ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಾವು ನಿಲ್ಲಲಿ

Last Updated 9 ಜುಲೈ 2014, 19:30 IST
ಅಕ್ಷರ ಗಾತ್ರ

ಬಡತನ ಹಾಗೂ ತಾಯಿ, ಮಗು ಸಾವು  ಭಾರತಕ್ಕೆ ಈಗಲೂ ದೊಡ್ಡ ಸವಾಲುಗಳಾಗಿಯೇ ಮುಂದುವರಿದಿವೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ 2014ರ ಸಹಸ್ರಮಾನದ ಅಭಿವೃದ್ಧಿ ಗುರಿಗಳ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ. 2015ರೊಳಗೆ ತಲುಪಬೇಕಾಗಿರುವ ಈ ಗುರಿಗಳ ಸಾಧನೆಯಲ್ಲಿ ಭಾರತ ಹಿಂದೆ ಬಿದ್ದಿರುವುದು ಆತಂಕಕಾರಿ. 

ಹೆರಿಗೆ ಸಂದರ್ಭದಲ್ಲಿ ಅಥವಾ ಹೆರಿಗೆಯಾದ ಕೆಲವು ದಿನಗಳಲ್ಲಿ ಬಾಣಂತಿಯರು ಸಾವಿಗೀಡಾಗುವುದನ್ನು ತಪ್ಪಿಸಲು ಅನೇಕ ಯೋಜನೆ ಹಾಗೂ ಕಾರ್ಯ­ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ರೂಪಿಸಿವೆ.  ಹೀಗಿದ್ದೂ ಜಗತ್ತಿನಲ್ಲಿ ಸಂಭವಿಸುವ ತಾಯಂದಿರ ಸಾವುಗಳಲ್ಲಿ ಬಹುತೇಕ ಮೂರನೇ ಒಂದರಷ್ಟು ಸಾವುಗಳು ಭಾರತ ಹಾಗೂ ನೈಜೀರಿಯಾಗಳಲ್ಲಿ ಸಂಭವಿ­ಸುತ್ತಿವೆ. ಭಾರತದಲ್ಲಿ ವರ್ಷಕ್ಕೆ 50,000 ತಾಯಂದಿರು ಸಾಯುತ್ತಿದ್ದಾರೆ (ಶೇ 17). ನೈಜೀರಿಯಾದಲ್ಲಿ ಈ ಸಾವುಗಳ ಪ್ರಮಾಣ 40 ಸಾವಿರ
(ಶೇ 14). ವಿಶ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯಾಗುತ್ತಿದೆ. 

ಆದರೆ ಮಾತೃ­ಮರಣವನ್ನು ತಪ್ಪಿಸಲು ಸಾಧ್ಯವಾಗದಿರುವುದು ಅಭಿವೃದ್ಧಿ ನೀತಿಗಳ ಅನುಷ್ಠಾನದ ವೈಫಲ್ಯ. 2013ರಲ್ಲಿ ಒಂದು ಲಕ್ಷ ಹೆರಿಗೆಗಳಲ್ಲಿ ಸತ್ತ ತಾಯಂದಿರ ಸಂಖ್ಯೆ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ16. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಂಖ್ಯೆ 230.  ಈ ಮಟ್ಟದ ಭಾರಿ ಅಂತರ, ಯೋಜನೆಗಳನ್ನು ರೂಪಿಸುವವರ ಕಣ್ತೆರೆಸಬೇಕಾಗಿದೆ. ಹೆಚ್ಚಿನ ಈ ಸಾವುಗಳು ತಡೆಗಟ್ಟಬಹುದಾದಂತಹವು ಎಂಬುದು ನಮ್ಮ ವ್ಯವಸ್ಥೆ­ಯೊಳಗಿನ ನಿರ್ಲಕ್ಷ್ಯಕ್ಕೆ ದ್ಯೋತಕ.

ಸುರಕ್ಷಿತ ತಾಯ್ತನಕ್ಕಾಗಿ ಸರ್ಕಾರಗಳು ರೂಪಿಸಿರುವ ಯೋಜನೆಗಳು ಎಲ್ಲರನ್ನೂ ತಲುಪುತ್ತಿಲ್ಲ. ಈಗಲೂ ಮನೆಗಳಲ್ಲಿ ಹೆರಿಗೆಗಳಾಗುವಂತಹದ್ದು ಮುಂದುವರಿದಿದೆ.  ಇಂತಹ ಅಸುರಕ್ಷಿತ ಹೆರಿಗೆ ಹಾಗೂ ತರಬೇತಿರಹಿತ ಶುಶ್ರೂಷೆ ತಾಯಂದಿರ ಸಾವುಗಳಿಗೆ ಮುಖ್ಯ ಕಾರಣ.   ನವಜಾತ ಶಿಶುಗಳ ಮರಣವೂ ಭಾರತದಲ್ಲಿ ಕಡಿಮೆಯಾಗಿಲ್ಲ. 2012ರಲ್ಲಿ 10.4 ಲಕ್ಷ ಮಕ್ಕಳು ಐದನೇ ಹುಟ್ಟುಹಬ್ಬಕ್ಕೆ ಮುಂಚೆಯೇ ಸಾವನ್ನಪ್ಪಿವೆ ಎಂದರೆ, ಯೋಜನೆಗಳ ಅನುಷ್ಠಾನದ ವೈಫಲ್ಯ ಎದ್ದುಕಾಣಿಸುತ್ತದೆ.

ಏನು ದೋಷ­ಗಳಿವೆ ಎಂಬುದರ ಪುನರವಲೋಕನ  ತುರ್ತು ಅಗತ್ಯ. ಒಂದೆಡೆ   ಆರ್ಥಿಕ­ವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರವಾಗಿ ಭಾರತವನ್ನು ಗುರುತಿಸ­ಲಾಗುತ್ತದೆ. ಮತ್ತೊಂದೆಡೆ  ಸುರಕ್ಷಿತ ತಾಯ್ತನದಂತಹ ಮೂಲಭೂತ ಹಕ್ಕಿಗೂ ಚ್ಯುತಿಯಾಗಿರುವ ವಿಪರ್ಯಾಸ ಇಲ್ಲಿದೆ. ಗಂಡು, ಹೆಣ್ಣು ಅಸಮಾನತೆಯ ಸಮಾಜ ಈ  ಸಮಸ್ಯೆಗೆ ಮೂಲ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಗಂಡು– ಹೆಣ್ಣು ಮಕ್ಕಳ ಮಧ್ಯೆ ತಾರತಮ್ಯ ಮಾಡುವ ಸಮಾಜದ ರೀತಿನೀತಿಗಳಿಂದಾಗಿ ಹೆಣ್ಣುಮಕ್ಕಳು ಸೂಕ್ತ ಪೋಷಣೆ­ಯಿಂದ ಬಾಲ್ಯದಲ್ಲಿಯೇ ವಂಚಿತರಾಗುವುದು ಸಾಮಾನ್ಯ. 

ಸಹಜ­ವಾಗಿಯೇ ಇಂತಹ ಹೆಣ್ಣುಮಕ್ಕಳು ರಕ್ತಹೀನತೆಯಿಂದ ಬಳಲುತ್ತಾರೆ. ಹೆರಿಗೆ ಸಂಬಂಧಿ ಸಾವುಗಳಿಗೆ ರಕ್ತಹೀನತೆಯೂ ಪ್ರಮುಖ ಕಾರಣ. ಬಾಲ್ಯವಿವಾಹ­ಗಳಿಂದಾಗಿ ಹದಿಹರೆಯದಲ್ಲೇ ತಾಯಂದಿರಾಗುವುದೂ ಇಂತಹ ಸಾವು­ಗಳಿಗೆ ಮತ್ತೊಂದು ಕಾರಣ. ಹೀಗಾಗಿ ಈ ಸಮಸ್ಯೆಯ ನಿರ್ವಹಣೆಗೆ   ಸಮಗ್ರ ದೃಷ್ಟಿಕೋನ ಅಗತ್ಯ. ಮಹಿಳೆಯರ ಪ್ರಜನನ ಹಕ್ಕುಗಳು ಹಾಗೂ ಲಭ್ಯವಿರುವ ಆರೋಗ್ಯ ಸೇವೆಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸ­ಬೇಕು. ಇದಕ್ಕಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಒದಗಿಸಲಾಗುವ ಸಂಪನ್ಮೂಲವೂ ಹೆಚ್ಚಾಗಬೇಕಿರುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT