ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿನ ಮೇಲ್ಸೇತುವೆ ನೈಜ ವೆಚ್ಚ ಎಷ್ಟು?

ಬಿಡಿಎ ಅಂದಾಜು ವೆಚ್ಚದ ಅರ್ಧದಷ್ಟು ಮೊತ್ತದಲ್ಲಿ ನಿರ್ಮಾಣ ಸಾಧ್ಯ: ಟಿಎಸಿ ಸದಸ್ಯ ಪ್ರತಿಪಾದನೆ
Last Updated 26 ಜೂನ್ 2016, 19:55 IST
ಅಕ್ಷರ ಗಾತ್ರ

ಬೆಂಗಳೂರು: ಬಸವೇಶ್ವರವೃತ್ತದಿಂದ ಹೆಬ್ಬಾಳದ ವರೆಗೆ ನಿರ್ಮಾಣಗೊಳ್ಳಲಿರುವ ಉಕ್ಕಿನ ಮೇಲ್ಸೇತುವೆಗೆ ತಗಲುವ ನಿಜವಾದ ವೆಚ್ಚ ಎಷ್ಟು? ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಬ್ಬರು (ಟಿಎಸಿ) ಅಂದಾಜಿಸಿದ ಪ್ರಕಾರ ಈ ಮೊತ್ತ ₹ 695.86 ಕೋಟಿ ಮೀರುವುದಿಲ್ಲ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ಮೇಲ್ಸೇತುವೆಗೆ ₹ 1,350 ಕೋಟಿ ವೆಚ್ಚದ ಯೋಜನೆ ರೂಪಿಸಿದೆ.

ಆರು ಪಥಗಳ ಈ ಉಕ್ಕಿನ ಸೇತುವೆ ಅಗಲ  24.20 ಮೀಟರ್‌. ಇದರಲ್ಲಿ 11 ಮೀ ಅಗಲದ ಮೂರು ಲೇನ್‌ಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇರಲಿವೆ. 1.20 ಮೀ ಅಗಲದ ವಿಭಜಕ ಹಾಗೂ ಎರಡೂ ಪಾರ್ಶ್ವ 0.50 ಮೀ ಅಗಲದಲ್ಲಿ ರೈಲಿಂಗ್ಸ್‌ಗಳನ್ನು ಅಳವಡಿಸಲಾಗುತ್ತದೆ. 

ತಾಂತ್ರಿಕ ಸಲಹಾ ಸಮಿತಿ ಸದಸ್ಯ ಆರ್‌.ಕೆ.ರಾಜಗೋಪಾಲ್‌ ಅವರ ಪ್ರಕಾರ, ಮೇಲ್ಸೇತುವೆಯ ಯೋಜನಾ ವಿಸ್ತೀರ್ಣ 1,61,140 ಚದರ ಮೀಟರ್‌. ಇದಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿದರೆ ಯೋಜನೆಯ ವೆಚ್ಚ ₹567.49 ಕೋಟಿ ಆಗುತ್ತದೆ.

ಯೋಜನೆ ಪ್ರದೇಶದಲ್ಲಿ ನೆಲದಡಿ ಹಾದುಹೋಗುವ  ಕೊಳವೆ ಮಾರ್ಗಗಳ ಸ್ಥಳಾಂತರ ಮತ್ತು ಭೂಸ್ವಾಧೀನಕ್ಕೆ  ₹ 50 ಕೋಟಿ ಮತ್ತು  ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ₹28.37 ಕೋಟಿ  ಹಾಗೂ ಮೇಲ್ವಿಚಾರಣಾ ಶುಲ್ಕಕ್ಕೆ ಯೋಜನೆಯ ವೆಚ್ಚದ ಶೇಕಡಾ 5ರಷ್ಟು ಮೊತ್ತವನ್ನು ಕಾಯ್ದಿರಿಸಬೇಕಾಗುತ್ತದೆ.

ಬಿಡಿಎ ಅಂದಾಜಿಸಿರುವ ಯೋಜನಾ ವೆಚ್ಚ ದುಬಾರಿ ಆಗಿರುವುದರ ಜತೆಗೆ, ಇದರ ಗುತ್ತಿಗೆ ಪಡೆಯಲು ಗುತ್ತಿಗೆದಾರರು    ನಮೂದಿಸಿರುವ ಮೊತ್ತ ಯೋಜನಾ ವೆಚ್ಚಕ್ಕಿಂತ ಶೇ 41ರಷ್ಟು ಹೆಚ್ಚು ಇದೆ. ಅಂದರೆ ಯೋಜನೆಯ ವೆಚ್ಚ ಮತ್ತೆ ₹ 550 ಕೋಟಿಯಷ್ಟು ಹೆಚ್ಚಾಗಲಿದೆ. ‘ಉಕ್ಕಿನ ಮೇಲ್ಸೇತುವೆಗೆ ಹೋಲಿಸಿದರೆ ಕಾಂಕ್ರೀಟ್‌ ಮೇಲ್ಸೇತುವೆ ನಿರ್ಮಾಣಕ್ಕೆ ತುಂಬಾ ಕಡಿಮೆ ವೆಚ್ಚವಾಗಲಿದೆ. 

ಸೇತುವೆಯ ಕಮಾನುಗಳ ಉದ್ದ 125ರಿಂದ 300 ಮೀಟರ್‌ನೊಳಗಿದ್ದರೆ ಮಾತ್ರ  ಉಕ್ಕಿನ ಮೇಲ್ಸೇತುವೆ ಸೂಕ್ತ. ಆದರೆ, ಉಕ್ಕು ಬಳಸಿ 30 ಮೀಟರ್, 50 ಮೀಟರ್‌ ಉದ್ದದ ಕಮಾನು ನಿರ್ಮಿಸಿದರೆ ಅದು ಬಾಳಿಕೆ ಬರುವುದಿಲ್ಲ. ನಗರದ ವಾತಾವರಣಕ್ಕೆ ಉಕ್ಕಿನ ರಚನೆ ಹೊಂದಿಕೊಳ್ಳುವುದಿಲ್ಲ. ವಾಸ್ತುವಿನ್ಯಾಸದ ದೃಷ್ಟಿಯಿಂದಲೂ ಇದು ಉತ್ತಮವಲ್ಲ’ ಎನ್ನುತ್ತಾರೆ ರಾಜಗೋಪಾಲ್‌.

ನಿರ್ಮಾಣಕ್ಕೆ ತಗಲುವ ಅವಧಿ: ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ 2 ವರ್ಷ ಅವಧಿಯನ್ನು ನಿಗದಿಪಡಿಸಲಾಗಿದೆ. ಆದರೆ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಸೇತುವೆ ನಿರ್ಮಾಣ ಸಾಧ್ಯ ಎನ್ನುತ್ತಾರೆ  ಅವರು. ‘ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಅದಕ್ಕಿಂತಲೂ ಕಡಿಮೆ ಅವಧಿಯಲ್ಲಿ  ಸೇತುವೆ ನಿರ್ಮಾಣ ಸಾಧ್ಯವಿದೆ. ಇದಕ್ಕೆ ಏಕೆ ಇಷ್ಟೊಂದು ಕಾಲಾವಕಾಶ ನೀಡಲಾಗಿದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು. 

ಮೇಲ್ಸೇತುವೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಎರಡು ಅಥವಾ ಮೂರು ಏಜೆನ್ಸಿಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಕಾಮಗಾರಿಯ ಸಂದರ್ಭದಲ್ಲಿ  ವಾಹನಗಳು ಸುತ್ತುಬಳಸಿ ಸಾಗುವುದನ್ನು, ಅದರಿಂದ  ಸಂಚಾರದ ಮೇಲಾಗುವ ಒತ್ತಡವನ್ನು ಪರಿಗಣಿಸಿದರೆ ಈ ವೆಚ್ಚ ಇನ್ನೂ ₹ 400 ಕೋಟಿಯಷ್ಟು ಹೆಚ್ಚಲಿದೆ. ಇವುಗಳನ್ನೆಲ್ಲ ಡಿಪಿಆರ್‌ನಲ್ಲಿ ಪರಿಗಣಿಸಿಲ್ಲ.

‘ಕ್ಷಿಪ್ರಗತಿಯಲ್ಲಿ ಸೇತುವೆ ನಿರ್ಮಿಸುವ ತಂತ್ರಜ್ಞಾನ (ಆಕ್ಸಲರೇಟೆಡ್‌ ಬ್ರಿಜ್‌ ಕನ್‌ಸ್ಟ್ರಕ್ಷನ್‌ ಟೆಕ್ನಿಕ್‌) ಬಳಕೆಯಿಂದ ಈ ವಿಳಂಬವನ್ನು ತಪ್ಪಿಸಬಹುದು. ಇಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದಿದ್ದರೆ ನಾವು ಹಿಂದೆ ಬೀಳಬೇಕಾಗುತ್ತದೆ. ತಾಂತ್ರಿಕ ವಿಚಾರಗಳಲ್ಲಿ ನಾವು ಬಾಂಗ್ಲಾದೇಶದಂತಹ ರಾಷ್ಟ್ರಗಳಿ ಗಿಂತಲೂ ಹಿಂದಿದ್ದೇವೆ. ನಿರ್ಮಾಣದ ಗುಣಮಟ್ಟವನ್ನು ಹೋಲಿಸಿದರೆ ನಾವು ಪೂರ್ವ ಏಷ್ಯಾದ ದೇಶಗಳಿಗಿಂತ ಬಹಳ ಹಿಂದುಳಿದಿದ್ದೇವೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT