ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಸ್ನೇಹ ಅನುಮೋದಿಸಲು ಅಳುಕೇಕೆ?

ನರಸಿಂಹರಾವ್‌ ಕಾಲದಲ್ಲಿ ಚಿಗುರಿದ ಸ್ನೇಹ, ಮೋದಿ ಕಾಲದಲ್ಲಿ ಮತ್ತಷ್ಟು ಗಟ್ಟಿಯಾಗುವ ಸೂಚನೆಗಳಿವೆ...
Last Updated 26 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಇಸ್ರೇಲ್‌ನ ಪ್ರಥಮ ಪ್ರಧಾನಿ ಡೇವಿಡ್ ಬೆನ್‍ಗುರಿಯನ್ I‘In Israel, in order to be a realist you must believe in miracles’ n Isಎಂದಿದ್ದರು. ಆ ಮಾತು ಮತ್ತೊಮ್ಮೆ ಸಾಬೀತಾಗಿದೆ. ನೇತನ್ಯಾಹು ಅವರ ರಾಜಕೀಯ ಜೀವನ ‘ಮುಗಿದ ಅಧ್ಯಾಯ’ ಎಂದು ಷರಾ ಬರೆದಿದ್ದ ರಾಜಕೀಯ ಪಂಡಿತರು ಮೂಗಿನ ಮೇಲೆ ಬೆರಳಿಟ್ಟು ಕುಳಿತಿದ್ದಾರೆ. ನಾಲ್ಕನೆಯ ಅವಧಿಗೆ ನೇತನ್ಯಾಹು ಅವರನ್ನು ಬೆಂಬಲಿಸುವ ಮೂಲಕ, ‘ದೇಶದ ಭದ್ರತೆಯೇ ಮೊದಲ ಆದ್ಯತೆ’ ಎಂಬುದನ್ನು ಇಸ್ರೇಲಿಗರು ಜಗತ್ತಿಗೆ ಸಾರಿದ್ದಾರೆ.

ಇಸ್ರೇಲ್ ಪರಿಸ್ಥಿತಿಯೂ ಹಾಗೆಯೇ ಇದೆ. ತಂಟೆಕೋರ ರಾಷ್ಟ್ರಗಳ ಮಧ್ಯೆ ಕಾದಾಡುತ್ತಲೇ ಬದುಕಿರುವ ದೇಶಕ್ಕೆ ಯುದ್ಧದ್ದೇ ಕನಸು, ಭದ್ರತೆಯದ್ದೇ ಚಿಂತೆ. ಆ ಕಾರಣಕ್ಕಾಗಿಯೇ ತನ್ನ ವಾರ್ಷಿಕ ಬಜೆಟ್‌ನಲ್ಲಿ ಇಸ್ರೇಲ್, ದೊಡ್ಡ ಇಡುಗಂಟನ್ನು ರಕ್ಷಣಾ ವೆಚ್ಚಕ್ಕೆಂದು ತೆಗೆದಿಡುತ್ತದೆ. ಆಧುನಿಕ ಶಸ್ತ್ರಗಳ ಅನ್ವೇಷಣೆ, ಯುದ್ಧ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತದೆ. ಮೈಯೆಲ್ಲಾ ಕಣ್ಣಾಗಿಸಿಕೊಂಡು ನೆರೆರಾಷ್ಟ್ರಗಳಲ್ಲಿ ನಡೆಯುವ ಆಗುಹೋಗುಗಳನ್ನು ಗಮನಿಸುತ್ತದೆ.

ಅಣ್ವಸ್ತ್ರ ತಯಾರಿಕೆಯತ್ತ ಇರಾನ್ ಒಂದಡಿ ಮುಂದಿಟ್ಟರೆ ಸಾಕು, ಇಸ್ರೇಲ್ ಪ್ರಧಾನಿ, ಅಮೆರಿಕ ಮತ್ತು ವಿಶ್ವಸಂಸ್ಥೆಯ ಮುಂದೆ ಕೆಂಡ ಉಗುಳುತ್ತಾ ನಿಂತುಬಿಡುತ್ತಾರೆ. ಈ ಅಭದ್ರತೆಯ ಭಾವ ಇಸ್ರೇಲನ್ನು ಇದುವರೆಗೂ ತಣ್ಣಗಿರಲು ಬಿಟ್ಟಿಲ್ಲ. ಗಡಿಯಲ್ಲಿ ಸಣ್ಣದೊಂದು ಚಕಮಕಿ ನಡೆದರೂ, ಇಸ್ರೇಲ್ ತನ್ನೆಲ್ಲಾ ಶಕ್ತಿ ಬಳಸಿ ತಿರುಗೇಟು ನೀಡುತ್ತದೆ. ಕಳೆದ ಜುಲೈನಲ್ಲಿ ನಡೆದ ಇಸ್ರೇಲ್-ಗಾಜಾ ಸಂಘರ್ಷ ನೆನಪಿರಬಹುದು.

‘ಆಪರೇಷನ್ ಪ್ರೊಟೆಕ್ಟಿವ್ ಎಡ್ಜ್’ ಎಂಬ ಕಾರ್ಯಾಚರಣೆಗೆ ಇಳಿದ ಇಸ್ರೇಲ್, ಹಮಾಸ್ ಉಗ್ರರ ಒಂದೊಂದು ಕ್ಷಿಪಣಿಗೂ, ಪ್ರತಿಯಾಗಿ ಹತ್ತಾರು ಕ್ಷಿಪಣಿಗಳನ್ನು ತೂರಿಬಿಟ್ಟಿತ್ತು. ಜನವಸತಿಗಳಲ್ಲಿ ಅಡಗಿ ಉಗ್ರರು ದಾಳಿಗಿಳಿದಿದ್ದರಿಂದ, ಸಾವಿರಾರು ಅಮಾಯಕರು ಪ್ರಾಣತೆತ್ತರು. ಅಮೆರಿಕ ಹೊರತುಪಡಿಸಿ ವಿಶ್ವದ ಇತರ ರಾಷ್ಟ್ರಗಳು ‘ಇಸ್ರೇಲ್ ಕ್ರೌರ್ಯ ಮೆರೆಯಿತು’ ಎಂದು ಟೀಕಿಸಿದವು. ‘ನಮ್ಮನ್ನು ನಾವು ರಕ್ಷಿಸಿಕೊಂಡಿದ್ದೇವೆ’ ಎಂದು ಇಸ್ರೇಲ್ ಸುಮ್ಮನಾಯಿತು.

ಹೀಗೆ, ಇಸ್ರೇಲ್ ಇತಿಹಾಸದಲ್ಲಿ ಅದೆಷ್ಟೋ ಸಂಘರ್ಷಗಳು, ನಾಲ್ಕಾರು ದೊಡ್ಡ ಯುದ್ಧಗಳು ಆಗಿಹೋಗಿವೆ. ಈ 68 ವರ್ಷಗಳಲ್ಲಿ ‘ಇಸ್ರೇಲನ್ನು ಭೂಪಟದಿಂದ ಅಳಿಸಿ ಹಾಕುತ್ತೇವೆ’ ಎಂಬ ಮಾತು ನೆರೆ ರಾಷ್ಟ್ರಗಳಿಂದ ಅದೆಷ್ಟು ಸಾರಿ ಕೇಳಿಬಂತೋ ಲೆಕ್ಕ ಇಟ್ಟವರಾರು? ಆದರೆ ದಂಡೆತ್ತಿ ಬಂದ ದೊಡ್ಡ ದೇಶಗಳು, ಈ ಪುಟ್ಟ ದೇಶದಿಂದ ಪೆಟ್ಟುತಿಂದು ಹಿಂದಿರುಗಿವೆ. ಈ ಕಾರಣದಿಂದಲೇ ಇಸ್ರೇಲ್ ಚುನಾವಣೆಗಳಲ್ಲಿ ‘ರಾಷ್ಟ್ರೀಯ ಭದ್ರತೆ’ ಮುಖ್ಯ ವಿಷಯವಾಗುತ್ತದೆ.

ಇದೀಗ ಜನಮತ ಗಳಿಸಿರುವ ಲಿಕುಡ್ ಪಕ್ಷ, ಗೆಲ್ಲಲು ಆಸರೆಯಾಗಿ ಹಿಡಿದದ್ದು ಭದ್ರತೆಯ ವಿಷಯವನ್ನೇ. ಮೊದಲಿನಿಂದಲೂ ನೇತನ್ಯಾಹು, ಇರಾನ್ ಎಂಬ ಗುಮ್ಮನನ್ನು ತೋರಿಸಿ ರಾಜಕೀಯದಲ್ಲಿ ಮೇಲೇರುತ್ತಾ ಬಂದಿದ್ದಾರೆ. 2012ರಲ್ಲಿ ಇರಾನ್ ಅಧ್ಯಕ್ಷ ಮೊಹಮೂದ್ ಅಹ್ಮೆದಿನೆಜಾದ್, ‘ಇಸ್ರೇಲನ್ನು ನಾಶಮಾಡುತ್ತೇವೆ’ ಎಂಬ ಹೇಳಿಕೆ ಕೊಟ್ಟಾಗ, ನೇತನ್ಯಾಹು ವಿಶ್ವಸಂಸ್ಥೆಯ ಕದ ತಟ್ಟಿದ್ದರು. ‘ಇರಾನ್ ಅಣ್ವಸ್ತ್ರ ತಯಾರಿಕೆಯ ಕೊನೆಯ ಹಂತದಲ್ಲಿದೆ, ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ನಾವೇ ದಾಳಿ ನಡೆಸಿ ಇರಾನ್ ಅಣು ಸ್ಥಾವರಗಳನ್ನು ಧ್ವಂಸಗೊಳಿಸುತ್ತೇವೆ’ ಎಂದು ಗುಟುರಿದ್ದರು.

ಹೀಗೆ ಅಬ್ಬರಿಸುತ್ತಾ ಪ್ರತೀಕಾರದ ಮಾತನಾಡುವ ನೇತನ್ಯಾಹು ಅವರಿಗೆ ‘ಜಗಳಗಂಟ’ ಎಂಬ ಹಣೆಪಟ್ಟಿಯಿದೆ. ಈ ಕಾರಣದಿಂದಲೇ ನೇತನ್ಯಾಹು ಪುನರಾಯ್ಕೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ಯಾಲೆಸ್ಟೀನ್ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸುವ, ಶಾಂತಿ ಸಂಧಾನಕ್ಕೆ ಬೆನ್ನುಮಾಡುವ ನೇತನ್ಯಾಹು, ಪಶ್ಚಿಮ ಏಷ್ಯಾದ ಶಾಂತಿ ಕದಡಬಹುದೇ ಎಂಬುದು ಚರ್ಚೆಯಾಗುತ್ತಿರುವ ವಿಷಯ. ಜೊತೆಗೆ ಇರಾನ್-ಅಮೆರಿಕ ಅಣು ಒಪ್ಪಂದದ ಮಾತುಕತೆಗಳು ಕೊನೆಯ ಹಂತದಲ್ಲಿರುವಾಗ, ಅಮೆರಿಕಕ್ಕೆ ನೇತನ್ಯಾಹು ನುಂಗಲಾರದ ಬಿಸಿತುಪ್ಪ ಆಗುವರೇ ಎಂಬ ಪ್ರಶ್ನೆ ಎದ್ದಿದೆ.

ಆದರೆ, ಇಸ್ರೇಲ್ ಕಾದಾಡುತ್ತಲೇ ಬದುಕಿದ್ದರೂ ಅಭಿವೃದ್ಧಿಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದನ್ನು ಗಮನಿಸಬೇಕು. ಅಪವಾದಗಳ ನಡುವೆಯೂ, ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡಿದ, ಆರ್ಥಿಕ ಉದಾರೀಕರಣಕ್ಕೆ ಮುಂದಾದ, ಆರ್ಥಿಕ ಕುಸಿತವನ್ನು ಜಾಣ್ಮೆಯಿಂದ ನಿಭಾಯಿಸಿದ ಗರಿಮೆ, ಅರಬ್ ರಾಷ್ಟ್ರಗಳಲ್ಲಿ ಪಸರಿಸಿದ ಅಂತರ್ಯುದ್ಧ, ಗಲಭೆ, ಭಯೋತ್ಪಾದನೆಯನ್ನು ಇಸ್ರೇಲ್ ಗಡಿಯಾಚೆಗೇ ಇಟ್ಟ ಹೆಗ್ಗಳಿಕೆಯೂ ನೇತನ್ಯಾಹು ಅವರ ಪಾಲಿಗಿದೆ. ಈ ಅಂಶಗಳೂ ಚುನಾವಣೆಯಲ್ಲಿ ನೇತನ್ಯಾಹು ಪರ ಕೆಲಸ ಮಾಡಿವೆ.

ಅದೇನೇ ಇರಲಿ, ಭಾರತ-ಇಸ್ರೇಲ್ ಸ್ನೇಹವೃದ್ಧಿಗೆ ನೇತನ್ಯಾಹು ಪುನರಾಯ್ಕೆ ಪೂರಕವಾಗಬಹುದೇ ಎಂಬುದು ನಮ್ಮೆದುರಿಗಿರುವ ಪ್ರಶ್ನೆ. ಇಸ್ರೇಲ್‌ನೊಂದಿಗಿನ ದೇಶದ ರಾಜತಾಂತ್ರಿಕ ಸಂಬಂಧ, ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಬಂದಿದೆ. ಮುಖ್ಯವಾಗಿ ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಎಡಪಕ್ಷಗಳು ಇಸ್ರೇಲನ್ನು ವಿರೋಧಿಸಿ ದೂರ ಇಟ್ಟರೆ, ಕಾಂಗ್ರೆಸ್ ಸ್ನೇಹ ಬಯಸಿಯೂ ಬಹಿರಂಗವಾಗಿ ಅಪ್ಪಿಕೊಳ್ಳಲು ಹಿಂಜರಿಯುತ್ತದೆ. ಬಿಜೆಪಿ  ಅತ್ಯುತ್ಸಾಹದಿಂದ ಬರಸೆಳೆದುಕೊಳ್ಳುತ್ತದೆ. ಇದಕ್ಕೆ ಆಯಾ ಪಕ್ಷಗಳ ಸೈದ್ಧಾಂತಿಕ ಮತ್ತು ರಾಜಕೀಯ ನಿಲುವುಗಳು ಕಾರಣ. 

ಭಾರತ-ಇಸ್ರೇಲ್ ಬಾಂಧವ್ಯದಲ್ಲಿನ ಏರಿಳಿತಗಳನ್ನು ನೋಡಬೇಕಾದರೆ, ಇತಿಹಾಸದ ಪುಟಗಳನ್ನು ಕೊಂಚ ಹಿಂದೆ ಸರಿಸಬೇಕು. ಯಹೂದಿಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಟ್ಟು ಭಾರತದ ಬೆಂಬಲ ಕೋರಿದಾಗ, ಗಾಂಧೀಜಿ ಅದನ್ನು ವಿರೋಧಿಸಿದ್ದರು. ‘ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಕೂಡದು’ ಎಂಬ ನಿಲುವನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿ, ಪ್ಯಾಲೆಸ್ಟೀನ್ ವಿಭಜನೆಯನ್ನು ವಿರೋಧಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ಆದರೆ ಧರ್ಮಾಧಾರಿತ ಭಾರತ ವಿಭಜನೆಯನ್ನು ಒಪ್ಪಿಕೊಂಡಿದ್ದ ನೆಹರೂ, ವಿಶ್ವಸಂಸ್ಥೆ ಪ್ಯಾಲೆಸ್ಟೀನ್ ವಿಭಜನೆಯ ರೂಪುರೇಷೆ ಸಿದ್ಧಪಡಿಸಿದಾಗ ಅದನ್ನು ವಿರೋಧಿಸಿದರು!

ನೆಹರೂ ಮನವೊಲಿಸಲು 1947ರ ಜೂನ್ 13ರಂದು ವಿಜ್ಞಾನಿ ಐನ್‌ಸ್ಟೀನ್ ನಾಲ್ಕು ಪುಟದ ದೀರ್ಘ ಪತ್ರವನ್ನು ನೆಹರೂ ಅವರಿಗೆ ಬರೆದಿದ್ದರು. ಅಸ್ಪೃಶ್ಯತೆಯನ್ನು ರದ್ದುಮಾಡಿದ್ದ ಭಾರತದ ಶಾಸನಸಭೆಯನ್ನು ಅಭಿನಂದಿಸಿದ್ದ ಐನ್‌ಸ್ಟೀನ್‌, ‘ಯಹೂದಿಗಳನ್ನು ಕೂಡ ಈ ಜಗತ್ತು ಅಸ್ಪೃಶ್ಯರಂತೆಯೇ ಕಂಡಿದೆ. ದೌರ್ಜನ್ಯಕ್ಕೆ ಈಡುಮಾಡಿದೆ. ಯಹೂದಿಗಳ ಮಾರಣಹೋಮವೇ ನಡೆದಿದೆ. ಕಣ್ಣಿಗೆ ರಾಚುತ್ತಿರುವ ತಪ್ಪನ್ನು ನಾವೆಲ್ಲ ಸೇರಿ ಸರಿಪಡಿಸಬೇಕಿದೆ. ಎಲ್ಲರಂತೆ ಅವರಿಗೂ ಬದುಕಲು ಅಭಯ ಧಾಮದ ಅವಶ್ಯಕತೆ ಇದೆ’ ಎಂದು ಯಹೂದಿ ರಾಷ್ಟ್ರದ ಪರ ನಿಲ್ಲುವಂತೆ ಮನವಿ ಮಾಡಿದ್ದರು.

1947ರ ಜುಲೈ 11ರಂದು ಆ ಪತ್ರಕ್ಕೆ ಉತ್ತರಿಸಿದ್ದ ನೆಹರೂ, ‘ಸುಭದ್ರವಾದ ನೆಲೆಯಿಲ್ಲದೆ, ಅಸಂಖ್ಯ ದೌರ್ಜನ್ಯಗಳಿಗೆ ಒಳಗಾಗಿ 2000 ವರ್ಷಗಳಿಂದ ಯಹೂದಿಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವುದೇ ಇತಿಹಾಸದ ಸೋಜಿಗ’ ಎಂದು ಪತ್ರವನ್ನು ಆರಂಭಿಸಿ ‘ಪ್ರತಿ ದೇಶವೂ ಮೊದಲಿಗೆ ತನ್ನ ಹಿತಾಸಕ್ತಿಯನ್ನು ಗಮನಿಸುತ್ತದೆ. ಅಂತರರಾಷ್ಟ್ರೀಯ ನೀತಿ ರಾಷ್ಟ್ರೀಯ ನೀತಿಗೆ ಪೂರಕವಾಗಿದ್ದಾಗ ಮಾತ್ರ, ಅದರ ಪರವಾಗಿ ದೇಶ ದನಿ ಏರಿಸಿ ಮಾತನಾಡುತ್ತದೆ. ಇಲ್ಲವಾದಲ್ಲಿ ವಿರೋಧಿಸಲು ನಾಲ್ಕಾರು ಕಾರಣಗಳನ್ನು ಹುಡುಕಿಕೊಳ್ಳುತ್ತದೆ’ ಎನ್ನುವ ಮೂಲಕ ಯಹೂದಿಗಳ ಪರ ನಿಲ್ಲಲು ನಾವು ಅಸಹಾಯಕ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ವಿವರಿಸಿದ್ದರು.  

ಆ ಅಸಹಾಯಕತೆಗೆ ಕೆಲವು ಕಾರಣಗಳಿದ್ದವು. ದೇಶ ಆಗಷ್ಟೇ ವಿಭಜನೆಗೊಂಡಿತ್ತು. ಹಿಂದೂ-ಮುಸ್ಲಿಂ ಗಲಭೆಗಳು ನಡೆಯುತ್ತಿದ್ದ ವೇಳೆ, ಯಹೂದಿಗಳ ಪರ ಒಲವು ತಳೆಯುವುದರಿಂದ ಹಿಂದೂ-ಮುಸ್ಲಿಂ ಕಂದರ ಹಿರಿದಾಗಬಹುದು ಎಂಬ ಸಂದೇಹ ನೆಹರೂ ಅವರಿಗಿತ್ತು. ಅರಬ್ ರಾಷ್ಟ್ರಗಳ ಜೊತೆಗಿನ ವಾಣಿಜ್ಯ ಪಾಲುದಾರಿಕೆಯನ್ನು ಕಾಯ್ದುಕೊಳ್ಳಲು, ಅರಬ್ ರಾಷ್ಟ್ರಗಳ ಪರ ನಿಲ್ಲುವುದೇ ಸರಿ ಎನಿಸಿತ್ತು.

ಮುಖ್ಯವಾಗಿ, ನಾವು ಇಸ್ರೇಲ್ ಪರ ನಿಂತರೆ, ಅರಬ್ ರಾಷ್ಟ್ರಗಳು ಪಾಕಿಸ್ತಾನದ ಬೆನ್ನಿಗೆ ನಿಲ್ಲಬಹುದು ಎಂಬ ಆತಂಕವಿತ್ತು. ಹೀಗಾಗಿ 1947ರ ನವೆಂಬರ್ 29 ರಂದು ಭಾರತ, ವಿಶ್ವಸಂಸ್ಥೆಯ ಪ್ಯಾಲೆಸ್ಟೀನ್ ವಿಭಜನೆ ಗೊತ್ತುವಳಿಯ ವಿರುದ್ಧ ಮತ ಚಲಾಯಿಸಿತು. ಆ ಗೊತ್ತುವಳಿಯನ್ನು ವಿರೋಧಿಸಿದ ಏಕೈಕ ಅರಬ್ಬೇತರ ದೇಶ ಭಾರತವಾಗಿತ್ತು! ಇತರ ದೇಶಗಳ ಬಹುಮತದ ಬೆಂಬಲದಿಂದಾಗಿ ಇಸ್ರೇಲ್ ರೂಪುಗೊಂಡಿತು.

ವಿಪರ್ಯಾಸವೆಂದರೆ, ಇಸ್ರೇಲ್ ವಿರುದ್ಧವಾಗಿ ಮತಹಾಕಿದ್ದ ನೆಹರೂ, 1962ರ ಯುದ್ಧದಲ್ಲಿ ಡೇವಿಡ್ ಬೆನ್‍ಗುರಿಯನ್ ಅವರ ಸಹಾಯ ಕೇಳಬೇಕಾಗಿ ಬಂತು. ಇಸ್ರೇಲ್ ಸ್ಪಂದಿಸಿತು. ಯುದ್ಧ ಸರಂಜಾಮನ್ನು ಒದಗಿಸಿತು. ಭಾರತ ಮಿತ್ರರೆಂದು ನೆಚ್ಚಿಕೊಂಡ ರಾಷ್ಟ್ರಗಳೇ ತಟಸ್ಥವಾಗಿ ಉಳಿದಾಗಲೂ, ಇಸ್ರೇಲ್ 1965 ಮತ್ತು 71ರ ಯುದ್ಧದಲ್ಲಿ ಭಾರತಕ್ಕೆ ಸಾಥ್‌ ನೀಡಿತು. ನಂತರ ಬಂದ ಸರ್ಕಾರಗಳೂ ಇಸ್ರೇಲ್‌ನೊಂದಿಗೆ ರಾಜತಾಂತ್ರಿಕ ಸಂಬಂಧಕ್ಕೆ ಮುಂದಾಗಲಿಲ್ಲ.

ಅದಕ್ಕೆ ‘ವೋಟ್ ಬ್ಯಾಂಕ್’ ರಾಜಕಾರಣ ಎಂಬ ಹೊಸ ಕಾರಣವೊಂದು ಸೇರ್ಪಡೆಯಾಗಿತ್ತು. ಇಂದಿರಾ ಗಾಂಧಿ ರಾಜತಾಂತ್ರಿಕವಾಗಿ ನೆಹರೂ ಪಥವನ್ನೇ ತುಳಿದರಾದರೂ, ಭಯೋತ್ಪಾದನೆಯ ನಿಯಂತ್ರಣಕ್ಕೆ ಇಸ್ರೇಲ್ ಸಹಾಯದ ಅಗತ್ಯವನ್ನು ಮನಗಂಡಿದ್ದರು. 1968ರಲ್ಲಿ ಭಾರತ ಗುಪ್ತಚರ ಸಂಸ್ಥೆ ‘ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್’ ಆರಂಭವಾದಾಗ, ಇಸ್ರೇಲ್ ಗುಪ್ತಚರ ಸಂಸ್ಥೆ ‘ಮೊಸಾದ್’ ಅನ್ನು ಮಾದರಿಯಾಗಿಟ್ಟುಕೊಳ್ಳುವಂತೆ ಸೂಚಿಸಿದ್ದರು.

ಸೋವಿಯತ್ ರಷ್ಯಾ ಪತನದಿಂದ, ಜಾಗತಿಕವಾಗಿ ಅಮೆರಿಕ ಏಕಶಕ್ತಿ ಕೇಂದ್ರವಾಗಿ ರೂಪುಗೊಳ್ಳುವ ತನಕವೂ ಇಸ್ರೇಲ್ ಜೊತೆ ನಾವು ರಾಜತಾಂತ್ರಿಕ ಸಂಬಂಧಕ್ಕೆ ಮುಂದಾಗಲಿಲ್ಲ! 1992ರಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ದೆಹಲಿಯಲ್ಲಿ ರಾಯಭಾರಿ ಕಚೇರಿ ತೆರೆಯಲು ಇಸ್ರೇಲ್‌ಗೆ ಅನುಮತಿಯಿತ್ತು, ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ನೀರೆರೆದರು.

ನಂತರ ವಾಜಪೇಯಿ ಪ್ರಥಮ ಬಾರಿಗೆ ಇಸ್ರೇಲ್ ಪ್ರಧಾನಿಯನ್ನು ಆಹ್ವಾನಿಸಿ ರಕ್ಷಣೆ, ವಿಜ್ಞಾನ, ಕೃಷಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಇಸ್ರೇಲ್ ನಂಟನ್ನು ಗಟ್ಟಿಗೊಳಿಸಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಇಸ್ರೇಲ್‌ಗೆ ಭೇಟಿ ಕೊಟ್ಟಾಗ ಆ ಸ್ನೇಹ ವಿಸ್ತಾರವಾಯಿತು.

ಈಗಿನ ಪ್ರಧಾನಿ ನರೇಂದ್ರ ಮೋದಿ, ಮೊದಲಿನಿಂದಲೂ ಇಸ್ರೇಲ್ ಬಗ್ಗೆ ಒಲವುಳ್ಳವರು, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಇಸ್ರೇಲ್‌ನ ತಂತ್ರಜ್ಞಾನ ಕೌಶಲವನ್ನು ರಾಜ್ಯದ ಅಭಿವೃದ್ಧಿಗೆ ಬಳಸಿಕೊಂಡವರು. ಇಂದು ಭಾರತ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಇಸ್ರೇಲ್ ಸಹಕಾರ ಮತ್ತು ಸಹಭಾಗಿತ್ವ ಪರಿಹಾರ ಸೂಚಿಸಬಲ್ಲದು ಎಂಬುದು ಅವರಿಗೆ ತಿಳಿಯದ್ದಲ್ಲ. ಹಾಗಾಗಿ ಇಸ್ರೇಲ್‌ನೊಂದಿಗೆ ಬೆಸೆದುಕೊಳ್ಳುವ ತುಡಿತ ಮೋದಿಯವರಲ್ಲಿ ಕಾಣುತ್ತಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ನೇತನ್ಯಾಹು, ಮೋದಿ ಅವರನ್ನು ಭೇಟಿಯಾದಾಗ ‘ಭಾರತ- ಇಸ್ರೇಲ್ ದ್ವಿಪಕ್ಷೀಯ ಸಹಕಾರಕ್ಕೆ ಆಕಾಶವೇ ಮಿತಿ’ ಎನ್ನುವ ಮೂಲಕ ತಾವೂ ಉತ್ಸಾಹ ತೋರಿದ್ದರು. ಯಹೂದಿಗಳ ಮಹತ್ವದ ಹಬ್ಬ ‘ಹನುಕ’ಕ್ಕೆ ನರೇಂದ್ರ ಮೋದಿ ಹಿಬ್ರೂನಲ್ಲಿ ಶುಭಾಶಯ ಕೋರಿದರೆ, ನೇತನ್ಯಾಹು ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದರು.

ಮೊನ್ನೆ ನೇತನ್ಯಾಹು ಪುನರಾಯ್ಕೆಯಾದಾಗಲೂ ಅದು ಪುನರಾವರ್ತನೆಯಾಗಿದೆ. ಹಾಗಾಗಿ ಪಿ.ವಿ.ನರಸಿಂಹ ರಾವ್ ಕಾಲದಲ್ಲಿ ಚಿಗುರಿದ ಸ್ನೇಹ, ವಾಜಪೇಯಿ ಅವರ ಅವಧಿಯಲ್ಲಿ ಬೆಳೆದ ಬಾಂಧವ್ಯ, ಮೋದಿ ಅವರ ಅವಧಿಯಲ್ಲಿ ಮತ್ತಷ್ಟು ಗಟ್ಟಿಯಾಗುವ ಸೂಚನೆ ಕಾಣುತ್ತಿದೆ. ಭಾರತ ಸಂಕಷ್ಟದಲ್ಲಿದ್ದಾಗ ವಿಶ್ವಾಸಾರ್ಹತೆ ತೋರಿದ ಇಸ್ರೇಲ್ ಸ್ನೇಹವನ್ನು, ಬಹಿರಂಗವಾಗಿ ಅನುಮೋದಿಸಲು ಅಳುಕುವ ಕಾಲ ಇದಲ್ಲ.
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT