ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೇ ಇವರೇ ‘ಡ್ರಾಮಾ ಜ್ಯೂನಿಯರ್ಸ್‌’

ಅಭಿನಯ ಗರಡಿಯಲ್ಲಿ ಚಿಣ್ಣರ ಚಿಲಿಪಿಲಿ
Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಮೋಡ ಕವಿದ ವಾತಾವರಣ, ತಂಪಾದ ಗಾಳಿಯ ಜೊತೆಗೆ ಹಕ್ಕಿಗಳ ಕಲರವ. ಹಸಿರು ಮರಗಳ ನಡುವಿನ ಮಂಟಪದಲ್ಲಿ  ಪುಟ್ಟ ಬಾಲಕನೊಬ್ಬ ಅಮ್ಮನ ಕೈಯಿಂದ ತಪ್ಪಿಸಿಕೊಂಡು ಓಡುತ್ತಿದ್ದ, ಮತ್ತೊಂದು ಕಡೆ ಕುರ್ಚಿಯಲ್ಲಿ ಕುಳಿತೇ ಚಿತ್ರದುರ್ಗವನ್ನು ಆಳಿದ ಮದಕರಿ ನಾಯಕ ಹಾಗೂ ವೀರ ವನಿತೆ ಒನಕೆ ಓಬವ್ವನ ನಾಟಕದ ಸ್ಕ್ರಿಪ್ಟ್‌ ಅಭ್ಯಾಸ ಮಾಡುತ್ತಿದ್ದ ಮಕ್ಕಳು, ಮಲಗಿದ ಮಗುವಿಗೆ ತಾಯಿಯ ಲಾಲಿಹಾಡು...

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ರಾಮಾ ಜ್ಯೂನಿಯರ್ಸ್‌’ನ ಚಿಣ್ಣರನ್ನು ನೋಡಿದ್ದೀರಲ್ಲ? ಅವರು  ಬೆಂಗಳೂರು ವಿ.ವಿ. ಸಮೀಪದ ಕಲಾಗ್ರಾಮದಲ್ಲಿ ತಾಲೀಮು ನಡೆಸುತ್ತಿದ್ದ ಸಮಯದಲ್ಲಿ ಕಂಡು ಬಂದದ್ದು ಹೀಗೆ.

ಐದು ವರ್ಷದ ಮುದ್ದು ಪುಟಾಣಿ ಅಚಿಂತ್ಯ ಅಮ್ಮನ ಕೈಯಿಂದ ತಪ್ಪಿಸಿಕೊಂಡು ಆಟವಾಡಲು ಓಡುತ್ತಿದ್ದ. ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದ ದುಂಡು ಮುಖದ ಚಿತ್ರಾಲಿ ಅಮ್ಮನ ಮಡಿಲಲ್ಲಿ  ಮಲಗಿದ್ದಳು. ಲಲಲ ಲೇವತಿ (ರೇವತಿ) ಬುಗುರಿಕಾಯಿ ಹಿಡಿದು ಆಟವಾಡುವಲ್ಲಿ ಮಗ್ನಳಾಗಿದ್ದಳು.

ಅಮೋಘಾ ಮತ್ತು ಪುಟ್ಟರಾಜು ಮದಕರಿ ನಾಯಕ ಹಾಗೂ ಒನಕೆ ಓಬವ್ವನ ನಾಟಕದ ಸ್ಕ್ರಿಪ್ಟ್‌ ಹಿಡಿದು ಮೆಂಟರ್‌ ಮಂಜುನಾಥ ಬಡಿಗೇರ ನಿರ್ದೇಶನದಲ್ಲಿ ಅಭ್ಯಾಸ ಮಾಡುತ್ತಿದ್ದರು. ಜುಲೈ 30 ಹಾಗೂ 31ರ ಎಪಿಸೋಡ್‌ ಚಿತ್ರೀಕರಣ ಚಿತ್ರದುರ್ಗದಲ್ಲಿ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿತ್ತು  ‘ಡ್ರಾಮಾ ಜ್ಯೂನಿಯರ್ಸ್‌’ ತಂಡ.

ಖುಷಿಕೊಟ್ಟ ರಿಯಾಲಿಟಿ ಷೋ
‘ಈ ರಿಯಾಲಿಟಿ ಷೋ ಕಲ್ಪನೆ ಹುಟ್ಟಿಕೊಂಡಾಗ ನಮಗೊಂದು ದೊಡ್ಡ ಸವಾಲು ಎದುರಾಗಿತ್ತು. ನಮ್ಮಲ್ಲಿ ಪ್ರತಿಭೆಗಳು ಸಿಗುತ್ತಾರಾ? ಎಂಬ ಭಯವಿತ್ತು. ಝೀ ವಾಹಿನಿಯ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಜೊತೆ ಮಾತನಾಡಿ ನಾಟಕವನ್ನು ಆಧಾರವಾಗಿಟ್ಟುಕೊಂಡು ಕಾರ್ಯಕ್ರಮ ಸಿದ್ಧಪಡಿಸಲು ತೀರ್ಮಾನಿಸಿದೆವು’ ಎಂದು ಡ್ರಾಮಾ ಜ್ಯೂನಿಯರ್ಸ್‌ ಪರಿಕಲ್ಪನೆ ಹರಳು ಕಟ್ಟಿದ ಸನ್ನಿವೇಶ ನೆನಪಿಸಿಕೊಂಡರು ನಿರ್ದೇಶಕ ಟಿ.ಶರಣಯ್ಯ.

‘ನಾನು ರಂಗಭೂಮಿ ಹಿನ್ನೆಲೆಯಿಂದ ಬಂದವನು. ಮೈಸೂರಿನ ನಿರಂತರ ಫೌಂಡೇಷನ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಮಕ್ಕಳಿಗಾಗಿ ರಾಜ್ಯದ ಹುಬ್ಬಳ್ಳಿ, ಗುಲ್ಬರ್ಗಾ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಆಡಿಷನ್‌ ಮಾಡಿದೆವು. ಇದೊಂದು ಸಂಗೀತ, ನೃತ್ಯ ಕಾರ್ಯಕ್ರಮ ಅಂದುಕೊಂಡು ಜನ ಬಂದರು.

ಆಡಿಷನ್‌ಗಾಗಿ 9 ಸಾವಿರ ಮಕ್ಕಳು ಬಂದಿದ್ದರು. ಡೈಲಾಗ್‌, ಮುಗ್ಧತೆ, ನೆನಪಿನ ಶಕ್ತಿ ಚೆನ್ನಾಗಿರುವ 30 ಮಕ್ಕಳನ್ನು ಆಯ್ಕೆ ಮಾಡಿಕೊಂಡೆವು. ಸದ್ಯ 12 ಮಕ್ಕಳು ಇದ್ದಾರೆ’ ಎಂದು ಆಯ್ಕೆಯ ಸವಾಲನ್ನು ಅವರು ವಿವರಿಸುತ್ತಾರೆ.

‘ಈಗಿರುವ ಮಕ್ಕಳು ಎಲ್ಲ ಪಾತ್ರಗಳನ್ನು ನಿಭಾಯಿಸುವಷ್ಟು ನೈಪುಣ್ಯ ಸಾಧಿಸಿದ್ದಾರೆ. ಹಾಸ್ಯಪಾತ್ರ ಮಾಡುವವನು, ಸೆಂಟಿಮೆಂಟ್‌ ಪಾತ್ರವನ್ನೂ ಮಾಡಬಲ್ಲ. ಮಕ್ಕಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಾಧಿಸಿದ್ದಾರೆ. ಷೋ ಮೇಲೆ ಒಂದು ಹಂತಕ್ಕೆ ಹಿಡಿತ ಸಿಕ್ಕಿದೆ.  ಯಶಸ್ವಿಯೂ ಆಗಿದೆ’ ಎನ್ನುವುದು ಅವರ ಖುಷಿ.

ಜನರ ನಡುವೆ ಷೋ
ಇಲ್ಲಿಯವರೆಗೂ 13 ಶೆಡ್ಯೂಲ್‌ (26 ಎಪಿಸೋಡ್‌) ಆಗಿವೆ. 27 ಮತ್ತು 28ನೇ ಎಪಿಸೋಡ್‌ ಚಿತ್ರದುರ್ಗದಲ್ಲಿ ನಡೆಯಲಿದೆ. ಜನಗಳ ನಡುವೆ ಷೋ ಆಯೋಜಿಸಲಾಗಿದ್ದು, ಮೊದಲ ಬಾರಿ ದೊಡ್ಡ ವೇದಿಕೆಯಲ್ಲಿ ನಡೆಯುತ್ತಿದೆ. ಚಿತ್ರದುರ್ಗಕ್ಕಾಗಿ ಅಲ್ಲಿನ ಸಂಸ್ಕೃತಿ, ಇತಿಹಾಸ ಬಿಂಬಿಸುವ ಸ್ಕಿಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ‘‘ಲೊಟ್ಟೆ ನ್ಯೂಸ್‌ ಭಾಗ 4’ ಅಂಥದ್ದರಲ್ಲಿ ಒಂದು. ‘ನಾಗರಹಾವು’ ಸಿನಿಮಾದಿಂದಲೂ ಒಂದು ಸ್ಕಿಟ್‌ ಮಾಡಲಾಗಿದೆ’’ ಎಂದು ಶರಣಯ್ಯ ದುರ್ಗದ ಯೋಜನೆಯ ಮಾಹಿತಿಯನ್ನು ಉತ್ಸಾಹದಿಂದ ಹಂಚಿಕೊಂಡರು.

‘ಸಮಾಜದಲ್ಲಿ ಏನು ನಡೆಯುತ್ತಿದೆ, ಜನ ಯಾವ ವಿಷಯದತ್ತ ಗಮನ ಹರಿಸಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಸುದ್ದಿ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ, ಇದನ್ನು ಗಮನಿಸಿ, ಪೊಲೀಸರ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಸ್ಕಿಟ್‌ಗಳನ್ನು ಮಾಡಿಸುತ್ತೇವೆ. ಸಮಾಜಕ್ಕೆ ಸಂದೇಶ ತಲುಪಿಸುವ ಕೆಲಸ ಮಾಡಬೇಕು. ಜನರಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಉದ್ದೇಶ. ನಾನು ಈವರೆಗೆ 20ಕ್ಕೂ ಹೆಚ್ಚು ರಿಯಾಲಿಟಿ ಷೋಗಳನ್ನು ಮಾಡಿದ್ದೇನೆ. ಇದು ಹೆಚ್ಚು ಖುಷಿ ಕೊಟ್ಟ ಷೋ. ಮಕ್ಕಳೊಂದಿಗೆ ಬೆರೆತು ಕೆಲಸ ಮಾಡುತ್ತಿರುವುದರಿಂದ ಎಲ್ಲರೂ ಒಂದು ಕುಟುಂಬದಂತೆ ಆಗಿದ್ದೇವೆ’ ಎಂದು ಭಾವುಕರಾದರು ಶರಣಯ್ಯ.

ಜನರು ಇಷ್ಟಪಟ್ಟಿದ್ದಾರೆ
‘ಇದು ಮನರಂಜನೆಯನ್ನೇ ಗಮನದಲ್ಲಿ ಇರಿಸಿಕೊಂಡು ಆರಂಭಿಸಿದ ರಿಯಾಲಿಟಿ ಷೋ. ಆದರೆ ಬರಬರುತ್ತಾ ಸಾಮಾಜಿಕ ಕಾಳಜಿಯ ಸ್ಕಿಟ್‌ಗಳನ್ನೂ ಮಾಡಿದೆವು. ಭ್ರೂಣಹತ್ಯೆ, ಕಳ್ಳ–ಪೊಲೀಸ್‌, ಶಿಕ್ಷಕರ ಮಹತ್ವ, ದೇಶ ಕಾಯುವ ಸೈನಿಕರು... ಹೀಗೆ ಅನೇಕ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೆವು’ ಎನ್ನುತ್ತಾರೆ ಸ್ಕ್ರಿಪ್ಟ್‌ ಹೆಡ್ ಹರ್ಷಪ್ರಿಯ.

‘ಮಕ್ಕಳ ಮಟ್ಟಕ್ಕೆ ಇಳಿದು ಸ್ಕ್ರಿಪ್ಟ್‌ ಸಿದ್ಧಪಡಿಸುತ್ತೇವೆ, ಯಾವ ಮಗು ಏನನ್ನು ಸ್ವೀಕರಿಸುತ್ತದೆ ಎಂಬುದನ್ನು ಗಮನಿಸಿ ವಿಷಯ ಕೊಡುತ್ತೇವೆ. ಈಗಾಗಲೇ 25ಕ್ಕೂ ಹೆಚ್ಚು ಸ್ಕ್ರಿಪ್ಟ್‌ಗಳನ್ನು ಮಾಡಿದ್ದೇವೆ. ಚಿತ್ರಾ ಬಡಿಗೇರ್‌, ನಾಗೇಂದ್ರ ಸೀತ್ಕಲ್‌, ಲೋಕೇಶ್‌ ಮಂಡ್ಯ ಸ್ಕ್ರಿಪ್ಟ್‌ ತಂಡದಲ್ಲಿದ್ದಾರೆ’ ಎನ್ನುತ್ತಾರೆ ಅವರು. 

***
ಮಕ್ಕಳ ಮುದ್ದು ಮಾತು

ತೇಜಪಾಲ್‌ ಸುವರ್ಣ ಹಾಗೂ ವೈಶಾಲಿ ನನ್ನ ಅಪ್ಪ–ಅಮ್ಮ. ನಮ್ಮದು ಮಂಗಳೂರು. ನಮ್ಮ ಶಾಲೆಯಲ್ಲಿ ಒಮ್ಮೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಇತ್ತು, ಆಗ ನಾನು ಮೂರು ಕಾಲುಗಳ ಮನುಷ್ಯನ ಕಷ್ಟಗಳನ್ನು ತಿಳಿಸುವ ಪಾತ್ರ ಮಾಡಿದೆ ಎರಡನೇ ಬಹುಮಾನ ಬಂತು, ಅಲ್ಲಿಂದ ನನಗೆ ಆಕ್ಟಿಂಗ್‌ ಮಾಡಬೇಕು ಎಂಬ ಆಸೆ ಆಯಿತು. ‘ಡ್ರಾಮಾ ಜ್ಯೂನಿಯರ್ಸ್‌’ಗಾಗಿ ರಾಮಾಚಾರಿ ಸಿನಿಮಾವನ್ನು 10 ಸಲ ನೋಡಿದೆ, ಆಡಿಷನ್‌ನಲ್ಲಿ ಸಿನಿಮಾ ಡೈಲಾಗ್‌ ಹೇಳಿಯೇ ಆಯ್ಕೆ ಆದೆ. ಮುಂದೆ ನಡೆದಿದ್ದೆಲ್ಲಾ ಟಿ.ವಿಯಲ್ಲಿ ನೋಡಿದ್ದೀರಲ್ಲ. ಹಹಹಾ...
–ಚಿತ್ರಾಲಿ

***

‘ನಮ್ಮದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ. ಈಗ 3ನೇ ಕ್ಲಾಸ್‌ ಪಾಸಾಗಿದ್ದೇನೆ. ಶಾಲೆಯಲ್ಲಿ ಆಡಿಸುತ್ತಿದ್ದ ನಾಟಕದಲ್ಲಿ ಅಭಿನಯಿಸುತ್ತಿದ್ದರಿಂದ ನಟನೆಯನ್ನು ಸುಲಭವಾಗಿ ಕಲಿತೆ, ಅಕ್ಕ ಕೂಡ ರಂಗಭೂಮಿ ಕಲಾವಿದೆ, ಹಾಗಾಗಿ ಅಭಿನಯಿಸುವುದು ಕಷ್ಟವಾಗುತ್ತಿಲ್ಲ, ಒಂದೂವರೆ ದಿನದಲ್ಲಿ ಸ್ಕ್ರಿಪ್ಟ್‌ ಅಭ್ಯಾಸ ಮಾಡುತ್ತೇನೆ. ಮೆಂಟರ್‌ಗಳು ಚೆನ್ನಾಗಿ ಕಲಿಸುತ್ತಾರೆ.
–ತೇಜಸ್ವಿನಿ

***
ಮಕ್ಕಳ ಮೇಲೆ ಒತ್ತಡವಿಲ್ಲ

‌‘ಕಾರ್ಯಕ್ರಮ ಆರಂಭವಾದಾಗ ಬೇಸಿಗೆ ರಜೆ ನಡೆಯುತ್ತಿತ್ತು. ಈಗ ಶಾಲೆಗಳು ನಡೆಯುತ್ತಿವೆ. ಹೀಗಾಗಿ ಅವರ ಮೇಲೆ ಒತ್ತಡ ಬೀಳದಂತೆ ಎಚ್ಚರ ವಹಿಸುತ್ತೇವೆ. ಮಕ್ಕಳ ಮೇಲೆ ಒತ್ತಡ ಹೇರಿದರೆ ಅವರು ಮಾಡುವುದೇ ಇಲ್ಲ. ಏಕೆಂದರೆ ಇದು ಬೇರೆ ಷೋಗಳ ರೀತಿ ಅಲ್ಲ. ಮಕ್ಕಳ ಪೋಷಕರು ಇಲ್ಲಿ ಕುಟುಂಬದಂತೆ ಆಗಿದ್ದಾರೆ. ಇತರೆ ಕಾರ್ಯಕ್ರಮಗಳಲ್ಲಿ ಮಾಡಿದಂತೆ ಸ್ಟುಡಿಯೊದಲ್ಲೋ ಇನ್ನೆಲ್ಲೋ ತರಾತುರಿಯಲ್ಲಿ ಚಿತ್ರೀಕರಣ ಮಾಡಿಸುತ್ತಿಲ್ಲ. ಎಲ್ಲ ಮಕ್ಕಳನ್ನು ಒಂದು ಜಾಗದಲ್ಲಿ ಸೇರಿಸಿಕೊಂಡು ಆರಾಮವಾಗಿ ಮಾಡುತ್ತೇವೆ. ಅದಕ್ಕಾಗಿ ಹೆಚ್ಚು ಸಮಯ ಮೀಸಲಿಡುತ್ತಿದ್ದೇವೆ. ಇದು ಮಕ್ಕಳಿಗೆ ಬೇಸಿಗೆ ಶಿಬಿರದ ಅನುಭವ ನೀಡುತ್ತದೆ. ಅವರಿಗೆ ನಿದ್ದೆ ಮಾಡಲು, ಆಟವಾಡಲು ಜಾಗವಿದೆ. ಮೆಂಟರ್‌ಗಳು ಮಕ್ಕಳಿಗೆ ಆಟದ ಸಾಮಾನುಗಳನ್ನು ತಂದುಕೊಟ್ಟು ಒಲಿಸಿಕೊಂಡಿದ್ದಾರೆ. ಮಕ್ಕಳಿಗೆ ಆಸಕ್ತಿಯೂ ಇದೆ– ಪ್ರತಿಭೆಯೂ ಇದೆ. ಅವರೊಂದಿಗೆ ನಾವೂ ಕಲಿಯುತ್ತಿದ್ದೇವೆ’ ಎನ್ನುತ್ತಾರೆ ಪ್ರದ್ಯುಮ್ನ.

***
ಪೋಷಕರು ಏನು ಹೇಳ್ತಾರೆ...

ನಾವು ಮೈಸೂರಿನಲ್ಲಿ ನೆಲೆಸಿದ್ದೇವೆ, ಉಡುಪಿ ನಮ್ಮ ಮೂಲ ಸ್ಥಳ. ಅಚಿಂತ್ಯನಿಗೆ ಈಗ ಐದು ವರ್ಷ. ಅವನಿಗೆ ಸಭಾ ಕಂಪನ ಇರಲಿಲ್ಲ, ಏನು ಮಾಡ್ತೀಯಾ ಅಂತ ಕೇಳಿದರೆ ‘ಕಥೆ ಹೇಳ್ತೀನಿ’ ಎನ್ನುತ್ತಿದ್ದ. ಹೇಳಿಕೊಟ್ಟ ಎಲ್ಲಾ ಮಾತುಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳುತ್ತಾನೆ. ಗುರುವಾರ ಸ್ಕ್ರಿಪ್ಟ್‌ ಸಿಕ್ಕರೆ ಭಾನುವಾರದ ವೇಳೆಗೆ ಸಿದ್ಧವಾಗುತ್ತಾನೆ’.
–ಶುಭಾ, ಅಚಿಂತ್ಯ ತಾಯಿ

***
ನಮ್ಮದು ಉತ್ತರ ಕನ್ನಡ ಜಿಲ್ಲೆ ಮಂಚಿಕೇರಿ.  15 ವರ್ಷಗಳಿಂದ ಉಚಿತವಾಗಿ ನಾಟಕ, ನೃತ್ಯ ಕಲಿಸುತ್ತಿದ್ದೇನೆ. ಬೇರೆ ಮಕ್ಕಳಿಗೆ ಕಲಿಸುವುದನ್ನು ನೋಡಿಕೊಂಡು ನನ್ನ ಮಗ ನಟನೆಯನ್ನು ಕಲಿತಿದ್ದಾನೆ, ಶಾಲೆಯಿಂದಲೂ ಪ್ರೋತ್ಸಾಹವಿದೆ, ಅವನು ಎಲ್ಲಿಯವರೆಗೆ ಬೆಳೆಯುತ್ತಾನೋ ಅಲ್ಲಿಯವರೆಗೂ ನನ್ನ ಬೆಂಬಲವಿರುತ್ತದೆ. ಇವನು ಈ ರಿಯಾಲಿಟಿ ಷೋಗೆ ಆಯ್ಕೆ ಆಗಿದ್ದರಿಂದ ನನಗೆ ಬೆಂಗಳೂರನ್ನು ನೋಡುವ ಅವಕಾಶ ಸಿಕ್ಕಿತು.
–ಸುಭಾಷ್‌, ಸೂರಜ್‌ ತಂದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT