ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಡುಗೆ ಅಪಸ್ವರವೇಕೆ?

Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಟೆನಿಸ್, ಬ್ಯಾಡ್ಮಿಂಟನ್, ಈಜು, ಜಿಮ್ನಾಸ್ಟಿಕ್ಸ್‌ ಸೇರಿದಂತೆ ಬಹಳಷ್ಟು ಕ್ರೀಡೆಗಳಲ್ಲಿ ಮಹಿಳೆಯರ ಸಮವಸ್ತ್ರ ಅವರ ಬೆಳವಣಿಗೆಗೆ ಹಿನ್ನಡೆಯಾಗುತ್ತಿದೆ ಎನ್ನುವುದು ಒಲಿಂಪಿಯನ್ ಈಜುಗಾರ್ತಿ ಮತ್ತು ಕೋಚ್ ನಿಶಾ ಮಿಲ್ಲೆಟ್ ವಾದ. ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆ.

ಇವತ್ತು ಯಾವುದೇ ಈಜುಕೊಳಕ್ಕೆ ಭೇಟಿ ನೀಡಿದರೆ ಜೂನಿಯರ್ ವಿಭಾಗದ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಈಜು ಕಲಿಯುವುದನ್ನು ನೋಡಬಹುದು. ಸ್ಪರ್ಧೆಗಳಲ್ಲಿಯೂ ಬಾಕಿಯರದ್ದೇ ಸಂಖ್ಯೆ ಜಾಸ್ತಿ. ಆದರೆ, ಸೀನಿಯರ್ (18 ವರ್ಷಕ್ಕಿಂತ ಮೇಲಿನವರು) ವಿಭಾಗದಲ್ಲಿ ಬೆರಳೆಣಿಕೆಯಷ್ಟು ಹುಡುಗಿಯರು ಕಾಣುತ್ತಾರೆ. ಈಜುಡುಗೆಯ ಬಗೆಗಿನ ಮುಜುಗರವೇ ಇದಕ್ಕೆ ಪ್ರಮುಖ ಕಾರಣ. 

ಒಬ್ಬ ಬಾಲಕಿಯು  7–8ನೇ ವಯಸ್ಸಿನಲ್ಲಿ ಈಜು ಕಲಿಯಲು ಆರಂಭಿಸುತ್ತಾಳೆ. 16–17ನೇ ವಯಸ್ಸಿನವರೆಗೆ ಜೂನಿಯರ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಲ್ಪಸ್ವಲ್ಪ ಸಾಧನೆ ಮಾಡಿರುತ್ತಾಳೆ. ಆದರೆ, ಉನ್ನತ ಸಾಧನೆ ಮಾಡಲು ಅವಕಾಶ ಇರುವುದು 17 ರಿಂದ 25 ವಯಸ್ಸಿನ ಅವಧಿಯಲ್ಲಿ. ಆದರೆ ಅದೇ ಹಂತದಲ್ಲಿ ಆಕೆಯನ್ನು ಈಜಿನಿಂದ ಬಿಡಿಸಲಾಗುತ್ತಿದೆ.

ಇಲ್ಲಿ ಮೊದಲನೇಯದಾಗಿ ಈಜುಡುಗೆಯ ಮುಜುಗರ ಪ್ರಮುಖ ಕಾರಣ. ಈಜುಕೊಳಗಳಲ್ಲಿ ಪುರುಷ ಕೋಚ್‌ಗಳಿರುತ್ತಾರೆ ಎಂಬುದು ಇನ್ನೊಂದು ಕಾರಣ. ಬಹಳಷ್ಟು ಪಾಲಕರಿಗೆ ತಮ್ಮ ಹೆಣ್ಣುಮಕ್ಕಳು 21–22 ವಯಸ್ಸು ದಾಟಿದಾಕ್ಷಣ ಮದುವೆ ಮಾಡಬೇಕು ಎಂಬ ಧಾವಂತ  ಇರುತ್ತದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹಂತಕ್ಕೆ ಬೆಳೆಯುವ ವಯಸ್ಸಿನಲ್ಲಿಯೇ ಈಜುಕೊಳಕ್ಕೆ ವಿದಾಯ ಹೇಳುತ್ತಾರೆ.

ಇವತ್ತು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪರಿಸ್ಥಿತಿ ಬದಲಾಗುತ್ತಿದೆ. ಈಜುಡುಗೆಯ ವಿನ್ಯಾಸಗಳು ಬದಲಾಗುತ್ತಿವೆ. ಮೊಣಕಾಲಿನವರೆಗೂ ಮುಚ್ಚುವಂತಹ ಹಗುರವಾದ ಈಜುಡುಗೆಗಳು ಲಭ್ಯ ಇವೆ. ಈಜುಡುಗೆಗಳು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಅದಕ್ಕಾಗಿಯೇ ಅವುಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪ್ರಮುಖವಾಗಿ ಪಾಲಕರ ಮನೋಭಾವ ಬದಲಾಗಬೇಕು.

ಮಗಳು ಕೇವಲ ಎಂಜಿನಿಯರ್, ಡಾಕ್ಟರ್, ಟೀಚರ್ ಮಾತ್ರ ಏಕಾಗಬೇಕು? ಈಜುಗಾರ್ತಿ ಅಥವಾ ದೀಪಾ ಕರ್ಮಾಕರ್ ಅವರಂತೆ ಜಿಮ್ನಾಸ್ಟ್ ಆಗಬಹುದಲ್ಲವೇ? ಈಜು, ಜಿಮ್ನಾಸ್ಟಿಕ್ಸ್‌ ಎರಡರಲ್ಲೂ ಇರುವ ಸಮಸ್ಯೆ ಒಂದೇ. ಉಡುಗೆಯ ಮುಜುಗರದಿಂದಲೇ ಜಿಮ್ನಾಸ್ಟಿಕ್ಸ್‌ನಿಂದ ವಿಮುಖರಾದ ಆಟಗಾರ್ತಿಯರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಆದರೂ ಛಲ ಬಿಡದೇ ಮುಂದುವರೆದರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ದೀಪಾ ಉದಾಹರಣೆಯಾಗುತ್ತಾರೆ.

ಕರ್ನಾಟಕವು ಮೊದಲಿನಿಂದಲೂ ಈಜು ಕ್ರೀಡೆಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ, ಕ್ರಿಕೆಟ್, ಟೆನಿಸ್‌ ಕ್ರೀಡೆಗಳಲ್ಲಿ ಇರುವಂತೆ ಆರ್ಥಿಕ ಮತ್ತು ಉದ್ಯೋಗ ಅವಕಾಶಗಳು ಇಲ್ಲಿ ಇಲ್ಲ. ಪ್ರಾಯೋಜಕತ್ವ ಮತ್ತು ಉದ್ಯೋಗಾವಕಾಶಗಳು ಹೆಚ್ಚಿದರೆ ಈಜು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ. ಈಜು ಕ್ರೀಡೆಯನ್ನು ವೃತ್ತಿಪರಗೊಳಿಸಬೇಕು.

ಈಗ ನನ್ನನ್ನೇ ನೋಡಿ. ನನ್ನ ನೆಚ್ಚಿನ ಹವ್ಯಾಸವಾದ ಈಜು ಕ್ರೀಡೆಯನ್ನೇ ನನ್ನ ಉದ್ಯೋಗವನ್ನಾಗಿಯೂ ಮಾಡಿಕೊಂಡಿದ್ದೇನೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಬದಲಿಗೆ ನನ್ನ ನೆಚ್ಚಿನ ಈಜುಕೊಳದಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತ, ನಾನೂ ಈಜುತ್ತ ಕಾಲ ಕಳೆಯುತ್ತಿದ್ದೇನೆ. ನನಗೆ ನನ್ನ ಉದ್ಯೋಗದಲ್ಲಿ ಉತ್ತಮ ಆದಾಯದ ಜೊತೆಗೆ, ಆತ್ಮಸಂತೃಪ್ತಿಯೂ ಇದೆ.

ನಾನು 24ನೇ ವಯಸ್ಸಿನಲ್ಲಿ ಕ್ರೀಡೆಗೆ ವಿದಾಯ ಹೇಳಲು ಕೆಲವು ಕಾರಣಗಳಿದ್ದವು. ಈಜು ದುಬಾರಿ ಕ್ರೀಡೆ. ನನ್ನ ತಂದೆ, ತಾಯಿ ನನಗಾಗಿ ಮನೆಯನ್ನೇ ಮಾರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಸಾಲ ಕೂಡ ಮಾಡಿದ್ದರು. ಅವರಿಗೆ ಆಸರೆಯಾಗುವುದೂ ನನ್ನ ಕರ್ತವ್ಯವಾಗಿತ್ತು. ಅದನ್ನು ನಿಭಾಯಿಸಿದ ಖುಷಿ ಮತ್ತು ಹೆಮ್ಮೆ ನನಗಿದೆ. ನನ್ನ ಪತಿ ಮತ್ತು ಅವಳಿ ಪುತ್ರಿಯರು ಇರುವ ಸುಖಸಂಸಾರ ನಮ್ಮದು.

ನನ್ನ ಮಕ್ಕಳಿಗೆ ಈಗ ಎರಡೂವರೆ ವರ್ಷ. ಅವರು ಈಜುಗಾರ್ತಿಯಾಗುತ್ತಾರೋ ಅಥವಾ ಬೇರೆ ಕ್ರೀಡೆಯಲ್ಲಿ ಮಿಂಚುತ್ತಾರೋ ಗೊತ್ತಿಲ್ಲ. ಆದರೆ, ಅವರನ್ನು ಕ್ರೀಡಾಪಟುವನ್ನಾಗಿ ಮಾಡುವ ಗುರಿ ನಮ್ಮದು. ಆಟ ಆಡುವವರೆಲ್ಲರೂ ಒಲಿಂಪಿಕ್ಸ್‌ ಪದಕ ಗೆಲ್ಲುವುದಿಲ್ಲ. ಆದರೆ, ಅದರಿಂದ ಸಿಗುವ ಆರೋಗ್ಯ, ಮನೋಲ್ಲಾಸ ಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.

ನಿಶಾ ಮಿಲ್ಲೆಟ್ ಬಗ್ಗೆ..
ಭಾರತದ ಈಜು ಕ್ರೀಡೆಯಲ್ಲಿ ಪ್ರಮುಖ ಹೆಸರು ನಿಶಾ ಮಿಲ್ಲೆಟ್. 12ನೇ ವಯಸ್ಸಿನಲ್ಲಿಯೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದರು. ಮೂಲತಃ ಚೆನ್ನೈನ ಮಿಲ್ಲೆಟ್ ಕುಟುಂಬವು ಮಗಳನ್ನು ಈಜುಪಟುವನ್ನಾಗಿ ಬೆಳೆಸುವ ಉದ್ದೇಶದಿಂದ ಬೆಂಗಳೂರಿಗೆ ಬಂದು ನೆಲೆಸಿತು. ಇಲ್ಲಿಯ ಬಸವನಗುಡಿ ಅಕ್ವೆಟಿಕ್ ಕ್ಲಬ್‌ನಲ್ಲಿ ನಿಶಾ ತರಬೇತಿ ಪಡೆದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಮಿಂಚಿದರು.

ಸಿಡ್ನಿ ಒಲಿಂಪಿಕ್ಸ್‌ನಲ್ಲಿ (2000 ಇಸವಿ)ಭಾರತವನ್ನು ಪ್ರತಿನಿಧಿಸಿದ್ದರು. 2004ರಲ್ಲಿ ಸ್ಪರ್ಧಾತ್ಮಕ ಈಜು ಕ್ರೀಡೆಗೆ ವಿದಾಯ ಹೇಳಿದ್ದರು. ಅದರ ನಂತರ ಪೂರ್ಣಾವಧಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ನಿಶಾ ಮಿಲ್ಲೆಟ್ ಈಜು ತರಬೇತಿ ಅಕಾಡೆಮಿ’ಯನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಸ್ಪೀಡೊ ಟೀಮ್ ಇಂಡಿಯಾದ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಅವರಿಗೆ ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT