ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲೂ ಶ್ವೇತಭವನ

Last Updated 18 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಅಮೆರಿಕಾದ ರಾಜಧಾನಿ ವಾಷಿಂಗ್‌ಟನ್‌ ಡಿ.ಸಿ.ಯಲ್ಲಿರುವ ವೈಟ್‌ಹೌಸ್‌ ಅನ್ನು ನೋಡಬೇಕೆಂಬ ಆಸೆ ಎಂಥವರಿಗೂ ಇರುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಅದೇ ವೈಟ್‌ಹೌಸ್‌ನ ಪ್ರತಿರೂಪ ನಿಮಗೆ ನೋಡಲು ಸಿಕ್ಕರೆ ಹೇಗಿರುತ್ತದೆ.
ಎಕ್ಸ್‌ಪೋ ನೇಷನ್ಸ್‌ ಸಂಸ್ಥೆ ವೈಟ್‌ಹೌಸ್‌ನ ಪ್ರತಿಕೃತಿಯನ್ನು ಸಾರ್ವಜನಿಕರ ಪ್ರದರ್ಶನಕ್ಕಾಗಿ ನಿರ್ಮಿಸಿದೆ. 80 ಅಡಿ ಅಗಲ ಹಾಗೂ 25 ಅಡಿ ಎತ್ತರದ ಈ ಪ್ರತಿಕೃತಿಯನ್ನು ಪ್ಲೈವುಡ್‌, ಥರ್ಮಾಕೋಲ್‌ ಹಾಗೂ ಮರದ ದಿಮ್ಮಿಗಳ ಸಹಾಯದಿಂದ ನಿರ್ಮಿಸಲಾಗಿದೆ.

ಎಕ್ಸ್‌ಪೋ ನೇಷನ್‌ ಸಂಸ್ಥೆ ದಕ್ಷಿಣ ಭಾರತದಲ್ಲಿ ಸಾರ್ವಜನಿಕರಿಗಾಗಿ ವಸ್ತು ಪ್ರದರ್ಶನಗಳನ್ನು ಆಯೋಜಿಸುತ್ತದೆ. ವರ್ಷದಲ್ಲಿ 3–4 ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಇದರಲ್ಲಿ ದೊಡ್ಡವರು, ಮಕ್ಕಳು ಸೇರಿದಂತೆ ಇಡೀ ಕುಟುಂಬದವರು ಒಂದೆಡೆ ಸೇರಿ ಸಂತೋಷದಿಂದ ಕಾಲ ಕಳೆಯುವ ಕಾರ್ಯಕ್ರಗಳನ್ನು ಹಮ್ಮಿಕೊಳ್ಳುತ್ತದೆ. ಈ ಬಾರಿ ನಗರದ ಜನರಿಗೆ ಏನಾದರೂ ಹೊಸತನ್ನು ನೀಡುವ ಸಲುವಾಗಿ ಈ ವೈಟ್‌ಹೌಸ್‌ ಪರಿಕಲ್ಪನೆಯನ್ನು ಪರಿಚಯಿಸಿದೆ. 

ನಗರದ ವಿದ್ಯಾರಣ್ಯಪುರದಲ್ಲಿರುವ ಆಟದ ಮೈದಾನದಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪ್ರತಿಕೃತಿಯನ್ನು ನಿರ್ಮಿಸಲು ಸುಮಾರು ರೂ. 8ರಿಂದ ರೂ. 9 ಲಕ್ಷ ವೆಚ್ಚವಾಗಿದೆ. ನಗರದಲ್ಲಿ ಮೊಟ್ಟಮೊದಲ ಬಾರಿಗೆ ಇದನ್ನು ನಿರ್ಮಿಸಲು ಮುಂಬೈನಿಂದ ಕಲಾವಿದರನ್ನು ಕರೆಸಲಾಗಿತ್ತು.

ಮುಂಬೈನಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಸೆಟ್‌ ನಿರ್ಮಿಸುವ ಸುಮಾರು 30 ಕಲಾವಿದರನ್ನು ನಗರಕ್ಕೆ ಕರೆಸಿಕೊಳ್ಳಲಾಗಿತ್ತು. ಅವರು ಸತತ 10 ದಿನಗಳ ಕಾಲ ಶ್ರಮಿಸಿ ಇದನ್ನು ನಿರ್ಮಿಸಿದ್ದಾರೆ. ಈ ಹಿಂದೆ ಚೆನ್ನೈನಲ್ಲಿಯೂ ಇದೇ ರೀತಿ ವೈಟ್‌ಹೌಸ್‌ ಪ್ರತಿಕೃತಿಯನ್ನು ನಿರ್ಮಿಸಲಾಗಿತ್ತು. ಅಲ್ಲಿ ಜನರ ಪ್ರತಿಕ್ರಿಯೆ ಗಮನಿಸಿದ ನಂತರ ಬೆಂಗಳೂರಿನಲ್ಲಿ ಈಗ ಪ್ರದರ್ಶನಕ್ಕೆ ಇಡಲಾಗಿದೆ ಎನ್ನುತ್ತಾರೆ ಸಂಸ್ಥೆಯ ವ್ಯವಸ್ಥಾಪಕ ಆರ್‌.ಕೃಷ್ಣಮೂರ್ತಿ.

ಕಲಾವಿದರು ಈ ಪ್ರತಿಕೃತಿಯನ್ನು ನಿರ್ಮಿಸಿದ ನಂತರ ಮುಂಬೈಗೆ ಹಿಂತಿರುಗಿದರು. ಪ್ರದರ್ಶನದ ಅವಧಿ ಮುಗಿಯುತ್ತಿದ್ದಂತೆ ಮತ್ತೆ ನಗರಕ್ಕೆ ಬಂದು ಅದನ್ನು ತೆರವುಗೊಳಿಸುತ್ತಾರೆ. ಈ ಮಧ್ಯೆ ಪ್ರದರ್ಶನದ ವೇಳೆ ಪ್ರತಿಕೃತಿಯ ನಿರ್ವಹಣೆಗಾಗಿ ಓರ್ವ ಕಲಾವಿದ ಇಲ್ಲೇ ಇರುತ್ತಾರೆ. ಒಮ್ಮೆ ನಿರ್ಮಿಸಿದ ಪ್ರತಿಕೃತಿಯನ್ನು ತೆರವುಗೊಳಿಸುವಾಗ ಅರ್ಧದಷ್ಟು ವಸ್ತುಗಳು ಹಾಳಾಗಿರುತ್ತವೆ. ಆದ್ದರಿಂದ ಮತ್ತೆ ಅದನ್ನು ನಿರ್ಮಿಸುವಾಗ ಅರ್ಧ ಭಾಗದಷ್ಟು ಹೊಸ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ವಿವರಿಸುತ್ತಾರೆ ಅವರು.

ಸದ್ಯಕ್ಕೆ ಈ ವೈಟ್‌ಹೌಸ್ ವೀಕ್ಷಿಸಲು ಬರುವವವರು ಇಲ್ಲೇ ಶಾಪಿಂಗ್‌ ಹಾಗೂ ಮನರಂಜನಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಹುದು. ಸಾರ್ವಜನಿಕರಿಗಾಗಿ 60 ಮಳಿಗೆಗಳು, ಮಕ್ಕಳಿಗಾಗಿ ನಾನಾ ರೀತಿಯ ಗೇಮ್ಸ್‌ಗಳನ್ನು ವ್ಯವಸ್ಥೆ ಇದೆ. 

ಜನವರಿ 4ರ ವರೆಗೆ ಈ ಪ್ರದರ್ಶನ ಮುಂದುವರೆಯಲಿದ್ದು, ಸಂಜೆ 4.30ರಿಂದ ರಾತ್ರಿ 9ರ ವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ: ಮಕ್ಕಳಿಗೆ– ರೂ. 15, ವಯಸ್ಕರರಿಗೆ–ರೂ. 30. ಸ್ಥಳ: ವಿದ್ಯಾರಣ್ಯಪುರ, ಬಿಬಿಎಂಪಿ ಮೈದಾನ, ಬಾಬಾ ದೇವಾಲಯ ಎದುರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT