ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೋ ಸಾಧನೆಗೆ ಅಪಾರ ಅಭಿನಂದನೆ...

Last Updated 24 ಸೆಪ್ಟೆಂಬರ್ 2014, 14:11 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮೊದಲ ಯತ್ನದಲ್ಲೇ ಮಂಗಳಯಾನ ಯೋಜನೆ ಯಶಸ್ವಿಗೊಂಡ ಹಿನ್ನಲೆ ಇಸ್ರೋಗೆ ಬುಧವಾರ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಅಮೆರಿಕದ ‘ನಾಸಾ’ವರೆಗೆ ಎಲ್ಲರೂ ‘ಇಸ್ರೋ’ ಸಾಧನೆಯನ್ನು ಕೊಂಡಾಡಿದ್ದಾರೆ.

‘ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೋ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಹಾಗೂ ಶುಭಾಷಯಗಳು. ಈ ಐತಿಹಾಸಿಕ ಸಾಧನೆಯ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ’ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಟ್ವೀಟ್‌ ಮಾಡಿದ್ದಾರೆ.

‘ಭಾರತಕ್ಕೆ ಇದೊಂದು ಮೈಲಿಗಲ್ಲು ಸಾಧನೆ. ಈ ಸಾಧನೆಗೈದ ವಿಜ್ಞಾನಿಗಳಿಗೆ ವಂದನೆ ಸಲ್ಲಿಸಲು ನಾನು ದೇಶವನ್ನು ಒಟ್ಟುಗೂಡಿಸುವೆ’ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಪ್ರತಿಕ್ರಿಯಿಸಿದ್ದಾರೆ.

‘ಮಂಗಳಯಾನದ ಮೂಲಕ ಭಾರತವು ಜಗತ್ತಿನಲ್ಲಿ ಪ್ರಶಂಸನೀಯ ಸ್ಥಾನವನ್ನು ಗಳಿಸಿದೆ. ಸ್ವಾತಂತ್ರ್ಯ ನಂತರದ ಪಯಣದಲ್ಲಿ ಇದೊಂದು ಮೈಲಿಗಲ್ಲು’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶ್ಲಾಘಿಸಿದ್ದಾರೆ.

ಇತ್ತೀಚೆಗೆ ಅಂಗಾರಕನತ್ತ ಮಾವೆನ್‌ ನೌಕೆಯನ್ನು ಹಾರಿಬಿಟ್ಟಿರುವ ಅಮೆರಿಕದ ‘ನಾಸಾ’ ಕೂಡ ಇಸ್ರೋ ಸಾಧನೆಯನ್ನು ಕೊಂಡಾಡಿದೆ.

‘ಮಂಗಳಯಾನದ ಯಶಸ್ವಿಗಾಗಿ ಇಸ್ರೋಗೆ ಮಾವೆನ್‌ ತಂಡದ ಅಭಿನಂದನೆಗಳು. ಅಂಗಾರಕವನ್ನು ಅಧ್ಯಯನ ಮಾಡುವ ಯೋಜನೆಗಳಿಗೆ ಮಾಮ್‌ ಸೇರ್ಪಡೆಯಾಗಿದೆ’ ಎಂದು ನಾಸಾ ಟ್ವೀಟ್‌ ಮಾಡಿದೆ.

‘ಜೈಹಿಂದ್. ಭಾರತವು ಅಂಗಾರಕ ತಲುಪಿದ ಮೊದಲ ಏಷ್ಯನ್‌ ರಾಷ್ಟ್ರ. ಅದೂ ಮೊದಲ ಯತ್ನದಲ್ಲೇ. ಇಸ್ರೋದ ವಿಜ್ಞಾನಿಗಳು ಇದಕ್ಕಿಂತ ಸಂತೋಷದ ವಿಷಯ ಮತ್ತೇನು ನೀಡಬಲ್ಲರು. ಅಭಿನಂದನೆಗಳು’ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT