ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟ್‌ನಲ್ಲಿ ಸರಣಿ ದಾಳಿ: 33 ಮಂದಿ ಸಾವು

ಐ.ಎಸ್‌ ನಂಟು ಹೊಂದಿದ ಉಗ್ರರ ಕೃತ್ಯ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಈಜಿಪ್ಟ್‌ನ ಉತ್ತರ ಸಿನಾಯ್‌ನಲ್ಲಿ ಉಗ್ರರು ಗುರುವಾರ ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ 27 ಸೈನಿಕರು ಮತ್ತು ಐವರು ನಾಗರಿಕರು ಸೇರಿದಂತೆ 33 ಜನರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರರಿಗೆ ನಿಷ್ಠರಾಗಿರುವುದಾಗಿ ಇತ್ತೀಚೆಗಷ್ಟೇ ಹೇಳಿಕೊಂಡಿದ್ದ ಉಗ್ರರ ಗುಂಪು, ಅಲ್‌ ಅರಿಶ್‌ ಪ್ರಾಂತೀಯ ರಾಜಧಾನಿಯಲ್ಲಿರುವ ಭದ್ರತಾ ನಿರ್ದೇಶನಾಲಯ, ಪೊಲೀಸ್‌ ಕೇಂದ್ರ ಕಚೇರಿ, ಹೋಟೆಲ್‌, ಸೇನಾ ಘಟಕ ಮತ್ತು ಸೇನಾ ಹಾಗೂ ಪೊಲೀಸ್‌ ವಸತಿ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿದೆ.

ಪ್ರತ್ಯೇಕ ದಾಳಿಗಳಲ್ಲಿ ಹಲವು ಸುತ್ತು ಗುಂಡು ಹಾರಿಸಿದ ಉಗ್ರರು, ಕನಿಷ್ಠ ಮೂರು ಕ್ಷಿಪಣಿಗಳನ್ನು ಸಿಡಿಸಿದರು. ಕಾರ್‌ ಬಾಂಬ್‌ಗಳನ್ನು ಸ್ಫೋಟಿಸಿದರು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಮೃತಪಟ್ಟ ನಾಗರಿಕರಲ್ಲಿ ಆರು ತಿಂಗಳ ಶಿಶು ಮತ್ತು ಒಂದು ಮಗು ಸೇರಿವೆ.

ಸುಯೆಜ್‌ನ ಕೆನಲ್ ನಗರದಲ್ಲಿ ಪೊಲೀಸ್‌ ಕಟ್ಟಡವೊಂದನ್ನು ಗುರಿಯಾಗಿ­ರಿಸಿ­ಕೊಂಡು ನಡೆಸಿದ ಬಾಂಬ್‌ ದಾಳಿಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಸಾವಿಗೀ­ಡಾ­ಗಿದ್ದಾರೆ. ಗಾಜಾ ಪಟ್ಟಿಯ ರಾಫಾ ಪಟ್ಟಣದ ತಪಾಸಣಾ ನೆಲೆಯ ಮೇಲೆ ನಡೆದ ಮತ್ತೊಂದು ರಾಕೆಟ್‌ ದಾಳಿಯಲ್ಲಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಕಳೆದ ಅಕ್ಟೋಬರ್‌ 25ರಂದು ಉತ್ತರ ಸಿನಾಯ್‌ನಲ್ಲಿ ನಡೆದ ಕಾರ್‌ ಬಾಂಬ್‌ ದಾಳಿಯಲ್ಲಿ 31 ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ಆಗ ವಿಧಿಸಲಾಗಿದ್ದ ಕರ್ಫ್ಯೂವನ್ನು ಕಳೆದ ವಾರವಷ್ಟೇ ಮತ್ತೆ ಮೂರು ತಿಂಗಳು ವಿಸ್ತರಿಸಲಾಗಿತ್ತು. ಐ.ಎಸ್‌ ಉಗ್ರರ ಈಜಿಪ್ಟ್‌ ಘಟಕ ಅನ್ಸರ್‌ ಬೈಯತ್ ಅಲ್‌ ಮಕ್ದಿಸ್‌ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT