ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಸೂರು ದಂಗೆಯಲ್ಲಿ ಶಿವಣ್ಣ

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಶಿಕಾರಿಪುರದ ಈಸೂರು ಗ್ರಾಮಕ್ಕೆ ಮಹತ್ವದ ಸ್ಥಾನವಿದೆ. ಸ್ವಾತಂತ್ರ್ಯ ಚಳವಳಿಗೆ ಹೊಸ ದಿಕ್ಕು ನೀಡಿದ, ತಾವು ಸರ್ವಸ್ವತಂತ್ರರು ಎಂದು ಬಂಡಾಯದ ಬಾವುಟ ಹಾರಿಸಿದ ಈಸೂರಿನ ದಂಗೆ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ. ಸ್ವಾತಂತ್ರ್ಯ ಚಳವಳಿಯನ್ನು ಬೆಳ್ಳಿಪರದೆ ಮೇಲೆ ಮೂಡಿಸಲು ಹಂಬಲಿಸಿದ್ದಾರೆ ನಿರ್ದೇಶಕ ವೈಭವ್‌.

ಸ್ವಾತಂತ್ರ್ಯಪೂರ್ವದ ಚಳವಳಿಯ ಕಥೆಯನ್ನು ಸಿನಿಮಾ ಆಗಿಸುವ ಅಪರೂಪದ ಪ್ರಯತ್ನ ಒಂದಾದರೆ, ಶಿವರಾಜ್‌ಕುಮಾರ್‌ ‘ಈಸೂರು ದಂಗೆ 1942’ರ ಭಾಗವಾಗುತ್ತಿರುವುದು ಇನ್ನೊಂದು ವಿಶೇಷ.

ಶಿಕಾರಿಪುರದವರೇ ಆದ ವೈಭವ್ ವೃತ್ತಿಯಲ್ಲಿ ವಿಡಿಯೊ ಛಾಯಾಗ್ರಾಹಕ. ‘ಲೈಫ್ ಈಸ್‌ ಶಾರ್ಟ್‌’, ‘ಮಾಣಿಕ್ಯ’, ‘ಹುಲಿ ಮಾತನಾಡಿದಾಗ’ ಮುಂತಾದ ಆರೇಳು ಕಿರುಚಿತ್ರಗಳನ್ನು ಮಾಡಿದ ಅನುಭವ ಅವರದು. ಈಸೂರಿನ ಸ್ವಾತಂತ್ರ್ಯ ಚಳವಳಿಯ ಕುರಿತು ಕೇಳಿದ್ದರಾದರೂ ಅವರಿಗೆ ಅದರ ಆಳ ಅರಿವಾಗಿದ್ದು, ಈಸೂರಿನಲ್ಲಿ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ನಾಟಕ ವೀಕ್ಷಿಸಿದಾಗ. ಆಗಲೇ ಅವರಲ್ಲಿ ಈಸೂರಿನ ಚಳವಳಿ ಸಿನಿಮಾ ರೂಪಕ್ಕಿಳಿದರೆ ಚೆನ್ನ ಅನ್ನಿಸಿದೆ.

ನಾವು ಯಾರ ಅಧೀನಕ್ಕೂ ಒಳಪಟ್ಟವರಲ್ಲ ಎಂದು ಬ್ರಿಟಿಷರ ಆಡಳಿತವನ್ನು ಧಿಕ್ಕರಿಸಿ ತಮ್ಮದೇ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸ್ವಾತಂತ್ರ್ಯ ಘೋಷಿಸಿಕೊಂಡ ಭಾರತದ ಮೊದಲ ಗ್ರಾಮ ಈಸೂರು. ಈ ಪುಟ್ಟ ಗ್ರಾಮದ ಜನರ ಸ್ವಾಭಿಮಾನ ಬ್ರಿಟಿಷರನ್ನು ತಲ್ಲಣಗೊಳಿಸಿತ್ತು. ಕೊನೆಗೆ ಇಡೀ ಗ್ರಾಮ ಬ್ರಿಟಿಷರ ಕೋಪದ ಅಗ್ನಿಗೆ ಆಹುತಿಯಾಯಿತು. ನೂರಾರು ಹೋರಾಟಗಾರರು ಭೂಗತರಾದರು. ಹಲವು ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಐವರನ್ನು ನೇಣಿಗೇರಿಸಲಾಯಿತು. ಈ ದುರಂತ, ಮಹಾತ್ಮಾ ಗಾಂಧಿ, ಸುಭಾಷ್‌ಚಂದ್ರ ಬೋಸ್‌ ಅವರಂತಹ ನಾಯಕರ ಗಮನಸೆಳೆಯಿತು.

ಚಳವಳಿಯಲ್ಲಿ ಭಾಗವಹಿಸಿ ನೇಣಿಗೇರಿದ ಐವರಲ್ಲಿ ಸೂರಿ ಎಂಬ ಹೋರಾಟಗಾರನ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ದಂಗೆಯ ನೇತೃತ್ವವನ್ನು ಐದು ಮಂದಿ ವಹಿಸುತ್ತಿದ್ದರಿಂದ ಶಿವಣ್ಣ ಸೇರಿದಂತೆ ಎಲ್ಲಾ ಐದೂ ಪಾತ್ರಗಳಿಗೂ ಸಮಾನ ಪ್ರಾಮುಖ್ಯವಿದೆ.

ಈಸೂರಿನ ದಂಗೆಯ ಮಾಹಿತಿ ಸಂಗ್ರಹ ವೈಭವ್‌ಗೆ ಸುಲಭವಾಗಿರಲಿಲ್ಲ. ನಿರಂತರ ಅಧ್ಯಯನ, ಹುಡುಕಾಟದ ಮೂಲಕ ಅವರು ಸಾಕಷ್ಟು ವಿವರ ಕಲೆ ಹಾಕಿದ್ದಾರೆ. ಪುಸ್ತಕಗಳು, ಪಿಎಚ್‌.ಡಿ ಪ್ರಬಂಧ, ಆಕಾಶವಾಣಿಯಲ್ಲಿನ ಸಂದರ್ಶನ ಧ್ವನಿಮುದ್ರಿಕೆಗಳು ಅವರಿಗೆ ನೆರವಾಗಿವೆ. ಈ ಚಳವಳಿಯಲ್ಲಿ ಪಾಲ್ಗೊಂಡು ಜೀವಾವಧಿ ಶಿಕ್ಷೆ ಅನುಭವಿಸಿದ್ದ 105 ವರ್ಷದ ಹಿರಿಯಜ್ಜನೂ ತನ್ನ ನೆನಪಿನ ಸಂಗ್ರಹವನ್ನು ತೆರೆದಿಟ್ಟಿದ್ದಾರೆ.

ಈಸೂರು ದಂಗೆಯ ಚಿತ್ರಣವನ್ನು ಸಂಪೂರ್ಣ ಕಲಾತ್ಮಕ ಶೈಲಿಯಲ್ಲಿ ಕಟ್ಟಿಕೊಡಲು ಉದ್ದೇಶಿಸಿದ್ದರು ವೈಭವ್. ಅದಕ್ಕೆ ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಸಿನಿಮಾದ ಬಗ್ಗೆ ಮಾಹಿತಿ ದೊರೆತ ತಕ್ಷಣ ವೈಭವ್ ಅವರನ್ನು ಭೇಟಿ ಮಾಡಿದ ಗೀತಾ ಶಿವರಾಜ್‌ಕುಮಾರ್‌, ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರೂ ನಟಿಸಬೇಕು ಎಂಬ ಬಯಕೆ ವ್ಯಕ್ತಪಡಿಸಿದರು. ಅದಕ್ಕೆ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ಶಿವಣ್ಣ ಕೂಡ  ಅಷ್ಟೇ ಆಸಕ್ತಿ ತೋರಿದರು. ಶಿವಣ್ಣನ ಆಗಮನದ ಕಾರಣ ಸಿನಿಮಾದ ಸ್ವರೂಪವನ್ನೂ ವೈಭವ್ ಬದಲಿಸಿದ್ದಾರೆ.

‘ಜನಪ್ರಿಯ ನಟರು ಚಿತ್ರದಲ್ಲಿರುವಾಗ ಅವರ ಅಭಿಮಾನಿಗಳನ್ನು ಸಿನಿಮಾ ಸೆಳೆಯಬೇಕು, ಜೊತೆಗೆ ಆಶಯಕ್ಕೂ ಧಕ್ಕೆ ಬರಬಾರದು. ಹೀಗಾಗಿ ‘ಬ್ರಿಡ್ಜ್‌’ ಮಾದರಿಯಲ್ಲಿ ಸಿನಿಮಾ ತಯಾರಾಗಲಿದೆ’ ಎನ್ನುತ್ತಾರೆ ವೈಭವ್‌. ಶಿವಣ್ಣನ ಪಾತ್ರದಷ್ಟೇ ಮುಖ್ಯವಾಗಿರುವ ಇತರೆ ಪಾತ್ರಗಳಿಗೆ ಕಲಾವಿದರ ಹುಡುಕಾಟ ನಡೆಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರಿಂದಲೇ ಈ ಪಾತ್ರಗಳಿಗೆ ಜೀವ ತುಂಬುವ ಸಾಮರ್ಥ್ಯವಿರುವುದು ಎನ್ನುವುದು ಅವರ ನಂಬಿಕೆ.

ಸ್ವಾತಂತ್ರ್ಯಪೂರ್ವದ ಈಸೂರಿನ ಮರುಸೃಷ್ಟಿಗೆ ಅವರು ಈಸೂರು ಮತ್ತು ಕಲ್ಮನೆ ನಡುವಿನ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
1940ರ ದಶಕದ ಹಳ್ಳಿಯ ಚಿತ್ರಣವನ್ನು ಸೆಟ್‌ ಮೂಲಕ ನಿರ್ಮಿಸುವ ಸವಾಲು ಅವರೆದುರಿಗಿದೆ. ದಂಗೆಯ ಕೊನೆಗೆ ಇಡೀ ಹಳ್ಳಿ ಬೆಂಕಿಗೆ ಆಹುತಿಯಾಗುವುದರಿಂದ ಕೃತಕ ಸೆಟ್‌ ನಿರ್ಮಾಣ ಅನಿವಾರ್ಯ ಎನ್ನುತ್ತಾರೆ ಅವರು. ಈಸೂರಿನ ಚಳವಳಿ ಕುರಿತ ಲಾವಣಿಗಳನ್ನು ಅವರು ಚಿತ್ರದಲ್ಲಿ ಬಳಸಿಕೊಳ್ಳಲಿದ್ದಾರೆ. ಪುಟ್ಟಣ್ಣ ಕಣಗಾಲ್‌ ಅವರ ಸಿನಿಮಾಗಳಲ್ಲಿ ಛಾಯಾಗ್ರಹಣ ಮಾಡುತ್ತಿದ್ದ ಬಿ.ಎಸ್‌. ಬಸವರಾಜು ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತರುವ ಗುರಿ ಅವರದು. ಎಚ್‌.ಟಿ. ಬಳಿಗಾರ್ ಎಂಬುವವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT