ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ದೋಷ: ಎಲ್ಲಾ ಮತ ಕಾಂಗ್ರೆಸ್‌ಗೆ ವರ್ಗ

ಪಶ್ಚಿಮ ಬಂಗಾಳ, ಬಿಹಾರ, ಒಡಿಶಾದಲ್ಲೂ ಕೈಕೊಟ್ಟ ಯಂತ್ರ
Last Updated 17 ಏಪ್ರಿಲ್ 2014, 9:43 IST
ಅಕ್ಷರ ಗಾತ್ರ

ಪುಣೆ (ಐಎಎನ್‌ಎಸ್‌): ಮೊದಲಿಗೇ ತಮ್ಮ ಹಕ್ಕು ಚಲಾಯಿಸಿ ಬೇಗನೆ ಹಿಂದಿರುಗಬೇಕು ಎಂದುಕೊಂಡು ಮತಗಟ್ಟೆಗಳಿಗೆ ತೆರಳಿದ್ದ ಹಿರಿಯ ನಾಗರಿಕರು ಸೇರಿದಂತೆ ಕೆಲ ಮತದಾರರು ಒಂದು ಕ್ಷಣ ತಬ್ಬಿಬ್ಬುಗೊಂಡಿದ್ದರು. ಅದಕ್ಕೆ ಕಾರಣ ಒತ್ತಿದ ಎಲ್ಲಾ ಮತಗಳು ಕಾಂಗ್ರೆಸ್‌ಗೆ ‘ವರ್ಗಾವಣೆ’ ಗೊಂಡದ್ದು..!

ಹೌದು. ಪುಣೆಯ ಶ್ಯಾಂರಾವ್‌  ಕಲ್ಮಾಡಿ ಶಾಲೆಯ ಮತಗಟ್ಟೆಯಲ್ಲಿ ಇಂಥಹ ಒಂದು ಘಟನೆ ನಡೆದಿದೆ. ಮತಯಂತ್ರದ ಯಾವುದೇ ಗುಂಡಿ ಒತ್ತಿದಾಗ ಕೇವಲ ಕಾಂಗ್ರೆಸ್‌ ಅಭ್ಯರ್ಥಿಯ ಹೆಸರಿನ ಮುಂದಿರುವ ಲೈಟ್‌ ಮಿನುಗುತಿತ್ತು ಎನ್ನಲಾಗಿದೆ.

ಕೆಲ ಜಾಗೃತ ಮತದಾರರು ಈ ವಿಷಯವನ್ನು ಚುನಾವಣಾ ಅಧಿಕಾರಗಳ ಗಮನಕ್ಕೆ ತಂದಾಗ ಅವರು ತಕ್ಷಣವೇ ಮತದಾನವನ್ನು ನಿಲ್ಲಿಸಿದ್ದಾರೆ.

‘ಈ ಮತಗಟ್ಟೆಗೆ ನೂತನ ಎಲೆಕ್ಟ್ರಾನಿಕ್‌ ಮತಯಂತ್ರವನ್ನು ರವಾನಿಸುವಂತೆ ಚುನಾವಣಾ ಆಯೋಗದ ಅಧಿಕಾರಿಗಳು ಆದೇಶಿಸಿದ್ದಾರೆ’ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತ ಮಧುರ್‌ ಸಹಸ್ರಬುದ್ಧಿ ತಿಳಿಸಿದ್ದಾರೆ.

ಅಲ್ಲದೇ, ದೋಷಪೂರಿತ ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ (ಇವಿಎಂ) ಈ ಮೊದಲು ತಮ್ಮ ಮತ ಚಲಾಯಿಸಿದ ಸುಮಾರು 28 ಜನರಿಗೆ ಮರು ಮತದಾನಕ್ಕೆ ಅನುಮತಿ ನೀಡಲು ಚುನಾವಾಣಾ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇತರೆಡೆಗಳಲ್ಲೂ ಕೈಕೊಟ್ಟ ಯಂತ್ರ: ನವದೆಹಲಿ ವರದಿ(ಪಿಟಿಐ): ಮಹಾರಾಷ್ಟವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರಿನ ಹಲವು ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದೋಷಗಳು ಕಾಣಿಸಿಕೊಂಡ ಬಗ್ಗೆ ವರದಿಗಳು ಬಂದಿವೆ.

ಬಿಹಾರಿನ ಪಟ್ನಾ, ಜೆಹಾನಾಬಾದ್ ಮುಂಗೇರ್ ಮತ್ತಿತರ ಕಡೆಗಳಲ್ಲೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದು ದೋಷ ಸರಿಪಡಿಸಿದ ಬಳಿಕ ಮತದಾನ ಮುಂದುವರೆಯಿತು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಜಲಪೈಗುರಿ ಮತ್ತು ಅಲಿಪುರದುವಾರ್ ಕ್ಷೇತ್ರಗಳಲ್ಲೂ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದೋಷಗಳು ಕಂಡು ಬಂದ ಬಗ್ಗೆ ವರದಿಗಳು ಬಂದವು.

ಮುಂಗೇರ್ ಲೋಕಸಭಾ ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ ನೆಲಬಾಂಬ್ ಇರಿಸಿದ್ದ ಗುಮಾನಿ ಬಂದ ಕಾರಣ ಮತದಾನವನ್ನು ಮುಂದೂಡಲಾಯಿತು.

ಒಡಿಶಾದ ಕರಾವಳಿ ಮತ್ತು ಉತ್ತರ ಭಾಗದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮತಗಟ್ಟೆಗಳಲ್ಲಿ ಪ್ರಾರಂಭದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ಕಂಡು ಬಂದ ದೋಷವನ್ನು ಸರಿಪಡಿಸಿದ ಬಳಿಕ ಮತದಾನ ಮುಂದುವರಿಯಿತು.

ಮರುಮತದಾನ: ಏಪ್ರಿಲ್ 10ರಂದು ನಡೆದ ಮೊದಲ ಹಂತದ ಮತದಾನದ ವೇಳೆ ಮತಗಟ್ಟೆ ವಶ ಮತ್ತಿತರ ಕಾರಣಗಳಿಗಾಗಿ ಮತದಾನ ಮುಂದೂಡಲಾಗಿದ್ದ 22 ಮತಗಟ್ಟೆಗಳಲ್ಲೂ ಈದಿನ ಮರುಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT