ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ನಗರಸಭೆಯ 2015–16ನೇ ಸಾಲಿನ ಮುಂಗಡ ಪತ್ರ ಮಂಡನೆ

₹1.21 ಕೋಟಿ ಉಳಿತಾಯ ಬಜೆಟ್‌
Last Updated 28 ಮಾರ್ಚ್ 2015, 7:49 IST
ಅಕ್ಷರ ಗಾತ್ರ

ಉಡುಪಿ: ಕೆಲವು ಮಾತ್ರ ಹೊಸ ಘೋಷಣೆಗಳಿರುವ ನಗರಸಭೆಯ 2015­–16ನೇ ಸಾಲಿನ ಮುಂಗಡ ಪತ್ರವನ್ನು ಅಧ್ಯಕ್ಷ ಪಿ. ಯುವರಾಜ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಒಟ್ಟು₹83.56 ಕೋಟಿ ಆದಾಯ ಮತ್ತು 82.35 ಲಕ್ಷ ವೆಚ್ಚವನ್ನು ಬಜೆಟ್‌ ಒಳಗೊಂಡಿದೆ.

ವರ್ಷದ 365 ದಿನವೂ 24 ಗಂಟೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಕುಡ್ಸೆಂಪ್‌ ಎರಡನೇ ಹಂತದ₹35 ಕೋಟಿ ಯೋಜನೆಗೆ ಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಇ ಆಡಳಿತ ಜಾರಿಗೆ ತರುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ನಾಗರಿಕರಿಗೆ ಎಲ್ಲ ಮಾಹಿತಿಯನ್ನು ಆನ್‌ಲೈನ್‌ ಮೂಲಕ ನೀಡುವ ಹಾಗೂ ತೆರಿಗೆಗಳನ್ನು ಆನ್‌ಲೈನ್‌ನಲ್ಲೇ ಕಟ್ಟುವ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ತೆರಿಗೆ, ಶುಲ್ಕ ಬಾಕಿ ಉಳಿಸಿಕೊಂ­ಡವರಿಗೆ ಆನ್‌ಲೈನ್‌ನಲ್ಲಿಯೇ ಮಾಹಿತಿ­ಯನ್ನೂ ನೀಡಲು ವ್ಯವಸ್ಥೆ ಮಾಡಲಾ­ಗುತ್ತದೆ. ಮಾಹಿತಿಯನ್ನು ಪಡೆಯುವ, ತೆರಿಗೆ ಪಾವತಿಸುವ ಪ್ರಕ್ರಿಯೆ ಇದರಿಂದ ಸುಲಭವಾಗಲಿದೆ ಎಂದು ಯುವರಾಜ ಹೇಳಿದರು. ನಗರದ ಹಸಿರೀಕರಣಕ್ಕೆ ಆದ್ಯತೆ ನೀಡಲಾಗುತ್ತದೆ. ಕಲ್ಮಾಡಿ ಸೇತುವೆ ಬಳಿ ಉದ್ಯಾನ ನಿರ್ಮಿಸಲಾಗುತ್ತದೆ. ನಗರದ ಪ್ರಮುಖ ಭುಜಂಗ ಉದ್ಯಾನವನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿ­ವೃದ್ಧಿ ಮಾಡಲಾಗುತ್ತದೆ. ಉದ್ಯಾನ­ಗಳ ಅಭಿವೃದ್ಧಿ, ದುರಸ್ಥಿ, ನಿರ್ವಹಣೆಗಾಗಿ₹50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

ಅಗತ್ಯ ಇರುವೆಡೆ ಹೊಸದಾಗಿ ದಾರಿ ದೀಪ ಅಳವಡಿಸಾಗುತ್ತದೆ. ಈಗಿರುವ ಸೋಡಿಯಂ ದೀಪಗಳನ್ನು ಎಲ್‌ಇಡಿ ಬಲ್ಬ್‌ಗೆ ಬದಲಾಯಿಸಲಾಗುತ್ತದೆ. ನರ್ಮ್‌ ಯೋಜನೆಯಲ್ಲಿ ನಗರ ಸಾರಿಗೆ ಬಸ್‌ ನಿಲ್ದಾಣ ನಿರ್ಮಿಸಿ, ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅರ್ಧಕ್ಕೆ ನಿಂತಿರುವ ಬೀಡಿನಗುಡ್ಡೆಯ ಬಯಲು ರಂಗ ಮಂದಿರದ ಕಾಮಗಾರಿ ಪೂರ್ಣಗೊಳಿಸಲು₹50 ಲಕ್ಷ ವಿನಿ­ಯೋಗಿಸಲಾಗುತ್ತದೆ ಎಂದು ಹೇಳಿದರು. ಮುಂಗಡ ಪತ್ರ ಮಂಡಿಸಿದ ಅಧ್ಯಕ್ಷರನ್ನು ಆಡಳಿತರೂಢ ಪಕ್ಷದ ಸದಸ್ಯರು ಅಭಿನಂದಿಸಿದರು. ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪ್ರಭಾರ ಪೌರಾಯುಕ್ತ ಡಿ. ಮಂಜು­ನಾಥಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT