ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಏಕಾಂತ...

Last Updated 24 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕಾಂತನಿಲ್ಲದ ಮ್ಯಾಲ.. ಏಕಾಂತವ್ಯಾತಕೆ ಅಂತ ಕವಿ ಚಂದ್ರಶೇಖರ್‌ ಕಂಬಾರ ಕೇಳಿದರು. ಆದರೆ ಒಂದು ಬಾಂಧವ್ಯದಲ್ಲಿ ಪ್ರೀತಿ ಪುಟಿಯುತಲಿರಲು ನಾವು ನಾವಾಗಿರಬೇಕು. ನಮ್ಮನ್ನು ನಾವರಿಯಲು ಬೇಕು ಏಕಾಂತ...

ನಮ್ಮ ದೇಹ, ಆತ್ಮವನ್ನೂ ಹೃದಯದೊಂದಿಗೆ ಪೋಷಿಸುತ್ತದೆ ಪ್ರೀತಿ. ಎಲ್ಲರಿಗೂ ಪ್ರೀತಿ ಬೇಕು. ಆದರೆ ಅತಿಯಾದರೆ? ಪ್ರೀತಿಯ ಡೋಸ್‌ ಅಗತ್ಯಕ್ಕಿಂತ ಹೆಚ್ಚಾದರೂ ತಡೆದುಕೊಳ್ಳಬಲ್ಲೆವೆ?

ಆಳವಾದ ಪ್ರೀತಿಯ ಬಂಧದಲ್ಲಿರುವ ಕೆಲವು ಕ್ಷಣಗಳಲ್ಲಿ ಹೃದಯ ತುಂಬಿ ಬಂದಿರುತ್ತದೆ. ಇನ್ನೇನೂ ಇಲ್ಲ ಕೊಡಲು, ಇದಕ್ಕಿಂತ ಏನು ಬೇಕು. ಇಷ್ಟೊಂದು ಪ್ರೀತಿ ಪಡೆದೆ; ಜೀವನಪೂರ್ತಿ ಇದೇ ಪ್ರೀತಿಯಲ್ಲಿ ಇದ್ದುಬಿಡಬಲ್ಲೆ ಎನಿಸಿರುತ್ತದೆ. ಇನ್ನೂ ಉತ್ಕಟ ಪ್ರೀತಿಯ ಅನುಭವದಲ್ಲಿ ಜೀವನವೇನು, ಇಡಿಯ ಜನ್ಮಕ್ಕಾಗುವಷ್ಟು ಪ್ರೀತಿ ಸಿಕ್ಕಿದೆ. ಸಂಪೂರ್ಣ ಪ್ರೀತಿ ಅನುಭವಿಸಿದೆ ಎನಿಸಿರುತ್ತದೆ. ಅಂಥದೊಂದು ಹಂತದಲ್ಲಿ ಸಾಕು ಅನಿಸಿದರೆ ಅದು ಬೇಸರವಲ್ಲ, ತೃಪ್ತಭಾವ. 

ಕೆಲವೊಮ್ಮೆ ಸಾಕಷ್ಟು ಸಮಯ ಕಳೆಯಿತು, ಪ್ರೀತಿಸಿ ದಣಿದೆವು ಎನಿಸುತ್ತದೆ. ಉಲ್ಲಸಿತ, ಸಂತಸದ ಸುಸ್ತು ನಮ್ಮನ್ನು ಆವರಿಸುತ್ತದೆ. ಒಟ್ಟಿಗೆ ಇರುವಾಗ ಚೆಂದವೇ. ಎಷ್ಟೂ ಅಂತ ಪ್ರೀತಿಗೆ ಅಂಟಿಕೊಂಡೇ ಇರುವುದು... ಅದೇ ಭಾವದಲ್ಲಿ? ಸ್ವಲ್ಪ ಸಮಯ, ಸ್ವಲ್ಪ ಮಟ್ಟಿಗಿನ ದೂರ ಅಗತ್ಯ ಎನಿಸುತ್ತದೆ. ನಾವು ನಮ್ಮೊಳಗೆ ಗಟ್ಟಿಯಾಗಿ ನೆಲೆಗೊಳ್ಳಲು, ಅದಾದ ನಂತರ ಮತ್ತೆ ಜೊತೆಯಾಗಲು ನಮ್ಮೊಳಗೆ ತವಕಿಸುತ್ತ, ಮತ್ತೆ ನಮ್ಮೆಲ್ಲ ಪ್ರೀತಿಯನ್ನು ಧಾರೆ ಎರೆಯಲು ಕಾಯುವುದು ಒಬ್ಬರೇ ಇರುವಾಗ. ಏಕಾಂತ ಅಗತ್ಯ. ನಮ್ಮೊಳಗೆ ನಾವು ಇಣುಕಿ ನಮ್ಮನ್ನೇ ನಾವು ನೋಡಿಕೊಳ್ಳಲು.

‘ನಿನ್ನನ್ನು ನೀನು ಅರಿತುಕೊ’ ಎಂದ ಸಾಕ್ರೆಟೀಸ್‌. ಇದೇನೋ ಅಪೂರ್ಣವೆನಿಸಿತ್ತು ಓಶೋಗೆ. ‘ನೀವು ನೀವಾಗಿ ಇರಿ’ ಎಂದವರು ಸೇರಿಸಿದರು. ನಾವು ನಾವಾಗಿ ಇರುವಾಗಲೇ ನಮ್ಮನ್ನು ನಾವು ಅರಿಯಲು ಸಾಧ್ಯ.

ಒಂಟಿತನ, ಏಕಾಂತ ಪರ್ಯಾಯ ಪದಗಳೇ. ಆದರೆ ಒಂಟಿತನ ನಕಾರಾತ್ಮಕ ಮನಸ್ಥಿತಿ. ಏಕಾಂತ ವಾಸ್ತವದಲ್ಲಿ ನಾವಿರುವುದು... ಒಬ್ಬರೇ. ಸದಾ ಇನ್ನೊಬ್ಬರಿಂದ ದೂರವಿರುವ, ಇನ್ನೊಬ್ಬರನ್ನು ಕಳೆದುಕೊಂಡ ಭಾವ ಒಂಟಿತನದಲ್ಲಿ. ಹಾಗಾಗಿ ಕಳೆದುಕೊಂಡದ್ದರ ಕುರಿತೇ ಚಿಂತಿಸಿ, ದುಃಖಿತರಾಗಿ, ಮತ್ತೇನನ್ನೋ ಪಡೆದುಕೊಳ್ಳುವ ಬಯಕೆ, ನಿರೀಕ್ಷೆಗಳಿರುತ್ತವೆ. ಏಕಾಂತದಲ್ಲಿ ನಮ್ಮ ಗಮನ ನಮ್ಮತ್ತ ಕೇಂದ್ರೀಕೃತ. ಆಗ ನಮ್ಮೊಳಗಿನ ನಾವು ಮುಖ್ಯ. ಬೇರಾರದೋ ಪ್ರೀತಿ, ಮಾತು, ಭೇಟಿಯಾದಾಗ ದೊರೆಯುವ ಸಂತೋಷದ ನಿರೀಕ್ಷೆಯೇ ಇರುವುದಿಲ್ಲ.  ನಮ್ಮ ಸಂತೋಷ ಪರಾವಲಂಬಿಯಲ್ಲ. ನಾವು ನಾವಾಗಿರುತ್ತೇವೆ ಅಷ್ಟೆ. ಏಕಾಂತ ಸುಂದರ, ಆನಂದಮಯ. ಸಂತೃಪ್ತಿ. ಅವಲಂಬನೆಯಿಲ್ಲದ ಸ್ವತಂತ್ರ ಉಲ್ಲಸಿತ ಮನ.

ಬೆಳಿಗ್ಗೆ ಎಚ್ಚರವಾದಾಗಿನಿಂದಲೂ ಒಂದಲ್ಲ ಒಂದು ಸದ್ದು ನಮ್ಮ ಸುತ್ತ. ನಮ್ಮ ಮಾತು ಬೇರೆಯವರೊಂದಿಗೆ. ಅವರ ಮಾತಿಗೆ ನಾವು ಕಿವಿಯಾಗುತ್ತೇವೆ. ಕೆಲಸದಲ್ಲಿ, ಟಿ.ವಿ, ಫೋನ್‌, ಅಂತರ್ಜಾಲ, ಮೇಲ್‌, ಫೇಸ್‌ಬುಕ್‌, ವಾಟ್ಸ್ ಆ್ಯಪ್‌ನ ಗದ್ದಲದಲ್ಲಿ... ಒಬ್ಬರಲ್ಲ ಒಬ್ಬರ ಜತೆ ದಿನವಿಡೀ ನಾವು ಬಿಜಿ. ಹೀಗಿರುವಾಗ ಸುಲಭವಾಗಿ ನಿರ್ಲಕ್ಷಿಸಿದ ಆ ಆಂತರಿಕ ಬೆಳವಣಿಗೆ, ಆಂತರ್ಯದ ಚಟುವಟಿಕೆಗಳಿಗೆ ಏಕಾಂತ ಪ್ರಶಸ್ತ ಸಮಯ. ಏಕಾಂತದಲ್ಲಿ ಡೈರಿ ಬರೆಯಬಹುದು. ಮನೆಯಲ್ಲಿ ಯಾರೂ ಅಷ್ಟಾಗಿ ಇಷ್ಟಪಡದ, ಶಾಸ್ತ್ರೀಯ ಸಂಗೀತ ಕೇಳುತ್ತ ಮೈಮರೆಯಬಹುದು. ನಾವೇ ಹಾಡಿ ಕೊಳ್ಳಬಹುದು. ಕನಸುಗಳನ್ನು ರೂಪಿಸಿಕೊಳ್ಳಬಹುದು. ಸದ್ಯದ ಜೀವನ ಪ್ರಕ್ರಿಯೆಯನ್ನು ಆಸ್ವಾದಿಸಬಹುದು. ಇದಾವುದನ್ನೂ ಮಾಡದೇ ಇರಲೂಬಹುದು. ಏಕೆಂದರೆ ಏನನ್ನೂ ಮಾಡದೇ ಇದ್ದಾಗಲೂ ಏನೋ ಮಾಡಿರುತ್ತೇವೆ. ಏನೂ ಮಾಡದೇ ಏಕಾಂತದ ಚೇತೋಹಾರಿ ಶಕ್ತಿ ನಮ್ಮಲ್ಲಿ ಸ್ಥಿತಗೊಳ್ಳಲು ಅನುವು ಮಾಡಿಕೊಂಡಿರುತ್ತೇವೆ.

ಪ್ರೀತಿಸುವಾಗ ನಾವು ನಾವಾಗಿ ಇರುವುದಿಲ್ಲ. ನಾವು, ನಾವು ಪ್ರೀತಿಸುವ ವ್ಯಕ್ತಿಯಾಗಿರುತ್ತೇವೆ. ಅವರಲ್ಲಿ ಲೀನವಾದ ತಾದಾತ್ಮ್ಯ. ಆದರೆ ಏಕಾಂತದಲ್ಲಿ ನಮ್ಮನ್ನು ನಾವು ಸಂಧಿಸಬಹುದು. ಆಗಲೂ ಪ್ರೀತಿಯ ಅಗತ್ಯವನ್ನು ಸೃಷ್ಟಿಸಿಕೊಳ್ಳುತ್ತ ಇರುತ್ತೇವೆ.

ಪ್ರೀತಿಯಲ್ಲಿರುವಾಗ ನಾವು ಕೊಡುವ ಕೊಡುಗೆಗಳೆಲ್ಲವನ್ನೂ ಸ್ವೀಕರಿಸುತ್ತದೆ ಪ್ರೀತಿ. ಕೊಟ್ಟು ಖಾಲಿಯಾಗುತ್ತೇವೆ. ಹೀಗೆ ಖಾಲಿಯಾದಾಗಲೆಲ್ಲ ನಮ್ಮನ್ನು ಮತ್ತೆ ಸಮೃದ್ಧಗೊಳಿಸಲು ಏಕಾಂತವಿದೆಯಲ್ಲ... ಮತ್ತೆ ಸಮಗ್ರವಾಗಲು. ಏಕಾಂತದಲ್ಲಿ ಸಮೃದ್ಧ ಚೈತನ್ಯ ಪಡೆದುಕೊಳ್ಳುತ್ತೇವೆ. ನಮ್ಮೊಳಗಿನ ಅಷ್ಟೆಲ್ಲ ಸಂತೋಷ, ಪ್ರೀತಿಯನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸುತ್ತೇವೆ. ಮತ್ತೆ ಮತ್ತೆ ಖಾಲಿಯಾಗುವುದು ಪುನಾ ಉಕ್ಕಿ ಹರಿಯುವಷ್ಟು ಪ್ರೀತಿದುಂಬಿಕೊಂಡು ಕೊಡಲು ಕಾಯುವುದು. ಇದೊಂದು ಲಯ. ಈ ಲಯದ ಅರಿವು ಸಂಗಾತಿಗಳಲ್ಲಿದ್ದರೆ ಅಲ್ಲಿ ನೋವಿರುವುದಿಲ್ಲ. ಅವನು ಏಕಾಂತ ಬಯಸಿದ ಎಂದರೆ ಅದು ಅವಳನ್ನು ದೂರ ಮಾಡಿದಂತಲ್ಲ; ಅವಳ ಪ್ರೀತಿ ಅವನೊಳಗೆ ಇರುವುದಿಂದಲೇ ಅವನು ಏಕಾಂತದಲ್ಲಿರಲು ಸಾಧ್ಯವಾಗುವುದು. ಸಹಜ ಚಟುವಟಿಕೆಯಲ್ಲಿ ತೊಡಗಲು ಸಾಧ್ಯವಾಗುವುದು. ಆದರೆ ಈ ಲಯ–ಗತಿಯನ್ನೇ ಅರ್ಥ ಮಾಡಿಕೊಳ್ಳದೆ ತನ್ನನ್ನು ನಿರಾಕರಿಸುವ, ದೂರವಿರಿಸುವ ವರ್ತನೆ ಎಂದುಕೊಂಡರೆ ಅವಳು ಒಂಟಿ.

ಒಂಟಿತನ ಏಕಾಂಗಿತನದಂತೆ ಅಲ್ಲ; ಅದರಂತೆ ಏಕಾಗ್ರತೆಯ ಶಕ್ತಿ ನೀಡುವುದಿಲ್ಲ. ನಿಜವಾದ ನಾವು ನಾವಾಗಿ ನಮ್ಮೊಡನೆ ಪುನರ್‌ಸಂಬಂಧಿಸಲು ಬಿಡುವುದಿಲ್ಲ. ಆತ್ಮಶೋಧನೆಯ ಮೇಲುಸ್ತರಕ್ಕೆ ಪಯಣಿಸಲು ಉತ್ತೇಜಿಸುವುದಿಲ್ಲ. ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವ ಪಥದ ಪ್ರಗತಿಯತ್ತ ಉತ್ಸುಕರನ್ನಾಗಿಸುವುದಿಲ್ಲ. ಅವನು ದೂರವಿರಲು ಕಾರಣ ನಿರಾಕರಣೆಯೊ, ಪ್ರೀತಿಯೊ ಎಂಬ ಚಿಂತೆ ಕೊರಗುತ್ತಲೇ ಇರುವಂತೆ ಮಾಡುತ್ತದೆ. ಅದಕ್ಕೆ ಸ್ಪಷ್ಟನೆ, ಉತ್ತರ ಸಿಗದೇ ತೊಳಲಾಡುವಾಗಲೂ ಏಕಾಂತವೇ ಪರಿಹಾರ. ಮನದ ಮೂಲೆಯಲ್ಲಿ ಯಾವಾಗಲೂ ಸಣ್ಣಗೆ ಮೀಟುತ್ತಲೇ ಇರುವ ನೋವು ಮರೆಯಲೂ ಏಕಾಂತ ಬೇಕು. ಅದರಿಂದ ಹೊರಬರುವ ಸ್ವಪ್ರಯತ್ನಕ್ಕೂ ಸಮಾಧಾನದ ಯೋಚನಾ ಲಹರಿ, ಪ್ರಶಸ್ತ ಸಮಯ ಬೇಕು. ಸಂಗಾತಿ ಬಯಸಿದರೆ ಏಕಾಂತವನ್ನೇ ಕೊಡುವುದು ಅವರಿಗೆ ಕೊಡುವ ಬಹುಮೂಲ್ಯ ಕೊಡುಗೆ.

ಹಾಗೆ ನೋಡಿದರೆ ಒಂಟಿತನ, ಖಾಲಿತನವನ್ನು ನಾವು ಒಪ್ಪಿಕೊಂಡೊಡನೆ ಅದರ ಗುಣವೇ ಬದಲಾಗಿಬಿಡುತ್ತದೆ. ಅದು ಸಮೃದ್ಧಿ, ಸಾರ್ಥಕತೆ, ಶಕ್ತಿ, ಆನಂದವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಲು ಮೊದಲು ಒಂಟಿತನದೊಂದಿಗೆ ರಾಜಿ ಮಾಡಿಕೊಳ್ಳಬೇಕು. ಒಂಟಿತನವೇ ಏಕಾಂತವಾಗಿ ಬದಲಾಗುವ ವರೆಗೆ ಕಾಯಬೇಕು. ನಮ್ಮೊಳಗಿನ ಈ ಸಮೃದ್ಧ ಶಕ್ತಿಯಿಂದ ಭರವಸೆ ಮೂಡಿದರೆ ಆಗ ಅದಕ್ಕೊಂದು ಅರ್ಥ ಬರುತ್ತದೆ. ಆಳವಾದ ಅನ್ಯೋನ್ಯ ಸಂಬಂಧದೊಂದಿಗೆ ಬೆಸೆದುಕೊಳ್ಳಲು ಸಾಧ್ಯವಾಗುತ್ತದೆ. ಆಗಲೇ ಪ್ರೀತಿಪೂರ್ಣ ವ್ಯಕ್ತಿಗಳಾಗುತ್ತೇವೆ. ಏಕಾಂತ ನಮ್ಮ ಸ್ವಪ್ರಜ್ಞೆಯ ಅನುಭವ.

ನಮಗಾಗಿ ಏಕಾಂತದ ಅವಕಾಶ ಕಲ್ಪಿಸಿಕೊಳ್ಳುವುದು ಸ್ವಾರ್ಥವೇನಲ್ಲ. ಯಾವುದೇ ಮುಜುಗರ, ಹಿಂಜರಿಕೆಯಿಲ್ಲದೆ ಅದನ್ನು ಪಡೆಯಲು ಯತ್ನಿಸಿ ನೋಡಿ. ಆಂತರಿಕ ಆಶಯ ಚೈತನ್ಯ ಪಡೆದುಕೊಳ್ಳುವುದು ಆಗಲೇ. ಅದರಿಂದಾಗಿ ನಾವು ಹೆಚ್ಚು ಹೆಚ್ಚು ಮಾಡಲು, ನೀಡಲು ಸಾಧ್ಯವಾಗುತ್ತದೆ. ಮನಸ್ಸು ಚೈತನ್ಯಗಳ ಆರೈಕೆಗೆ ಬಿಡುವು ಮಾಡಿಕೊಂಡಂತಾಗುತ್ತದೆ. ಯುವಕಳೆಯಿಂದ ಸ್ಫೂರ್ತಿ ಪಡೆಯಲು ಸಾಧ್ಯವಾಗುತ್ತದೆ.

ಏಕಾಂಗಿಗಳಾಗಿ, ಏಕಾಂತದಲ್ಲಿ ನಮ್ಮೊಂದಿಗೇ ನಾವು ಸಂತೋಷಪಡಲು ಆರಂಭಿಸಿದರೆ ಅದ್ಭುತ. ನಮ್ಮ ಬಳಿ ಯಾರೂ ಬರಬೇಕಿಲ್ಲ; ಬರಲಿ ಎಂದೂ ಕಾಯುತ್ತಿರುವುದಿಲ್ಲ. ಬಂದರೆ ಸರಿ. ಬರದೇ ಇದ್ದರೂ ಸರಿಯೇ. ನಮ್ಮ ಪ್ರೀತಿ ನಮ್ಮೊಂದಿಗೆ. ಇಂಥ ಕ್ಷಣದಲ್ಲಿ ನಮ್ಮೊಳಗೆ ಮೊಳೆತ ಪ್ರೀತಿ ಒಣಪದವಲ್ಲ. ಅದು ಹೃದಯಸ್ಪಂದನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT