ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳೆಗೆ ತಂಪೆರೆದ ವರುಣ

ಆಲಿಕಲ್ಲು ಸಹಿತ ಭಾರಿ ಮಳೆ; 15 ಕಡೆಗಳಲ್ಲಿ ಧರೆಗುರುಳಿದ ಮರಗಳು
Last Updated 6 ಮೇ 2016, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಿಸಿಲ ಬೇಗೆಯಿಂದ ತತ್ತರಿಸಿದ್ದ ನಗರದಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.

ಸಂಜೆ 4 ಗಂಟೆಗೆ ಆರಂಭವಾದ ಮಳೆ 7 ಗಂಟೆಯವರೆಗೆ ಸುರಿಯಿತು. ನಗರದಲ್ಲಿ 44 ಎಂ.ಎಂ. ಮಳೆಯಾಗಿದೆ. ಎಚ್‌.ಎ.ಎಲ್‌ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 15.6 ಎಂ.ಎಂ. ಹಾಗೂ ಕೆಂಪೇಗೌಡ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ 1.6 ಎಂ.ಎಂ. ಮಳೆಯಾಗಿದೆ.ಇದರಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ಎಡೆಬಿಡದೆ ಸುರಿದ ಮಳೆಯಿಂದಾಗಿ ಜಯನಗರದ 9ನೇ ಬ್ಲಾಕ್‌ ಹಾಗೂ 2ನೇ ಬ್ಲಾಕ್‌, ಕೋರಮಂಗಲ, ಹನುಮಂತನಗರದ ಮಾರುತಿ ವೃತ್ತ, ವಿಲ್ಸನ್‌ ಗಾರ್ಡನ್‌, ಬನಶಂಕರಿ,

ಇಂದಿರಾನಗರ, ಶಾಂತಿನಗರ, ಆಡುಗೋಡಿ, ವಿ.ವಿ.ಪುರದ ವಾಸವಿ ಕಾಲೇಜು, ಆರ್‌.ಆರ್‌.ನಗರ, ದೊಮ್ಮಲೂರು, ನಿಮ್ಹಾನ್ಸ್‌ನಿಂದ ತಿಲಕ್‌ನಗರ ರಸ್ತೆ ಸೇರಿದಂತೆ 15 ಕಡೆಗಳಲ್ಲಿ ಮರಗಳು ಧರೆಗುರುಳಿವೆ.

ಜೆ.ಸಿ. ರಸ್ತೆಯಲ್ಲಿ ಮರವೊಂದರ ಕೊಂಬೆಗಳು ಮುರಿದು ಬಿದ್ದಿವೆ. ಕೋರಮಂಗಲ, ಆಡುಗೋಡಿ, ಬೆನ್ನಿಗಾನಹಳ್ಳಿ, ಕಲಾಸಿಪಾಳ್ಯ, ಶಿವಾಜಿನಗರದ ಆರ್‌ಬಿಎಂಎಸ್‌ ಮೈದಾನದ ಬಳಿ ಸಿಂಧಿ ಕಾಲೊನಿ, ಜೆ.ಸಿ.ನಗರದ ಒಂದೇ ಮುಖ್ಯರಸ್ತೆ,

ಇಂದಿರಾನಗರ 80 ಅಡಿ ರಸ್ತೆ ಹಾಗೂ 50 ಅಡಿ ರಸ್ತೆ, ವಿಠಲ್‌ ಮಲ್ಯ ಆಸ್ಪತ್ರೆ, ಶಾಂತಿನಗರದ ಜೋಡಿ ರಸ್ತೆ, ಜೆ.ಸಿ. ರಸ್ತೆ, ಕಮಲಾನಗರದ 6ನೇ ಅಡ್ಡರಸ್ತೆ ಸೇರಿದಂತೆ ಹಲವೆಡೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಮಳೆಯ ಅಬ್ಬರಕ್ಕೆ ಒಳಚರಂಡಿಗಳು,  ಮ್ಯಾನ್‌ ಹೋಲ್‌ಗಳು ತುಂಬಿ ಹರಿದಿದ್ದರಿಂದ ಬಹುತೇಕ ರಸ್ತೆಗಳ ಮೇಲೆ ಮಳೆ ನೀರು ಸಂಗ್ರಹಗೊಂಡಿತ್ತು. ಮಲ್ಯ ಆಸ್ಪತ್ರೆಯ ಬಳಿ ಒಂದು ಕಿಲೋಮೀಟರ್‌ವರೆಗೆ ನೀರು ನಿಂತಿತ್ತು. ಟೆಂಡರ್‌ ಶ್ಯೂರ್‌ ರಸ್ತೆಯಲ್ಲೂ ನೀರು ಹರಿದು ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಯಿತು.

ಬಾಣಸವಾಡಿಯ ರೈಲು ನಿಲ್ದಾಣದಲ್ಲಿ ಮಳೆಯ ನೀರು ಸಂಗ್ರಹವಾಗಿತ್ತು. ಅಲ್ಲದೆ, ಸಂಜೆ 6.30ರಿಂದ ವಿದ್ಯುತ್‌ ಪೂರೈಕೆ ಇಲ್ಲದೆ ರೈಲುಗಳ ಮಾಹಿತಿಯ ಪ್ರಕಟಣೆ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು. ಸಮಸ್ಯೆ ಬಗೆಹರಿಸುವಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೆ, ಕೆ.ಆರ್‌.ಪುರ, ಯಶವಂತಪುರ, ಪೀಣ್ಯ, ಹೆಬ್ಬಾಳ, ಬ್ಯಾಟರಾಯನಪುರ, ಸದಾಶಿವನಗರ, ಹಲಸೂರು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.

ಸಂಚಾರ ದಟ್ಟಣೆ:  ಮಳೆಯಿಂದಾಗಿ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್‌ ರಸ್ತೆ, ಮೆಜೆಸ್ಟಿಕ್, ಹೊಸೂರು ರಸ್ತೆ, ಎಂ.ಜಿ.ರಸ್ತೆ,  ಶಾಂತಿನಗರ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಕಾರ್ಪೊರೇಷನ್, ಮೆಜೆಸ್ಟಿಕ್‌, ಟಿನ್‌ ಫ್ಯಾಕ್ಟರಿ, ಮೈಸೂರು ರಸ್ತೆ, ಜೆ.ಪಿ. ನಗರ, ಕನಕಪುರ ರಸ್ತೆ, ಕೆ.ಆರ್‌. ಮಾರುಕಟ್ಟೆ, ಓಕಳಿಪುರ, ಮಲ್ಲೇಶ್ವರ, ರಾಜಾಜಿನಗರ, ಹೆಬ್ಬಾಳ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಕಂಡುಬಂತು.

ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ನೂರಾರು ಸಂಖ್ಯೆಯ ವಾಹನಗಳು ನಿಂತಿದ್ದವು. ಇದರಿಂದ ತಾಸುಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಆಂಬುಲೆನ್ಸ್‌ವೊಂದು ಮೇಕ್ರಿ ವೃತ್ತದ ಬಳಿ ವಾಹನಗಳ ನಡುವೆ ಸಿಲುಕಿತ್ತು.

ಕೆಲವೆಡೆ ವಿದ್ಯುತ್‌ ವ್ಯತ್ಯಯ: ಬಿಡದೆ ಸುರಿದ ಮಳೆಯಿಂದಾಗಿ ನಗರದ ಕೋರಮಂಗಲ, ಅಗರ, ಜಯನಗರ, ಜೆ.ಪಿ.ನಗರ 2ನೇ ಹಂತ, ಬನಶಂಕರಿ 2ನೇ ಹಂತ ಮತ್ತು ಮುರುಗೇಶಪಾಳ್ಯದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್‌ ವ್ಯತ್ಯಯ ಕುರಿತು ಬೆಸ್ಕಾಂ ಸಹಾಯವಾಣಿಗೆ 2,039 ಕರೆಗಳು ಬಂದಿವೆ. ಈ ಪೈಕಿ 1,121 ದೂರುಗಳು ದಾಖಲಾಗಿವೆ. ನಗರದಲ್ಲಿ ಯಾವುದೇ ವಿದ್ಯುತ್‌ ಅಘವಡಗಳು ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT