ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮೊತ್ತದತ್ತ ಶ್ರೀಲಂಕಾ

ಕ್ರಿಕೆಟ್‌: ಕುಶಾಲ್ ಮೆಂಡಿಸ್ ಶತಕದ ಸೊಗಸು
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಪಲ್ಲೆಕೆಲೆ (ಎಎಫ್‌ಪಿ):  ಮೊದಲ ಎರಡು ದಿನ ಕಾಡಿದ್ದ ರನ್‌ ಬರ ಕೊನೆಗೂ ನೀಗಿದೆ. ಕುಶಾಲ್‌ ಮೆಂಡಿಸ್‌ ಅವರ ಶತಕದ ನೆರವಿನಿಂದಾಗಿ ಶ್ರೀಲಂಕಾ ತಂಡ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.

ಇಲ್ಲಿನ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ  ಪಂದ್ಯದಲ್ಲಿ ಲಂಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 117 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಕೂಡ 203 ರನ್ ಕಲೆ ಹಾಕಿ ಆಲೌಟ್‌ ಆಗಿತ್ತು. ಎರಡೂ ತಂಡಗಳಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳಿದ್ದರೂ ಬೌಲರ್‌ಗಳೇ ವಿಜೃಂಭಿಸಿದ್ದರು. ಆದರೆ  ಮೂರನೇ ದಿನ ಮೆಂಡಿಸ್ ಮಿಂಚಿದರು.

ಸಿಂಹಳೀಯ ನಾಡಿನ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು ಆರು ರನ್ ಗಳಿಸಿತ್ತು. ಈ ತಂಡದ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಕುಶಾಲ್‌ ಪೆರೆರಾ, ಕುಶಾಲ್‌ ಸಿಲ್ವಾ ಮತ್ತು  ದಿಮುತ್‌ ಕರುಣಾರತ್ನೆ ಎರಡಂಕಿಯ ಮೊತ್ತ ಕೂಡ ಮುಟ್ಟದೆ ಪೆವಿಲಿಯನ್ ಸೇರಿದರು. ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌ ಅವರೂ ಇದೇ ತಪ್ಪು ಮಾಡಿದರು.

ಆದ್ದರಿಂದ ಆತಿಥೇಯ ತಂಡ ಒಟ್ಟು 86 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ಸಮಯದಲ್ಲಿ ಆಪದ್ಭಾಂಧವರಾಗಿ ಬಂದಿದ್ದು ಕುಶಾಲ್‌ ಮೆಂಡಿಸ್‌ ಮತ್ತು ದಿನೇಶ್ ಚಾಂಡಿಮಲ್‌.

ಈ ಜೋಡಿ ಐದನೇ ವಿಕೆಟ್‌ಗೆ 117 ರನ್ ಕಲೆ ಹಾಕಿ ತಂಡದ ಎದುರಿದ್ದ ಎಲ್ಲಾ ಸಂಕಷ್ಟವನ್ನು ದೂರ ಮಾಡಿದರು. ಮೆಂಡಿಸ್ ಆರನೇ ವಿಕೆಟ್‌ಗೆ ಧನಂಜಯ ಸಿಲ್ವಾ ಜೊತೆ ಸೇರಿ 71 ರನ್ ಗಳಿಸಿದರು.

ಆರಂಭದದಲ್ಲಿಯೇ ಪ್ರಮುಖ ವಿಕೆಟ್‌ಗಳು ಪತನವಾಗಿದ್ದ ಕಾರಣ ಮೆಂಡಿಸ್‌ ತಾಳ್ಮೆಯ ಆಟಕ್ಕೆ ಮುಂದಾ ದರು. ಒಟ್ಟು 243 ಎಸೆತಗಳನ್ನು ಎದುರಿಸಿದ ಅವರು 20 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 169 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕವೇ 86 ರನ್ ಗಳಿಸಿ  ಎದುರಾಳಿ ಬೌಲರ್‌ಗಳ ತಾಳ್ಮೆಗೆ ಸವಾಲಾದರು.

ನೂರು ಎಸೆತಗಳನ್ನು ಆಡಿದ ಚಾಂಡಿಮಾಲ್‌ ನಾಲ್ಕು ಬೌಂಡರಿ ಸಮೇತ 42 ರನ್ ಗಳಿಸಿದ್ದಾರೆ. ಮಿಷೆಲ್‌ ಸ್ಟಾರ್ಕ್‌ ಮತ್ತು ನಥಾನ್‌ ಲಿಯಾನ್ ತಲಾ ಎರಡು ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ 117 ಹಾಗೂ ಎರಡನೇ ಇನಿಂಗ್ಸ್‌ 80  ಓವರ್‌ಗಳಲ್ಲಿ 8 ವಿಕೆಟ್‌ಗೆ 282 (ಕುಶಾಲ್‌ ಮೆಂಡಿಸ್ ಬ್ಯಾಟಿಂಗ್ 169, ದಿನೇಶ್ ಚಾಂಡಿಮಾಲ್‌ 42, ಧನಂಜಯ ಡಿಸಿಲ್ವಾ 36; ಮಿಷೆಲ್‌ ಸ್ಟಾರ್ಕ್‌ 2ಕ್ಕೆ44, ನಥಾನ್‌ ಲಿಯಾನ್ 2ಕ್ಕೆ98). ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್‌ 203.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT