ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಂದಿ ಕೇವಲ 400 ಕೆ.ಜಿ ಭಾರ!

Last Updated 20 ನವೆಂಬರ್ 2014, 19:37 IST
ಅಕ್ಷರ ಗಾತ್ರ

ಬೆಂಗಳೂರು: ಅದು ಯಾರ್ಕ್‌ಷೈರ್‌ ಮೂಲದ ಹಂದಿ. ಹೀಗಾಗಿ ನಮ್ಮ ಹಂದಿಗಳಂತೆ ಕಪ್ಪು, ಕಪ್ಪಾಗಿರದೆ ಬಿಳಿಬಣ್ಣದಿಂದ ಮಿರಿ, ಮಿರಿ ಮಿಂಚುತ್ತಿತ್ತು. ಗಿಡ್ಡಕಾಲಿನ, ಚೋಟುಬಾಲದ, ಸಣ್ಣ ಕಿವಿಗಳ ಆ ಹಂದಿ ಅತ್ತಿಂದ ಇತ್ತ ಓಡಾಡುತ್ತಿದ್ದರೆ ಅದರ ಮುಂದೆ ನಿಂತಿದ್ದ ನೂರಾರು ಮಂದಿ ರೆಪ್ಪೆ ಮಿಟುಕಿಸದೆ ಅದನ್ನು ಕುತೂಹಲದಿಂದ ನೋಡುತ್ತಿದ್ದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಏರ್ಪಡಿಸಿರುವ ಕೃಷಿಮೇಳದಲ್ಲಿ ಗುರುವಾರ ಎಲ್ಲರ ಆಕರ್ಷಣೆ ಕೇಂದ್ರವಾಗಿದ್ದು ಯಾರ್ಕ್‌ಷೈರ್‌ ಪಿಗ್‌ (ಹಂದಿ). ಮೇಳದಲ್ಲಿ ಈ ತಳಿಯ ಜೋಡಿ­ಯೊಂ­ದನ್ನು ಬೆಂಗಳೂರು ಕೃಷಿ ವಿ.ವಿ ಹಂದಿ ಸಾಕಾಣಿಕಾ ವಿಭಾಗ ಪ್ರದರ್ಶನಕ್ಕೆ ಇಟ್ಟಿದೆ. ಅವುಗಳ ಕುರಿತು ಮಾಹಿತಿ ಪಡೆಯಲು ರೈತರಲ್ಲಿ ಪೈಪೋಟಿ ಏರ್ಪಟ್ಟಿತ್ತು.

‘ಚೆನ್ನಾಗಿ ಸಾಕಿದರೆ ಈ ಹಂದಿ 400 ಕೆ.ಜಿ.ವರೆಗೆ ತೂಗುತ್ತದೆ. ಜೀವಂತ ಹಂದಿಗೆ ಪ್ರತಿ ಕೆ.ಜಿ.ಗೆ ₨ 100 ಬೆಲೆ ಇದೆ. ದಷ್ಟಪುಷ್ಟವಾಗಿ ಬೆಳೆದ ಒಂದೊಂದು ಯಾರ್ಕ್‌ಷೈರ್‌ ಹಂದಿಯ ಮೌಲ್ಯ ₨ 40 ಸಾವಿರಕ್ಕಿಂತ ಹೆಚ್ಚು’ ಎಂದು ಹೇಳುತ್ತಿದ್ದ ಸಿಬ್ಬಂದಿ ಕೇಳುಗರಲ್ಲಿ ಇನ್ನಷ್ಟು ಕುತೂಹಲ ಕೆರಳಿಸುತ್ತಿದ್ದರು.

‘ವರ್ಷಕ್ಕೆ ಎರಡು ಸಲ ಈ ಹಂದಿ ಮರಿಗಳನ್ನು ಹಾಕುತ್ತದೆ. ಪ್ರತಿ ಬಾರಿಯೂ 8ರಿಂದ 12 ಮರಿಗಳಿಗೆ ಜನ್ಮ ನೀಡುತ್ತದೆ. ಮಾರುಕಟ್ಟೆಯಲ್ಲಿ ಒಂದೊಂದು ಮರಿಗೆ ₨ 4,500ರಷ್ಟು ಬೆಲೆ ಇದೆ. ಈ ತಳಿ ಇಂಗ್ಲೆಂಡ್‌ ಮೂಲದ್ದಾದರೂ ಇಲ್ಲಿನ ಹವಾಗುಣಕ್ಕೆ ಚೆನ್ನಾಗಿ ಹೊಂದಿಕೊಂಡಿದೆ’ ಎಂದು ಹೇಳುತ್ತಾರೆ ಕೃಷಿ ವಿ.ವಿ ಹಂದಿ ಸಾಕಾಣಿಕಾ ವಿಭಾಗದ ಹಿರಿಯ ಕ್ಷೇತ್ರ ವಿಸ್ತರಣಾಧಿಕಾರಿ ಪಾಂಡು ಹೇಳುತ್ತಾರೆ.

‘ಥೇಟ್‌ ಹಸುವಿನಂತೆ ಇರುವ ಯಾರ್ಕ್‌ಷೈರ್‌ ಹಂದಿಗೆ ನಿತ್ಯ ಅಕ್ಕಿ–ಜೋಳದ ನುಚ್ಚು ಕೊಡಬೇಕು. ಆಹಾರ ತ್ಯಾಜ್ಯವನ್ನೂ ಅದು ತಿನ್ನುತ್ತದೆ. ಪೌಷ್ಟಿಕ ಆಹಾರವನ್ನು ಕೊಟ್ಟಷ್ಟೂ ಅದು ಚೆನ್ನಾಗಿ ಬೆಳೆಯುತ್ತದೆ’ ಎಂದು ವಿವರಿಸುತ್ತಾರೆ ಚಳ್ಳಕೆರೆ ಲಕ್ಷ್ಮಿಕಾಂತ ಪಿಗ್‌ ಫಾರ್ಮ್‌ನ ಜನಾರ್ದನ್‌.

‘ರಾಜ್ಯದಲ್ಲಿ ಈ ತಳಿಯ ಹಂದಿಗಳನ್ನು ಅಭಿವೃದ್ಧಿಪಡಿಸುವ ಕೆಲವೇ ಕೆಲವು ಹಂದಿ ಫಾರ್ಮ್‌ಗಳಿದ್ದು ಮರಿಗಳು ಬೇಕೆಂದರೆ ಮುಂಗಡ ಬುಕ್ಕಿಂಗ್‌ ಮಾಡಬೇಕಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ. ‘ಮರಿಗಳನ್ನು ಮೂರು ತಿಂಗಳ ಕಾಲ ಅವುಗಳ ತಾಯಿಯ ಆಶ್ರಯದಲ್ಲೇ ಬೆಳೆಸಲಾಗುತ್ತದೆ. ಆ ವೇಳೆಗೆ ಅವು 20ರಿಂದ 25 ಕೆ.ಜಿಯಷ್ಟು ತೂಕ ಹೊಂದಿರುತ್ತವೆ. ಬಳಿಕ ರೋಗ ನಿರೋಧಕ ವ್ಯಾಕ್ಸಿನ್‌ ಹಾಕಿ, ಮಾರಾಟಕ್ಕೆ ಅಣಿಗೊಳಿಸಲಾ­ಗುತ್ತದೆ. ಒಂದೂವರೆ ವರ್ಷದಲ್ಲಿ ಅದು 350­ರಿಂದ 400 ಕೆ.ಜಿಯಷ್ಟು ತೂಕ ಪಡೆಯುತ್ತದೆ’ ಎಂದು ಅರು ವಿವರಿಸುತ್ತಾರೆ.

‘ರುಚಿಕರ ಮಾಂಸಕ್ಕೆ ಹೆಸರಾದ ಯಾರ್ಕ್‌ಷೈರ್‌ ಹಂದಿಗೆ ಜಗತ್ತಿನ ಎಲ್ಲೆಡೆ ಬೇಡಿಕೆ ಇದೆ. ಭಾರತ­ದಲ್ಲೂ ಈಗ ಈ ತಳಿಯ ಹಂದಿಗಳನ್ನೇ ಹೆಚ್ಚಾಗಿ ಸಾಕಾಣಿಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕೋಳಿ ಬಿಟ್ಟರೆ ಹಂದಿ ಮಾಂಸವನ್ನೇ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಜನಾರ್ದನ್‌. ಲಕ್ಷ್ಮಿಕಾಂತ ಪಿಗ್‌ ಫಾರ್ಮ್‌ನಲ್ಲಿ ಡೆನ್ಮಾರ್ಕ್‌ನ ‘ಡ್ಯುರೋಕ್‌’ ತಳಿಯ ಹಂದಿಗಳನ್ನೂ ಅಭಿವೃದ್ಧಿ ಮಾಡಲಾಗಿದೆ.

ಕೆಂಪುಮಿಶ್ರಿತ ಕಂದುಬಣ್ಣದ ಈ ಹಂದಿ 500 ಕೆ.ಜಿವರೆಗೆ ತೂಗುತ್ತದೆ. ಈ ಹಂದಿಯ ಮಾಂಸದಲ್ಲಿ ಕೊಬ್ಬಿನಾಂಶ ಕಡಿಮೆ ಇರುತ್ತದೆ. ನಮ್ಮ ದೇಶದ ಸಾದಾ ಹಂದಿಗಳು ಹೆಚ್ಚೆಂದರೆ 100 ಕೆ.ಜಿ. ಭಾರವನ್ನು ಮಾತ್ರ ಹೊಂದಿರುತ್ತವೆ. ದೇಶಿ ತಳಿಗಳಲ್ಲಿ ಆಂಧ್ರದ ನಾಟಿ ತಳಿ ಹಂದಿ ಮಾಂಸಪ್ರಿಯರ ಪ್ರೀತಿಗೆ ಪಾತ್ರವಾಗಿದೆ. ಲಕ್ಷ್ಮಿಕಾಂತ ಫಾರ್ಮ್‌ನ ಶಾಖೆ ಕುಂಬಳಗೋಡು ಹತ್ತಿರದ ಕೆ.ಗೊಲ್ಲಹಳ್ಳಿಯಲ್ಲೂ ಇದೆ. ಚಿಕ್ಕಜಾಲದ ವೆಂಕಟಾಚಲ ಎಂಬುವವರು ಸಹ ಯಾರ್ಕ್‌ಷೈರ್‌ ತಳಿ ಹಂದಿಗಳ ಅಭಿವೃದ್ಧಿಪಡಿಸಲು ಫಾರ್ಮ್‌ ಹೊಂದಿದ್ದಾರೆ.
ವಿವರಗಳಿಗೆ ಜನಾರ್ದನ್‌ ಅವರ ಸಂಪರ್ಕ ಸಂಖ್ಯೆ: 99453 00899

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT