ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುವವರಿಗೆ ಕಿವಿಮಾತು

Last Updated 3 ಮೇ 2015, 19:30 IST
ಅಕ್ಷರ ಗಾತ್ರ

ಬೇಸಿಗೆ ಹಾಗೂ ಮಳೆಯ ಆಗಮನ ಆಗುವ ಈ ಸಂದರ್ಭದಲ್ಲಿ ಧಗೆಯಿಂದ ಪಾರಾಗಲು ಅನೇಕರು ಈಜಾಡುತ್ತಾರೆ.ನಗರದ ಈಜುಕೊಳಗಳ ಶುದ್ಧತೆಯನ್ನು ಅಳೆಯುವುದಂತೂ ಕಷ್ಟ.ಹಾಗಿದ್ದರೆ ಇಲ್ಲಿ ಈಜಾಡಲು ಯಾವ ಎಚ್ಚರಿಕೆಗಳನ್ನು ವಹಿಸಬೇಕು ಎಂದು   ಲೇಖನದಲ್ಲಿ  ತಿಳಿಸಲಾಗಿದೆ.

ಬೇಸಿಗೆಯ ಬಿರು ಬಿಸಿಲಿನ ತಾಪದಿಂದ ಪಾರಾಗಲು ಸಾಕಷ್ಟು ಮಂದಿ ಈಜುಕೊಳಗಳ ಮೊರೆಹೋಗುತ್ತಾರೆ. ಇದರ ಜತೆಗೆ ಶಾಲೆಗಳಿಗೆ ರಜೆ ಇರುವ ಕಾರಣ ಮಕ್ಕಳಿಗೆ ಈಜು ಕಲಿಯಲು ಸುವರ್ಣಾವಕಾಶ. ಹೀಗಾಗಿ ಯಾವ ಈಜುಕೊಳದಲ್ಲಿ ನೋಡಿದರೂ ಹೆಚ್ಚಾಗಿ ಮಕ್ಕಳೇ ಕಾಣಿಸುತ್ತಾರೆ. ಅಂದರೆ ಬೇಸಿಗೆ ಈಜು ಕಲಿಯಲು ಹೇಳಿ ಮಾಡಿಸಿದ ಕಾಲಮಾನ.

ಬೇಸಿಗೆಯಲ್ಲಿ ಈಜಾಡಿದರೆ ಮೈಮನಸ್ಸು ತಣ್ಣಗಾಗಬಹದು. ಆದರೆ ತ್ವಚೆ, ಕಣ್ಣು, ಕೂದಲು ಸೇರಿದಂತೆ ಒಟ್ಟಾರೆ ದೇಹದ ಆರೋಗ್ಯವೂ ಹದಗೆಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಅಭಾವ ಇರುವಾಗ ಈಜುಕೊಳಗಳಲ್ಲಿ ಪ್ರತಿನಿತ್ಯ ಶುದ್ಧ ನೀರು ಸಿಗಲು ಹೇಗೆ ಸಾಧ್ಯ. ಅದರಲ್ಲೂ ದಿನಕ್ಕೆ ನೂರಾರು ಮಂದಿ ಈಜುವ ನೀರು ಕಲುಷಿತವಾಗುವುದು ಎಷ್ಟು ಸಹಜವೋ, ಇಂತಹ ನೀರಿನಲ್ಲಿ ಈಜುವುದರಿಂದ ಆರೋಗ್ಯದ ಸಮಸ್ಯೆಗಳು ಎದುರಾಗುವುದು ಅಷ್ಟೇ ಸಹಜ. 

ಬೇಸಿಗೆಯಲ್ಲಿ ಈಜು ಕಲಿಯಲು ಹೋಗುವ ಮುನ್ನ ತ್ವಚೆ ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆವಹಿಸುವುದು ಅತ್ಯಗತ್ಯ. ಅವುಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ಈಜುಕೊಳಗಳಲ್ಲಿ ಒಂದು ಬಾರಿ ತುಂಬಿದ ನೀರನ್ನು ನಿತ್ಯ ಶುದ್ಧೀಕರಿಸಬೇಕು. ಇದರಿಂದಾಗಿ ಯಾವುದೇ ರೀತಿಯ ಕಾಯಿಲೆಗಳು ಹರಡುವುದಿಲ್ಲ. ಆದರೆ ನೀರನ್ನು ಶುದ್ಧೀಕರಿಸಲು ಹಲವಾರು ಹಂತಗಳಿದ್ದು, ಅದಕ್ಕೆ ಸಾಕಷ್ಟು ಸಮಯ ಹಾಗೂ ಹಣ ವ್ಯಯವಾಗುತ್ತದೆ. ಅನೇಕ ಈಜುಕೊಳಗಳಲ್ಲಿ ನೀರನ್ನು ಸರಿಯಾಗಿ ಶುದ್ಧೀಕರಿಸದೆ, ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್‌ ಹಾಕುತ್ತಾರೆ. ಮಿತಿ ಮೀರಿ ಕ್ಲೋರಿನ್‌ ಬಳಸುವುದರಿಂದ ತ್ವಚೆ ಬಹಳ ಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಜತೆಗೆ ಕ್ಲೋರಿನ್‌ಯುಕ್ತ ನೀರು ಕಣ್ಣಿನ ಕಾರ್ನಿಯಾ ಭಾಗಕ್ಕೂ ಹಾನಿಕಾರಕ ಎನ್ನುತ್ತಾರೆ ವೈದ್ಯರು.

ನೀರನ್ನು ಶುದ್ಧೀಕರಿಸದೆ ಕೇವಲ ಕ್ಲೋರಿನ್‌ ಬಳಕೆ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯವಿಲ್ಲ. ಕೆಲವು ಸೋಂಕುಗಳು ಬಹಳ ಸುಲಭವಾಗಿ ನೀರಿನ ಮೂಲಕ ಹರಡುತ್ತವೆ. ಫಂಗಲ್‌ ಇನ್ಫೆಕ್ಷನ್‌, ಅಲರ್ಜಿಯಂತಹ ಕಾಯಿಲೆಗಳು ಈಜುಕೊಳದ ನೀರಿನಿಂದ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಚರ್ಮದ ಸೋಂಕು ಇರುವವರು ಈಜಲು ಹೋಗದೇ ಇರುವುದೇ ಒಳಿತು.

‘ಸೂರ್ಯನ ಕಿರಣಗಳು ನೇರವಾಗಿ ಬೀಳುವ ಕಡೆಗಳಲ್ಲಿ ಇರುವ ಈಜುಕೊಳಗಳಲ್ಲಿ ಈಜುವವರಿಗೆ ಚರ್ಮ ಬೂದುಬಣ್ಣಕ್ಕೆ ಆಗುತ್ತದೆ. ನೇರವಾಗಿ ಬೀಳುವ ಸೂರ್ಯನ ಕಿರಣಗಳಲ್ಲದೆ ನೀರಿನಿಂದ ಪ್ರತಿಫಲಿತವಾಗುವ ಸೂರ್ಯನ ಕಿರಣಗಳಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ಜತೆಗೆ ಕ್ಲೋರಿನ್‌ ನೀರಿನಿಂದ ಚರ್ಮ ತೇವಾಂಶವನ್ನು ಕಳೆದುಕೊಂಡು ತುರಿಕೆ, ಸೋಂಕು ಹಾಗೂ ಕೆಂಪಾಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಕ್ಲೋರಿನ್‌ಯುಕ್ತ ನೀರಿನಿಂದ ತಲೆಗೂದಲು ಎಣ್ಣೆ ಅಂಶ ಕಳೆದುಕೊಂಡು ಅರ್ಧಕ್ಕೆ ತುಂಡಾಗಿ ಉದುರುತ್ತದೆ’ ಎನ್ನುತ್ತಾರೆ ಚರ್ಮತಜ್ಞ ಎಂ. ಕೇಶವ. 

‘ತ್ವಚೆ ತೇವಾಂಶ ಕಳೆದುಕೊಳ್ಳುವುದನ್ನು ತಪ್ಪಿಸಲು ಈಜುವ ಮುನ್ನ ದೇಹಕ್ಕೆ ಹಾಗೂ ಕೂದಲಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳುವುದು ಒಳ್ಳೆಯದು. ಈಜಿದ ನಂತರ ಸ್ನಾನ ಮಾಡುವುದು ಕಡ್ಡಾಯ.  ಇದರಿಂದ ದೇಹದ ಮೇಲಿರುವ ಕ್ಲೋರಿನ್‌ ಅಂಶ ಸ್ವಚ್ಛವಾಗುತ್ತದೆ. ನಂತರ ಯಾವುದಾದರೂ ಮಾಯಿಸ್ಚರೈಸರ್‌ ಬಳಕೆ ಮಾಡಬೇಕು. ಅತಿಯಾದ ಕ್ಲೋರಿನ್‌ ಬಳಕೆಯಿಂದ ಕಾರ್ಸಿನೋಜೆನಿಕ್‌(ಕ್ಯಾನ್ಸರ್‌) ಬರಬಹುದು ಎಂದು ಅಧ್ಯಯನಗಳು ಹೇಳುತ್ತವೆ’ ಎನ್ನುತ್ತಾರೆ ವೈದ್ಯ ಕೇಶವ.  

ಕಣ್ಣಿನ ರಕ್ಷಣೆ
ಸಾಮಾನ್ಯವಾಗಿ ಈಜುಕೊಳಗಳಲ್ಲಿ ನೀರನ್ನು ಶುದ್ಧೀಕರಿಸಲು ಬಳಸುವ ಕ್ಲೋರಿನ್‌ನಂತಹ ರಾಸಾಯನಿಕಗಳಿಂದ ಕಣ್ಣಿನ ಸಮಸ್ಯೆ ಉಂಟಾಗುತ್ತದೆ. ಬೇಸಿಗೆಯಲ್ಲಿ ಈಜು ಕಲಿಯುವವರ ಸಂಖ್ಯೆ ಹೆಚ್ಚಾಗಿರುತ್ತದೆ. ದಿನವಿಡೀ ಜನರಿಂದ ತುಂಬಿ ತುಳುಕುವ ಈಜುಕೊಳಗಳಲ್ಲಿನ ನೀರು ತುಂಬಾ ಗಲೀಜಾಗಿರುತ್ತದೆ. ಇಂತಹ ಕೊಳಗಳಲ್ಲಿ ನಿತ್ಯ ನೀರನ್ನು ಬದಲಾಯಿಸಲೇಬೇಕಾಗುತ್ತದೆ. ಆದರೆ ಬಹುತೇಕ ಈಜುಕೊಳಗಳಲ್ಲಿ ಪ್ರತಿದಿನ ನೀರನ್ನು ಬದಲಾಯಿಸುವುದಿಲ್ಲ. ಇದರಿಂದಾಗಿ ಸೋಂಕುಗಳು ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತವೆ.

ಕ್ಲೋರಿನ್‌ಯುಕ್ತ ನೀರಿನಲ್ಲಿ ಈಜುವುದರಿಂದ ಕಣ್ಣಿನ ಅಲರ್ಜಿ ಆಗುತ್ತದೆ. ಇದರಿಂದ ಕಣ್ಣಿನ ಉರಿ, ಊತ, ತುರಿಕೆ ಉಂಟಾಗುತ್ತದೆ. ಕೆಲವರಿಗೆ ಈಜುಕೊಳದಿಂದ ಹೊರ ಬರುತ್ತಿದ್ದಂತೆ ಕಣ್ಣಿನ ಉರಿ ಕಾಣಿಸಿಕೊಂಡರೆ, ಇನ್ನು ಕೆಲವರಿಗೆ ಒಂದೆರಡು ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಕೆಲವರಿಗೆ ಕಣ್ಣು ತೀರಾ ಕೆಂಪಾಗಿ, ಕಣ್ಣಿನ ಮಧ್ಯಭಾಗದಲ್ಲಿರುವ ಪಾರದರ್ಶಕ ಪಟಲವಾದ ಕಪ್ಪು ಭಾಗ (ಕಾರ್ನಿಯಾ) ತಾತ್ಕಾಲಿಕವಾಗಿ ಹಾನಿಗೊಳಗಾಗುತ್ತದೆ. ಇದರಿಂದ ದೃಷ್ಟಿ ಮಂದವಾಗಬಹುದು. ಇದು ಕೆಲವರಿಗೆ ಸ್ವಲ್ಪ ಸಮಯದ ನಂತರ  ಗುಣವಾಗುತ್ತದೆ. ಮತ್ತೆ ಕೆಲವರಿಗೆ ತುರಿಕೆ ಮುಂದುವರಿಯುತ್ತದೆ. ಅಂತಹವರು ಕಣ್ಣಿನ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಕಾರ್ನಿಯಾಗೆ ಶಾಶ್ವತ ಹಾನಿಯಾಗುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಬೇಸಿಗೆ ಹಾಗೂ ಅಕ್ಟೋಬರ್‌ ತಿಂಗಳಿನಲ್ಲಿ ‘ಮದ್ರಾಸ್‌ ಐ’ ಸೋಂಕು ಕಾಣಿಸಿಕೊಳ್ಳುತ್ತದೆ. ಮದ್ರಾಸ್‌ ಐ ಆದವರ ಕಣ್ಣಿನಲ್ಲಿ ಸದಾ ನೀರು ಸುರಿಯುತ್ತದೆ, ಕಣ್ಣಿನ ಉರಿ, ಊತ ಹೆಚ್ಚಾಗುತ್ತದೆ. ಇಂತಹವರು ಈಜುಕೊಳಗಳಿಗೆ ಹೋದಲ್ಲಿ, ಅವರಿಂದ ಬೇರೆಯವರಿಗೂ ಈ ಸೋಂಕು ಹರಡುವ ಸಾಧ್ಯತೆ ಇದೆ. ಈ ಸೋಂಕು ತಗುಲಿದರೆ ಅರಿವಿಗೆ ಬರಲು ನಾಲ್ಕು ದಿನಗಳಿಂದ ಒಂದು ವಾರದ ಸಮಯ ಬೇಕಾಗುತ್ತದೆ. ಇಷ್ಟೇ ಅಲ್ಲದೆ ಕಣ್ಣು, ಗಂಟಲು ಸೋಂಕು ಹಾಗೂ ಚರ್ಮದ ಸೋಂಕು ಹೊಂದಿರುವವರು ಈಜಲು ಹೋಗದೇ ಇರುವುದು ಉತ್ತಮ. 

ಕಣ್ಣಿಗೆ ತಗುಲುವ ಸೋಂಕುಗಳಿಂದ ಮುಕ್ತರಾಗಲು ‘ಸ್ವಿಮ್ಮಿಂಗ್‌ ಗಾಗಲ್ಸ್‌’ ಬಳಸುವುದು ಒಳ್ಳೆಯದು. ಇದರಿಂದ ಕಣ್ಣಿಗೆ ತಗುಲಬಹುದಾದ ಎಲ್ಲಾ ರೀತಿಯ ಸೋಂಕುಗಳನ್ನು ತಡೆಯಬಹುದು. ಇದನ್ನು ಬಿಟ್ಟರೆ ನೀರನ್ನು ಹಂತ ಹಂತವಾಗಿ ನಿತ್ಯ ಸ್ವಚ್ಛಗೊಳಿಸುವ ಹಾಗೂ ಕಡಿಮೆ ಜನ ಬಳಸುವ ಈಜುಕೊಳಗಳಿಗೆ ಈಜಲು ಹೋಗುವುದು ಒಳ್ಳೆಯ ಆಯ್ಕೆ.

ಕಾಂಟ್ಯಾಕ್ಟ್‌ ಲೆನ್ಸ್‌ ಬಳಸದಿರಿ
ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುವವರು ಈಜುವಾಗ ಅದನ್ನು ತೆಗೆದಿಡುವುದು ಒಳ್ಳೆಯದು. ಕಾಂಟಾಕ್ಟ್‌ ಲೆನ್ಸ್‌ ಧರಿಸಿ ಕ್ಲೋರಿನ್‌ಯುಕ್ತ ನೀರಿನಲ್ಲಿ ಈಜುವುದರಿಂದ ರಾಸಾಯನಿಕಗಳು ಲೆನ್ಸ್‌ ಮೇಲೆ ಶೇಖರಣೆಗೊಳ್ಳುತ್ತವೆ. ಇದರಿಂದಾಗಿ ಕಾರ್ನಿಯಾಗೆ ಹಾನಿಯಾಗುತ್ತದೆ. ಜತೆಗೆ ಲೆನ್ಸ್‌ನ ಪಾರದರ್ಶಕ ಗುಣಮಟ್ಟವೂ ಹಾಳಾಗುತ್ತದೆ. ಹೀಗಾಗಿ ಈಜುವಾಗ ಪವರ್‌ ಸ್ವಿಮ್ಮಿಂಗ್‌ ಗ್ಲಾಸ್‌ ಧರಿಸಬೇಕು. ಅದಕ್ಕಾಗಿ ಮಾರುಕಟ್ಟೆಯಲ್ಲಿ ಪವರ್‌ ಸ್ವಿಮ್ಮಿಂಗ್‌ ಗ್ಲಾಸ್‌ಗಳು ಲಭ್ಯ.   
–ಡಾ. ಅರುಣ್‌ ಸಂಪ್ರತಿ, ಮಕ್ಕಳ ಕಣ್ಣಿನ ತಜ್ಞ

ಈಜುಡುಗೆ, ಪರಿಕರಗಳ ಆಯ್ಕೆ
ಕೀಲು ಹಾಗೂ ಸಂಧಿಗಳನ್ನು ಬಿಗಿಯಾದ ಬಟ್ಟೆಗಳಿಂದ ಕಟ್ಟಿಟ್ಟರೆ ಸುಲಭವಾಗಿ ಈಜಾಡಲು ಆಗುವುದಿಲ್ಲ. ಅದಕ್ಕಾಗಿ ಆದಷ್ಟೂ ಕೈ–ಕಾಲು, ಭುಜಗಳನ್ನು ಸಲೀಸಾಗಿ ಆಡಿಸಲು ಅನುಕೂಲವಾಗುವಂತಹ ಉಡುಗೆಗಳನ್ನು ಧರಿಸುವುದು ಉತ್ತಮ. ಹಾಗೆಂದು ತುಂಬಾ ದೊಗಳೆಯಾದ ಬಟ್ಟೆಗಳನ್ನು ಧರಿಸಬಾರದು. ಇದರೊಂದಿಗೆ ಕಣ್ಣಿಗೆ ಕನ್ನಡ ಹಾಗೂ ತಲೆಗೆ ಕ್ಯಾಪ್‌ ಬಳಸಿದರೆ ಕೂದಲು ಹಾಗೂ ಕಣ್ಣಿಗೆ ಆಗಬಹುದಾದ ಸಮಸ್ಯೆಗಳಿಂದ ಪಾರಾಗಬಹುದು.
– ಪ್ರದೀಪ್‌, ಈಜು ತರಬೇತುದಾರ

ತ್ವಚೆಯ ರಕ್ಷಣೆ
ನಾನು ವೃತ್ತಿಯಲ್ಲಿ ರೂಪದರ್ಶಿ. ಹೀಗಾಗಿ ಆರೋಗ್ಯ ಹಾಗೂ ಫಿಟ್‌ನೆಸ್‌ ಕಾಪಾಡಿಕೊಳ್ಳಲು ವಾರದಲ್ಲಿ ಎರಡು ದಿನ ಒಂದು ಗಂಟೆ ಸ್ವಿಮ್‌ ಮಾಡುತ್ತೇನೆ. ಮೊದಮೊದಲು ಈಜಲು ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌ ಬಳಸುತ್ತಿರಲಿಲ್ಲ. ಇದರಿಂದಾಗಿ ಚರ್ಮ ಕೆಂಪಾಗಿ ಉರಿ, ತುರಿಕೆ ಕಾಣಿಸಿಕೊಳ್ಳತೊಡಗಿತು. ನಂತರ ವಾಟರ್‌ ರೆಸಿಸ್ಟೆಂಟ್‌ ಸನ್‌ಸ್ಕ್ರೀನ್‌ ಲೋಷನ್‌ ಅನ್ನು ಈಜುವ ಅರ್ಧಗಂಟೆ ಮುನ್ನ ಚರ್ಮಕ್ಕೆ ಹಚ್ಚಬೇಕು. ಅದಕ್ಕೂ ಮುನ್ನ ಅಗತ್ಯ ಇದ್ದರೆ ಮಾಯಿಸ್ಚರೈಸರ್ ಹಚ್ಚಿ ನಂತರ ಸನ್‌ಸ್ಕ್ರೀನ್‌ ಹಚ್ಚಬಹುದು. ಈಜಾಡಿದ ನಂತರ ಸ್ನಾನ ಮಾಡಿ ಒಂದು ಒಳ್ಳೆಯ ಮಾಯಿಸ್ಚರೈಸರ್‌ ಹಚ್ಚಲೇಬೇಕು. ಉಳಿದಂತೆ ಮನೆಯಲ್ಲಿ ಸಮಯ ಸಿಕ್ಕಾಗ ನಿಂಬೆಹಣ್ಣು, ಕಡಲೆಹಿಟ್ಟು, ಟೊಮ್ಯಾಟೊ ಅಥವಾ ಪರಂಗಿ ಹಣ್ಣನ್ನು ಚರ್ಮಕ್ಕೆ ಹಚ್ಚಿದರೆ ಚರ್ಮ ಕಂದುಬಣ್ಣ ಕ್ಕೆ ತಿರುಗುವುದಿಲ್ಲ. ಈಜಾಡುವಾಗ ಕ್ಯಾಪ್‌ ಹಾಗೂ ಕನ್ನಡ ಹಾಕುವುದರಿಂದ ಕೂದಲು ಉದುರುವುದು ಹಾಗೂ ಕಣ್ಣಿನ ಅಲರ್ಜಿಯಿಂದ ಪಾರಾಗಬಹುದು.
–ರೋಶ್ಮಿತಾ ಹರಿಮೂರ್ತಿ, ರೂಪದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT