ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರವಾದದ ಅಸ್ತ್ರಕ್ಕೆ ಮಹಿಳಾ ಶಿಕ್ಷಣವೇ ಪ್ರತ್ಯಸ್ತ್ರ

ಅಕ್ಷರ ಗಾತ್ರ

ಯೆಮನ್‌ ಕುರಿತಂತೆ ಅಮೆರಿಕದ ವಿದೇಶಾಂಗ ನೀತಿಯ ಯಶಸ್ಸನ್ನು ಉದಾಹರಿಸುವ ಮೂಲಕ, ಅಧ್ಯಕ್ಷ ಬರಾಕ್‌್ ಒಬಾಮ ‌ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದರು.  ಆದರೆ ಈಗ ಯೆಮನ್‌ ಹಿಂಸಾಪೀಡಿತವಾಗಿದೆ. ಅಲ್‌ ಖೈದಾ ಹಾಗೂ ಇರಾನ್‌ ಇಲ್ಲಿನ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿವೆ.

ಕೆಲವು ದಿನಗಳ ಹಿಂದೆ ಅಮೆರಿಕದ ಮಾಜಿ ಉಪಾಧ್ಯಕ್ಷ ಡಿಕ್‌ ಚೆನೆ ಅವರು ‘ಹಗ್‌್ ಹೆವಿಟ್‌’ ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘ಒಬಾಮ ನಾವು ಕಂಡ ಅತ್ಯಂತ ಕೆಟ್ಟ ಅಧ್ಯಕ್ಷ’ ಎಂದು ಲೇವಡಿ ಮಾಡಿದ್ದರು. ಬಹುಶಃ ಚೆನೆ ಅವರು ಯೆಮನ್‌ನಂತಹ ಪ್ರದೇಶವನ್ನು  ಮನಸ್ಸಿನಲ್ಲಿಟ್ಟುಕೊಂಡೇ ಈ ರೀತಿ ಹೇಳಿರಬೇಕು. ತಮ್ಮ ವಿದೇಶಾಂಗ ನೀತಿಗಳ ಮೂಲಕ ಒಬಾಮ ಉದ್ದೇಶಪೂರ್ವಕವಾಗಿ ನಮ್ಮ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ.  ಅವರು ದೇಶದ್ರೋಹಿಯೇ ಆಗಿರಬಹುದು ಎಂದೂ ಚೆನೆ ಹೇಳಿದ್ದರು.

ಹಾಗೆ ನೋಡಿದರೆ ಸ್ವತಃ ಚೆನೆ ಅವರೇ ಇರಾನ್‌ ಏಜೆಂಟ್‌ ಆಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ಇರಾನ್‌ ತನ್ನ ವೈರಿ ತಾಲಿಬಾನ್‌ ಅನ್ನು ನಾಶ ಮಾಡುವುದಕ್ಕೆ ಅವರು ನೆರವು ನೀಡಿದ್ದರು. ಅಲ್ಲದೆ ಇರಾಕ್‌ನಲ್ಲಿ ಸದ್ದಾಂ ಹುಸೇನ್‌ನನ್ನು ಮಣಿಸಿ ಅಲ್ಲಿ ಇರಾನ್‌ ಪರ ಆಡಳಿತಕ್ಕೆ ನೆರವಾದರು. ಚೆನೆ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿಯೇ  ಇರಾನ್‌ನ ಪರಮಾಣು ಕಾರ್ಯಕ್ರಮ ವೇಗ ಪಡೆದುಕೊಂಡಿತ್ತು. 
ವಿದೇಶಾಂಗ ನೀತಿಯು ತುಂಬ ಕ್ಲಿಷ್ಟವಾದುದು. 

ರಾಜಕಾರಣಿಗಳು ದೇಶದ್ರೋಹಿಗಳಾಗದೆಯೂ ದೇಶಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.  ಜಾರ್ಜ್‌ ಡಬ್ಲು ಬುಷ್‌ ಹಾಗೂ ಚೆನೆ ಅವರಿಗೆ ಹೋಲಿಸಿದರೆ ಒಬಾಮ ಅವರ ವಿದೇಶಾಂಗ ನೀತಿ ನನಗೆ  ಆಪ್ಯಾಯಮಾನವಾಗಿ ಕಾಣುತ್ತದೆ. ಒಬಾಮ ಕನಿಷ್ಠ ನಮ್ಮನ್ನು ಯುದ್ಧಗಳಿಂದ ಪಾರುಮಾಡುತ್ತಿದ್ದಾರೆ. ಆದರೆ ಬುಷ್‌ ಹಾಗೂ ಚೆನೆ ನಮ್ಮನ್ನು ಯುದ್ಧಕ್ಕೆ ಎಳೆಯುತ್ತಿದ್ದರು. ಏನೇ ಆಗಲಿ, ತಪ್ಪುಗಳಿಂದ ಪಾಠ ಕಲಿಯುವುದರಲ್ಲಿ ಪ್ರಯೋಜನವಿದೆ.

9/11ರ ದಾಳಿಯ ಬಳಿಕ ನಾವು ಭಯೋತ್ಪಾದನೆ ಹಾಗೂ ಅಭದ್ರತೆಗೆ ಸೇನಾ ಬಲದ ಮೂಲಕ ಉತ್ತರ ನೀಡಿದ್ದೇವೆ (ವಿಶೇಷವಾಗಿ ಬುಷ್‌ ಹಾಗೂ ಚೆನೆ ಕಾಲದಲ್ಲಿ). ಆದರೆ ಒಬಾಮ ಆಡಳಿತದಲ್ಲಿ ಈ ವಿಷಯವಾಗಿ ಹೆಚ್ಚು ಸಂಯಮ ಕಾಣಿಸುತ್ತಿದೆ. ಈ ನಡೆಯು ಸ್ಪಲ್ಪ ಮಟ್ಟಿಗೆ ಯಶ ತಂದುಕೊಟ್ಟಿದೆ. ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಅಲ್‌ಖೈದಾ ಬೇರನ್ನು ಇದು ಅಸ್ಥಿರಗೊಳಿಸಿತು. ಆದರೆ ಅಲ್‌ಖೈದಾ ಅಂಗ ಸಂಸ್ಥೆಗಳು ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ತಲೆ ಎತ್ತಲು ಅವಕಾಶ ಮಾಡಿಕೊಟ್ಟಿತು. ವಿಶ್ವದಾದ್ಯಂತ ಉಗ್ರವಾದಿಗಳಿಗೆ ಇದರಿಂದ ಬಲ ಬಂದಿತು.

9/11ರ ಬಳಿಕ ನಾವು ವ್ಯವಸ್ಥಿತವಾಗಿ ಸೇನಾ ಬಲವನ್ನು ಅತಿಯಾಗಿ ಪ್ರಯೋಗಿಸಿದೆವು. ಶಿಕ್ಷಣ ಹಾಗೂ ಮಹಿಳಾ ಸಬಲೀಕರಣದಂತಹ ಅಸ್ತ್ರವನ್ನು ಕಡೆಗಣಿಸಿದೆವು. ಈ ಪ್ರಕ್ರಿಯೆ ಪ್ರಯಾಸವೂ, ನಿಧಾನವೂ ಆಗಿದೆ. ಆದರೆ ಕಾಲಕ್ರಮೇಣ ಇವು ಸಾಮಾಜಿಕ ಬದಲಾವಣೆಗೆ ನೆರವು ನೀಡುತ್ತವೆ. 

‘ಅಭಿವೃದ್ಧಿಯು  ಸಂಘರ್ಷ ತಡೆಯ ಭಾಗವಾಗಬೇಕು’  ಎಂದು ವಿಶ್ವ ಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಹೇಳುತ್ತಾರೆ. ಅಂದರೆ, ಆರ್ಥಿಕ ಅಭಿವೃದ್ಧಿಯು ರಾಷ್ಟ್ರೀಯ ಭದ್ರತೆಗೆ ಅನಿವಾರ್ಯವಾಗಿದೆ ಎಂದರ್ಥ. ಅಮೆರಿಕದ ಯೋಧನೊಬ್ಬನನ್ನು ವಿದೇಶದಲ್ಲಿ ಒಂದು ವರ್ಷ ನಿಯೋಜಿಸುವುದಕ್ಕೆ ಆಗುವ ಖರ್ಚಿನಲ್ಲಿ ನಾವು 20ಕ್ಕೂ ಹೆಚ್ಚು ಶಾಲೆಗಳನ್ನು ತೆರೆಯಬಹುದು. ಆಫ್ಘಾನಿಸ್ತಾನದಲ್ಲಿ ನಾವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿದ್ದೆವು.

ಕಳೆದ ತಿಂಗಳು ಅಲ್ಲಿ ಧಾರ್ಮಿಕ ಉಗ್ರವಾದದ ವಿರುದ್ಧ ನಡೆದ ಜಾಥಾಗೆ ನೂರಾರು ಆಫ್ಘನ್‌ ಮಹಿಳೆಯರು ಸಾಥ್‌ ನೀಡಿದ್ದರು. ಕುರ್‌ಆನ್ ಅನ್ನು ಸುಟ್ಟುಹಾಕಿದ್ದಾಗಿ ಸುಳ್ಳು ಆರೋಪ ಹೊರಿಸಿ ಮಹಿಳೆಯೊಬ್ಬರನ್ನು  ಹೊಡೆದು ಸಾಯಿಸಿದ್ದನ್ನು ಖಂಡಿಸಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ಉಗ್ರವಾದವನ್ನು ಹತ್ತಿಕ್ಕುವುದಕ್ಕಾಗಿ  ದೇಶೀಯವಾಗಿ ರೂಪುಗೊಂಡ ಅಪರೂಪದ ಅಭಿಯಾನ ಅದಾಗಿತ್ತು.
ಜನನ ಪ್ರಮಾಣ ತಗ್ಗಬೇಕೆಂದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು.

ಮಹಿಳಾ ಸಬಲೀಕರಣದಿಂದ ಎಲ್ಲ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ. ಸುಶಿಕ್ಷಿತ ಹೆಣ್ಣು ಮಕ್ಕಳೂ ಕೆಲವೊಮ್ಮೆ ಉಗ್ರಗಾಮಿಗಳಾಗುತ್ತಾರೆ. ಮಹಿಳಾ ನಾಯಕರು ಹಲವು ಸಂದರ್ಭಗಳಲ್ಲಿ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಒಟ್ಟಿನಲ್ಲಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಜನನ ಪ್ರಮಾಣ ತಗ್ಗುತ್ತದೆ, ಕಾರ್ಮಿಕ ಶಕ್ತಿ ವೃದ್ಧಿಯಾಗುತ್ತದೆ, ಭಯೋತ್ಪಾದನೆಗೆ ಬದಲಾಗಿ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯುತ್ತದೆ.

ಇವೆಲ್ಲ ಭಯೋತ್ಪಾದಕರಿಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಅವರು ಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಆಸಿಡ್‌ ಎರಚುತ್ತಾರೆ.  ಇದೇ ಕಾರಣಕ್ಕಾಗಿ ಬೊಕೊ ಹರಾಮ್‌ ಉಗ್ರರು ಉತ್ತರ ನೈಜೀರಿಯಾದಲ್ಲಿ 200ಕ್ಕೂ ಹೆಚ್ಚು ಶಾಲಾ ಬಾಲಕಿಯರನ್ನು ಅಪಹರಿಸಿದ್ದಾರೆ.
ಒಬಾಮ ಅವರ ತಾಯಿ ಜಾಗತಿಕ ಅಭಿವೃದ್ಧಿ ವಿಷಯದಲ್ಲಿ ತಜ್ಞೆಯಾಗಿದ್ದರು. ಒಬಾಮ ಕೂಡ ಈ ವಿಷಯದಲ್ಲಿ ಪರಿಣತರೇ ಎನ್ನುವುದು ಸ್ಪಷ್ಟವಾಗಿಲ್ಲ.

2008ರ ಅಧ್ಯಕ್ಷೀಯ ಚುನಾವಣೆ  ಸಂದರ್ಭದಲ್ಲಿ ಒಬಾಮ ಶಿಕ್ಷಣಕ್ಕಾಗಿ 12.40 ಸಾವಿರ ಕೋಟಿ ರೂಪಾಯಿಯ ಜಾಗತಿಕ ನಿಧಿಯನ್ನು ಪ್ರಸ್ತಾಪಿಸಿದ್ದರು. ನಂತರ ಆ ಯೋಜನೆಯನ್ನೇ ಕೈಬಿಟ್ಟರು. ಶ್ವೇತಭವನವು ಈ ವರ್ಷ  ಮಿಷೆಲ್‌ ಒಬಾಮ ನೇತೃತ್ವದಲ್ಲಿ ‘ಹೆಣ್ಣು ಮಕ್ಕಳು ಕಲಿಯಲಿ’ (ಲೆಟ್‌ ಗರ್ಲ್ಸ್ ಲರ್ನ್‌) ಎನ್ನುವ ಕಾರ್ಯಕ್ರಮ ಹಾಕಿಕೊಂಡಿದೆ.  ವಿಶ್ವದಾದ್ಯಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ನಿಜಕ್ಕೂ ಇದೊಂದು ಅಭೂತಪೂರ್ವ ಪರಿಕಲ್ಪನೆ.

ಬಹಿರಂಗ ಮಾರಾಟ: ಯೆಮನ್‌ ಸ್ಥಿತಿ ನಿಜಕ್ಕೂ ಭಯ ಹುಟ್ಟಿಸುತ್ತದೆ. ನಾನು ಅಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿನ ಮಾರುಕಟ್ಟೆಯೊಂದರಲ್ಲಿ ಗ್ರೆನೇಡ್‌ಗಳು ತಲಾ ಸುಮಾರು ₹ 250ಕ್ಕೆ ಬಹಿರಂಗವಾಗಿ ಮಾರಾಟವಾಗುತ್ತಿದ್ದವು.  ರಾಕೆಟ್‌– ಪ್ರೊಪೆಲ್ಡ್‌ ಗ್ರೆನೇಡ್‌ ಲಾಂಚರುಗಳು ಸುಮಾರು ₹ 31 ಸಾವಿರ ಹಾಗೂ ಆ್ಯಂಟಿ ಟ್ಯಾಂಕ್‌ ಮೈನ್‌ಗಳು ಸುಮಾರು ₹1264ಕ್ಕೆ ಬಿಕರಿಯಾಗುತ್ತಿದ್ದವು.
ಹೆಚ್ಚು ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಬುಷ್‌ ಹಾಗೂ ಒಬಾಮ ಆಡಳಿತಗಳು  ಯೆಮನ್‌ನಲ್ಲಿ ಸ್ಥಿರತೆ ಮೂಡಿಸಲು ಯತ್ನಿಸಿದ್ದವು. ಆದರೆ ಬಹುತೇಕ ಶಸ್ತ್ರಾಸ್ತ್ರಗಳು ಹೌತಿ ಬಂಡುಕೋರರ ಕೈ ಸೇರಿದವು. 

ಶಸ್ತ್ರಾಸ್ತ್ರಗಳ ಬದಲು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡಿದ್ದರೆ ಯೆಮನ್‌ನಲ್ಲಿ ಸ್ಥಿರತೆ ಮೂಡಿಸುವ ಅನಿವಾರ್ಯವೇ ಬರುತ್ತಿರಲಿಲ್ಲ.
ವಿದೇಶಾಂಗ ನೀತಿಗೆ ಸಂಬಂಧಿಸಿ ಪರಸ್ಪರ ಗುದ್ದಾಡುವ ಬದಲು, ನಾವು ಕಲಿಯಬೇಕಾದ ಪಾಠಗಳ ಕಡೆ ಗಮನ ಹರಿಸೋಣ. ಇದರಲ್ಲಿ ಭಯೋತ್ಪಾದನೆ ನಿಗ್ರಹವೂ ಒಂದು.  ಕೆಲವೊಮ್ಮೆ ಆಕಾಶದಲ್ಲಿನ ಡ್ರೋನ್‌ಗಿಂತ ಪುಸ್ತಕ ಹಿಡಿದ ಬಾಲಕಿಯೇ ಶಕ್ತಿಶಾಲಿ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT