ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡಾಫೆ ವರ್ತನೆ ಸಲ್ಲದು

Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ, ವಿವೇಕಾನಂದ ಬಡಾವಣೆಯಲ್ಲಿ ವಿವಿಧ ಯೋಜನೆಯಡಿ 1821 ನಿವೇಶನಗಳನ್ನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿದೆ.  ಇದರಿಂದ ಸರ್ಕಾರಕ್ಕೆ ಸುಮಾರು ₨ 300 ಕೋಟಿ ನಷ್ಟವಾಗಿದೆ ಎಂದು ಪ್ರಾಧಿಕಾರದ ಆಯುಕ್ತ ಕೆ.ಮಥಾಯಿ ಅವರು ನಗರಾಭಿವೃದ್ಧಿ ಇಲಾಖೆಗೆ ವರದಿ ನೀಡಿದ್ದಾರೆ.

‘ನಿಮ್ಮ ಆಯ್ಕೆ ಯೋಜನೆ’ಯಡಿ 344, ‘ಒಂದೇ ಕಂತು ಯೋಜನೆ’ಯಡಿ 426, ಹೆಚ್ಚುವರಿ ಬಡ್ಡಿ ಪಡೆದು ವಿತರಿ­ಸಿದ 944 ಹಾಗೂ ನಂತರ ವಿತರಿಸ­ಲಾದ 107 ನಿವೇಶನಗಳ ಹಂಚಿಕೆಯು ಅಕ್ರಮ­ವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಶಿಫಾರಸು ಮಾಡಿದ್ದಾರೆ. ಇದರಲ್ಲಿ 107 ನಿವೇಶನಗಳ ಹಂಚಿಕೆ ಪ್ರಕರಣ­ವನ್ನು ಈಗಾಗಲೇ ಸಿಬಿಐಗೆ ಒಪ್ಪಿಸಲಾಗಿದೆ.

‘ನಿಮ್ಮ ಆಯ್ಕೆ’ ಯೋಜನೆಯಡಿ ವಿತರಿಸಲಾದ ನಿವೇಶನಗಳ ತನಿಖೆಗಾಗಿ ಮೂವರು ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಇದನ್ನು ಇಷ್ಟಕ್ಕೇ ಬಿಡುವುದರಲ್ಲಿ ಅರ್ಥವಿಲ್ಲ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಎಲ್ಲ ಅವ್ಯವಹಾರಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯುವುದು ಅವಶ್ಯ.  ಎಲ್ಲ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ಒಪ್ಪಿಸಬಹುದು. ಸಚಿವರು ಒಳಗೊಂಡಂತೆ  ಯಾರೇ ತಪ್ಪೆಸಗಿದ್ದರೂ ಅವರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳಬೇಕು.

ವಸತಿ ಸಚಿವ ಅಂಬರೀಷ್‌ ಈ ಪ್ರಕರಣದಲ್ಲಿ ಅತ್ಯಂತ ಉಡಾಫೆಯಿಂದ ನಡೆದುಕೊಂಡಿದ್ದಾರೆ. ಅವ್ಯವಹಾರವನ್ನು ಪತ್ತೆ ಮಾಡಿದ ಪ್ರಾಧಿಕಾರದ ಆಯುಕ್ತರನ್ನು ವರ್ಗಾವಣೆ ಮಾಡಲು ಒತ್ತಡವನ್ನೂ ಹೇರಿದ್ದಾರೆ ಎಂದು ವರದಿಯಾಗಿದೆ.  ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಿರದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಬೇಕೇ ಹೊರತು ವರ್ಗಾವಣೆ ಎಂಬುದು ಪರಿಹಾರ ಸೂತ್ರ ಹೇಗಾಗುತ್ತದೆ?  

ತಮಗೆ ಮಂಜೂರಾದ ನಿವೇಶನವನ್ನು ಕಾನೂನು ಬಾಹಿರವಾಗಿ ಭಾಗ ಮಾಡಿ ಮಾರಾಟ ಮಾಡಿದ್ದರೂ ತಾವು ನಿವೇಶನವನ್ನು ದಾನ ಮಾಡಿದ್ದಾಗಿ ಅಂಬರೀಷ್ ಹೇಳಿಕೊಂಡಿದ್ದಾರೆ.  ಅಲ್ಲದೆ 4 ನಿವೇಶನಗಳನ್ನು ಪಡೆಯುವ ‘ಅರ್ಹತೆ’ ತಮಗಿದೆ ಎಂದೂ  ಹೇಳಿಕೊಂಡಿದ್ದಾರೆ. ನಿಯಮದ ಪ್ರಕಾರ ಒಂದು ನಿವೇಶನ ಇರುವ ಯಾವುದೇ ವ್ಯಕ್ತಿಗೆ ಇನ್ನೊಂದು ನಿವೇಶನ ನೀಡಲು ಅವಕಾಶವೇ ಇಲ್ಲ.

ಹೀಗಿರುವಾಗ ಅಂಬರೀಷ್‌ ಅವರಿಗೆ 4 ನಿವೇಶನ ಪಡೆಯುವ ಹಕ್ಕು ಎಲ್ಲಿಂದ ಬಂತು?  ವಸತಿ ಸಚಿವರಾಗಿ ಅವರು ಹೀಗೆ ಬೇಜವಾಬ್ದಾರಿಯಿಂದ ಮಾತನಾಡುವುದು ಸರ್ವಥಾ ಸಲ್ಲ.  ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಬೇಕಾದುದು ಸಚಿವರಾಗಿರುವ ಅವರ ಕರ್ತವ್ಯ. ಅಲ್ಲದೆ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಅವರಿಗಿದೆ.

ಅದನ್ನು ಬಿಟ್ಟು ಅಧಿಕಾರಿಯ ವರ್ಗಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದಾರೆ ಎನ್ನುವುದು ಯಾರೂ ಒಪ್ಪುವಂತಹದ್ದಲ್ಲ.  ಈ ಪ್ರಕರಣದ ಬಗ್ಗೆ ಸಚಿವರೇ ಹೀಗೆ ಗೊಂದಲಕಾರಿ ಹೇಳಿಕೆ ನೀಡುತ್ತಿರುವುದರಿಂದ ನಗರಾಭಿವೃದ್ಧಿ ಇಲಾಖೆ  ತನಿಖೆಗೆ  ಆದೇಶಿಸಲು ಇನ್ನೂ ಮೀನ ಮೇಷ ಎಣಿಸುತ್ತಿದೆ.  ಸರ್ಕಾರ ತಕ್ಷಣವೇ ತನಿಖೆಗೆ ಆದೇಶಿಸಲಿ.

ತನಿಖೆ ಪೂರ್ಣವಾಗುವ ತನಕ  ಅಂಬರೀಷ್‌ ಅವರು ತಮ್ಮ ಸಚಿವ ಸ್ಥಾನದ ಅಧಿಕಾರ ದುರುಪಯೋಗ ಮಾಡದಿರುವುದು ಒಳಿತು.  ತನಿಖೆಯ ಮೇಲೆ ಅವರು ಯಾವುದೇ ರೀತಿಯ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು. ಅಲ್ಲದೆ ಸಚಿವರಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಪಾಠವನ್ನೂ  ಅಂಬರೀಷ್ ಅವರಿಗೆ ಮುಖ್ಯಮಂತ್ರಿ  ಹೇಳಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT