ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗುರು ಮತ್ತು ಕೊಡಲಿ

ಬೆಳದಿಂಗಳು
Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಏಕಾಗ್ರತೆ ಸಾಧ್ಯವಾಗುತ್ತಿಲ್ಲ’ ಹೀಗೆ ದೂರಿಕೊಳ್ಳುವವರಲ್ಲಿ ಕೇವಲ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಷ್ಟೇ ಇರುವುದಿಲ್ಲ. ಅತೀವ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಎಲ್ಲರೂ ಇದನ್ನು ಆಗಾಗ ಹೇಳುತ್ತಿರುತ್ತಾರೆ. ನನಗೆ ಇತ್ತೀಚೆಗೆ ಯಾವ ಕೆಲಸವನ್ನೂ ಮಾಡಬೇಕು ಅನ್ನಿಸುತ್ತಿಲ್ಲ. ನಾನು ಮಾಡಿದ್ದು ಯಾವುದೂ ಸರಿಯಾಗುತ್ತಿಲ್ಲ. ಇಂಥ ದೂರು ಗಳನ್ನೂ ಇದೇ ಪಟ್ಟಿಗೆ ಸೇರಿಸಬಹುದು. ಇವೆಲ್ಲವೂ ‘ಏಕಾಗ್ರತೆ’ ಸಮಸ್ಯೆಗಳೇ.

ಸಾಮಾನ್ಯವಾಗಿ ಎಲ್ಲರೂ ಹೇಳಬಹುದಾದ ಈ ದೂರುಗಳನ್ನು ಒಬ್ಬೊಬ್ಬರೂ ಒಂದೊಂದು ಬಗೆಯಲ್ಲಿ ನಿರ್ವಹಿಸುತ್ತಾರೆ. ಆದರೆ ತಮ್ಮನ್ನು ಅತಿ ಸೂಕ್ಷ್ಮಮತಿಗಳೆಂದು ಭಾವಿಸಿರುವವರು ವಿಚಿತ್ರವಾದ ಪರಿಹಾರಗಳ ಮೊರೆ ಹೋಗುತ್ತಾರೆ. ಇದರಲ್ಲಿ ಬಹಳ ಮುಖ್ಯವಾದುದು ಅಧ್ಯಾತ್ಮದತ್ತ ತಮ್ಮ ಮನಸ್ಸನ್ನು ತಿರುಗಿಸುವುದು. ಹಿಂದೆಂದೂ ಇಲ್ಲದಂತೆ ಧ್ಯಾನ ಇತ್ಯಾದಿಗಳಲ್ಲಿ ತೊಡಗುವುದು. ಇದರಿಂದ ಏಕಾಗ್ರತೆ ಸಾಧ್ಯವಾಗುತ್ತೆಂದು ಭಾವಿಸಿ ಕೆಲಕಾಲ ಪ್ರಯತ್ನಿಸಿ ಮತ್ತೆ ಹೊಸ ಔಷಧಗಳನ್ನು ಹುಡುಕುತ್ತಾ ಹೊರಡುವುದು.

ವಾಸ್ತವದಲ್ಲಿ ಇದು ಅಷ್ಟು ದೊಡ್ಡ ಸಮಸ್ಯೆಯೇನೂ ಅಲ್ಲ. ಆಧ್ಯಾತ್ಮಿಕ ಗುರುಗಳಿಂದ ಆರಂಭಿಸಿ ಮನೋವಿಜ್ಞಾನಿಗಳ ತನಕದ ಎಲ್ಲರೂ ಇದಕ್ಕೆ ತಮ್ಮದೇ ಪರಿಹಾರಗಳನ್ನು ಹೇಳುತ್ತಾರೆ. ಆದರೆ ಈ ಎಲ್ಲಾ ಪರಿಹಾರಗಳಿಗಿಂತ ಉತ್ತಮವಾದ ಪರಿಹಾರ ಸಾಮಾನ್ಯವಾಗಿ ನಮ್ಮೊಳಗೇ ಇರುತ್ತದೆ. ನಿರ್ದಿಷ್ಟ ಕ್ರಿಯೆಯೊಂದನ್ನು ನಿಖರವಾಗಿ ಮಾಡಲು ಸಾಧ್ಯವಿಲ್ಲ ಎಂದಾದರೆ ನಾವು ಅದನ್ನು ಸಾಕಷ್ಟು ಶ್ರದ್ಧೆಯಿಂದ ಮಾಡುತ್ತಿಲ್ಲ ಎಂದರ್ಥ. ಅಂದರೆ ಹೀಗೆ ಶ್ರದ್ಧೆ ಕಡಿಮೆಯಾಗುವುದಕ್ಕೆ ಏನು ಕಾರಣ ಎಂಬುದನ್ನು ನಾವೇ ಕಂಡುಕೊಳ್ಳಬಹುದು. ಒಂದು ಕೆಲಸ ಮಾಡಲು ಇಷ್ಟವಿಲ್ಲದೆ ಅದರಲ್ಲಿ ತೊಡಗಿಕೊಂಡಾಗ ಇಂಥದ್ದೊಂದು ಸಮಸ್ಯೆ ಉದ್ಭವಿಸುತ್ತದೆ. ಇಂತಿಷ್ಟೇ ಹೊತ್ತಿನೊಳಗೆ ಇದನ್ನು ಮುಗಿಸಬೇಕೆಂದು ಹೊರಟಾಗಲೂ ಇದು ಸಂಭವಿಸುತ್ತದೆ. ಮಾಡಬೇಕಾದ ಕೆಲಸಕ್ಕಿಂತ ಅದನ್ನು ಮುಗಿಸಬೇಕಾದ ಸಮಯದ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸುವುದರಿಂದ ಹೀಗಾಗುತ್ತದೆ. ಪರೀಕ್ಷೆಗಳಲ್ಲಿ ಅನೇಕ ವಿದ್ಯಾರ್ಥಿಗಳು ಇದನ್ನು ಅನುಭವಿಸುತ್ತಾರೆ.

ಏಕಾಗ್ರತೆಯ ಸಮಸ್ಯೆಗಳೆಲ್ಲಾ ಹೀಗೆಯೇ ಇರುತ್ತವೆ. ಸಾಮರ್ಥ್ಯದ ಬಗ್ಗೆ ಸಂಶಯವಿರುವಾಗ, ವಿಷಯದ ಅರಿವಿನ ಕೊರತೆ ಇರುವಾಗಲೆಲ್ಲಾ ಇಂಥದ್ದು ಸಂಭವಿಸುತ್ತದೆ. ಇದಕ್ಕೆ ಇರುವ ಪರಿಹಾರ ಒಂದೇ. ನಿಜವಾದ ಸಮಸ್ಯೆ ಇರುವುದೆಲ್ಲಿ ಎಂದು ಕಂಡುಕೊಳ್ಳುವುದು. ಪರೀಕ್ಷೆಗಳ ಉದಾಹರಣೆಯನ್ನು ತೆಗೆದುಕೊಂಡು ಇದನ್ನು ವಿವರಿಸಬಹುದು. ಒಂದು ವಿಷಯದ ಪರೀಕ್ಷೆಯಲ್ಲಿ ಸಮಯ ಸಾಕಾಗದೆ ಕಡಿಮೆ ಅಂಕ ಬಂದವು ಎಂದರೆ ನಾವು ವಿಶ್ಲೇಷಿಸಬೇಕಿರುವುದು ನಾವು ಕೊಟ್ಟ ಉತ್ತರಗಳನ್ನಲ್ಲ ಅಥವಾ ಒಂದೊಂದು ಉತ್ತರಕ್ಕೆ ವ್ಯಯಿಸಿದ ಸಮಯವನ್ನಲ್ಲ. ಸಮಯ ಪಾಲನೆಯ ಕೆಲಸಕ್ಕಾಗಿ ಎಷ್ಟು ಸಮಯ ಕಳೆದಿದ್ದೇವೆ ಎಂಬುದನ್ನು. ಎಷ್ಟು ಬಾರಿ ಗಡಿಯಾರ ನೋಡಿಕೊಂಡೆ. ಪ್ರತೀ ಬಾರಿ ಗಡಿಯಾರ ನೋಡಿಕೊಂಡು ಗಾಬರಿಯಿಂದ ಬರೆಯಲು ಹೊರಟು ಎಷ್ಟು ಕಡೆ ತಪ್ಪು ಮಾಡಿ ಅದನ್ನು ಸರಿಪಡಿಸಲು ತೆಗೆದುಕೊಂಡ ಸಮಯವೆಷ್ಟು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆಗ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಕೆಲವು ಸಂದರ್ಭಗಳು ಬಹಳ ನೇರವಾದ ಮತ್ತು ಸರಳವಾದ ಪರಿಹಾರವನ್ನು ಬಯಸುತ್ತಿರುತ್ತವೆ. ಆದರೆ ಸಂಕೀರ್ಣವಾದ ಪರಿಹಾರಗಳನ್ನು ಹುಡುಕುತ್ತಾ ಸಮಯವನ್ನು ಹಾಳು ಮಾಡುತ್ತಿರುತ್ತೇವೆ. ಇದೊಂದು ಬಗೆಯ ಉದ್ವಿಗ್ನತೆಯನ್ನು ಸೃಷ್ಟಿಸುತ್ತಿರುತ್ತದೆ. ಉಗುರಿನಿಂದ ತೆಗೆಯುವುದಕ್ಕೆ ಕೊಡಲಿ ಬಳಸಿದರು ಎಂಬ ಗಾದೆ ಎಲ್ಲರಿಗೂ ಗೊತ್ತಿರುತ್ತದೆ. ಇಷ್ಟಕ್ಕೂ ಇಲ್ಲಿ ಉಗುರಿನ ಕೆಲಸಕ್ಕೇಕೆ ಕೊಡಲಿಯನ್ನು ಬಳಸಿದರು. ಉತ್ತರ ಸರಳ. ಅವನಲ್ಲೊಂದು ಕೊಡಲಿ ಇತ್ತು ಅದನ್ನು ಹೇಗಾದರೂ ಮಾಡಿ ಬಳಸಿಕೊಳ್ಳಬೇಕೆಂದು ಉಗುರಿನ ಕೆಲಸಕ್ಕೂ ಅದನ್ನು ಬಳಸಿದ ಅಷ್ಟೇ. ನಾವೂ ಅಷ್ಟೇ ನಮಗೆ ಹೆಚ್ಚು ಅರ್ಥವಾಗಿದೆ ಎನ್ನುವ ಕಾರಣಕ್ಕೆ ಅಗತ್ಯಕ್ಕಿಂತ ಸಂಕೀರ್ಣವಾದ ಪರಿಹಾರಕ್ಕೆ ಹೊರಟು ಬಿಡುತ್ತೇವೆ. ಕೂಡಿಸುವ ಲೆಕ್ಕ ಮಾಡುವುದಕ್ಕೆ ಗಣಿತ ತತ್ವಗಳನ್ನೆಲ್ಲಾ ವಿವರಿಸುವ ಅಗತ್ಯವಿದೆಯೇ ಅಥವಾ ಆ ಕ್ಷಣದಲ್ಲಿ ಇದನ್ನು ನೆನಪಿಸಿಕೊಂಡು ಕಂಗಾಲಾಗಬೇಕೇ?

ಬದುಕನ್ನು ಅದು ಮುಂದೊಡ್ಡುವ ಸಮಸ್ಯೆಗಳನ್ನು ಸರಳವಾಗಿ ಗ್ರಹಿಸುತ್ತಾ ಸರಳವಾಗಿ ಪ್ರತಿಕ್ರಿಯಿಸುತ್ತಾ ಸಾಗಿದರೆ ಸಾಕು. ಸೇತುವೆ ಬಂದಾಗ ಅದನ್ನು ದಾಟೋಣ ಎಂಬ ಇಂಗ್ಲಿಷ್ ನಾಣ್ಣುಡಿಯಿದೆ. ಮುಂದೆ ಸಿಗಬಹುದಾದ ಸೇತುವೆ ದಾಟುವ ಕಷ್ಟವನ್ನು ನೆನಪಿಸಿಕೊಂಡು ಚಿಂತಿಸಿ ಸೇತುವೆಯ ತನಕದ ದಾರಿಯನ್ನೂ ನಡೆಯದಿದ್ದರೆ ಹೇಗೆ? ಆದ್ದರಿಂದ ಮೊದಲು ನಾವು ಸೇತುವೆಯ ತನಕ ಹೋಗಬೇಕು. ಆಮೇಲೆ ಅದನ್ನು ದಾಟುವ ಬಗ್ಗೆ ಚಿಂತಿಸಬೇಕು. ಆದರೆ ಸೇತುವೆ ದಾಟಬೇಕೆಂಬ ಅರಿವು ನಮಗಿದ್ದರೆ ಸಾಕು. ಅದರ ಕುರಿತ ಚಿಂತೆಯಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT