ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಹೊಗಳಿದ ಮುಫ್ತಿ

Last Updated 1 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ): ‘ಪಾಕಿಸ್ತಾನ ಸರ್ಕಾರ, ಉಗ್ರಗಾಮಿ­­ಗಳು ಹಾಗೂ ಪ್ರತ್ಯೇಕತಾವಾದಿಗಳು ಜಮ್ಮು–ಕಾಶ್ಮೀರ­ದಲ್ಲಿ ಶಾಂತಿಯುತ ಮತದಾನ ನಡೆ­ಯುವಂತಹ ವಾತಾವರಣ ಸೃಷ್ಟಿಸಿ­ದ್ದರು’ ಎಂದು ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್‌  ಅವರು   ನೀಡಿರುವ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕ­ರಿಸಿದ ನಂತರ ಸುದ್ದಿ­ಗೋಷ್ಠಿಯಲ್ಲಿ ಮಾತನಾಡಿದ ಸಯೀದ್‌, ಪಾಕಿಸ್ತಾನ ಹಾಗೂ ಉಗ್ರ­ಗಾಮಿ ಸಂಘಟ­ನೆ­ಗಳನ್ನು ಶ್ಲಾಘಿಸು­ವಂತಹ ಹೇಳಿಕೆ ನೀಡಿದರು. ಇದಕ್ಕೆ ಕೂಡಲೇ  ಪ್ರತಿಕ್ರಿಯಿಸಿದ ಮಾಜಿ ಮುಖ್ಯ­ಮಂತ್ರಿ  ಒಮರ್‌ ಅಬ್ದುಲ್ಲಾ, ಈ ವಿಚಾರದಲ್ಲಿ ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಸಯೀದ್‌ ಹೇಳಿದ್ದೇನು?: ‘ನಾನು ಇದನ್ನು ಅಧಿಕೃತ­ವಾಗಿ ಹೇಳಲು ಬಯಸುತ್ತೇನೆ. ರಾಜ್ಯದಲ್ಲಿ ಚುನಾ­ವಣೆ ಸುಗಮವಾಗಿ ನಡೆಯಲು  ಉಗ್ರ ಸಂಘಟ­ನೆಗಳು ಹಾಗೂ ಹುರಿಯತ್‌ ಕಾರಣವಾಗಿವೆ. ಈ ಅಭಿ­ಪ್ರಾಯವನ್ನು ಪ್ರಧಾನಿಗೂ ಹೇಳಿದ್ದೇನೆ. ಗಡಿಯಾಚೆಗಿನ ಜನರು ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯು­ವುದಕ್ಕೆ ಅವಕಾಶ ಮಾಡಿ­ಕೊಟ್ಟರು.

ಅವರೇನಾದರೂ ಅಡ್ಡಿಪಡಿಸಿದ್ದಲ್ಲಿ ಮತ­ದಾನ ಸಾಧ್ಯವಾಗುತ್ತಿರಲಿಲ್ಲ. ಚುನಾ­ವಣೆಗೆ ಅಡ್ಡಿಪಡಿಸಲು ಸಣ್ಣ ದುಷ್ಕೃತ್ಯ ಸಾಕಿತ್ತು. ಚುನಾವಣೆ­ಯಂತಹ ಪ್ರಜಾಪ್ರಭುತ್ವ ಪ್ರಕ್ರಿಯೆ ಸುಗಮವಾಗಿ ಸಾಗಲು ಅವರು ಆಸ್ಪದ ನೀಡಿದರು. ಇದು ನನ್ನಲ್ಲಿ ಹೊಸ ಆಶಾಕಿರಣ ಮೂಡಿಸಿದೆ. ಕಣಿವೆಯ ಜನ ಭಾರಿ ಪ್ರಮಾಣದಲ್ಲಿ ಬಂದು ಮತ ಹಾಕಿದ್ದು ಸಹ ನನ್ನಲ್ಲಿ ಹೆಮ್ಮೆ ಮೂಡಿಸಿದೆ.  ಮಾಜಿ ಪ್ರತ್ಯೇಕತಾ­ವಾದಿ ನಾಯಕ, ಸಜ್ಜದ್‌ ಗನಿ ಲೋನ್‌  ಸಂಪುಟ ಸೇರಿರುವುದು  ಇತರ ಪ್ರತ್ಯೇ­ಕತಾ­ವಾದಿಗಳಿಗೆ  ಮಾದರಿಯಾಗಲಿದೆ.

ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಮಾದರಿಯಾಗಬೇಕಾದರೆ, ಉತ್ತಮ ಆಡಳಿತ ನೀಡಬೇಕಾದರೆ ಶಾಂತಿ ಅಗತ್ಯ. ಗುಜರಾತ್‌ ಜನ ಅಭಿವೃದ್ಧಿಗೆ  ಉತ್ತಮ ಆಡಳಿತ ಎಂದಂತೆ ಇಲ್ಲಿ ಉತ್ತಮ ಆಡಳಿತಕ್ಕೆ ಶಾಂತಿ ನೆಲೆಸಲೇಬೇಕು. ಇತಿಹಾಸವು ನಮಗೆ ಅವಕಾಶ ಕೊಟ್ಟಿದೆ. ದೇಶದ ಪ್ರತಿಯೊಬ್ಬ ಪ್ರಧಾ­ನಿಗೂ ಕಾಶ್ಮೀರವು ಸಮಸ್ಯೆಯಾಗಿ ಕಾಡಿದೆ. ಇದನ್ನು ನಾವು ಬದಲಾ­ಯಿಸಬೇಕು.

ಈ ಮೈತ್ರಿಕೂಟದಲ್ಲಿ ನಾವು ಹೃದ­ಯಗಳನ್ನು ಬೆಸೆಯಬೇಕು.   ಜನರು ಒಪ್ಪುತ್ತಾರೋ ಬಿಡು ತ್ತಾರೋ  ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಸೇರಿಸುವುದು ನಮ್ಮ ನಿರ್ಧಾರವಾಗಿದೆ’ ಎಂದೂ ಸಯೀದ್‌ ಸ್ಪಷ್ಟಪಡಿಸಿದರು.

ವಿವರಣೆ ನೀಡಿ
ಪಾಕಿಸ್ತಾನ, ಹುರಿ­ಯತ್‌ ಹಾಗೂ ಉಗ್ರ­­ಗಾಮಿ­ಗಳು ಶಾಂತಿಯುತ ಮತ­ದಾನಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಸಿ.ಎಂ ಹೇಳಿದ್ದಾರೆ. ಹಾಗಾ ದರೆ ಮತದಾನದಲ್ಲಿ ಭದ್ರತಾ ಪಡೆ ಹಾಗೂ ಚುನಾವಣಾ ಅಧಿಕಾರಿಗಳ ಪಾತ್ರ ಏನಿತ್ತು ಎನ್ನುವುದರ ಬಗ್ಗೆ ವಿವರಣೆ ನೀಡಿ -  ಒಮರ್‌ ಅಬ್ದುಲ್ಲಾ, ಮಾಜಿ ಮುಖ್ಯಮಂತ್ರಿ

ಸೇನೆ, ಆಯೋಗ ಕಾರಣ
ಕಾಶ್ಮೀರದಲ್ಲಿ ಚುನಾವಣೆ ಶಾಂತಿಯು­ತವಾಗಿ ನಡೆಯಲು ಚುನಾ­ವಣಾ ಆಯೋಗ ಹಾಗೂ ಸೇನೆ ಕಾರಣ­ವಾಗಿದೆ. ಭಾರತದ ಸಂವಿಧಾನದ ಮೇಲೆ ನಂಬಿಕೆ ಹೊಂದಿರುವವರು ನಮಗೆ ಮತ ಹಾಕಿದ್ದಾರೆ –ಬಿಜೆಪಿ

ಮುಫ್ತಿ ಅಧಿಕಾರ ಸ್ವೀಕಾರ; ಮೋದಿ, ಅಡ್ವಾಣಿ ಉಪಸ್ಥಿತಿ
ಜಮ್ಮು: ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರ ಜಮ್ಮು–ಕಾಶ್ಮೀರದಲ್ಲಿ ಭಾನುವಾರ ಅಧಿಕಾರ ಸ್ವೀಕರಿಸಿದೆ. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್‌ ಸಯೀದ್ ಜತೆಗೆ ಅವರ ಸಂಪುಟದ ೨೫ ಸಚಿವರು ಪ್ರಮಾಣ­ವಚನ ಸ್ವೀಕರಿ­ಸಿ­ದರು. ಈ ಪೈಕಿ ಮಾಜಿ ಪ್ರತ್ಯೇಕತಾ­ವಾದಿ ಮುಖಂಡ ಸಜ್ಜದ್‌ ಲೋನ್‌ ಕೂಡ ಒಬ್ಬರು. ಪ್ರಮಾಣವಚನ ಕಾರ್ಯಕ್ರಮದಲ್ಲಿ  ಭಾಗ­ವ­ಹಿ­ಸಿದ್ದ ಪ್ರಧಾನಿ ನರೇಂದ್ರ ಮೋದಿ, ‘ರಾಜ್ಯದ ಜನರ ಆಶೋತ್ತರ­ಗಳನ್ನು ಈಡೇರಿಸಲು ಪಿಡಿಪಿ–ಬಿಜೆಪಿ ಸರ್ಕಾರಕ್ಕೆ ಐತಿಹಾಸಿಕ ಅವಕಾಶ ಸಿಕ್ಕಿದೆ’ ಎಂದರು.

ಬಿಜೆಪಿ ಹಿರಿಯ ಮುಖಂಡರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋ­ಹರ್‌ ಜೋಶಿ, ಪಕ್ಷದ ಅಧ್ಯಕ್ಷ ಅಮಿತ್‌ ಷಾ, ಪ್ರಧಾನ ಕಾರ್ಯದರ್ಶಿ  ರಾಮ್‌್ ಮಾಧವ್‌ ಮತ್ತಿತರರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT