ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಗೊರೆಯ ಹೊಸ ಶ್ರುತಿ 3ಡಿ ಪ್ರತಿಕೃತಿ

Last Updated 14 ಅಕ್ಟೋಬರ್ 2015, 19:32 IST
ಅಕ್ಷರ ಗಾತ್ರ

ಪ್ರೀತಿಪಾತ್ರರಿಗೆ ವಿಶೇಷ ಸಂದರ್ಭಗಳಲ್ಲಿ ಅದೇ ಗ್ರೀಟಿಂಗ್‌ ಕಾರ್ಡ್ಸ್, ಹೂವು, ಚಾಕೊಲೆಟ್‌ ಅಥವಾ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟು ಬೇಸರವಾಗಿದೆಯೇ? ನಿಮಗಾಗಿ ಇಲ್ಲಿದೆ ಒಂದು ಹೊಸ ಐಡಿಯಾ. ಮನುಷ್ಯರನ್ನು ಹೋಲುವ  3ಡಿ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಅವಕಾಶ ಈಗ ನಗರದಲ್ಲಿ ಲಭ್ಯ.

ನೀವು ಯಾರಿಗಾದರೂ ವಿಭಿನ್ನವಾದ ಉಡುಗೊರೆ ಕೊಡಬೇಕು ಎಂದುಕೊಂಡಿದ್ದರೆ, ಅವರಂತೆಯೇ ಕಾಣುವ 3ಡಿ ಗೊಂಬೆಗಳು, ಪ್ರೇಮಿಗಳಿಗೆ ಅವರ ಹೃದಯವನ್ನೇ ಹೋಲುವ 3ಡಿ ಹೃದಯವನ್ನು ಉಡುಗೊರೆಯಾಗಿ ನೀಡಬಹುದು. ನಗರದಲ್ಲಿ ‘ಕ್ಲೋನ್‌ ಮಿ’ ಎಂಬ ಸಂಸ್ಥೆಯು ಈ 3ಡಿ ಪ್ರಿಂಟಿಂಗ್‌ ತಂತ್ರಜ್ಞಾನದ ಮೂಲಕ ನಿಮಗೆ ಬೇಕಾದ ವಸ್ತುಗಳು, ಮುದ್ದಿನ ಪ್ರಾಣಿಗಳು ಹಾಗೂ ಮನುಷ್ಯರ 3ಡಿ ಪ್ರತಿಕೃತಿಗಳನ್ನು ರೂಪಿಸಿಕೊಡುತ್ತಿದೆ.

ಮೂಲತಃ ಬೆಂಗಳೂರಿನವರಾದ ಸಿದ್ಧಾರ್ಥ್‌ ರಾಥೋಡ್‌ ಹಾಗೂ ಡಾ.ಕಲ್ಮೇಶ್‌ ಕೊಠಾರಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್‌ನಲ್ಲಿ  ‘ಕ್ಲೋನ್‌ ಮಿ’ ಹೆಸರಿನ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದಾಗ ಅಲ್ಲಿ 3ಡಿ ಗೊಂಬೆಗಳನ್ನು ಕಂಡು ಸಿದ್ಧಾರ್ಥ್‌ ಬೆರಗಾಗಿದ್ದರು. ಉಡುಗೊರೆ ನೀಡಲು ಇದ್ದ ವಿಭಿನ್ನ ಮಾರ್ಗವನ್ನು ಕಂಡುಕೊಂಡರು. ಅದನ್ನು ತನ್ನ ಸಂಬಂಧಿಕರೊಬ್ಬರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿಯೂ ನೀಡಿದ್ದರು.

ಸಂಬಂಧಿಕರಿಗೆ ನೀಡಿದ ಒಂದು ಉಡುಗೊರೆ ಸಿದ್ಧಾರ್ಥ್‌ ಅವರ ಜೀವನದ ಹಾದಿಯನ್ನೇ ಬದಲಿಸಿತು. ಸದ್ಯಕ್ಕೆ ಸಿದ್ಧಾರ್ಥ್‌ ಅವರ ಬಳಿ ಇರುವ 3ಡಿ ಪ್ರಿಂಟರ್‌ನಲ್ಲಿ ಜಿಪ್ಸಂ ಕಾಂಪೋಸಿಟ್‌ (ಸ್ಟ್ಯಾಂಡ್‌ ಸ್ಟೋನ್‌ ಅಂಡ್‌ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ) ವಸ್ತು ಬಳಸಿ ಮನುಷ್ಯ, ಕ್ಯಾರಿಕ್ಯಾಚರ್‌, ಪ್ರಾಣಿಗಳು ಮನುಷ್ಯನ ಅಂಗಾಂಗಗಳು, ಕಾರ್ಟೂನ್‌ ಕ್ಯಾರೆಕ್ಟರ್ಸ್‌, ಹಾಲಿವುಡ್‌ ಮತ್ತು ಬಾಲಿವುಡ್‌ನ ಫೇಮಸ್‌ ಫ್ಯಾಂಟಸಿ ಕ್ಯಾರೆಕ್ಟರ್‌ಗಳು ಹಾಗೂ ನಿಮಗೆ ಬೇಕಾದ ಕಟ್ಟಡಗಳ 3ಡಿ ಮಾದರಿಗಳನ್ನು ತಯಾರಿಸಬಹುದು. ಸದ್ಯಕ್ಕೆ ಸಿದ್ಧಾರ್ಥ್‌ ಅವರ ಬಳಿ ಇರುವ ಪ್ರಿಂಟರ್‌ನಲ್ಲಿ 60 ಲಕ್ಷ ಬಗೆಯ ಬಣ್ಣಗಳಿಂದ ಮಾದರಿಗಳನ್ನು ತಯಾರಿಸಬಹುದು.

ಸಾಮಾನ್ಯವಾಗಿ 245ಕ್ಕೂ ಹೆಚ್ಚು ವಸ್ತುಗಳನ್ನು ಬಳಸಿಕೊಂಡು 3ಡಿ ಪ್ರಿಂಟಿಂಗ್‌ ಮಾಡಬಹುದು. ಚಿನ್ನ, ಬೆಳ್ಳಿ, ಚಾಕಲೇಟ್‌, ಮಾಂಸ, ಪ್ಲಾಸ್ಟಿಕ್‌ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿ ಬೇಕಾದ ಆಕೃತಿಗಳನ್ನು ಪ್ರಿಂಟ್‌ ಮಾಡಬಹುದು. ಸದ್ಯಕ್ಕೆ ಲೈಫ್‌ಸ್ಟೈಲ್‌ ವಿಭಾಗದಲ್ಲಿ ಜನರ ಭಾವಚಿತ್ರಗಳನ್ನು ತೆಗೆದುಕೊಂಡು 3ಡಿ ಸ್ಕ್ಯಾನ್‌ ಮಾಡಿ, ನಂತರ ಅದರ ಮಾಡೆಲ್‌ಗಳನ್ನು ಮಾಡಿಕೊಡುವುದು ಹಾಗೂ ವೈದ್ಯಕೀಯ ರಂಗದಲ್ಲಿ 3ಡಿ ಮಾದರಿಗಳನ್ನು ಬಳಸಿಕೊಳ್ಳುವುದು ಹೆಚ್ಚಾಗಿದೆ.   

‘ನನಗೆ 3ಡಿ ಪ್ರಿಂಟಿಂಗ್‌ ಉದ್ಯಮವನ್ನು ಪ್ರಾರಂಭಿಸುವ ಆಲೋಚನೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮುಗಿಸಿ ನಗರಕ್ಕೆ ಹಿಂತಿರುಗಿದ ನಂತರ ದೇಶದಲ್ಲಿ 3ಡಿ ತಂತ್ರಜ್ಞಾನದ ಹಾಗೂ ಉದ್ಯಮದ ಕುರಿತು ಮಾಹಿತಿ ಕಲೆಹಾಕಿದೆ. ಆಗ ಈ ಉದ್ಯಮ ದೇಶದಲ್ಲಿ ಅಷ್ಟಾಗಿ ಪ್ರವರ್ಧಮಾನಕ್ಕೆ ಬಂದಿಲ್ಲ ಎಂಬ ಸತ್ಯ ಅರಿವಿಗೆ ಬಂತು.  ಇದರಿಂದಾಗಿ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡೇ ಉದ್ಯಮವನ್ನು ಪ್ರಾರಂಭಿಸಲು ಮುಂದಾದೆ. 3ಡಿ ಪ್ರಿಂಟಿಂಗ್‌ ಉದ್ಯಮಕ್ಕೆ ಉಜ್ವಲ ಭವಿಷ್ಯವಿದೆ. ಇದನ್ನು ವೈದ್ಯಕೀಯ ರಂಗದಲ್ಲೂ ನಾವು ತುಂಬಾ ಉತ್ತಮವಾಗಿ ಬಳಸಿಕೊಳ್ಳಬಹುದು’ ಎನ್ನುತ್ತಾರೆ ಸಿದ್ಧಾರ್ಥ್‌.   

‘ಗ್ರಾಹಕರಿಗೆ ಬೇಕಾದ ಮಾದರಿ ಅಥವಾ ಅವತಾರಗಳಲ್ಲಿ 3ಡಿ ಗೊಂಬೆಗಳನ್ನು ಮಾಡುತ್ತಿದ್ದೇವೆ. ಮಕ್ಕಳು ಹೆಚ್ಚಾಗಿ ಇಷ್ಟಪಡುವ ಸ್ಪೈಡರ್‌ಮ್ಯಾನ್‌, ಐರನ್‌ಮ್ಯಾನ್‌ಗಳ ದೇಹಕ್ಕೆ ಮಕ್ಕಳ ಮುಖವನ್ನು ಸೇರಿಸಿ 3ಡಿ ಗೊಂಬೆಗಳನ್ನು ಪ್ರಿಂಟ್‌ ಮಾಡುತ್ತೇವೆ. ನಮ್ಮ ಬಳಿ ಇಲ್ಲದ ವಿನ್ಯಾಸಗಳನ್ನು ಗ್ರಾಹಕರು ತಂದುಕೊಟ್ಟರೆ ಅದನ್ನೂ ಮಾಡಿಕೊಡುತ್ತೇವೆ. ನಮ್ಮಲ್ಲಿ ಎಷ್ಟು ಗಾತ್ರದ ಹಾಗೂ ಯಾವ ಬಣ್ಣದ ಮಾದರಿಯನ್ನಾದರೂ ಪ್ರಿಂಟ್‌ ಮಾಡುತ್ತೇವೆ.

ಆದರೆ ಮಾದರಿ ಗೊಂಬೆಗಳ ಗಾತ್ರದ ಮೇಲೆ ಅದನ್ನು ಮಾಡುವ ಸಮಯ ಹಾಗೂ ಬೆಲೆ ನಿರ್ಧಾರವಾಗುತ್ತದೆ. ಒಂದು ಗಂಟೆಗೆ 28 ಮೈಕ್ರಾನ್ಸ್‌ನಷ್ಟು ಮಾತ್ರ ಪ್ರಿಂಟ್‌ ಮಾಡಬಹುದು. ಎರಡು ಸೆಂ.ಮೀ. ಗಾತ್ರದ ಗೊಂಬೆ ಬೆಲೆ ₹999. ಒಂದು ಪ್ರಿಂಟ್‌ನಲ್ಲಿ ಒಂದು ಅಡಿ 2 ಇಂಚಿನಷ್ಟು ಪ್ರಿಂಟ್ ಮಾಡಬಹುದು. ಬೇಕಾದರೆ ಅದರ ಮೇಲೆ ಇಟ್ಟು ಮತ್ತಷ್ಟು ಎತ್ತರ ಹಾಗೂ ದಪ್ಪವನ್ನು ಹೆಚ್ಚಿಸಬಹುದು. 2 ಸೆ. ಮೀ. ಗೊಂಬೆ ಮಾಡುವಾಗ 60ರಿಂದ 80 ಪದರಗಳು ನಿರ್ಮಾಣವಾಗುತ್ತವೆ’ ಎಂದು ವಿವರಿಸುತ್ತಾರೆ ಅವರು.  

3ಡಿ ಗೊಂಬೆ ಹಾಗೂ ಮಾದರಿಗಳ ಗಾತ್ರ 0.8 ಇಂಚುಗಳಿಂದ ಪ್ರಾರಂಭವಾಗುತ್ತದೆ. 10 ದಿನಗಳ ಒಳಗೆ ದೇಶದಲ್ಲಿ ಎಲ್ಲೇ ಆದರೂ ಉಚಿತವಾಗಿ ವಿಲೇವಾರಿ ಮಾಡುತ್ತಾರೆ. ಯಾರೇ ಇದಕ್ಕೆ ಭಾವಚಿತ್ರಗಳನ್ನು ಕಳುಹಿಸುವುದಾದರೆ ಅವು ಡಿಎಸ್‌ಎಲ್‌ ಆರ್‌ ಕ್ಯಾಮೆರಾದಲ್ಲಿ ತೆಗೆದ ಚಿತ್ರಗಳಷ್ಟು ಗುಣಮಟ್ಟವನ್ನು ಹೊಂದಿರಬೇಕು. ನಾಲ್ಕು ಭಾವಚಿತ್ರಗಳನ್ನು ಕಳುಹಿಸಬೇಕು. ದೇಹದ ಮುಂಭಾಗ, ಹಿಂಭಾಗ ಹಾಗೂ ಎರಡೂ ಬದಿಗಳಿಂದ ತೆಗೆದ ಚಿತ್ರಗಳು ಬೇಕಾಗುತ್ತದೆ. ಇಲ್ಲವಾದಲ್ಲಿ ‘ಕ್ಲೋನ್‌ ಮೀ’ ಸ್ಟೋರ್ಸ್‌ಗೆ ಬಂದರೆ ಅಲ್ಲೇ ನಿಮ್ಮ ಚಿತ್ರಗಳನ್ನು ತೆಗೆದು ಅದರ 3ಡಿ ಮಾದರಿಯನ್ನು ಮಾಡಿಕೊಡುತ್ತಾರೆ.

ಮೊದಲು ತೆಗೆದ ಚಿತ್ರಗಳನ್ನು 3ಡಿ ಸ್ಕ್ಯಾನರ್‌ನಲ್ಲಿ ಸ್ಕ್ಯಾನ್‌ ಮಾಡಿ, ನಂತರ ಆ ಇಮೇಜ್‌ ಅನ್ನು ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಿ ಅಲ್ಲಿ ಅದನ್ನು ಜಿ–ಕೋಡ್‌ ಆಗಿ ಪರಿವರ್ತಿಸುತ್ತಾರೆ. ಈ ಕೋಡ್‌ ಅನ್ನು ಪ್ರಿಂಟರ್‌ನಲ್ಲಿ ಪ್ರಿಂಟ್‌ ಮಾಡಲಾಗುತ್ತದೆ. ಹೀಗೆ ಪ್ರಿಂಟ್‌ ಮಾಡಿದ ನಂತರ ಬರುವ ಮಾದರಿಯನ್ನು ಮೊದಲು ಏರ್‌ ಬ್ರಷ್‌ ಮಾಡಿ, ಕೆಲಕಾಲ ಹಾರ್ಡನಿಂಗ್‌ ದ್ರಾವಣದಲ್ಲಿ ಇಡಲಾಗುತ್ತದೆ, ಇದರಿಂದ 3ಡಿ ಗೊಂಬೆ ಗಟ್ಟಿಯಾಗುವುದರ ಜೊತೆಗೆ ಹೊಳಪಿನಿಂದ ಕೂಡಿರುತ್ತದೆ.  
 
ಕಳೆದ ಡಿಸೆಂಬರ್‌ನಲ್ಲಿ ಈ ಉದ್ಯಮ ಪ್ರಾರಂಭಿಸಲು ಸಿದ್ಧತೆ ಪ್ರಾರಂಭವಾಗಿತ್ತು. ನಂತರ ಜನವರಿಯಲ್ಲಿ ಸಿಂಗಪುರ ಹಾಗೂ ಫೆಬ್ರುವರಿಯಲ್ಲಿ ಚೆನ್ನೈನಲ್ಲಿ ನಡೆದ ಐಕ್ಯಾನ್‌ 3ಡಿ ಸಮ್ಮೇಳನ ಭಾಗವಹಿಸಿ ಮಾಹಿತಿ ಕಲೆ ಹಾಕಿದ ಸಿದ್ಧಾರ್ಥ್‌ ಹಾಗೂ ಕೊಠಾರಿ ಆಗಸ್ಟ್‌ನಲ್ಲಿ ನಗರದ ಯುಬಿ ಸಿಟಿಯಲ್ಲಿ ಹತ್ತು ದಿನಗಳ ಕಾಲ ನಡೆದ ‘ಆರ್ಟ್ ಬೆಂಗಳೂರು’ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ 3ಡಿ ಗೊಂಬೆಗಳನ್ನು ಪ್ರದರ್ಶಿಸಿದ್ದರು. ಆಗ ಅವರಿಗೆ ಸಿಕ್ಕ ಜನರ ಪ್ರತಿಕ್ರಿಯೆಯಿಂದ ಈಗ ಈ ಉದ್ಯಮ ಪ್ರಾರಂಭವಾಗಿದೆ.

ಸದ್ಯಕ್ಕೆ ಹೆಚ್ಚಾಗಿ ಜನರು ಮನುಷ್ಯರ ಪ್ರತಿಕೃತಿಗಳನ್ನು ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಇದರೊಂದಿಗೆ ಶಾಲಾ ಕಾಲೇಜುಗಳಲ್ಲಿ ಬಳಸುವ ಮನುಷ್ಯರ ಅಂಗಾಂಗಗಳ ಮಾದರಿಯನ್ನು ಇಲ್ಲಿ ಮಾಡಿಕೊಡಲಾಗುತ್ತದೆ.

ಸಂಪರ್ಕಕ್ಕೆ: ಸಂಪರ್ಕಕ್ಕೆ:  ದೂರವಾಣಿ: 080-41147855,
ಇ–ಮೇಲ್‌: 3dfication@gmail.com
ವೆಬ್‌ಸೈಟ್‌: https://www.cloneme.in/
ಫೇಸ್‌ಬುಕ್‌: https://www.facebook.com/clonemeindia?fref=ts v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT