ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚುನಾವಣೆ ಬದಲಾವಣೆ ತರಬಹುದೇ?

Last Updated 15 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬಹು ಸಂಸ್ಕೃತಿಯ, ಬಹು ಭಾಷೆಯ ಹಾಗೂ ಭೌಗೋಳಿಕವಾಗಿ ವೈವಿಧ್ಯಮ ಯವಾದ ಭಾರತ­ದಲ್ಲಿ ರಾಜಕೀಯ ಚಟುವಟಿಕೆಗಳು ಅದರಲ್ಲೂ ಪ್ರತ್ಯೇಕ­ವಾಗಿ ಚುನಾವಣೆಗಳು  ಬಹು ರಂಜಿ­ತವೂ, ಕುತೂಹಲಕಾರಿಯೂ ಆಗಿರುವುದು ಸ್ವಾಭಾ­ವಿಕ. ದೇವರು, ಧರ್ಮ, ಜಾತಿ, ಪಂಥ ಈ ಎಲ್ಲದರ ಜತೆ ಆಧುನಿಕ ಯುಗದ ಕೊಡುಗೆ­ಗಳಾದ ಅಂತರ್ಜಾಲ, ಫೇಸ್‌ಬುಕ್‌, ಟ್ವಿಟರ್‌ ಇವೆಲ್ಲ ಪ್ರಸ್ತುತ ಚುನಾವಣೆಗೆ ಹೆಚ್ಚಿನ ವೈಶಿಷ್ಟ್ಯ ನೀಡಿವೆ.

ಭಾರತದಲ್ಲಿ ಆರ್ಥಿಕ ಉದಾರೀಕರಣ ಶುರುವಾದಾಗಿನಿಂದ ಮತ್ತು ಕ್ರಮೇಣ ಜಾಗತೀಕರಣದ ಪ್ರಕ್ರಿಯೆಗಳಿಂದ ಚುನಾವಣೆ ಹೆಚ್ಚು ಆಕರ್ಷಕಗೊಳ್ಳಲು ಪ್ರಾರಂಭವಾಯಿತು. ಚುನಾವಣೆಗಳಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿ­ಗಳು ವ್ಯಯಿಸುತ್ತಿರುವ ಹೇರಳ ಪ್ರಮಾ­ಣದ ಹಣವೇ ಈ ಆಕರ್ಷಣೆಗೆ ಮುಖ್ಯ ಕಾರಣ.

ರಾಜಕಾರಣ ಮತ್ತು ಉದ್ಯಮ, ರಾಜಕಾರಣ ಮತ್ತು ವಾಣಿಜ್ಯ–ವ್ಯವಹಾರ ಮಧ್ಯೆ ದೋಸ್ತಿ ಕಳೆದ ಎರಡು ದಶಕಗಳಲ್ಲಿ ಹೆಚ್ಚಾಗಿದ್ದರಿಂದ ರಾಜಕಾರಣಿಗಳ ಕಾರ್ಯ ನಿರ್ವಹಣೆ  ಮತ್ತು ವ್ಯಾಪ್ತಿ ಕ್ರಮೇಣ ರಾಷ್ಟ್ರದಾದ್ಯಂತ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿರು­ವುದ­ರಿಂದ ಹಾಗೂ ರಾಜಕಾರಣಿಗಳಿಗೆ ದೊರೆಯು­ತ್ತಿರುವ ಹಲವಾರು ರೀತಿಯ ಸೌಲಭ್ಯ­ಗಳು ಬಹು ಆಕರ್ಷಕವಾದ್ದರಿಂದ ರಾಜಕಾರಣ ಬರಿ ಸಿದ್ಧಾಂತಗಳನ್ನು ಪ್ರತಿಪಾದಿ­ಸುವ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುವ ಕಾಯಕವಾಗಿ ಉಳಿಯದೆ ಆಕರ್ಷಕ ಮತ್ತು ಲಾಭದಾಯಕ ಕಸಬಾಗಿ ಪರಿವರ್ತನೆಗೊಂಡಿದೆ.

ಎರಡೇ ದಶಕಗಳಲ್ಲಿ ಜಾಗತೀಕರಣದ ಮೂಲಕ ಭಾರತ ಉದ್ಯಮಶೀಲ ರಾಷ್ಟ್ರವಾಗಿ ಪರಿವರ್ತನೆಗೊಳ್ಳಲು ಸಾಧ್ಯವಾಯಿತು. ಅಂತರ­ರಾಷ್ಟ್ರೀಯ ಮಟ್ಟದ ತಾಂತ್ರಿಕತೆಯನ್ನು ಬಳಸಿ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಬಂಡ­ವಾಳ ತೊಡಗಿಸಲು, ಲಾಭ ಗಳಿಸಲು ಸಾಧ್ಯ­ವಾಯಿತು. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹೀಗೆ ಹತ್ತು ಹಲವಾರು ಹೊಸ ಬಗೆಯ ಉದ್ಯಮಗಳು ಹುಟ್ಟಿಕೊಂಡವು. ಹೆಚ್ಚಿನ ಪ್ರಮಾಣ­ದಲ್ಲಿ ವಿದೇಶಿ ವಿನಿಮಯವನ್ನು ದೇಶಕ್ಕೆ ತರಲು ಸರ್ಕಾರವು ಉದ್ಯಮಿಗಳಿಗೆ ಅನೇಕ ರೀತಿಯ ತೆರಿಗೆ ವಿನಾಯಿತಿ ಹಾಗೂ ಇತರ ಸೌಲಭ್ಯಗಳನ್ನು ಧಾರೆ ಎರೆಯಿತು.

ಹೀಗೆ ಉದ್ಯಮಿಗಳು, ವಾಣಿಜ್ಯ ಪ್ರತಿನಿಧಿಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯವಹರಿಸುವ ವಕ್ತಾರರು, ಏಜೆಂಟರುಗಳು ಸಹಜವಾಗಿಯೇ ರಾಜಕಾರಣಿಗಳಿಗೆ ಹತ್ತಿರವಾದರು. ಮುಂದು­ವರಿದ ರಾಷ್ಟ್ರಗಳಲ್ಲಿನ ಅಭಿವೃದ್ಧಿ ಮಾದರಿ­ಗಳನ್ನು ವೀಕ್ಷಿಸಲು ಪರದೇಶಕ್ಕೆ ಪ್ರವಾಸ, ಪಂಚ­ತಾರಾ  ಹೋಟೆಲ್‌ಗಳಲ್ಲಿ ವಾಸ್ತವ್ಯ, ಪಾಶ್ಚಿ­ಮಾತ್ಯ ಸಂಸ್ಕೃತಿಯ ಒಡನಾಟ ನಮ್ಮ ದೇಶಿ ರಾಜ­ಕಾರಣಿ­ಗಳಿಗೆ ಥ್ರಿಲ್‌ ಕೊಡದಿರಲು ಸಾಧ್ಯವೆ?

ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸುಮಾರು ₨ 30 ಸಾವಿರ ಕೋಟಿ  ಚಲಾವಣೆ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಈ ಹಣ ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ, ಎಲ್ಲಿಗೆ ಹೋಗುತ್ತೆ ಎನ್ನುವುದನ್ನು ಯಾರೂ ಕಂಡುಹಿಡಿಯಲು ಪ್ರಯತ್ನ ಮಾಡುತ್ತಿಲ್ಲ. ಮತ್ತೆ ಅದು ಸಾಧ್ಯವೂ ಆಗುತ್ತಿಲ್ಲ.

ಹಣವಿಲ್ಲದೆ ರಾಜಕಾರಣ ಮಾಡುವುದು ಸಾಧ್ಯವಿಲ್ಲವೆನ್ನುವ ಮಟ್ಟಕ್ಕೆ ನಮ್ಮ  ರಾಜಕೀಯ ವ್ಯವಸ್ಥೆ ಬಂದು ಮುಟ್ಟಿದೆ. ಇಂಥ ವ್ಯವಸ್ಥೆಯಲ್ಲಿ  ಮೌಲ್ಯಾಧಾರಿತ ರಾಜಕಾರಣವನ್ನು ಮಾಡಲು ಹೊರಟ ಆಮ್‌ ಆದ್ಮಿಯಂಥ ಪಕ್ಷಗಳ ಗತಿ ಮತ್ತು ಭವಿಷ್ಯವೇನು? ದೇಶದ ಭವಿಷ್ಯವೇನು?

ಇವತ್ತಿನದು ಬದಲಾದ ರಾಜಕಾರಣ. ಅಭಿವೃದ್ಧಿ ಯೋಜನೆಗಳಂಥ ಮೆಟ್ರೊ, ಉನ್ನತ ಮಟ್ಟದ ಕೈಗಾರಿಕೆಗಳು, ಅಂತರರಾಷ್ಟ್ರೀಯ  ದರ್ಜೆಯ ವಿಮಾನ ನಿಲ್ದಾಣ, ಸಂಪರ್ಕ ವ್ಯವಸ್ಥೆ, ವಿದೇಶಿ ಹೂಡಿಕೆ, ಐ.ಟಿ. ಕಂಪೆನಿಗಳ ವೃದ್ಧಿ  ಈ  ಧಾಟಿಯಲ್ಲಿ ಮಾತನಾಡುವ  ಅಭ್ಯರ್ಥಿಗಳನ್ನು ಇಷ್ಟಪಡುವ ಯುವಜನರ ಸಂಖ್ಯೆ ನಮ್ಮ ನಗರ– ಮಹಾನಗರಗಳಲ್ಲಿ ಹೆಚ್ಚಾಗಿದೆ. ಈ ಯುವಕರನ್ನು ಓಲೈಸಲು ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಭವ್ಯ ಭಾರತ ಕಟ್ಟುವ ಭರವಸೆಗಳನ್ನು, ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡುವ ಸೂತ್ರಗಳನ್ನು ಪ್ರಕಟಿಸುತ್ತಿರುವುದು ಕಾಣುತ್ತಿದ್ದೇವೆ.

ಪ್ರಣಾಳಿಕೆಗಳಲ್ಲಿಯ ಭರವಸೆಗಳನ್ನು ಈಡೇರಿ­ಸ­ಬೇಕೆಂದರೆ ಬೃಹತ್‌ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇಂತಹ ಯೋಜನೆ­ಗಳಲ್ಲಿ ದೊಡ್ಡ ಉದ್ಯಮಿಗಳು, ಗುತ್ತಿಗೆದಾರರು, ಸಲಹಾ ಕಂಪೆನಿಗಳು ಹಾಗೂ ಪರದೇಶಿ ಹಣ ತರುವವರು ಮಾತ್ರ ಪಾಲ್ಗೊಳ್ಳಲು ಸಾಧ್ಯ. ರಾಜಕೀಯ ಮತ್ತು ಬಿಸಿನೆಸ್‌ ನಂಟು ಶುರುವಾಗುವುದು ಇಲ್ಲಿಯೇ. ಹಾಗೆಯೇ ಹಗರಣಗಳು ಮತ್ತು  ಭ್ರಷ್ಟಾಚಾರ.

ಒಂದು ವಿಷಯವನ್ನು ತೀವ್ರವಾಗಿ ಗಮನಿಸುವುದು ಇವತ್ತಿನ ಸಂದರ್ಭದಲ್ಲಿ ಅವಶ್ಯವಾಗಿದೆ. ಕಳೆದ  5–6 ವರ್ಷಗಳಿಂದ ಅಮೆರಿಕ ಆಗಲಿ ಅಥವಾ ಯೂರೋಪಿನ ರಾಷ್ಟ್ರಗಳಾಗಲಿ ತಮ್ಮ  ದೇಶಗಳಲ್ಲಿ ಉಂಟಾದ ಆರ್ಥಿಕ ದುಃಸ್ಥಿತಿಯಿಂದ ಹೊರಬರಲು ಹರಸಾಹಸ ಪಡುತ್ತಿವೆ. ಹಲವಾರು ಬೃಹತ್‌  ಕೈಗಾರಿಕೆಗಳನ್ನು  ಮತ್ತು ಯೋಜನೆಗಳನ್ನು ಆರ್ಥಿಕ ಸಮಸ್ಯೆಗಳಿಂದಾಗಿ ಕೈಬಿಟ್ಟಿವೆ.

ಜಾಗತಿಕ ಮಾರುಕಟ್ಟೆಯಂತೂ ಭದ್ರತೆಯನ್ನು ಕಳೆದುಕೊಂಡಿದೆ. ಜತೆಗೆ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಹಾಗೂ ವಿದ್ಯುತ್‌ ಮತ್ತು ನೀರಿನ ಅಭಾವವನ್ನು ಅನೇಕ ರಾಷ್ಟ್ರಗಳು ಎದುರಿಸುತ್ತಿವೆ. ಏರುತ್ತಿರುವ ಮಾಲಿನ್ಯ ಮತ್ತು ಭೂಮಿಯ ತಾಪಮಾನ  ಕೂಡ ಸವಾಲಾಗಿ  ಪರಿಣಮಿಸಿದೆ. ಅನೇಕ ರಾಷ್ಟ್ರಗಳಲ್ಲಿ ಯುವಕರು ಪರ್ಯಾಯ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಇರುವುದನ್ನು ನಾವು ಗಮನಿಸಬೇಕು.

ಭಾರತ ಈ ಸಂದರ್ಭದಲ್ಲಿ ಪಾಶ್ಚಿಮಾತ್ಯ ಮಾದರಿಗಳನ್ನು ಅನುಸರಿಸುವುದು ಎಷ್ಟು ಸಮಂಜಸ? ಅಭಿವೃದ್ಧಿ, ಅಭಿವೃದ್ಧಿ ಎನ್ನುವ ಮಂತ್ರವನ್ನು ಜಪಿಸಿ ರಾಜಕೀಯ ಮಾಡಿದರೆ ಅಂಥ ವ್ಯವಸ್ಥೆ ನಮ್ಮ ದೇಶದಲ್ಲಿ ಸುಸ್ಥಿರವಾಗಿ ಉಳಿಯುವುದೇ? ಅದು ಯುವಕರನ್ನು ಮಂತ್ರಮುಗ್ಧರನ್ನಾಗಿ ಮಾಡಬಹುದು, ಒಂದು ಗಾಳಿ ಎಬ್ಬಿಸಬಹುದು. ಆದರೆ ಅಂಥ ಯೋಜನೆಗಳು ಸಾಮಾಜಿಕ ಮತ್ತು ಆರ್ಥಿಕ ಸಮತೋಲನವನ್ನು ಸೃಷ್ಟಿಸದಿದ್ದರೆ ಮುಂದೆ ದೊಡ್ಡ ದುರಂತವಾಗಿಯೂ ಪರಿಣಮಿಸಬಹುದು.

ನಮ್ಮ ಸಮಾಜಕ್ಕೆ, ಪರಿಸರಕ್ಕೆ, ನಮ್ಮ ಬದುಕಿಗೆ ಹೊಂದುವ ಅನೇಕ ಮಾದರಿಗಳು ಬೇರೆ ದೇಶಗಳಲ್ಲಿ ಪ್ರಸ್ತುತವಾಗಿವೆ. ಅಂಥವನ್ನು ಅಭ್ಯಸಿಸಿ, ಅವುಗಳ ಜತೆಗೆ ನಮ್ಮವೇ ಆದ ಅಭಿವೃದ್ಧಿ ಯೋಜನೆಗಳನ್ನು ಹೊಸೆದರೆ ಅವು ಅರ್ಥಪೂರ್ಣವಾಗಿಯೂ ಮತ್ತು ಕಾರ್ಯಶೀಲವಾಗಿಯೂ ಇರುತ್ತವೆ.

ಯಾವ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಪ್ರಸ್ತಾಪಿಸುತ್ತದೆಯೊ ಅಥವಾ  ಅಭಿವೃದ್ಧಿ ಕುರಿತ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಜನರ ಮುಂದೆ   ಮಂಡಿಸುತ್ತದೊ ಅಂಥ ಪಕ್ಷದ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಆರಿಸಲು ಜನತೆ ಮುಂದಾಗಬಹುದು. ಇದು ಬದಲಾಗುತ್ತಿರುವ ಕಾಲ. ರಾಜಕೀಯ ಧೋರಣೆಗಳು ಬದಲಾಗದಿದ್ದರೆ ಜನತೆ ಅನ್ಯ ಮಾರ್ಗಗಳನ್ನು ಹುಡುಕುವುದರಲ್ಲಿ ಸಂದೇಹವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT