ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಮಿಕ್ ಸ್ಟೇಟ್‌ನ ಹಣದ ಮೂಲ...

ಸುದ್ದಿ ವಿವರಣೆ
Last Updated 22 ನವೆಂಬರ್ 2015, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಮುಸ್ಲಿಮರು ನೆಲೆಸಿ­ರುವ ಪ್ರದೇಶ­ಗಳನ್ನೆಲ್ಲ ತನ್ನ ರಾಜಕೀಯ ನಿಯಂತ್ರಣಕ್ಕೆ ತರುವ ಮಹತ್ವಾಕಾಂಕ್ಷೆ ಹೊಂದಿರುವ ಉಗ್ರಗಾಮಿ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್‌­), ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಪೈಶಾಚಿಕ ದಾಳಿ ನಡೆಸಿ ಮತ್ತೊಮ್ಮೆ ಇಡೀ ವಿಶ್ವದ ಗಮನ ಸೆಳೆದಿದೆ. ಈ ಸಂಘಟನೆಯು ಅಲ್ಪಾವಧಿಯಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿರುವುದು ಜಾಗತಿಕ ಮುಖಂಡರ ನಿದ್ದೆಗೆಡಿಸಿದೆ.

ಯುದ್ಧ,  ಭಯೋತ್ಪಾದನೆ ದಾಳಿ, ಶಸ್ತ್ರಾಸ್ತ್ರ ಖರೀದಿ, ಸಂಬಳ, ಪ್ರಚಾರ ಅಭಿಯಾನ, ಪ್ರಯಾಣ ವೆಚ್ಚ, ಧಾರ್ಮಿಕ ಪೊಲೀಸ್‌ ಪಡೆ ಮತ್ತಿತರ ಉದ್ದೇಶಗಳಿಗೆ ಇದು ಹಣ ಹೇಗೆ ಸಂಗ್ರಹಿಸುತ್ತಿದೆ ಎನ್ನುವುದು ಕುತೂಹಲದ ಸಂಗತಿಯಾಗಿದೆ. ತನ್ನ ಪರವಾಗಿ ಹೋರಾಡುವವರಿಗೆ ‘ಐಎಸ್‌’, ಪ್ರತಿ ತಿಂಗಳು ಅಂದಾಜು 400 ಡಾಲರ್‌ಗಳನ್ನು (₹ 26 ಸಾವಿರ) ಪಾವತಿಸುತ್ತಿದೆ.  ಇದು ಇರಾಕ್‌ ಸರ್ಕಾರ ತನ್ನ ನೌಕರರಿಗೆ ನೀಡುವ ವೇತನಕ್ಕಿಂತ ಹೆಚ್ಚಿಗೆ ಇದೆ.

ಇತ್ತೀಚಿನ ದಿನಗಳಲ್ಲಿ ‘ಐಎಸ್‌’, ಜಗತ್ತಿನ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿಯೂ ಬೆಳೆದಿರುವುದು, ಅದರ ಕಾರ್ಯಾಚರಣೆಗಳಿಗೆ ಹಣದ ಕೊರತೆ ಎದುರಾಗದಿರುವುದು, ಹಣಕಾಸು ಸಂಪನ್ಮೂಲ ಸಂಗ್ರಹ ವಿಧಾನವು ಇತರ ಉಗ್ರಗಾಮಿ ಸಂಘಟನೆಗಳಿಗಿಂತ ಭಿನ್ನವಾಗಿರುವುದು  ಚಿಂತೆಗೆ ಕಾರಣವಾಗಿದೆ. 

‘ಐಎಸ್‌’ಗೆ ವಿದೇಶಗಳಿಂದ ಹರಿದು ಬರುವ ಹಣಕಾಸಿನ ನೆರವು ಅಮೆರಿಕದ ಪ್ರಯತ್ನದಿಂದ ನಿಂತು ಹೋಗಿದ್ದರೂ, ಅದಕ್ಕೆ ಹಣದ ಕೊರತೆ  ಎದುರಾಗಿಲ್ಲ. ಇದು ಅಂತರರಾಷ್ಟ್ರೀಯ ಹಣಕಾಸು ನೆರವನ್ನೂ  ನೆಚ್ಚಿಕೊಂಡಿಲ್ಲ. ಇದರ ಹಣದ ಮೂಲಗಳು ಭಿನ್ನವಾಗಿವೆ.

ಒಂದು ಮೂಲದಿಂದ ಬರುವ ನೆರವು ನಿಂತು ಹೋದರೆ, ಮತ್ತೊಂದು ಮಾರ್ಗೋಪಾಯ ಕಂಡುಕೊಳ್ಳುವ ಚಾಣಾಕ್ಷತೆಯನ್ನು ಈ ಸಂಘಟನೆ ಅನುಸರಿಸುತ್ತಿದೆ. ಕಾಳಸಂತೆಯಲ್ಲಿ ಕಚ್ಚಾ ತೈಲ ಮಾರಾಟ, ಒತ್ತೆ ಹಣ ಮತ್ತು ಸುಲಿಗೆಯ ಮೂಲಕವೂ ಕೋಟ್ಯಂತರ ಡಾಲರ್‌  ಗಳಿಸುತ್ತಿದೆ. ದಾಳಿ ಮೂಲಕ ಹೆಚ್ಚೆಚ್ಚು ಪ್ರದೇಶಗಳನ್ನು ವಶಪಡಿಸಿ ಕೊಂಡಷ್ಟೂ ವರಮಾನದ ಮೂಲಗಳೂ ಹೆಚ್ಚುತ್ತಿವೆ.

2008ರಲ್ಲಿ ಪ್ರತಿ ತಿಂಗಳ ವರಮಾನ 10 ಲಕ್ಷ ಡಾಲರ್‌ಗಳಿದ್ದರೆ, 2014ರಲ್ಲಿ ಇದು ಪ್ರತಿ ದಿನ 30 ಲಕ್ಷ ಡಾಲರ್‌ಗಳಿಗೆ ಏರಿಕೆಯಾಗಿತ್ತು.
ಹಣಕಾಸಿನ ಮೂಲಗಳು: ಸಿರಿಯಾ ಮತ್ತು ಇರಾಕ್‌ಗಳಲ್ಲಿ ವಶಪಡಿಸಿಕೊಂಡಿರುವ ತೈಲ ನಿಕ್ಷೇಪಗಳು  ಹಣಕಾಸಿನ ಪ್ರಮುಖ ಮೂಲಗಳಾಗಿವೆ.  ತೈಲ ಬಾವಿಗಳಿಂದ ಹೊರ ತೆಗೆಯುವ ಕಚ್ಚಾ ತೈಲದ ಮಾರಾಟ ಅಕ್ರಮವಾಗಿರುವುದರಿಂದ ಕಳ್ಳಸಾಗಣೆದಾರರಿಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ತನ್ನ ವಶದಲ್ಲಿರುವ  ಪ್ರದೇಶಗಳ ನಿವಾಸಿಗಳ ಮೇಲೆ ತೆರಿಗೆ ಹೇರಿಕೆ, ವಿದೇಶಿಯರಲ್ಲದೆ, ತನ್ನದೇ ಸಮುದಾಯದವರ ಅಪಹರಣ ಮತ್ತು ಸುಲಿಗೆ ರೂಪದಲ್ಲಿಯೂ  ಸಂಘಟನೆ ಹಣ ಸಂಗ್ರಹಿಸುತ್ತಿದೆ. ಸೌದಿ ಅರೇಬಿಯಾ, ಕತಾರ್, ಕುವೈತ್‌, ಅರಬ್‌ ಅಮೀರರ ಒಕ್ಕೂಟ ದಲ್ಲಿನ (ಯುಎಇ) ಶ್ರೀಮಂತರು ಮತ್ತು ದಾನಿಗಳು ದೇಣಿಗೆ ನೀಡುತ್ತಿದ್ದಾರೆ. 

ತನ್ನ ವಶಕ್ಕೆ ಬರುವ ಪ್ರದೇಶಗಳಲ್ಲಿನ ವಸ್ತುಸಂಗ್ರಹಾಲಯ, ಖಾಸಗಿ ಸಂಗ್ರಹ ಮತ್ತು  ಪ್ರಾಚ್ಯವಸ್ತು ತಾಣಗಳಲ್ಲಿನ ಐತಿಹಾಸಿಕ ಅಮೂಲ್ಯ ಕಲಾಕೃತಿಗಳ ಮಾರಾಟದಿಂದಲೂ ಹಣ ಸಂಗ್ರಹಿಸಲಾಗುತ್ತಿದೆ. ಇರಾಕ್‌ನಲ್ಲಿನ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿನ ಅಪಾರ ಪ್ರಮಾಣದ ಸಂಪತ್ತು ಉಗ್ರರ ವಶವಾಗಿದೆ. ದೇಶ ತೊರೆದ ಅಥವಾ ಯುದ್ಧದಲ್ಲಿ ಮೃತಪಟ್ಟವರ ಆಸ್ತಿಗಳನ್ನು ಬಾಡಿಗೆ ನೀಡುವ ಅಥವಾ ಮಾರಾಟ ಮಾಡುವ ಮೂಲಕವೂ ಹಣ ಸಂಗ್ರಹವಾಗುತ್ತಿದೆ.

‘ಐಎಸ್‌’ ಹೋರಾಟದಲ್ಲಿ ಭಾಗಿಯಾಗಲು ವಿಶ್ವದ ವಿವಿಧ ಭಾಗಗಳಿಂದ ಬರುವವರು ತಮ್ಮ ಜತೆ ತರುವ ಅಲ್ಪಸ್ವಲ್ಪ ಕರೆನ್ಸಿಗಳೂ ಸಂಘಟನೆಯ ಸಂಪತ್ತಿನ ಭಾಗವಾಗುತ್ತಿವೆ. ಇದರ ಜತೆಗೆ ವಶಪಡಿಸಿಕೊಂಡ ಪ್ರದೇಶದಲ್ಲಿನ ಕೃಷಿ ಉತ್ಪನ್ನ  ಮತ್ತು  ನೈಸರ್ಗಿಕ ಸಂಪನ್ಮೂಲಗಳ ಮಾರಾಟದಿಂದಲೂ ಸಾಕಷ್ಟು ಸಂಪತ್ತು ಹರಿದು ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT