ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರು, ಕಡಲ್ಗಳ್ಳರು ಸುರಕ್ಷತೆಗೆ ಸವಾಲು

ನೌಕಾ ಕವಾಯತಿನ ಸಮಾರೋಪದಲ್ಲಿ ಪ್ರಧಾನಿ
Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ): ಸಮುದ್ರ ಮಾರ್ಗದ ಮೂಲಕ ನಡೆಯುವ ಭಯೋತ್ಪದನಾ ದಾಳಿ ಮತ್ತು ಕಡಲ್ಗಳ್ಳರ ಹಾವಳಿ ದೇಶದ ತೀರ ಪ್ರದೇಶಗಳ ಭದ್ರತೆಗೆ ಪ್ರಮುಖ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

‘ಸಾಗರ ಮಾರ್ಗದಿಂದ ನಡೆಯುವ ದಾಳಿಗೆ ಭಾರತವು ನೇರ ಗುರಿಯಾಗಿದೆ. ಇದರಿಂದ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಅಪಾಯವಿದೆ’ ಎಂದು 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸದೆಯೇ ಅವರು ತಿಳಿಸಿದರು.

ಭಾರತೀಯ ನೌಕಾಪಡೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ನೌಕಾ ಕವಾಯತಿನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ‘ಕಡಲ್ಗಳ್ಳರ ಹಾವಳಿ ಕೂಡಾ ಬಲದೊಡ್ಡ ಸವಾಲಾಗಿದೆ. ಭಾರತದ ಹಡಗುಗಳು ಸೇರಿದಂತೆ ಹಲವು ನೌಕೆಗಳು ಸೊಮಾಲಿಯಾದ ಕಡಲ್ಗಳ್ಳರ ಗುರಿಯಾಗುತ್ತಿವೆ’ ಎಂದರು.

ದಕ್ಷಿಣ ಚೀನಾ ಸಮುದ್ರ ವಿವಾದದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ, ‘ಮುಕ್ತ ಸಮುದ್ರಯಾನವನ್ನು ಎಲ್ಲರೂ ಗೌರವಿಸಬೇಕು.  ಈ ವಿಷಯದಲ್ಲಿ ದೇಶಗಳು ಪರಸ್ಪರ ಸಹಕರಿಸಬೇಕೇ ಹೊರತು ಸ್ಪರ್ಧೆಗಿಳಿಯಬಾರದು’ ಎಂದರು.

ಭಾರತದ ಆತಿಥ್ಯದಲ್ಲಿ  ಮೊದಲ ಬಾರಿಗೆ ಏಪ್ರಿಲ್‌ ತಿಂಗಳಲ್ಲಿ ಜಾಗತಿಕ ಸಾಗರ ಶೃಂಗ ನಡೆಯಲಿದೆ ಎಂದು ಅವರು ಪ್ರಕಟಿಸಿದರು.

‘ಪ್ರಕೃತಿ ವಿಕೋಪಗಳಾದ ಸುನಾಮಿ ಮತ್ತು ಚಂಡಮಾರುತಗಳ ಭೀತಿ ಸದಾ ಇದ್ದೇ ಇರುತ್ತದೆ. ಅದರ ಜತೆ ಹವಾಮಾನ ವೈಪರೀತ್ಯ ಮತ್ತು ತೈಲ ಸೋರಿಕೆಯಂತಹ ಮಾನವ ನಿರ್ಮಿತ ಸಮಸ್ಯೆಗಳೂ ಎದುರಾಗುತ್ತವೆ. ಇವೆಲ್ಲವೂ ಸಾಗರ ಪ್ರದೇಶಗಳ ಸ್ಥಿರತೆಗೆ ಅಪಾಯ ಒಡ್ಡಿವೆ. ಸಾಗರದಿಂದ ಆರ್ಥಿಕ ಲಾಭ ಗಿಟ್ಟಿಸುವುದು ಈ ಸವಾಲುಗಳನ್ನು ಮೆಟ್ಟಿನಿಲ್ಲುವ ನಮ್ಮ ಸಾಮರ್ಥ್ಯವನ್ನು ಅವಲಂಬಿಸಿದೆ’ ಎಂದು ನುಡಿದರು.

‘ಸಿಯಾಚಿನ್‌: ಯೋಧರ ನಿಯೋಜನೆ ಅಗತ್ಯ’
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತಕ್ಕೆ 10 ಯೋಧರು ಬಲಿಯಾಗಿರುವುದು ದುಃಖದ ಸಂಗತಿ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದರು.

ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನಲ್ಲಿ ಪ್ರತಿಕೂಲ ವಾತಾವರಣ ಇದೆ. ಆದರೆ, ದೇಶದ ಭದ್ರತೆಯ ಕಾರಣಕ್ಕೆ ಯೋಧರನ್ನು ನಿಯೋಜಿಸುವುದು ಅನಿವಾರ್ಯ ಎಂದು ಅವರು ಹೇಳಿದರು.

ಸಿಯಾಚಿನ್‌ನಲ್ಲಿ ಯೋಧರನ್ನು ಏಕೆ ನಿಯೋಜಿಸಲಾಗುತ್ತದೆ ಎಂಬುದನ್ನು ತಿಳಿಯಲು ಅಲ್ಲಿ ಹೋಗಿ ನೋಡಬೇಕು ಎಂದು ಸೇನೆ ನಿಯೋಜನೆಯನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT