ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಲು ಬೇಕು ಸೂರು

ನಿಮಗಿದು ತಿಳಿದಿರಲಿ
Last Updated 1 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕುಟುಂಬದವರಿಂದಲೇ ಉಂಟಾಗುವ ಕಿರುಕುಳ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಡುವುದು ಬಲು ಕಷ್ಟ. ಏಕೆಂದರೆ ಮಹಿಳೆ ದೌರ್ಜನ್ಯದ ವಿರುದ್ಧ ಯಾವುದೇ ಹೋರಾಟವನ್ನು ಪ್ರಾರಂಭಿಸಿದ ಕ್ಷಣದಿಂದ ಅವಳು ತನ್ನ ಮನೆಯವರೆಲ್ಲರ ವಿರೋಧವನ್ನು ಕಟ್ಟಿಕೊಳ್ಳುತ್ತಾಳೆ. ಅದರ ಪರಿಣಾಮವೆಂದರೆ ಮನೆಯವರು ಅವಳನ್ನು ಮನೆಯಿಂದ ಹೊರಗಟ್ಟುತ್ತಾರೆ.

ಕಾನೂನಿನ ಪ್ರಕಾರ, ಗಂಡ ಹೆಂಡತಿಯನ್ನು ಮನೆಯಿಂದ ಹಾಗೆ ಹೊರದೂಡುವಂತಿಲ್ಲ. ಹಾಗೊಂದು ವೇಳೆ ಹೊರದೂಡಿದರೆ ಅವಳು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ಅಧಿನಿಯಮದ ಅಡಿಯಲ್ಲಿ ನ್ಯಾಯಾಲಯದಿಂದ ರಕ್ಷಣಾ ಆದೇಶವನ್ನು ಪಡೆಯಬಹುದು ಮತ್ತು ತನ್ನ ವಾಸದ ಹಕ್ಕನ್ನು ಚಲಾಯಿಸಬಹುದು. ಆದರೆ ಅದೆಲ್ಲ ಆಗುವವರೆಗೆ ಆಕೆ ಎಲ್ಲಿರಬೇಕು? ಈ ಪರಿಣಾಮಗಳಿಗೆ ಹೆದರಿಕೊಂಡು ಬಹುತೇಕ ಮಹಿಳೆಯರು ತಾವು ದೌರ್ಜನ್ಯಕ್ಕೆ ಒಳಗಾಗುತ್ತಿದ್ದರೂ ತುಟಿ ಕಚ್ಚಿಕೊಂಡು ಅನುಭವಿಸುತ್ತಾರೆ.

ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇರುವುದು ನಮ್ಮ ಕಾನೂನುಗಳಲ್ಲಿ. ಈ ಕಾನೂನುಗಳ ಸಹಾಯವನ್ನು ಪಡೆದುಕೊಳ್ಳಬೇಕಾದರೆ ಮೊದಲು ಕಾನೂನಿನ ಅರಿವು ಇರಬೇಕು ಮತ್ತು ಅಂಥ ನೆರವನ್ನು ಪಡೆಯಲು ಯಾರನ್ನು ಸಂಪರ್ಕಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ, ಮಕ್ಕಳ ಅಭಿವೃದ್ಧಿ ಯೋಜನಾ ಕಚೇರಿಗಳಲ್ಲಿ ಕರ್ನಾಟಕ ಸರ್ಕಾರದ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಉಚಿತ ಕಾನೂನು ನೆರವು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ, ನುರಿತ ವಕೀಲರು ಪ್ರತಿ ಬುಧವಾರ ಮತ್ತು ಶನಿವಾರಗಳಂದು ಉಚಿತ ಕಾನೂನು ನೆರವು ನೀಡುತ್ತಾರೆ.  ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗಿ, ಆಶ್ರಯದ ನೆರವಿರುವ ಹೆಣ್ಣು ಮಕ್ಕಳಿಗಾಗಿ, ರಾಜ್ಯದಲ್ಲಿ, ಸ್ವಾಧಾರ ಕೇಂದ್ರಗಳನ್ನು, ಅಲ್ಪ ಕಾಲಿಕ ಆಶ್ರಯ ಧಾಮಗಳನ್ನು ಮತ್ತು ಸಾಂತ್ವನ ಕೇಂದ್ರಗಳನ್ನು ಸಹ ಸ್ಥಾಪಿಸಿದೆ. ಇದಲ್ಲದೆ, 116 ಸ್ವಯಂ ಸೇವಾ ಸಂಸ್ಥೆಗಳನ್ನು ‘ಸೇವಾ ನೀಡಿಕೆ ಸಂಸ್ಥೆಗಳು’ ಎಂದು ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ.

ಈ ಸಂಸ್ಥೆಗಳು, ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗಿರುವವರಿಗೆ, ಕಾನೂನು, ವೈದ್ಯಕೀಯ ಮತ್ತು ಇತರ ಸೇವೆಗಳನ್ನು ಒದಗಿಸುತ್ತವೆ. ಈ ಸಂಸ್ಥೆಗಳು ರಾಜ್ಯಾದ್ಯಂತ ಹರಡಿದ್ದು ನಿಮಗೆ ಹತ್ತಿರದ ಕೇಂದ್ರದಲ್ಲಿ ಈ ಸೇವೆಯನ್ನು ಪಡೆಯಬಹುದು. ಇವುಗಳ ವಿವರಗಳು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ದೊರೆಯುತ್ತವೆ. ಈ ಎಲ್ಲ ಕ್ರಮಗಳನ್ನೂ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ನೀಡುವ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು.

ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತವೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಒಳಗಾಗಿರುವವರಿಗೆ ನೆರವು ನೀಡುತ್ತವೆ. ಅದರ ಜೊತೆಗೆ, ಅವರು ಸ್ವಾವಲಂಬಿಗಳಾಗುವುದಕ್ಕೆ ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಅಗತ್ಯವಾದ ತರಬೇತಿಯನ್ನೂ ನೀಡುತ್ತವೆ.

ಯಾವುದೇ ಬಗೆಯ ಶೋಷಣೆಯನ್ನು ಎದುರಿಸಲು ಮಹಿಳೆಗೆ ಬೇಕಾಗಿರುವುದು ಆತ್ಮ ಶಕ್ತಿ ಮತ್ತು ಆತ್ಮ ವಿಶ್ವಾಸ. ಇವೆರಡೂ ಉಂಟಾಗುವುದು ಶಿಕ್ಷಣದಿಂದ. ಆದ್ದರಿಂದ ಮಹಿಳೆಯರು ಶಿಕ್ಷಣ ಪಡೆಯುವುದು ಬಹಳ ಮುಖ್ಕ. ಈ ದೃಷ್ಟಿಯಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇಂದು ಅತಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಯಾವುದೇ ಬಗೆಯ ದೌರ್ಜನ್ಯದ ವಿರುದ್ಧ ಮಹಿಳೆ ಪೊಲೀಸು ಠಾಣೆಗೆ ದೂರು ನೀಡಿದರೆ ಅಥವಾ ಮಹಿಳಾ ಸಹಾಯವಾಣಿಯ ನೆರವು ಪಡೆದರೆ ಅವಳನ್ನು ದೂರಬೇಡಿ ಮತ್ತು ಆ ಕಾರಣಕ್ಕಾಗಿ ಅವಳನ್ನು ಮತ್ತಷ್ಟು ಹಿಂಸಿಸಬೇಡಿ. ಅವಳು ಹಾಗೆ ದೂರು ನೀಡಲು ಕಾರಣವೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಇದನ್ನು ದೌರ್ಜನ್ಯ ನಡೆಸುವ ಮಹಿಳೆಯರೂ ಅರಿತುಕೊಳ್ಳಬೇಕು ಮತ್ತು ಇತರರಿಗೆ ತಿಳಿಸಿಕೊಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT