ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರವಾದ ನಿಲ್ಲಿಸಿ: ಪಾಕ್‌ಗೆ ತಾಕೀತು

ವಾಜಪೇಯಿ ಭೇಟಿ ಮಾಡಿದ ಷರೀಫ್ * ಮೋದಿಗೆ ಆಹ್ವಾನ
Last Updated 27 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಲವು ಕಾರಣ­ಗಳಿಗಾಗಿ ಗಮನಸೆಳೆದಿದ್ದ  ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರ ಮಂಗಳವಾರದ ಚರ್ಚೆ ವೇಳೆ, ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ವಿದೇಶಾಂಗ ಕಾರ್ಯದರ್ಶಿಗಳ ನಡುವಣ ಮಾತು­ಕತೆ ಪ್ರಕ್ರಿಯೆಗೆ ಮರುಚಾಲನೆ ನೀಡಲು ನಿರ್ಧರಿಸಲಾಯಿತು.

ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಾರ್ಕ್‌ಗೆ ಸೇರಿದ ಎಲ್ಲಾ ಎಂಟು ರಾಷ್ಟ್ರಗಳ ಪ್ರಮುಖರ ಜತೆ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಷರೀಫ್‌ ಅವರೊಂದಿಗಿನ 45 ನಿಮಿಷಗಳ ಚರ್ಚೆಯಲ್ಲಿ, ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ದಿಸೆಯಲ್ಲಿ ಎರಡೂ ರಾಷ್ಟ್ರಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಮತ್ತೆ ನಿರಂತರ ಮಾತುಕತೆ ವ್ಯವಸ್ಥೆ ಏರ್ಪಡಿ­ಸಲು ಉಭಯ ನಾಯಕರು ಒಪ್ಪಿ­ಕೊಂಡರು.

ಎರಡು ವರ್ಷಗಳಿಂದೀಚೆಗೆ, ಉಭಯ ರಾಷ್ಟ್ರಗಳ ಗಡಿಯಲ್ಲಿ ಪದೇಪದೇ ಕದನವಿರಾಮ ಉಲ್ಲಂಘನೆ ಪ್ರಕರಣಗಳು ಹೆಚ್ಚಿದ್ದರಿಂದ ಸೇನಾ ಕಾರ್ಯಾಚರಣೆಗಳ

ಮಹಾ ನಿರ್ದೇ­ಶಕರ ನಡುವೆ ಸಭೆ ನಡೆಸುವ ಮಾತು ಕೇಳಿಬರುತ್ತಲೇ ಇತ್ತು. ಅಂತಹ ಸಂದರ್ಭ­ದಲ್ಲಿ ಇದೀಗ ವಿದೇಶಾಂಗ ಕಾರ್ಯದರ್ಶಿಗಳ ನಡುವಣ
ಮಾತು­ಕತೆ  ಪ್ರಸ್ತಾಪವಾಗಿ-­ರುವುದು ಮಹತ್ವ ದ್ದೆನಿಸಿದೆ.

ಪಾಕಿಸ್ತಾನವು ತನ್ನ ಮಾರುಕಟ್ಟೆ­ಯಲ್ಲಿ ಭಾರತದ ಉತ್ಪನ್ನಗಳಿಗೆ ಯಾವುದೇ ತಾರತಮ್ಯವಿಲ್ಲದೇ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್‌ ತಿಳಿಸಿದರು.

ರಾಜಕೀಯ ಮತ್ತು ಆರ್ಥಿಕ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಜ ವಾಣಿಜ್ಯ ವಹಿವಾಟು ಸಂಬಂಧ ಸ್ಥಾಪಿಸಲು 2012ರ ಸೆಪ್ಟೆಂಬರ್‌ ನೀಲನಕ್ಷೆಗೆ ಅನುಗುಣವಾಗಿ  ಮುಂದುವರೆ­ಯ­ಬೇಕೆಂದು ಮೋದಿ ಅಭಿಪ್ರಾಯ­ಪಟ್ಟರು ಎಂದೂ ಸುಜಾತಾ ತಿಳಿಸಿದರು.

ಉಗ್ರವಾದ ನಿಲ್ಲಿಸಿ: ಪಾಕ್‌ಗೆ ತಾಕೀತು
ದೇಶದ ಸಂಬಂಧವು ಸಾರ್ಕ್‌ನ ಇತರ ರಾಷ್ಟ್ರಗಳ ಜತೆ ಹೇಗೆ ಬೆಳೆಯುತ್ತಿದೆಯೋ ಅದೇ ರೀತಿಯಲ್ಲಿ ಪಾಕಿಸ್ತಾನದ ಜತೆಯೂ ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬಾಂಧವ್ಯ ಉನ್ನತಿ ಕಾಣಲಿದೆ ಎಂದು ಮೋದಿ  ಆಶಿಸಿದ್ದಾರೆ.

ಭಯೋತ್ಪಾದನೆ: ಈ ಮಾತುಕತೆಯ ವೇಳೆ ಭಯೋ­ತ್ಪಾದನೆ ವಿಷಯವೂ ಪ್ರಸ್ತಾಪವಾ­ಯಿತು. ಮೋದಿ ಅವರು, ‘ಪಾಕಿಸ್ತಾನವು ತನ್ನ ನೆಲದಲ್ಲಿ ಭಾರತದ ವಿರುದ್ಧದ ಉಗ್ರವಾದ ಬಿತ್ತಲು ಆಸ್ಪದ ನೀಡುವುದಿಲ್ಲ ಎಂಬ ತನ್ನ ಸಂಕಲ್ಪಕ್ಕೆ ಬದ್ಧವಾಗಿರಬೇಕು’ ಎಂದು ಒತ್ತಿ ಹೇಳಿದರೆಂದು ವಿದೇಶಾಂಗ ಕಾರ್ಯ­ದರ್ಶಿ ಸುಜಾತಾ ಸಿಂಗ್‌ ಸುದ್ದಿಗಾರರಿಗೆ ತಿಳಿಸಿದರು.

ಮುಂಬೈ ಮೇಲಿನ 26/11ರ ಅಮಾನುಷ ದಾಳಿ ಸಂಚುಕೋರರ ವಿರುದ್ಧದ ವಿಚಾರಣೆಯನ್ನು ಚುರುಕುಗೊಳಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಕ್ರಮ ಕೈಗೊಳ್ಳುತ್ತದೆಂಬ ಭರವಸೆಯನ್ನೂ ಮೋದಿ ವ್ಯಕ್ತಪಡಿಸಿದರು ಎಂದು ಸುಜಾತಾ ವಿವರಿಸಿದರು.

ಷರೀಫ್‌ ನಂತರ ಸಂಜೆ ತಮ್ಮ ದೇಶಕ್ಕೆ ವಾಪಸಾಗುವ ಮುನ್ನ, ಮೋದಿ ಅವರೊಂದಿಗಿನ ಮಾತುಕತೆಯನ್ನು ‘ಇದೊಂದು ಒಳ್ಳೆಯ ಹಾಗೂರಚನಾತ್ಮಕ ಚರ್ಚೆ’ ಎಂದು ಬಣ್ಣಿಸಿದರು. ‘ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ಯಾವುದೇ ವಿಷ­ಯದ ಬಗ್ಗೆ ಸಹಕಾರ ಮತ್ತು ಪ್ರಾಮಾಣಿಕತೆಯ ಬುನಾದಿಯ ಮೇಲೆ ಚರ್ಚಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ’ ಎಂದು ಷರೀಫ್‌ ಇದೇ ವೇಳೆ ಪ್ರಕಟಿಸಿದರು.

ಎ.ಬಿ.ವಾಜಪೇಯಿ ಅವರಿಗೆ 1999ರ ಫೆಬ್ರುವರಿಯಲ್ಲಿ ಲಾಹೋರ್‌ಗೆ ಬರಲು ಆಹ್ವಾನ ನೀಡಿದ್ದನ್ನೂ ಷರೀಫ್‌ ನೆನಪಿಸಿಕೊಂಡರು. 1999ರ ಲಾಹೋರ್‌ ಒಪ್ಪಂದದ ಎಳೆಗಳನ್ನು ಆಧರಿಸಿ ಬಾಂಧವ್ಯ ಕಟ್ಟಿಕೊಳ್ಳುವ ಆಶಯವನ್ನೂ ಷರೀಫ್‌ ವ್ಯಕ್ತಪಡಿಸಿದರು.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಪಾಕಿಸ್ತಾನದಲ್ಲಿ ಅಡಗಿ­ದ್ದಾನೆಂಬ ಬಗ್ಗೆ ಮೋದಿ ಅವರು ಪ್ರಸ್ತಾಪಿಸಿದರೇ?– ಎಂದು ಕೇಳಿದಾಗ, ‘ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

ಇದರ ಬಗ್ಗೆ ನಾನು ಹೆಚ್ಚು ಮಾತನಾ­ಡುವುದಿಲ್ಲ. ನೆರೆ ರಾಷ್ಟ್ರದೊಂದಿಗೆ ಶಾಂತಿಯುತ 

ಹಾಗೂ ಸ್ನೇಹಯುತ ಬಾಂಧವ್ಯವಷ್ಟೆ ಮುಖ್ಯ’ ಎಂದು ಸುಜಾತಾ ಸಿಂಗ್‌ ಹೇಳಿದರು.

ಆದರೆ ಇಂತಹ ಬಾಂಧವ್ಯ ಮುಂದುವರಿಯಬೇಕಾದರೆ, ಭಯೋ­ತ್ಪಾದನೆ ಮತ್ತು ಹಿಂಸಾವಾದದ ನಿರ್ಮೂಲನೆ ಅಗತ್ಯ ಎಂದು ಅವರು
ಅಭಿಪ್ರಾಯಪಟ್ಟರು.



26/11ರ ಚರ್ಚೆ ಭಾರತಕ್ಕೆ ಸಮಾಧಾನ ತಂದಿದೆಯೇ?– ಎಂದು ಕೇಳಿದಾಗ, ‘ಈ ಮಾತುಕತೆ ಅತ್ಯಂತ ರಚನಾತ್ಮಕವಾಗಿತ್ತು. ಎರಡೂ ರಾಷ್ಟ್ರಗಳು ಮತ್ತೊಂದು ರಾಷ್ಟ್ರವನ್ನು ಅರಿಯಲು ಯತ್ನಿಸಿದವು’ ಎಂದರು.

ಮೋದಿಗೆ ಆಹ್ವಾನ: ಮೋದಿ ಅವರು ಪಾಕಿಸ್ತಾನಕ್ಕೆ ಹೋಗುತ್ತಾರಾ?– ಎಂದು ಕೇಳಿದಾಗ, ‘ಆಹ್ವಾನ ಬಂದಿದ್ದು ಅದನ್ನು ಒಪ್ಪಿಕೊಳ್ಳ­ಲಾಗಿದೆ. ಆದರೆ ಭೇಟಿಯ ದಿನಾಂಕ ನಿಗದಿ ಆಗಬೇಕು ಅಷ್ಟೆ’ ಎಂದರು.

ಗಮನ ಸೆಳೆದ ಮಾತುಕತೆ
*ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೊದಲ ಪ್ರಧಾನಿ ಮೋದಿ

*ಮೋದಿ ಅವರಿಂದ ಪಾಕ್‌ನತ್ತ ಸ್ನೇಹಹಸ್ತ, ಚುನಾವಣಾ ಭಾಷಣಗಳಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಿಂತ ವಿಭಿನ್ನ ನಿಲುವು
*ಮೋದಿ ಅವರ ಪ್ರಮಾಣವಚನ ಸಮಾರಂಭಕ್ಕೆ ಪಾಕ್‌ ಪ್ರಧಾನಿಗೆ ನೀಡಿದ ಆಹ್ವಾನವನ್ನು ಒಪ್ಪಿಕೊಳ್ಳಬಾರದೆಂದು ಅಲ್ಲಿನ ತೀವ್ರವಾದಿಗಳು ಒತ್ತಾಯಿಸಿದ್ದರು. ಆದರೂ ಷರೀಫ್‌ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು.
*ಷರೀಫ್‌ ಅವರು ಭಾರತಕ್ಕೆ ಭೇಟಿ ನೀಡಿದ್ದು 23 ವರ್ಷಗಳ ನಂತರ. ಈ ಮುಂಚೆ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು 1991ರಲ್ಲಿ ನವದೆಹಲಿಗೆ ಬಂದಿದ್ದರು.
*ಷರೀಫ್‌ ಮಂಗಳವಾರ ದೆಹಲಿಯ ಐತಿಹಾಸಿಕ ಜಾಮಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT