ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ತಾಂಬುಲ್‌ನಲ್ಲಿ ಉಗ್ರರ ಅಟ್ಟಹಾಸ: 41 ಸಾವು

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬ್ ದಾಳಿ
Last Updated 29 ಜೂನ್ 2016, 22:30 IST
ಅಕ್ಷರ ಗಾತ್ರ

ಇಸ್ತಾಂಬುಲ್‌ (ಎಎಫ್‌ಪಿ): ಇಲ್ಲಿನ ಅಟತುರ್ಕ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ಮೂವರು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ 13 ವಿದೇಶಿಯರು ಸೇರಿದಂತೆ 41 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 239 ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ಟರ್ಮಿನಲ್‌ ಪ್ರವೇಶ ದ್ವಾರದ ಬಳಿ ಪ್ರಯಾಣಿಕರ ಮೇಲೆ ಮನಬಂದಂತೆ ಬಂದೂಕಿನಿಂದ ಗುಂಡು ಹಾರಿಸಿದ ಮೂವರು ಉಗ್ರರು, ನಂತರ ತಮ್ಮನ್ನೇ ಸ್ಫೋಟಿಸಿಗೊಂಡಿದ್ದಾರೆ. ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಈ ದಾಳಿ ನಡೆಸಿದೆ ಎಂದು ಟರ್ಕಿ ಪ್ರಧಾನಿ ಬಿನಾಲಿ ಯಿಲ್ದಿರಿಮ್‌ ಆರೋಪಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಮೃತಪಟ್ಟವರಲ್ಲಿ ಕನಿಷ್ಠ 23 ಮಂದಿ ಟರ್ಕಿ ದೇಶದವರು. ವಿದೇಶಿಯರಲ್ಲಿ ಸೌದಿ ಅರೇಬಿಯಾದ ಐವರು,  ಇರಾಕ್‌ನ ಇಬ್ಬರು ಮತ್ತು ಟುನಿಸಿಯಾ, ಉಜ್ಬೇಕಿಸ್ತಾನ, ಚೀನಾ, ಇರಾನ್‌, ಉಕ್ರೇನ್‌ ಮತ್ತು ಜೋರ್ಡಾನ್‌ನ ತಲಾ ಒಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಂತರ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಯಿತು.

‘ಟ್ಯಾಕ್ಸಿಯಲ್ಲಿ ಬಂದ ಉಗ್ರರು ಅಟೋಮೆಟಿಕ್‌ ರೈಫಲ್‌ಗಳಿಂದ ಪ್ರಯಾಣಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ನಂತರ, ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ’ ಎಂದು ಪ್ರಧಾನಿ ಯಿಲ್ದಿರಿಮ್‌ ತಿಳಿಸಿದ್ದಾರೆ.

ಇದುವರೆಗೆ ಟರ್ಕಿಯಲ್ಲಿ ನಡೆಸಿರುವ ಹಲವು ದಾಳಿಗಳ ಹೊಣೆಯನ್ನು ಐಎಸ್‌ ಹೊತ್ತಿಕೊಂಡಿಲ್ಲ. ಹೀಗಾಗಿ, ಕುರ್ದಿಶ್‌ ಉಗ್ರರು ಸಹ ಈ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಉಗ್ರರು ಯಾವ ರೀತಿ ದಾಳಿ ನಡೆಸಿದರು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ದಾಳಿಕೋರರ ತಪಾಸಣೆಯೇ  ನಡೆದಿರಲಿಲ್ಲ. ಹೀಗಾಗಿ ಸುಲಭವಾಗಿ ಸ್ಫೋಟಕಗಳೊಂದಿಗೆ ಪ್ರವೇಶಿಸಿರುವ ಸಾಧ್ಯತೆ ಇದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಟರ್ಮಿನಲ್‌ನಲ್ಲೇ ಒಂದು ಬಾಂಬ್‌ ಸ್ಫೋಟವಾಗಿದೆ. ಇನ್ನೆರಡು ಬಾಂಬ್‌ಗಳು ಪಾರ್ಕಿಂಗ್‌ ಸ್ಥಳದಲ್ಲಿ ಸ್ಫೋಟವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಸ್ಥಳೀಯ ‘ಹಬೆರ್‌ ಟರ್ಕ್‌’ ದಿನಪತ್ರಿಕೆ ವರದಿ ಪ್ರಕಾರ, ಅಂತರರಾಷ್ಟ್ರೀಯ ಟರ್ಮಿನಲ್‌ ಹೊರಗೆ ಒಬ್ಬ ಉಗ್ರ ಬಾಂಬ್‌ ಸ್ಫೋಟಿಸಿಕೊಂಡಿದ್ದ. ಇನ್ನಿಬ್ಬರು ಎಕ್ಸ್‌ ರೇ ಯಂತ್ರದ ಬಳಿ ಗುಂಡಿನ ದಾಳಿ ನಡೆಸಿದರು. ಅಲ್ಲಿಂದ ಪಾರಾಗಲು ಯತ್ನಿಸಿದ ಪ್ರಯಾಣಿಕರ ಮೇಲೆ ದಾಳಿ ನಡೆಸಿದ ಒಬ್ಬನ ಮೇಲೆ ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದಾಗ ತನ್ನನ್ನು ಸ್ಫೋಟಿಸಿಗೊಂಡು ಮೃತಪಟ್ಟ. ನಿರ್ಗಮನ ಟರ್ಮಿನಲ್‌ನತ್ತ ತೆರಳಿದ್ದ ಇನ್ನೊಬ್ಬ ಉಗ್ರನ ಮೇಲೆಯೂ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದರು. ಆಗ ಆತನೂ ತನ್ನನ್ನು ಸ್ಫೋಟಿಸಿಕೊಂಡ ಎಂದು ವರದಿಯಾಗಿದೆ.

ಖಂಡನೆ: ವಿಶ್ವಸಂಸ್ಥೆ, ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು  ಈ ಘಟನೆಯನ್ನು ಖಂಡಿಸಿದ್ದು, ಇದೊಂದು ಭಯಾನಕ ಕೃತ್ಯವಾಗಿದೆ. ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT