ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಬೆದರಿಕೆ:ಅಮೆರಿಕ ಎಚ್ಚರಿಕೆ

ವಿದೇಶಗಳಲ್ಲಿ ಅಮೆರಿಕ ಪ್ರಜೆಗಳ ಮೇಲೆ ದಾಳಿ ಸಾಧ್ಯತೆ
Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಐ. ಎಸ್‌ ಉಗ್ರರು (ಇಸ್ಲಾಮಿಕ್‌ ಸ್ಟೇಟ್‌)  ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ವಿದೇಶಗಳಿಗೆ ಪ್ರವಾಸಕ್ಕೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಅಮೆರಿಕ ತನ್ನ ಪ್ರಜೆಗಳಿಗೆ ಸೂಚಿಸಿದೆ. ಭಯೋತ್ಪಾದನಾ ಸಂಘಟನೆಯಾದ ಲಷ್ಕರ್‌–ಎ–ತಯಬಾದಿಂದ ಭಾರತಕ್ಕೆ  ಹೆಚ್ಚಿನ ಬೆದರಿಕೆ ಇದೆ ಎಂಬುದನ್ನು ಅಮೆರಿಕ ಒತ್ತಿ ಹೇಳಿದೆ.

‘2014ರ ಆಗಸ್ಟ್‌ನಲ್ಲಿ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಇರಾಕ್‌ ಹಾಗೂ ಸಿರಿಯಾದಲ್ಲಿನ  ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು’  ಎಂದು ಅಮೆರಿಕ ಹೇಳಿದೆ. ‘ಅಮೆರಿಕದ ವಾಯುದಾಳಿಗೆ ಪ್ರತಿಯಾಗಿ ವಿದೇಶಿಯರ ಮೇಲೆ ದಾಳಿ ಮಾಡುವಂತೆ  ಐ.ಎಸ್‌ ತನ್ನ ಬೆಂಬಲಿಗರಿಗೆ ಸೂಚಿಸಿದ್ದು,  ಅಮೆರಿಕ ಪ್ರಜೆಗಳ ಮೇಲೆ ನಡೆಯುತ್ತಿರುವ  ದಾಳಿ ಹೆಚ್ಚಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಐ.ಎಸ್‌ ಉಗ್ರರು ಭಾರತದಲ್ಲಿ ತಮ್ಮ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಲಿದ್ದಾರೆ. ಇದು ಕೂಡಾ ಅಮೆರಿಕದ ಪ್ರಜೆಗಳ ಮೇಲೆ ನೇರ ಅಥವಾ ಪರೋಕ್ಷವಾಗಿ ಪರಿಣಾಮ ಬೀರಲಿದೆ’ ಎಂದು ಅಮೆರಿಕ ತಿಳಿಸಿದೆ. ಭಾರತದಲ್ಲಿ ಪಾಶ್ಚಾತ್ಯ ವಿರೋಧಿ ಭಯೋತ್ಪಾದನಾ ಸಂಘಟನೆಗಳಾದ ಹರ್ಕತ್‌–ಉಲ್‌–ಜಿಹಾದ್‌–ಇ–ಇಸ್ಲಾಮಿ, ಹರಕತ್‌–ಉಲ್‌-ಮುಜಾಹಿದ್ದೀನ್‌, ಇಂಡಿಯನ್‌ ಮುಜಾಹಿದ್ದೀನ್‌, ಜೈಶ್‌–ಇ–ಮೊಹಮ್ಮದ್‌ ಹಾಗೂ ಲಷ್ಕರ್‌–ಎ–ತಯಬಾದಂತಹ ಸಂಘಟನೆಗಳು ಕ್ರಿಯಾಶೀಲವಾಗಿವೆ ಎಂದು  ಎಚ್ಚರಿಸಿದೆ.

‘ಈ ಹಿಂದೆ ನಗರಪ್ರದೇಶಗಳಲ್ಲ್ಲಿ ವಿದೇಶಿಗರು ಹೆಚ್ಚು ಇರುವಂತಹ  ಶ್ರೀಮಂತ ಹೋಟೆಲ್‌ಗಳು, ರೈಲುಗಳು, ರೈಲ್ವೆ  ನಿಲ್ದಾಣಗಳು, ಮಾರುಕಟ್ಟೆಗಳು, ಸಿನಿಮಾ ಮಂದಿರಗಳು, ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ‘ಅಮೆರಿಕದ ಜನರನ್ನು ಗುರಿಯಾಗಿಸಿಕೊಂಡು ದಕ್ಷಿಣ ಏಷ್ಯಾದಲ್ಲಿನ ಭಯೋತ್ಪಾದನಾ ಸಂಘಟನೆಗಳು ಆ ಪ್ರದೇಶದಲ್ಲಿ ದಾಳಿ ನಡೆಸಲು ಯೋಜನೆ  ರೂಪಿಸುತ್ತಿವೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಅಲ್‌ ಕೈದಾ, ತಾಲಿಬಾನ್‌, ಲಷ್ಕರ್‌–ಎ– ತಯಬಾ ಹಾಗೂ ಇನ್ನಿತರ ಸಂಘಟನೆಗಳನ್ನು ಅಮೆರಿಕ ವಿದೇಶಿ ಭಯೋತ್ಪಾದನಾ ಸಂಘಟನೆಗಳೆಂದು ಗುರುತಿಸಿದ್ದು, ಈ ಪ್ರದೇಶಗಳಲ್ಲಿ ಅಮೆರಿಕ ಪ್ರಜೆಗಳಿಗೆ ಅಪಾಯ ಸಂಭವಿಸಬಹುದು’ ಎಂದಿದೆ.

ಮಾರುಕಟ್ಟೆಗಳಲ್ಲಿ ಸಂಜೆ ವೇಳೆಗೆ ಅಧಿಕ ಜನ ಇರುವ ಸಂದರ್ಭ ಅಥವಾ ಹೆಚ್ಚಿನ ಜನಸಂದಣಿ  ಇರುವ ಪ್ರದೇಶದಲ್ಲಿ  ಯಾವುದೇ   ಸಮಯದಲ್ಲಾದರೂ ಉಗ್ರರು ದಾಳಿ ನಡೆಸಬಹುದು.- ಅಮೆರಿಕದ ವಿದೇಶಾಂಗ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT