ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳುವರಿಯೂ ಹೆಚ್ಚಿದೆ; ಶ್ರಮವೂ ತಗ್ಗಿದೆ

ಕಟಾವಿಗೆ ಹೊಲಕ್ಕಿಳಿದ ಯಂತ್ರ
Last Updated 28 ನವೆಂಬರ್ 2014, 6:07 IST
ಅಕ್ಷರ ಗಾತ್ರ

ವಿಜಯಪುರ: ‘ಗುಳ್ಯಾಳ’ ತಳಿ ಕೈ ಬಿಟ್ಟೀವಿ. ಕೃಷಿ ವಿಜ್ಞಾನಿಗಳು ನೀಡಿದ ಬೀಜ ಬಿತ್ತಿದ್ದೇವೆ. ಅಧಿಕಾರಿ­ಗಳು ಸೂಚಿಸಿದ ಪದ್ಧತಿ ಅನುಸರಿಸಿದ್ದೇವೆ... ಇದರಿಂದ ನಮ್ಮ ಶ್ರಮವೂ ತಗ್ಗಿದೆ. ಮಳೆ ಕೊರತೆಯ ನಡುವೆಯೂ ಇಳುವರಿ ಹೆಚ್ಚಿದೆ ಎಂಬ ಸಂಭ್ರಮ ಬಸವನ ಬಾಗೇವಾಡಿ ತಾಲ್ಲೂಕು ಅಂಗಡಗೇರಿ, ಬೀರಲದಿನ್ನಿ ಗ್ರಾಮಗಳ ರೈತರದ್ದು.

ಇದುವರೆಗೂ ‘ಗುಳ್ಯಾಳ’ ತೊಗರಿ ಬಿತ್ತುತ್ತಿದ್ದೆವು. ಕೆಲ ವರ್ಷ ವ್ಯವಸಾಯದ ಖರ್ಚು ಹುಟ್ಟುತ್ತಿರಲಿಲ್ಲ. ಆದರೂ ಬೇಸಾಯ ನಿಲ್ಲಿಸಲಿಲ್ಲ. ತೊಗರಿ ಹೂವು ಬಿಟ್ಟಾಗಿನಿಂದ ಕೊಯ್ಲಿನ ತನಕ ನಿರಂತರವಾಗಿ ಆಗ್ಗಿಂದಾಗ್ಗೆ ಔಷಧಿ ಸಿಂಪಡಿಸಬೇಕಿತ್ತು.

ಆದರೆ ಇದೀಗ ನಮ್ಮ ಗ್ರಾಮಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ‘ಗುಚ್ಛ ಪ್ರಾತ್ಯಕ್ಷಿಕೆ’ಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ, ಕೃಷಿ ಇಲಾಖೆ­ಯಿಂದ ವಿತರಿಸಿದ `ಟಿಎಸ್-3 ಆರ್’ ತಳಿಯ ತೊಗರಿ ಬೆಳೆದಿದ್ದೇವೆ. ಇದು ನಮ್ಮ ಸಂಭ್ರಮ ಇಮ್ಮಡಿಗೊಳಿಸುವ ಜತೆ ಶ್ರಮವನ್ನು ತಗ್ಗಿಸಿದೆ ಎಂದು ಅಂಗಡಗೇರಿ ಗ್ರಾಮಸ್ಥರು ‘ಪ್ರಜಾವಾಣಿ’ ಬಳಿ ಸಂತಸ ವ್ಯಕ್ತಪಡಿಸಿದರು.

ಅಂಗಡಗೇರಿಯ ರಾಜಕುಮಾರ ದೇಸಾಯಿ 30 ಎಕರೆ ಜಮೀನಿನಲ್ಲಿ, ಮಲ್ಲನಗೌಡ ಬಸನಗೌಡ ಪಾಟೀಲ 20 ಎಕರೆ, ಭೀಮನಗೌಡ ಬಸನಗೌಡ ಪಾಟೀಲ 30 ಎಕರೆ, ಸಿದ್ದನಗೌಡ ಶಾಂತಗೌಡ ಬಿರಾದಾರ 30 ಎಕರೆ ಜಮೀನಿನಲ್ಲಿ ಹೊಸ ತಳಿಯ ತೊಗರಿ ಬಿತ್ತಿದ್ದಾರೆ.

ಇವರಿಗೆ ಗ್ರಾಮದ ಇನ್ನಿತರ ನಾಲ್ಕೈದು ಮಂದಿಯೂ ತಲಾ 20 ಎಕರೆ ಭೂಮಿಯಲ್ಲಿ ಹೊಸ ತಳಿಯ ತೊಗರಿ ಬೆಳೆದು ಸಾಥ್ ನೀಡಿದ್ದು, ಎಲ್ಲರೂ ದುಪ್ಪಟ್ಟು ಇಳುವರಿಯ ಹೊಂಗನಸಿನ ಲೋಕದಲ್ಲಿ ವಿಹರಿಸುತ್ತಿದ್ದಾರೆ.

‘ಈ ಮುಂಚೆ ‘ಗುಳ್ಯಾಳ’ ಎಂಬ ತಳಿಯ ತೊಗರಿ ಬೆಳೆಯುತ್ತಿದ್ದೆವು. ಪ್ರತಿ ಕಾಯಿಯಲ್ಲಿ ಕೇವಲ 3 ಕಾಳು ಇರುತ್ತಿದ್ದವು. ಇದರಿಂದ ಇಳುವರಿಯೂ ಕಡಿಮೆ ಬರುತ್ತಿತ್ತು. ಇದೀಗ ನಮ್ಮೂರಲ್ಲಿ 200 ಎಕರೆಯಲ್ಲಿ ಬಿತ್ತಿರುವ ಹೊಸ ತಳಿಯ ತೊಗರಿಯ ಪ್ರತಿ ಕಾಯಿಯಲ್ಲೂ 5 ಕಾಳುಗಳಿವೆ. ಸಹಜವಾಗಿಯೇ ಇಳುವರಿ ಹೆಚ್ಚಲಿದೆ.

ಗುಳ್ಯಾಳ ತಳಿಯಲ್ಲಿ ಎಕರೆಗೆ 4–5 ಕ್ವಿಂಟಲ್ ಇಳುವರಿ ಸಿಗುತ್ತಿತ್ತು. ಹೊಸ ತಳಿಯಲ್ಲಿ 8–9 ಕ್ವಿಂಟಲ್‌ ಸಿಗುವ ನಿರೀಕ್ಷೆಯಿದೆ. ಮಳೆ ಕೊರತೆ, ಕಾಯಿ ಬಲಿಯುವಾಗ ಮಂಜು ಕವಿಯಿತು. ಹವಾಮಾನ ವೈಪರೀತ್ಯದ ನಡುವೆಯೂ ನಿರೀಕ್ಷೆಯಂತೆ ಬಹುತೇಕರಿಗೆ ಇಳುವರಿ ಸಿಗಲಿದೆ’ ಎಂದು ಹೊಸ ತಳಿಯ ತೊಗರಿ ಬೆಳೆದಿರುವ ಅಂಗಡಗೇರಿಯ ರಾಜಕುಮಾರ ದೇಸಾಯಿ ಮಾಹಿತಿ ನೀಡಿದರು.

ಹೊಸ ತಳಿಯ ಬೆಳೆ ಕಡಿಮೆ ಖರ್ಚಿನದ್ದು. ಬೀಜೋಪಚಾರ ಮಾಡಿ ಬಿತ್ತಿದ್ದ ಬೆಳಿಗೆ ಸಾವಯವ ಗೊಬ್ಬರ ಹಾಕಿದ್ದೇವೆ. ಜಿಪ್ಸಂ, ಜಿಂಕ್, ಬೋರಾನ್, ಎರೆ­ಹುಳು ಗೊಬ್ಬರವೇ ಬೆಳೆಗೆ ಆಧಾರ. ಒಮ್ಮೆಯೂ ರಸಗೊಬ್ಬರ ಬಳಸಿಲ್ಲ. ಎರಡು ಬಾರಿ ಮಾತ್ರ ಔಷಧಿ ಸಿಂಪಡಿಸಲಾಗಿದೆ. ಒಟ್ಟಾರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ ಖರ್ಚು ತಗುಲಿದ್ದು, ಇಳುವರಿ ದುಪ್ಪಟ್ಟು ದೊರಕ­ಲಿದೆ. ಇದರಿಂದ ಶ್ರಮಕ್ಕೆ ತಕ್ಕ ಲಾಭ ದೊರಕಲಿದೆ ಎಂದರು.

ಬಹುಬೆಳೆ ಕಟಾವು ಯಂತ್ರ: ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಇಲಾಖೆ ಕಟಾವಿಗೆ ಯಂತ್ರ ಬಳಕೆ ಪರಿಚಯಿಸಿದೆ. ಈ ಬಹುಬೆಳೆ ಕಟಾವು ಯಂತ್ರದ ಕುರಿತು ಮಾಹಿತಿ ನೀಡಿದ ಖಾಸಗಿ ಕಂಪೆನಿಯ ಪ್ರತಿನಿಧಿ ರಾಜಕುಮಾರ, ನೂತನ ಕಟಾವು ಯಂತ್ರ ಹೆಸರು, ಉದ್ದು, ತೊಗರಿ, ಕಡಲೆ, ಸೋಯಾಬಿನ್, ಸೂರ್ಯಕಾಂತಿ, ಕುಸುಬೆ ಸೇರಿದಂತೆ ಹಲವು ಬೆಳೆಗಳ ಕಟಾವಿಗೆ ಅನುಕೂಲವಾಗಿದೆ ಎಂದರು.

ಒಂದು ಗಂಟೆಗೆ ಒಂದು ಎಕರೆ ಕಟಾವು ಮಾಡುವ ಸಾಮರ್ಥ್ಯ ಹೊಂದಿರುವ ಯಂತ್ರ, ಕಾಳನ್ನು ಸಂಪೂರ್ಣ ಬೇರ್ಪಡಿಸುತ್ತದೆ. ಹೊಲದಿಂ-­ದಲೇ ರೈತರು ನೇರವಾಗಿ ಎಪಿಎಂಸಿಗೆ ಮಾರಾಟಕ್ಕೆ ಕೊಂಡೊಯ್ಯುವ ರೀತಿ ಸ್ವಚ್ಛಗೊಳಿಸುತ್ತದೆ ಎಂದು ಪ್ರಾತ್ಯಕ್ಷಿಕೆ ತೋರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT