ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಮೇಲ್ಸೇತುವೆಗೆ ಒಪ್ಪಿಗೆ

ಉದ್ದೇಶಿತ ಕಾಮಗಾರಿಗೆ ₹1,350 ಕೋಟಿ ವೆಚ್ಚ ಅಂದಾಜು
Last Updated 6 ಅಕ್ಟೋಬರ್ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಈ ಮೇಲ್ಸೇತುವೆ ನಿರ್ಮಾಣ ಮಾಡಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈ ಸಂಬಂಧ ಕಳೆದ ವಾರವೇ ಟೆಂಡರ್‌ ಕರೆದಿದೆ. 6.77 ಕಿ.ಮೀ ಉದ್ದದ ಈ ಉಕ್ಕಿನ ಸೇತುವೆ ನಿರ್ಮಾಣಕ್ಕೆ ₹1,350 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ತಡೆ ರಹಿತ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಸೇತುವೆ ನಿರ್ಮಾಣದ ಮುಖ್ಯ ಉದ್ದೇಶ. ಸೇತುವೆ ನಿರ್ಮಾಣವಾದರೆ ಚಾಲುಕ್ಯ ವೃತ್ತದಿಂದ  ಕೆಐಎಎಲ್‌ಗೆ ಕೇವಲ 30 ನಿಮಿಷಗಳಲ್ಲಿ ತಲುಪಬಹುದು. ಇದಕ್ಕಾಗಿ ಚಾಲುಕ್ಯ ವೃತ್ತದಲ್ಲಿ ನಾಲ್ಕು ರ್‍ಯಾಂಪ್‌ಗಳು ನಿರ್ಮಾಣಗೊಳ್ಳಲಿವೆ.

‘ಸ್ಟೂಪ್‌’ ಕನ್ಸಲ್ಟೆನ್ಸಿ ಸಂಸ್ಥೆಯು ಒಂದು ವರ್ಷ ಅಧ್ಯಯನ ನಡೆಸಿ ಮೇಲ್ಸೇತುವೆ ನಿರ್ಮಾಣಕ್ಕೆ ವಿಶಿಷ್ಟ ವಿನ್ಯಾಸ ಒಳಗೊಂಡ ವರದಿಯನ್ನು ಬಿಡಿಎಗೆ ಸಲ್ಲಿಸಿದೆ. ಇದನ್ನು ಆಧರಿಸಿ ಬಿಡಿಎ ಒಟ್ಟು ₹1,310  ಕೋಟಿ ಮೊತ್ತದ ಟೆಂಡರ್‌ ಕರೆಯಲಿದೆ. ಇನ್ನುಳಿದ ₹40 ಕೋಟಿಯನ್ನು ಬದಲಿ ರಸ್ತೆ ನಿರ್ಮಾಣ ಸೇರಿದಂತೆ ಇತರ ಕಾರ್ಯಕ್ಕೆ ಬಳಸಿಕೊಳ್ಳಲಿದೆ.

ಸೇತುವೆ ನಿರ್ಮಾಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ. ಟೆಂಡರ್‌  ಪ್ರಕ್ರಿಯೆ ಪೂರ್ಣಗೊಳಿಸಲು ಕನಿಷ್ಠ ನಾಲ್ಕು ತಿಂಗಳು ಸಮಯ ಬೇಕಾಗಲಿದೆ. ನಂತರ ಕಾಮಗಾರಿ ಆದೇಶ ಪತ್ರವನ್ನು ಸಂಬಂಧಿಸಿದ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಇದಕ್ಕಾಗಿ 2 ವರ್ಷಗಳ ಗಡುವು ವಿಧಿಸುವ ಅಂಶವನ್ನು ಟೆಂಡರ್‌ನಲ್ಲೇ ನಮೂದಿ ಸಲಾಗಿದೆ.

ಐಟಿಸಿ ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ ಸಮೀಪವಿರುವ ಅಂಡರ್‌ಪಾಸ್‌ ಇನ್ನಷ್ಟು ವಿಸ್ತರಿಸಿ ಕುಮಾರಕೃಪಾ ರಸ್ತೆ ಕಡೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಉದ್ದೇಶಿಸಲಾಗಿದೆ. ಬಿಡಿಎ ಜಂಕ್ಷನ್‌, ಕಾವೇರಿ ಜಂಕ್ಷನ್‌,  ಗಂಗಾನಗರದ ಸಿಬಿಐ ಜಂಕ್ಷನ್‌ನಲ್ಲಿರುವ ‘ಮ್ಯಾಜಿಕ್‌ ಬಾಕ್ಸ್‌’ಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ.

₹70 ಕೋಟಿ ವೆಚ್ಚದಲ್ಲಿ ಹೆಬ್ಬಾಳ ಮೇಲ್ಸೇತುವೆಯನ್ನು ಪುನರ್‌ ರೂಪಿಸಿ, ಕೊಡಿಗೇಹಳ್ಳಿ ಕಡೆಯಿಂದ ಬರುವ ಇನ್ನೊಂದು ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಸಂಚಾರ ದಟ್ಟಣೆ ತಗ್ಗಿಸಲು ಸರ್ವೀಸ್‌ ರಸ್ತೆಗಳನ್ನು ವಿಸ್ತರಿಸುವ ಯೋಜನೆ ಕೂಡ ಇದೆ ಎಂದು ಮೂಲಗಳು ತಿಳಿಸಿವೆ. 2025ರ ಹೊತ್ತಿಗೆ ಕೆಐಎಎಲ್‌ ಪ್ರಯಾಣಿಕರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಲಿರುವುದನ್ನು ಮನಗಂಡು  ಸರ್ಕಾರ ಸೇತುವೆ ನಿರ್ಮಾಣಕ್ಕೆ  ಮುಂದಾಗಿದೆ.

ಕಾಮಗಾರಿಯಿಂದ ಸಂಚಾರ ದಟ್ಟಣೆ: ಕಾಮಗಾರಿ ಶುರುವಾದ ಬಳಿಕ ಕೆಲವು ಕಡೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸದಾ ವಾಹನದಟ್ಟಣೆಯಿಂದ ಕೂಡಿರುವ ಈ ಮಾರ್ಗದಲ್ಲಿ ಕಾಮಗಾರಿಯಿಂದ ಮತ್ತಷ್ಟು ವಾಹನ ದಟ್ಟಣೆ ಕೂಡ ಉಂಟಾಗಬಹುದು. ಇದಕ್ಕಾಗಿ ಬಿಡಿಎ, ಬಿಬಿಎಂಪಿ, ಸಂಚಾರ ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳು ಅನೇಕ ಸಭೆಗಳನ್ನು ನಡೆಸಿವೆ.

‘ಬೆಳಿಗ್ಗೆ ಮತ್ತು ಸಂಜೆ ಚಾಲುಕ್ಯ ವೃತ್ತ, ಕಾವೇರಿ ಜಂಕ್ಷನ್‌, ಮೇಖ್ರಿ ವೃತ್ತದಲ್ಲಿ ಭಾರಿ ವಾಹನ ದಟ್ಟಣೆ ಇರುತ್ತದೆ. ಕಾಮಗಾರಿ ಆರಂಭವಾದ ಬಳಿಕ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಎಂ.ಎ. ಸಲೀಂ.

*
ದೇಶದ ದೊಡ್ಡ ಉಕ್ಕಿನ ಸೇತುವೆ
ಸದ್ಯ ಕೋಲ್ಕತ್ತದ ಹೌರಾದಲ್ಲಿರುವ ಉಕ್ಕಿನ ಮೇಲ್ಸೇತುವೆ 705 ಮೀಟರ್‌ ಉದ್ದವಿದ್ದು, ದೇಶದ ಅತಿ ಉದ್ದದ ಸೇತುವೆ ಎನಿಸಿಕೊಂಡಿದೆ. ಬೆಂಗಳೂರಿನಲ್ಲಿ ನಿರ್ಮಾಣ ಗೊಳ್ಳಲಿರುವ ಸೇತುವೆಯ ಉದ್ದ 6.77 ಕಿ.ಮೀ ಇದೆ. ಇದು ನಿರ್ಮಾಣಗೊಂಡರೆ ದೇಶದ ಅತಿ ಉದ್ದದ ಉಕ್ಕಿನ ಮೇಲ್ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

*
ಉಕ್ಕಿನ ಮೇಲುಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಿದೆ. ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಬಳಿಕ ಇತರ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು.
–ಪಿ.ಎನ್‌. ನಾಯಕ್‌,
ಬಿಡಿಎ ಎಂಜಿನಿಯರ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT