ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದಲ್ಲಿ ಪೋಲಾಗುವ ನೀರಿನ ಪ್ರಮಾಣ ತಡೆಗಟ್ಟಿ

ಭೂ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಎಚ್.ಎಸ್.ಎಂ.ಪ್ರಕಾಶ್ ಸಲಹೆ
Last Updated 26 ಮಾರ್ಚ್ 2015, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ನೀರು ಅಪಾರ ಪ್ರಮಾಣದಲ್ಲಿ   ಪೋಲಾಗುವುದನ್ನು ತಪ್ಪಿಸಲು   ನಗರದ  ಅಪಾರ್ಟ್‌ಮೆಂಟ್‌ಗಳಲ್ಲಿ     ಈಜುಕೊಳ ನಿರ್ಮಿಸುವುದನ್ನು ತಡೆಯಬೇಕು’   ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ನಿರ್ದೇಶಕ ಡಾ.ಎಚ್.ಎಸ್.ಎಂ.ಪ್ರಕಾಶ್  ಹೇಳಿದರು.

ದಯಾನಂದ ಸಾಗರ್ ‌ಶಿಕ್ಷಣ ಸಂಸ್ಥೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿ ಇಲಾಖೆ  ಸಹಯೋಗದೊಂದಿಗೆ ನಗರದಲ್ಲಿ  ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಜಲದಿನಾಚರಣೆ  ಪ್ರಯುಕ್ತ  ‘ನೀರು  ಮತ್ತು  ಸುಸ್ಥಿರ ಅಭಿವೃದ್ಧಿ’ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಜನಸಂಖ್ಯೆ ಹೆಚ್ಚಳದಿಂದಾಗಿ ನೀರಿನ  ಅಭಾವ ಹೆಚ್ಚಾಗಿದೆ. ನಗರದ ಬಹುತೇಕ  ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳ ನಿರ್ಮಿಸಿ,  ಮೋಜು ಮಸ್ತಿಗಾಗಿ ನೀರನ್ನು  ಪೋಲು ಮಾಡಲಾಗುತ್ತಿದೆ.  ಇದರಿಂದ ವ್ಯರ್ಥವಾಗಿ ನೀರು ಪೋಲಾಗುತ್ತಿದೆ.  ಸರ್ಕಾರವು ಈ ಕುರಿತು ಸೂಕ್ತ  ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಈಗಾಗಲೇ  ನಿರ್ಮಿಸಲಾಗಿರುವ ಈಜುಕೊಳಗಳಲ್ಲಿ ಕನಿಷ್ಠ ಬೇಸಿಗೆ  ಸಮಯದಲ್ಲಿ ನೀರಿನ ಬಳಕೆಯನ್ನು  ನಿಷೇಧಿಸಬೇಕು. ಈ ಮೂಲಕ ನೀರಿನ ಮಹತ್ವವನ್ನು ಸಾರಿ ಹೇಳ ಬೇಕಾಗಿದೆ’ ಎಂದರು. ‘ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ರಾಜ್ಯದಲ್ಲಿ ಖನಿಜ ನಿಕ್ಷೇಪಗಳನ್ನು ಪತ್ತೆ ಮಾಡಲು 2002 ರಲ್ಲಿ ಆರಂಭಿಸಿದ್ದ  ‘ನ್ಯಾಷನಲ್ ಜಿಯೋ ಕೆಮಿಕಲ್ ಮ್ಯಾಪಿಂಗ್ ಯೋಜನೆಯು  ಈಗಾಗಲೇ  ಶೇ 80 ರಷ್ಟು  ಅಂಕಿ ಅಂಶಗಳನ್ನು ಕಲೆ ಹಾಕಿದೆ’ ಎಂದು ನುಡಿದರು.

‘ರಾಜ್ಯದ  ಯಾವ ಭಾಗದಲ್ಲಿ ಖನಿಜ ನಿಕ್ಷೇಪಗಳನ್ನು ಹೆಚ್ಚಾಗಿವೆ ಎಂಬ ಅಂಕಿ ಅಂಶಗಳನ್ನು  ಸಂಗ್ರಹಿಸಿದ್ದೇವೆ.  ಈ ಕಾರ್ಯವು 2017ರಲ್ಲಿ  ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು. ‘ನೈಸರ್ಗಿಕ ಸಂಪನ್ಮೂಲಗಳಾದ  ಅದಿರು, ಮ್ಯಾಂಗನೀಸ್  ಸೇರಿದಂತೆ  62 ರೀತಿಯ  ವಿವಿಧ ಖನಿಜ ಸಂಪನ್ಮೂಲಗಳು ಇರುವುದು  ಅಧ್ಯಯನದಲ್ಲಿ ದೃಢಪಟ್ಟಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಇರುವುದು ಅಧ್ಯಯನದಿಂದ  ತಿಳಿದು ಬಂದಿದೆ’ ಎಂದರು.

ಪರಿಸರವಾದಿ  ಎ.ಎನ್.ಯಲ್ಲಪ್ಪ ರೆಡ್ಡಿ ಮಾತನಾಡಿ, ‘ಮಳೆ ಬಂದಾಗ ಬಹುಪಾಲು ನೀರು ನಿಲ್ಲದೇ ಹರಿದು ವ್ಯರ್ಥವಾಗುತ್ತಿದೆ. ಇದಕ್ಕೆ ಕೆರೆ, ಕಟ್ಟೆಗಳ ಒತ್ತುವರಿ, ನೀರು ಹರಿಯುವ ರಾಜ ಕಾಲುವೆಗಳನ್ನು ಮುಚ್ಚಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವುದೇ ಕಾರಣವಾಗಿದೆ. ಈ ಸಲುವಾಗಿ ನೀರು ಸಂರಕ್ಷಣೆ  ಮಾಡಲು ಇರುವ  ಎಲ್ಲಾ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ತಿಪ್ಪಗೊಂಡನಹಳ್ಳಿ ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಅಕ್ರಮವಾಗಿ ಗಣಿಗಾರಿಕೆ ಮತ್ತು ಭೂ ಒತ್ತುವರಿಯಿಂದ  ಕೆರೆ ನೀರಿನ ಹರಿವು ಕಡಿಮೆಯಾಗಿದೆ.    ಜನರ ದುರಾಸೆಯೇ ಇದಕ್ಕೆ   ಕಾರಣವಾಗಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT