲ್ಲುದು. ಶಂಕಿತರನ್ನು ಗುಂಡು ಹೊಡೆದು ಕೊಂದರೂ ಅದನ್ನು ಯಾರೂ ಪ್ರಶ್ನಿಸಲಾರರು. 2000 ಇಸವಿಯ ನ. 2ರಂದು, ಇಂಫಾಲದಿಂದ 15 ಕಿ.ಮೀ. ದೂರದಲ್ಲಿರುವ ಮಾಲೋಮ್ ಎಂಬ ಊರಿನಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದವರ ಮೇಲೆ ದಾಳಿ ನಡೆಸಿತು. ಹತ್ತು ನಾಗರೀಕರು ಸತ್ತರು. ಇವರಲ್ಲಿ ಅರವತ್ತು ವರ್ಷದ ಮಹಿಳೆಯೊಬ್ಬಳ ಜೊತೆ, ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ಹದಿನೆಂಟು ವರ್ಷದ ಸಿಮನ್ ಚಂದ್ರಮಣಿ ಎಂಬಾಕೆಯೂ ಸಾವಿಗೀಡಾಗಿದ್ದಳು.

ಮಾಲೋಮ್ ಘಟನೆ ಐರೋಮ್ ಶರ್ಮಿಳಾ ಎಂಬ ಯುವತಿಯನ್ನು ಅಲ್ಲಾಡಿಸಿಬಿಟ್ಟಿತು. 28 ವರ್ಷದ ಆಕೆ ಸ್ಥಳೀಯ ಮಟ್ಟದ ಮಾನವ ಹಕ್ಕುಗಳ ಶಾಂತಿ ಅಂದೋಲನದಲ್ಲಿ ಸಕ್ರಿಯಳಾಗಿದ್ದಳು. ಭಾರತೀಯ ಸೇನೆ ನಾಗರೀಕರ, ಅದರಲ್ಲೂ ಮಹಿಳೆಯರ ಮೇಲೆ ನಡೆಸುತ್ತಿದ್ದ ಲೈಂಗಿಕ ಅತ್ಯಾಚಾರವನ್ನು ಗಮನಿಸುತ್ತಲೇ ಬಂದಿದ್ದಳು. ಆಕೆ ಮೈಮೇಲೆ ಭೂತ ಸಂಚಾರವಾದಂತೆ ಥಟ್ಟನೆ ಎದ್ದು ನಿಂತವಳೇ, ತನ್ನ ತಾಯಿಗೆ ನಮಸ್ಕರಿಸಿ– ‘ಅಮ್ಮಾ ಮನುಷ್ಯತ್ವವನ್ನು ಉಳಿಸುವ ಕಾರ್ಯಕ್ಕೆ ಹೊರಡುತ್ತಿದ್ದೇನೆ’ ಎಂದವಳೇ ಮಾಲೋಮ್‌ಗೆ ಬಂದು ನಾಗರೀಕರು ಬಲಿಯಾದ ಜಾಗದಲ್ಲಿ ಆಮರಣಾಂತ ಉಪವಾಸ ಕುಳಿತಳು. ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ಕೊಡಮಾಡಿರುವ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ ಹಿಂಪಡೆಯಬೇಕೆಂಬುದು ಆಕೆಯ ಬೇಡಿಕೆಯಾಗಿತ್ತು. ಇದಾಗಿ ಹದಿನಾರು ವರ್ಷಗಳು ಉರುಳಿವೆ. ಉಪವಾಸ ಇಂದಿಗೂ ಮುಂದುವರಿದಿದೆ.

ಅಲ್ಲಿಂದೀಚೆಗೆ ಆಕೆ ಕನ್ನಡಿ ನೋಡಿಲ್ಲ. ತಲೆ ಬಾಚಿಲ್ಲ. ತನ್ನದೇ ಕೈಗಳಿಂದ ಊಟ ಮಾಡಿಲ್ಲ. ಆಕೆಯ ಆಹಾರ ನಿರಾಕರಣೆಯನ್ನು ಸರ್ಕಾರ ‘ಆತ್ಮಹತ್ಯೆಯ ಪ್ರಯತ್ನ’ ಎಂದು ಕೇಸು ಜಡಿದು ಜೈಲಿನಲ್ಲಿಟ್ಟು, ಮೂಗಿನ ಮೂಲಕ ಬಲವಂತವಾಗಿ ಆಹಾರ ನೀಡುತ್ತಿದೆ. ಆ ಅಪರಾಧಕ್ಕೆ ಒಂದು ವರ್ಷ ಸಜೆಯಿದೆ. ಹಾಗಾಗಿ ಆಕೆಯನ್ನು ಮೊನ್ನೆ ಮಾರ್ಚ್ 28ಕ್ಕೆ ಬಿಡುಗಡೆ ಮಾಡಿದರೂ ಮತ್ತೆ ಕೇಸು ಹಾಕಿ ಆಸ್ಪತ್ರೆಗೆ ತಳ್ಳಿದೆ.

ಮತ್ತೊಂದು ಘಟನೆ ನೋಡಿ. 2004ರ ಜುಲೈ 10ರಂದು ಭಾರತೀಯ ಭೂ ಸೇನೆಯ ಭಾಗವಾಗಿರುವ ‘ಅಸ್ಸಾಂ ರೈಫಲ್ಸ್’ನ ಯೋಧರು ಮಧ್ಯರಾತ್ರಿ ಮನೆಯೊಂದಕ್ಕೆ ನುಗ್ಗಿ 32 ವಯಸ್ಸಿನ ತಂಗ್ ಜಮ್ ಮನೋರಮಾ ದೇವಿ ಎಂಬ ಮಹಿಳೆಯನ್ನು ಬೆದರಿಸಿ ತಮ್ಮೊಡನೆ ಕರೆದುಕೊಂಡು ಹೋದರು. ಆಕೆ ಬಂಡುಕೋರರ ಜೊತೆ ನಂಟು ಹೊಂದಿದ್ದಾಳೆಯೆಂಬುದು ಅವರ ಆಪಾದನೆಯಾಗಿತ್ತು. ಆಕೆ ಮತ್ತೆ ಕಂಡದ್ದು ಮರುದಿನ ಬೆಳಿಗ್ಗೆ ಹೆಣವಾಗಿ. ಆಕೆಯ ಮೇಲೆ ಗುಂಡಿನ ಮಳೆಗೆರೆಯಲಾಗಿತ್ತು. ದೇಹವನ್ನು ಚಾಕುವಿನಿಂದ ಇರಿಯಲಾಗಿತ್ತು, ಗುಪ್ತಾಂಗಕ್ಕೆ ಗುಂಡು ಹೊಡೆದು ಛಿದ್ರಗೊಳಿಸಲಾಗಿತ್ತು.

ಮನೋರಮಾಳ ಭೀಕರ ಹತ್ಯೆ ಮಣಿಪುರದ ಜನತೆಯನ್ನು ಬೆಚ್ಚಿಬೀಳಿಸಿತು. ತಾಯಂದಿರು ಆತಂಕಗೊಂಡರು. ಈ ಘಟನೆ ನಡೆದ ಐದೇ ದಿನದಲ್ಲಿ ಅಂದರೆ ಜುಲೈ 15ರಂದು ಹತ್ತಾರು ಮಹಿಳೆಯರು ಸಂಪೂರ್ಣ ಬೆತ್ತಲಾಗಿ, ‘ಅಸ್ಸಾಂ ರೈಫಲ್ಸ್’ನ 17ನೇ ಬೆಟಲಿಯನ್ ಕೇಂದ್ರ ಸ್ಥಾನದೆದುರು ಪ್ರತಿಭಟನೆ ನಡೆಸಿದರು. ತಂತಮ್ಮ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಆ ತಾಯಂದಿರು ಆತಂಕಿತರಾಗಿದ್ದರು. ‘ಭಾರತೀಯ ಸೈನಿಕರೇ, ಬನ್ನಿ ನಮ್ಮನ್ನು ರೇಪ್ ಮಾಡಿ’ ಎಂಬ ಬರಹಗಳ ಫಲಕಗಳು ಅವರ ಕೈಗಳಲ್ಲಿದ್ದುವು. ಸೈನಿಕರ ಬಂದೂಕಿನ ನಳಿಗೆಯೆದುರಲ್ಲಿ ಅವರ ಬೆತ್ತಲೇ ದೇಹವೇ ಆಯುಧವಾದಾಗ, ಸಮಸ್ತ ಬಾರತವೇ ಈಶಾನ್ಯ ರಾಜ್ಯಗಳೆಡೆಗೆ ತಲ್ಲಣದ ನೋಟ ಬೀರಿತು.

ಮೇಲಿನ ಘಟನೆಗಳಿಗೆ ರಾಜಕೀಯ ಆಯಾಮಗಳಿವೆ. ಯುದ್ಧದಾಹಿ ಪುರುಷನ ಮಹಾತ್ವಾಂಕ್ಷೆ–ಕ್ರೌರ್ಯ ಸ್ತ್ರೀಸಂವೇದನೆಗಳ ಮೇಲೆ ನಡೆಸುತ್ತಿರುವ ದಾಳಿಯ ಪ್ರಯತ್ನ ಇಲ್ಲಿದೆ. ಆ ದಾಳಿಯನ್ನು ಮಹಿಳೆಯರು ತಾಯ್ತನದ ಅಂತಃಕರಣದಿಂದಲೇ ಎದುರಿಸಿದ್ದು ವಿಶೇಷ. ಅದರ ಪರಿಣಾಮ ಏನಾಯ್ತು? ತಾಯಂದಿರ ಪ್ರತಿಭಟನೆಯ ಕಾರಣದಿಂದಾಗಿ ‘ಅಸ್ಸಾಂ ರೈಫಲ್ಸ್’ನ 17ನೇ ತುಕಡಿಯನ್ನು ಕೇಂದ್ರ ಸರ್ಕಾರ ಅಲ್ಲಿಂದ ಹಿಂದಕ್ಕೆ ಕರೆಸಿಕೊಂಡಿತು. ಸಶಸ್ತ್ರಪಡೆಗಳ ವಿಶೇಷಾಧಿಕಾರಗಳ ಕಾಯ್ದೆಯ ಮರು ಪರಿಶೀಲನೆಗಾಗಿ ಜೀವನ ರೆಡ್ಡಿ ಆಯೋಗವನ್ನು ನೇಮಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT