ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷದಿಂದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಶಾಲಾ ಆವರಣದಲ್ಲಿ ಸ್ವಚ್ಛತೆ, ನೈರ್ಮಲ್ಯ ಕಾಪಾಡಲು ಮತ್ತು ಸಮರ್ಪಕ ಕುಡಿಯುವ ನೀರು ಪೂರೈಕೆ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ  ಇಲಾಖೆಯು (ಎಚ್‌ಆರ್‌ಡಿ) ಈ ವರ್ಷದಿಂದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’ವನ್ನು ನೀಡಲಿದೆ.

ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನೀಡಲಾಗುವ ಈ ಪುರಸ್ಕಾರವನ್ನು ಪಡೆಯಲು ದೇಶದ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳು ಸ್ಪರ್ಧಿಸಬಹುದು. ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚಿನ ಒತ್ತು ದೊರೆಯಲಿದೆ.

ಈ ಪ್ರಶಸ್ತಿಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಗಳು ನಡೆಯಲಿವೆ.  ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳನ್ನು ಆಯಾ ರಾಜ್ಯಗಳು ನಡೆಸಿದರೆ, ರಾಷ್ಟ್ರಮಟ್ಟದ ಸ್ಪರ್ಧೆಯನ್ನು ಕೇಂದ್ರ ಸರ್ಕಾರ ಆಯೋಜಿಸುತ್ತದೆ.

ತಲಾ ₹ 50 ಸಾವಿರ ಧನಸಹಾಯ: ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗೆ ಆಯ್ಕೆಯಾಗುವ ಶಾಲೆಗಳಿಗೆ ನೈರ್ಮಲ್ಯ ವ್ಯವಸ್ಥೆಯ ಸುಧಾರಣೆಗೆ ಹೆಚ್ಚುವರಿಯಾಗಿ ₹ 50 ಸಾವಿರ ಧನಸಹಾಯವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ಪ್ರಾಥಮಿಕ ಮತ್ತು ಮಾಧ್ಯಮಿಕ ವಲಯದ ತಲಾ 100 ಶಾಲೆಗಳಿಗೆ ರಾಷ್ಟ್ರಮಟ್ಟದ ಸ್ವಚ್ಛ ಭಾರತ ಪುರಸ್ಕಾರ ನೀಡಲಾಗುತ್ತದೆ. ಇದರಲ್ಲಿ ಗ್ರಾಮೀಣ ಪ್ರದೇಶದಿಂದ 70 ಹಾಗೂ ನಗರ ಪ್ರದೇಶದಿಂದ 30 ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜ್ಯ ಮಟ್ಟ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ  ನಡೆಯುವ ಸ್ಪರ್ಧೆಗಳಲ್ಲಿ ಆಯ್ಕೆಯಾಗುವ ತಲಾ 40 ಶಾಲೆಗಳನ್ನು ರಾಷ್ಟ್ರೀಯ ಪ್ರಶಸ್ತಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಜತೆಗೆ 10 ಅತ್ಯುತ್ತಮ ಜಿಲ್ಲೆಗಳನ್ನು ಗುರುತಿಸಿ ಪ್ರಮಾಣಪತ್ರವನ್ನೂ ಸರ್ಕಾರ ನೀಡಲಿದೆ.

ರಾಜ್ಯಮಟ್ಟದಲ್ಲಿ ಆಯ್ಕೆಯಾದ ಶಾಲೆಗಳಿಗೆ ಪ್ರಮಾಣ ಪತ್ರ ದೊರೆಯಲಿದೆ. ಅಲ್ಲದೆ ಆಯಾ ರಾಜ್ಯ ಸರ್ಕಾರಗಳು ಬೇಕಾದರೆ ಪ್ರೋತ್ಸಾಹಧನ ನೀಡಬಹುದು ಎಂದು ಸಚಿವಾಲಯ ಹೇಳಿದೆ.

ಜಿಲ್ಲಾ ಮಟ್ಟದಲ್ಲಿ ತಲಾ 48 (ಗ್ರಾಮೀಣ ಪ್ರದೇಶದ 36, ನಗರ ಪ್ರದೇಶದ 12) ಶಾಲೆಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧೆ ಯಾವಾಗ ?: ಸ್ಪರ್ಧೆಗೆ  ಶಾಲೆಗಳು ಜುಲೈ 1ರಿಂದ 31ರೊಳಗೆ ಅರ್ಜಿ ಸಲ್ಲಿಸಬಹುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಶಾಲೆಗಳ ಪಟ್ಟಿಯನ್ನು  ಆಗಸ್ಟ್‌ 1ರಿಂದ 31ರೊಳಗೆ ಸಲ್ಲಿಸಬೇಕು.  ರಾಜ್ಯ ಮಟ್ಟದಲ್ಲಿ ಪುರಸ್ಕಾರ ಪ್ರಕ್ರಿಯೆಯು ಸೆಪ್ಟೆಂಬರ್‌ 1ರಿಂದ 30ರೊಳಗೆ ನಡೆಯಬೇಕು.

ಅಲ್ಲಿಂದ ಆಯ್ಕೆಯಾದ ಶಾಲೆಗಳ ಪಟ್ಟಿಯನ್ನು ರಾಜ್ಯಗಳು ಅಕ್ಟೋಬರ್‌ 7ರೊಳಗೆ ಕೇಂದ್ರಕ್ಕೆ ಸಲ್ಲಿಸಬೇಕು. ರಾಷ್ಟ್ರಮಟ್ಟದಲ್ಲಿ ಸ್ವಚ್ಛ ವಿದ್ಯಾಲಯ ಪ್ರಶಸ್ತಿಯ ಆಯ್ಕೆಯು ನವೆಂಬರ್‌ 25ರಂದು ನಡೆಯಲಿದೆ.

ಆರ್ಜಿ ಸಲ್ಲಿಕೆ: ಸ್ವಚ್ಛ ವಿದ್ಯಾಲಯ ಪುರಸ್ಕಾರಕ್ಕೆ ಸ್ಪರ್ಧಿಸಬಯಸುವ ಅರ್ಹ ಶಾಲೆಗಳ ಮುಖ್ಯ ಶಿಕ್ಷಕರು ಆನ್‌ ಲೈನ್‌ ಮೂಲಕ (http://mhrd.gov.in) ಶಾಲೆಯನ್ನು ನೋಂದಾಯಿಸಬೇಕು.

ಅಲ್ಲದೆ ಶಾಲೆಯ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಜತೆಗೆ ನಿಗದಿತ ನಮೂನೆಯಲ್ಲಿ ಸ್ವಯಂ ಮೌಲ್ಯಮಾಪನವನ್ನೂ ಮಾಡಬೇಕು.  ಇದನ್ನು ಆಧರಿಸಿ ಸಂಬಂಧಿಸಿದ ಆಯ್ಕೆ ಸಮಿತಿ ಸದಸ್ಯರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುತ್ತಾರೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT