ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ ಬಂದರು ಅಭಿವೃದ್ಧಿಗೆ ನೆರವು

ಮಧ್ಯ ಏಷ್ಯಾದಲ್ಲಿ ಚೀನಾ ಪ್ರಭಾವ ತಗ್ಗಿಸಲು ಭಾರತದ ಕಾರ್ಯತಂತ್ರ
Last Updated 23 ಮೇ 2016, 20:15 IST
ಅಕ್ಷರ ಗಾತ್ರ

ಟೆಹರಾನ್‌ (ಪಿಟಿಐ): ಪಾಕಿಸ್ತಾನದ ಗ್ವಾದರ್‌ನಲ್ಲಿ ಚೀನಾ ಅಭಿವೃದ್ಧಿಪಡಿಸುತ್ತಿರುವ ಬಂದರು ಯೋಜನೆಗೆ ತಿರುಗೇಟು ನೀಡಿರುವ ಭಾರತ, ಇರಾನ್‌ನ ಚಬಾಹರ್‌ ಬಂದರು ಅಭಿವೃದ್ಧಿಪಡಿಸಲು ಆ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಚಬಾಹರ್‌ ಬಂದರು ಅಭಿವೃದ್ಧಿಯಾದರೆ ಭಾರತಕ್ಕೆ  ಪಾಕಿಸ್ತಾನದ ಭೂಭಾಗ ಪ್ರವೇಶಿಸದೆಯೇ ಆಫ್ಘಾನಿಸ್ತಾನ, ಪೂರ್ವ ಯೂರೋಪ್‌ ಮತ್ತು ಕಾಮನ್‌ವೆಲ್ತ್‌ ರಾಷ್ಟ್ರಗಳ ಜತೆ ಸಂಪರ್ಕ ಸಾಧಿಸಬಹುದು. ಈ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿಯೇ ಗ್ವಾದರ್‌ ಬಂದರು ಅಭಿವೃದ್ಧಿಯಲ್ಲಿ ಭಾರಿ ಹೂಡಿಕೆ ಮಾಡಿದೆ.

ಚಬಾಹರ್‌ ಬಂದರು ಅಭಿವೃದ್ಧಿ ಮೂಲಕ ಭಾರತ ಎರಡೆರಡು ಪ್ರಯೋಜನ ಪಡೆದುಕೊಳ್ಳಲಿದೆ. ಪಾಕಿಸ್ತಾನದ ಬಂದರುಗಳ ಮೂಲಕ ಈ ಪ್ರದೇಶದ ದೇಶಗಳ ಜತೆ ಮುಕ್ತ ವ್ಯಾಪಾರಕ್ಕೆ ಈಗ ಅವಕಾಶ ಇಲ್ಲ. ಚಬಾಹರ್‌ ಬಂದರು ಅಭಿವೃದ್ಧಿಯಾದರೆ ಈ ತೊಡಕು ನಿವಾರಣೆಯಾಗಲಿದೆ.

ಹಾಗೆಯೇ ಚೀನಾ ಅಭಿವೃದ್ಧಿಪಡಿಸುತ್ತಿರುವ ಗ್ವಾದರ್‌ನಿಂದ 72 ಕಿ.ಮೀ ದೂರದಲ್ಲಿರುವ ಚಬಾಹರ್‌ ಬಂದರು ಭಾರತದ ಹೂಡಿಕೆ ಮೂಲಕ ಅಭಿವೃದ್ಧಿಯಾದರೆ ಈ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ತಡೆಗಟ್ಟಲು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರ ಇದೆ.

12 ಒಪ್ಪಂದ: ಭಾರತ ಮತ್ತು ಇರಾನ್‌ ನಡುವೆ ಚಬಾಹರ್‌ ಬಂದರು ಅಭಿವೃದ್ಧಿ ಸೇರಿದಂತೆ 12 ಮಹತ್ವದ ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಲಾಗಿದೆ.

ಈ ಒಪ್ಪಂದದಂತೆ ಚಬಾಹರ್‌ ಬಂದರು ಅಭಿವೃದ್ಧಿ ಯೋಜನೆಯಲ್ಲಿ ಭಾರತವು  50 ಕೋಟಿ ಅಮೆರಿಕನ್‌ ಡಾಲರ್‌ (ಅಂದಾಜು ₹ 3,300 ಕೋಟಿ) ಹೂಡಿಕೆ ಮಾಡಲಿದೆ.

‘ಚಬಾಹರ್‌ ಬಂದರು ಮೂಲಕ ಮುಕ್ತ ವ್ಯಾಪಾರ ಸಾಧ್ಯವಾದರೆ ಸುಮಾರು ₹ ಒಂದು ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಸಾಧ್ಯ’ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದರು.

ಇದಲ್ಲದೆ, ಭಯೋತ್ಪಾದನೆ  ವಿರುದ್ಧ ಜಂಟಿ ಹೋರಾಟಕ್ಕೆ ಭಾರತ ಮತ್ತು ಇರಾನ್‌ ಪಣ ತೊಟ್ಟಿದ್ದು  ವ್ಯಾಪಾರ, ಇಂಧನ, ವಿಜ್ಞಾನ, ಸಂಸ್ಕೃತಿ, ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ನಿರ್ಧರಿಸಿವೆ.

‘ಚಬಾಹರ್ ಒಪ್ಪಂದವು ಎರಡೂ ದೇಶಗಳ ನಡುವಣ ಸಹಕಾರದ ಹೊಸ ಅಧ್ಯಾಯ ಎನಿಸಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ: ಭಾರತ, ಇರಾನ್‌ ಮತ್ತು ಆಫ್ಘಾನಿಸ್ತಾನ ಇದೇ ವೇಳೆ ಸಾರಿಗೆ ಮತ್ತು ಸರಕು ಸಾಗಣೆ ಕಾರಿಡಾರ್‌ ಒಪ್ಪಂದಕ್ಕೆ ಸಹಿ ಹಾಕಿದವು. ಮೋದಿ ಮತ್ತು ರೌಹಾನಿ ಅಲ್ಲದೆ ಆಫ್ಘನ್‌ ಅಧ್ಯಕ್ಷ ಅಶ್ರಫ್‌ ಘನಿ ಹಾಜರಿದ್ದರು.

‘ಈ ಒಪ್ಪಂದದ ಮೂಲಕ ಹೊಸ ಅಧ್ಯಾಯ ಆರಂಭವಾಗಿದೆ’ ಎಂದ ಮೋದಿ, ‘ಮೂರು ರಾಷ್ಟ್ರಗಳ ಜನರಿಗೆ ಮಾತ್ರವಲ್ಲದೆ,  ಈ ವಲಯದ ಎಲ್ಲರಿಗೂ ಇದು ಐತಿಹಾಸಿಕ ಕ್ಷಣ’ ಎಂದರು.

‘ಮೂರೂ ದೇಶಗಳಿಗೆ ಪರಸ್ಪರ ಸಂಪರ್ಕ ಸಾಧಿಸಲು ಈ ಒಪ್ಪಂದ ಹೊಸ ಅವಕಾಶ ಕಲ್ಪಿಸಿಕೊಟ್ಟಿದೆ. ಈ ವಲಯದಲ್ಲಿ ಶಾಂತಿ, ಸ್ಥಿರತೆ ನೆಲೆಸಲು ಭಾರತ ಮತ್ತು ಇರಾನ್‌ ಬದ್ಧವಾಗಿದೆ’ ಎಂದರು.

500 ಕಿ.ಮೀ ರೈಲು ಮಾರ್ಗ: ಚಬಾಹರ್‌ ಬಂದರಿನಿಂದ ಇರಾನ್‌ನ  ಜಹೆದಾನ್ ನಗರಕ್ಕೆ ಸಂಪರ್ಕ ಕಲ್ಪಿಸಲು  500 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಪ್ಪಂದ ನಡೆದಿದೆ. ಸರ್ಕಾರಿ ಸ್ವಾಮ್ಯದ ಇರ್ಕಾನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಕಂಪೆನಿ ಈ ಮಾರ್ಗ ನಿರ್ಮಿಸಲಿದೆ. ಭಾರತದ ನ್ಯಾಷನಲ್‌ ಅಲ್ಯುಮಿನಿಯಂ ಕಂಪೆನಿ ಇರಾನಿನ ಕಂಪೆನಿಯ ಜಂಟಿ ಸಹಭಾಗಿತ್ವದಲ್ಲಿ ಅಲ್ಯುಮಿನಿಯಂ ಘಟಕ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಕೂಡಾ ಸಹಿ ಹಾಕಲಾಗಿದೆ.

ಮುಖ್ಯಾಂಶಗಳು

* ಚಬಾಹರ್‌ ಬಂದರು ಅಭಿವೃದ್ಧಿಯಾದರೆ ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಆಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಕಾಮನ್‌ವೆಲ್ತ್‌ ದೇಶಗಳ ಜತೆ ಭಾರತಕ್ಕೆ ಸಂಪರ್ಕ ಸಾಧ್ಯ

* ಚೀನಾ ನೆರವಿನೊಂದಿಗೆ ಪಾಕಿಸ್ತಾನವು ಗ್ವಾದರ್ ಬಂದರು ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ತಿರುಗೇಟು ನೀಡಲು
ಭಾರತಕ್ಕೆ ಅವಕಾಶ
* ಈ ಎರಡು ಬಂದರುಗಳ ನಡುವಣ ಅಂತರ 72 ಕಿ.ಮೀ ಮಾತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT