ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಡ್ತಾ ಪಂಜಾಬ್‌’: ಪಾಕಿಸ್ತಾನದಲ್ಲಿ ನಕಲಿ ಸಿ.ಡಿ ಮಾರಾಟ ಜೋರು

Last Updated 26 ಜೂನ್ 2016, 14:21 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ಬಿಡುಗಡೆಗೂ ಮುನ್ನ ಸೆನ್ಸಾರ್ ಕಾರಣಕ್ಕಾಗಿ ವಿವಾದಕ್ಕೆ ಕಾರಣವಾಗಿದ್ದ ‘ಉಡ್ತಾ ಪಂಜಾಬ್‌’ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ. ಪಾಕಿಸ್ತಾನದ ಸೆನ್ಸಾರ್ ಮಂಡಳಿ ಸಿನಿಮಾದ 100 ಭಾಗಗಳಿಗೆ ಕತ್ತರಿ ಪ್ರಯೋಗಿಸಿ ಬಿಡುಗಡೆ ಮಾಡಿದ್ದರಿಂದ ಪ್ರೇಕ್ಷಕರು ನಿರಾಶರಾಗಿದ್ದು, ಸಿನಿಮಾದ ನಕಲಿ ಸಿ.ಡಿಗಳ ಮಾರಾಟ ಹೆಚ್ಚಾಗಿದೆ.

ಪಾಕಿಸ್ತಾನ ಸೆನ್ಸಾರ್ ಮಂಡಳಿಯು ಮಾದಕ ವಸ್ತುಗಳ ಪಿಡುಗಿನ ಕಥೆಯಾಧಾರಿತ ‘ಉಡ್ತಾ ಪಂಜಾಬ್’ ಸಿನಿಮಾಗೆ ‘ಎ’ ಪ್ರಮಾಣ ಪತ್ರ ನೀಡಿತ್ತು. ಅಲ್ಲದೇ. ನೂರು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ ಬಿಡುಗಡೆಗೆ ಅನುಮತಿ ನೀಡಿತ್ತು.

‘ಸಿನಿಮಾದಲ್ಲಿ 100 ದೃಶ್ಯಗಳನ್ನು ಕತ್ತರಿಸಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಸಿನಿಮಾ ಬಿಡುಗಡೆ ಮಾಡದಿರಲು ನಾವು ನಿರ್ಧರಿಸಿದ್ದೆವು’ ಎಂದು ಚಿತ್ರದ ನಿರ್ದೇಶಕ ಅಭಿಷೇಕ್ ಚೌಬೆ ಹೇಳಿದ್ದಾರೆ.

ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ವಿರೋಧದ ನಡುವೆಯೂ ಜೂನ್ 24ರಂದು ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿದೆ. ಆದರೆ, ಸಿನಿಮಾದಲ್ಲಿ ಹೆಚ್ಚು ದೃಶ್ಯಗಳನ್ನು ಕತ್ತರಿಸಿರುವುದು ಮತ್ತು ಸಂಭಾಷಣೆಗಳನ್ನು ತೆಗೆದು ಹಾಕಿರುವುದರಿಂದ ಕರಾಚಿಯಲ್ಲಿ ಸಿನಿಮಾದ ನಕಲಿ ಸಿಡಿಗಳು ಹೆಚ್ಚು ಮಾರಾಟವಾಗುತ್ತಿವೆ.

‘ಸಿನಿಮಾದ ಹೆಚ್ಚಿನ ಭಾಗಗಳಿಗೆ ಕತ್ತರಿ ಹಾಕಿದ್ದರಿಂದ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕ ನಿರಾಶನಾಗಿ  ವಾಪಸ್ ಬರುತ್ತಿದ್ದಾನೆ. ಹೀಗಾಗಿ ನಕಲಿ ಸಿಡಿಗಳ ಮಾರಾಟ ಹೆಚ್ಚಿದೆ’ ಎಂದು ಕ್ಲಿಫ್ಟನ್ ಪ್ರದೇಶದ ಡಿವಿಡಿ ವ್ಯಾಪಾರಿಯೊಬ್ಬರು ಹೇಳಿದರು.

‘ಸಿಬಿಎಫ್‌ಸಿ ಸಿನಿಮಾಕ್ಕೆ 87 ಕಟ್‌ಗಳನ್ನು ಸೂಚಿಸಿದ್ದನ್ನು ವಿರೋಧಿಸಿ ನಿರ್ಮಾಪಕರು ಹೈಕೋರ್ಟ್‌ ಮೊರೆ ಹೋಗಿದ್ದರು. ಒಂದು ಕಡೆ ಮಾತ್ರ ಕತ್ತರಿಸಿ ‌ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್‌ ಸಿಬಿಎಫ್‌ಸಿಗೆ ಸೂಚಿಸಿತ್ತು. ಆದರೆ, ಪಾಕಿಸ್ತಾನದಲ್ಲಿ ಇದು ಸಾಧ್ಯವಿಲ್ಲ’ ಎಂದು ಸಿನಿಮಾ ವಿಮರ್ಶಕ ಓಮರ್ ಅಲ್ವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT